ಪ್ರಧಾನಿ ಮೋದಿ ಅವರ ಗಮನ ಸೆಳೆದ 'ಬಾಕಾಹು': ಮನ್‌ ಕೀ ಬಾತ್‌ನಲ್ಲಿ ಪ್ರಸ್ತಾಪ

Upayuktha
0


 

ಮಂಗಳೂರು: ಬಾಕಾಹು- ಬಾಳೆಕಾಯಿ ಹುಡಿ ತಯಾರಿ ಅಭಿಯಾನ ಈಗ ರಾಷ್ಟ್ರಮಟ್ಟದಲ್ಲಿ ಸುದ್ದಿ ಮಾಡಿದೆ. ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಮಾಸಿಕ ಮನ್ ಕೀ ಬಾತ್‌ ಕಾರ್ಯಕ್ರಮದಲ್ಲಿ ಕರ್ನಾಟಕದ ಉತ್ತರ ಕನ್ನಡ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಕೊರೊನಾ ಸಂಕಟ ಸಮಯದಲ್ಲಿ ಹುಟ್ಟಿಕೊಂಡ ಬಾಕಾಹು ಅಭಿಯಾನವನ್ನು ವಿಶೇಷವಾಗಿ ಉಲ್ಲೇಖಿಸಿ ರಾಷ್ಟ್ರೀಯ ಮಟ್ಟದಲ್ಲಿ ಇಂತಹ ಆವಿಷ್ಕಾರಿ ಕಾರ್ಯಗಳು ನಡೆಯಬೇಕು ಎಂದು ಕರೆ ನೀಡಿದ್ದಾರೆ.


ಪ್ರಯೋಗಶೀಲ ಮಹಿಳೆಯರ ವಿಶೆಷ ಮುತುವರ್ಜಿಯಿಂದ ಬಾಕಾಹು ದೋಸೆ, ಬಾಕಾಹು ಗುಲಾಬ್ ಜಾಮೂನ್‌ ನಂತಹ ಬಗೆ ಬಗೆಯ ತಿನಿಸುಗಳನ್ನು ತಯಾರಿಸಲಾಗುತ್ತಿದೆ ಎಂದು ಪ್ರಧಾನಿ ಮೋದಿ ಪ್ರಸ್ತಾಪಿಸಿದ್ದಾರೆ.


ಸರಿ ಸುಮಾರು ಒಂದೂವರೆ ತಿಂಗಳಿನಿಂದ ದಕ್ಷಿಣೋತ್ತರ ಕನ್ನಡ ಜಿಲ್ಲೆಗಳಲ್ಲಿ ಬಾಕಾಹು ತಯಾರಿಸುವ ಅಭಿಯಾನ ಮತ್ತು ಅದರಿಂದ ತಯಾರಿಸಬಹುದಾದ ನಾನಾ ತಿಂಡಿ-ತಿನಿಸುಗಳ ಪ್ರಯೋಗಗಳು ಭರದಿಂದ ನಡೆದಿದೆ.


ಹಿರಿಯ ಪತ್ರಕರ್ತ, ಅಡಿಕೆ ಪತ್ರಿಕೆ ಸಂಪಾದಕರಾಗಿರುವ ಶ್ರೀಪಡ್ರೆ ಅವರು ಈ ಅಭಿಯಾನವನ್ನು ಮನೆ ಮನೆಗೆ ತಲುಪಿಸುವ ಪ್ರಯತ್ನದಲ್ಲಿ ಪ್ರೇರಣೆ ಹಾಗೂ ಬೆಂಬಲ ನೀಡುತ್ತಿದ್ದಾರೆ.



ಬಾಳೆಕಾಯಿಯ ಮೌಲ್ಯವರ್ಧನೆ ಮಾಡುವುದರಿಂದ ರೈತರ ಆದಾಯ ಹೆಚ್ಚುವುದಲ್ಲದೆ, ಕಷ್ಟಪಟ್ಟು ಬೆಳೆದ ಕೃಷಿ ಬೆಳೆಯೊಂದು ಮಾರುಕಟ್ಟೆಯಲ್ಲಿ ಸರಿಯಾದ ಬೆಲೆ ಸಿಗದೆ ಅನ್ಯಾಯಕ್ಕೊಳಗಾಗುವ ರೈತರಿಗೆ ಹೊಸ ಆಶಾಕಿರಣ ಮೂಡಿಸಿದೆ.


ಬಾಳೆಗೊನೆಯನ್ನು ಹಾಗೆಯೇ ಬಿಟ್ಟರೆ ಒಂದು ವಾರ ಅಥವಾ ಹತ್ತು ದಿನಗಳಲ್ಲಿ ಹಣ್ಣಾಗಿ ಬಿಡುತ್ತದೆ.  ಗೊನೆಗಳನ್ನು ಮಾರುಕಟ್ಟೆಗೆ ಒಯ್ದರೆ ವ್ಯಾಪಾರಿಗಳಿಂದ ಸಿಗುವುದು ಜುಜುಬಿ ಹಣ ಅಷ್ಟೆ. ಅದೇ ನೋವಿನಲ್ಲಿ ಎಷ್ಟೋ ರೈತರು ತಾವು ಕಷ್ಟಪಟ್ಟು ಬೆಳೆದ ಬಾಳೆಗೊನೆಗಳನ್ನು ಏನು ಮಾಡುವುದೆಂದು ತಿಳಿಯದೆ ಮತ್ತೆ ಅವುಗಳನ್ನು ಕೊಚ್ಚಿಹಾಕಿ ಗೊಬ್ಬರದ ಗುಂಡಿಗೆ ಎಸೆದ ಪ್ರಕರಣಗಳೂ ಇವೆ.


