ಕೃಷಿ ಉತ್ಪನ್ನಗಳ ಮೌಲ್ಯವರ್ಧನೆ ಮಾಡುವುದನ್ನು ಮತ್ತು ಆ ಬಗ್ಗೆ ಹೊಸ ಚಿಂತನೆಗಳನ್ನು ಕೂಡಲೇ ಪ್ರಯೋಗಾತ್ಮಕವಾಗಿಯಾದರೂ ಸ್ವೀಕರಿಸುವ ಮನೋಭಾವ ನಮ್ಮೂರಿನ ಕೃಷಿಕರಲ್ಲಿ ಬೆಳೆಯಬೇಕು ಅನ್ನುವುದು ಎಲ್ಲರ ಆಶಯ. ಇದರಿಂದ ಆದಾಯ ವೃದ್ಧಿಯ ಜತೆಗೆ ಸುಸ್ಥಿರ ಮಾರುಕಟ್ಟೆಯೂ ಬೆಳೆಯಲು ಸಾಧ್ಯ.
ಜಗತ್ತಿನಲ್ಲಿ ಯಾವುದೇ ಸಾಂಕ್ರಾಮಿಕ ಕಾಯಿಲೆಗಳ ಹಬ್ಬುತ್ತಿರುವ ಕಾಲವಾಗಿರಲಿ, ಬರಗಾಲವಿರಲಿ, ಅತಿವೃಷ್ಟಿಯೇ ಇರಲಿ- ಏನೇ ಪ್ರತಿಕೂಲ ಪರಿಸ್ಥಿತಿಗಳಿದ್ದರೂ ಆಹಾರ ಉತ್ಪನ್ನಗಳಿಗೆ ಬೇಡಿಕೆ ಇಲ್ಲದಾಗುವ ಸಂದರ್ಭವೇ ಇರುವುದಿಲ್ಲ.
ಹಳೆಬೇರು-ಹೊಸಚಿಗುರು ಕೂಡಿರಲು ಮರ ಸೊಬಗು ಎನ್ನುವಂತೆ ಹಳೆಯ ಪದ್ಧತಿಗಳ ಜತೆಗೆ ಹೊಸ ಚಿಂತನೆ ಮತ್ತು ಆವಿಷ್ಕಾರಿ ಪ್ರಯೋಗಗಳನ್ನು ಅಳವಡಿಸಿಕೊಳ್ಳುವ Adoptive ಮನಸ್ಥಿತಿ ಮೂಡಬೇಕು. ಆಗಲೇ ಪ್ರಗತಿ ಸಾಧ್ಯ.
ಈ ಹಿನ್ನೆಲೆಯಲ್ಲಿ ಕಳೆದ ಹಲವಾರು ದಿನಗಳಿಂದ ಬಾಳೆಕಾಯಿ ಹುಡಿ ತಯಾರಿಸುವ ಮತ್ತು ಅದರಿಂದ ನಾನಾ ಬಗೆಯ ತಿಂಡಿ ತಿನಿಸುಗಳನ್ನು ತಯಾರಿಸುವ ನಿಟ್ಟಿನಲ್ಲಿ ಕೃಷಿಕರನ್ನು, ಗೃಹೋದ್ಯಮಿಗಳನ್ನು, ಸಾರ್ವಜನಿಕರನ್ನು ಜಾಗೃತಗೊಳಿಸುವ ಒಂದು ವಿಶಿಷ್ಟ ಅಭಿಯಾನವನ್ನು ನಡೆಸುತ್ತಿದ್ದಾರೆ ಹಿರಿಯ ಕೃಷಿ ಮತ್ತು ಅಭಿವೃದ್ಧಿ ಪತ್ರಕರ್ತ, ಅಡಿಕೆ ಪತ್ರಿಕೆ ಸಂಪಾದಕ ಶ್ರೀಪಡ್ರೆ ಅವರು. 'ಬಾಕಾಹು' ಪ್ರಯೋಗ ಎಂಬ ಆಕರ್ಷಕ ಹೆಸರಿನಲ್ಲಿ ನಡೆಯುತ್ತಿರುವ ಪ್ರಯೋಗಗಳು ಕರ್ನಾಟಕದ ಹಲವು ಜಿಲ್ಲೆಗಳಿಗೆ ಈಗಾಗಲೇ ವ್ಯಾಪಿಸಿದೆ.