ಇಂತಹ ಸನ್ನಿವೇಶದಲ್ಲಿ ಬಾಳೆಕಾಯಿಯನ್ನು ಹೇಗೆ ಮೌಲ್ಯವರ್ಧನೆ ಮಾಡಬಹುದು ಎಂದು ಚಿಂತಿಸಿದಾಗ ಹೊಳೆದ ಪರಿಹಾರವೇ ಬಾಕಾಹು ತಯಾರಿ ಯೋಜನೆ. 


ಬಾಳೆಕಾಯಿಗಳನ್ನು ಸಂಸ್ಕರಿಸಿ ಒಣಗಿಸಿ ಪುಡಿ ಮಾಡಿ ತೆಗೆದಿಟ್ಟರೆ ಕನಿಷ್ಠಪಕ್ಷ ಆರು ತಿಂಗಳು ಕೆಡದೆ ಇರುತ್ತದೆ. ಬಾಕಾಹು ಅತ್ಯಂತ ಆರೋಗ್ಯದಾಯಕವೂ ಪೋಷಕಾಂಶ ಭರಿತವೂ ಆಗಿರುವುದರಿಂದ ದಿನ ನಿತ್ಯದ ಅಡುಗೆಯಲ್ಲಿ, ತಿಂಡಿ ತಿನಿಸುಗಳ ತಯಾರಿಯಲ್ಲಿ ಅದನ್ನು ಬಳಸುವ ಬಗ್ಗೆ ನಾನಾ ಪ್ರಯೋಗಗಳನ್ನು ಉತ್ತರ ಕನ್ನಡ, ದಕ್ಷಿಣ ಕನ್ನಡ, ತುಮಕೂರು, ದಾವಣಗೆರೆ- ಹೀಗೆ ಅನೇಕ ಜಿಲ್ಲೆಗಳ ಉತ್ಸಾಹಿ ಮಹಿಳೆಯರು  ಮಾಡಿ ತೋರಿಸಿದ್ದಾರೆ. ಗೋಧಿ-ಮೈದಾ ಹಿಟ್ಟುಗಳಿಗೆ ಪರ್ಯಾಯವಾಗಿಯೂ 'ಬಾಕಾಹು' ಬಳಸಬಹುದು ಎಂಬುದು ಸಾಬೀತಾಗಿದೆ.


ಈ ಅಭಿಯಾನವೀಗ ಪ್ರಧಾನ ಮಂತ್ರಿಗಳ ಗಮನ ಸೆಳೆದಿರುವುದು ನಿಜಕ್ಕೂ ಉತ್ತೇಜನಕಾರಿಯಾಗಿದೆ.


ಅಭಿವೃದ್ಧಿ ಪತ್ರಕರ್ತ, ಅಡಿಕೆ ಪತ್ರಿಕೆ ಸಂಪಾದಕರಾದ ಶ್ರೀಪಡ್ರೆ ಅವರು ಇಂತಹ ಹಲವು ಕೃಷಿಕರ ಅಭ್ಯುದಯದ ಅಭಿಯಾನಗಳನ್ನು ಯಶಸ್ವಿಯಾಗಿ ಮುನ್ನಡೆಸಿ ಅನುಭವ ಹೊಂದಿದ ತಜ್ಞರು. ಅವರು ಬಾಕಾಹು ಅಭಿಯಾನವನ್ನು ಕೈಗೆತ್ತಿಕೊಂಡಾಗಲೇ ಇದು ದೊಡ್ಡ ಮಟ್ಟದಲ್ಲಿ ಯಶಸ್ವಿಯಾಗುವುದು ಖಚಿತ ಎಂಬುದು ಸಿದ್ಧವಾಗಿತ್ತು.


ಕರ್ನಾಟಕದ ಮಟ್ಟಿಗೆ ಇದೆ ಮೊದಲ ಬಾರಿಗೆ ದಾವಣಗೆರೆ ಕೃಷಿ ವಿಜ್ಞಾನ ಕೇಂದ್ರವು ಜು.28ರಂದು ಅಡಿಕೆ ಪತ್ರಿಕೆ ಸಹಯೋಗದೊಂದಿಗೆ 'ಬಾಕಾಹು' ಬಗ್ಗೆ ವಿಶೇಷವಾಗಿ ಅರಿವಿನ ಕಾರ್ಯಾಗಾರ ಏರ್ಪಡಿಸಿದೆ.

Key Words: Banana Flour, Banana Powder, Bakahu, Mann Ki Baart, PM Modi, ಮನ್‌ ಕೀ ಬಾತ್‌, ಬಾಕಾಹು, ಬಾಕಾಹು ಆಂದೋಲನ, ಬಾಳೆ ಕಾಯಿ ಹುಡಿ, ಪ್ರಧಾನಿ ಮೋದಿ, 

(ಉಪಯುಕ್ತ ನ್ಯೂಸ್)



ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top