ಆದರೆ 'ದೀಪದ ಬುಡದಲ್ಲೇ ಕತ್ತಲು' ಎಂಬಂತೆ ನಮ್ಮೂರಿನ- ಅಂದರೆ ವಿಶೇಷವಾಗಿ ದಕ್ಷಿಣ ಕನ್ನಡ ಜಿಲ್ಲೆಯ ಕೃಷಿಕರಲ್ಲಿ ನಿರೀಕ್ಷಿತ ಮಟ್ಟದಲ್ಲಿ ಇಂತಹ ಪ್ರಯೋಗಗಳು ಇನ್ನೂ ಆರಂಭವಾಗಿಲ್ಲ. ಕಾರಣಗಳು ನೂರೆಂಟು ಇರಬಹುದು. ಆದರೆ ಈಗ ಬೇಕಿರುವುದು ಕಾರಣ ಹೇಳುವುದಲ್ಲ. ಪ್ರಯೋಗಕ್ಕಿಳಿದು ಸಾಧಿಸಿ ತೋರಿಸುವ ಛಲ ಅಷ್ಟೆ.
ಬಾಳೆಕಾಯಿ ಬೆಲೆ ಬಿದ್ದಾಗ ಬಾಕಾಹು (ಬಾಳೆಕಾಯಿ ಹುಡಿ) ಮಾಡಬಹುದು ಎಂದು ಕೆಲವು ಮಂದಿ ಕೃಷಿಕ ಮಿತ್ರರು ಪ್ರತಿಕ್ರಿಯಿಸಿರುವುದು ಈ ಮನಸ್ಥಿತಿಗೆ ಒಂದು ಉದಾಹರಣೆಯಷ್ಟೇ. ಹೊಸ ಆದಾಯದ ಮೂಲ, ಬೇಡಿಕೆ ಸೃಷ್ಟಿಸುವ ನಿಟ್ಟಿನಲ್ಲಿ ಅಭಿಯಾನ ನಡೆಯುತ್ತಿರುವಾಗ ಅದಕ್ಕೆ ಕೈಜೋಡಿಸಿದರೆ ಯಶಸ್ಸಿನ ಪ್ರಮಾಣ ಅನೂಹ್ಯ ಮತ್ತು ಅದಮ್ಯವಾದೀತು.
ಈಗ ಆಗಬೇಕಿರುವುದು- 'ಬಾಕಾಹು' ಪ್ರಯೋಗದಲ್ಲಿ ತೊಡಗಿದವರಿಗೆ ಬೆಂಬಲ ನೀಡುವ ಕಾರ್ಯ. ಮನೆ ಮನೆಗಳಲ್ಲಿ ಕೇವಲ ಸ್ವಂತ ಬಳಕೆಗೆ ತಿಂಡಿ-ತಿನಿಸು ಮಾಡುವುದಕ್ಕಷ್ಟೇ ಈ ಪ್ರಯೋಗಗಳು ಸೀಮಿತವಾಗದೆ, ಮದುವೆ-ಮುಂಜಿ, ಹೋಮ ಹವನ, ಅಥವಾ ಇನ್ಯಾವುದೇ ಸಾರ್ವಜನಿಕ ಸಮಾರಂಭಗಳಲ್ಲೂ 'ಬಾಕಾಹು' ತಿನಿಸುಗಳ ಪ್ರಯೋಗ ನಡೆಯಬೇಕು. ಇವಿಷ್ಟು 'ಉಪಯುಕ್ತ' ಬಳಗದ ಆಶಯ.
'ಬಾಕಾಹು' ಅಭಿಯಾನದ ರೂವಾರಿ, ಪ್ರಯೋಗಗಳ ಪ್ರೇರಣಾಶಕ್ತಿಯಾಗಿರುವ ಶ್ರೀಪಡ್ರೆ ಅವರ ಆಶಯಗಳು- ಅವರದೇ ಮಾತುಗಳಲ್ಲಿ ಮುಂದೆ ಓದಿ:
*********
"ಬಾಳೆಕಾಯಿ ಬೆಲೆ ಬಿದ್ದಾಗ ಬಾಕಾಹು (ಬಾಳೆಕಾಯಿ ಹುಡಿ / ಹಿಟ್ಟು) ಮಾಡಬಹುದು" ಎಂದು ಕೆಲವು ಮಿತ್ರರು ಪ್ರತಿಕ್ರಿಯಿಸಿದ್ದಾರೆ. ಸ್ನೇಹಿತರೇ, ಇನ್ನೂ ಸ್ವಲ್ಪ ಆಳವಾಗಿ ಚಿಂತಿಸಿ ನೋಡೋಣ.
ಕೃಷಿಕರೇ ಮನೆಮಟ್ಟದಲ್ಲಿ ಸುಲಭವಾಗಿ ಮಾಡಬಹುದಾದ ಮೌಲ್ಯವರ್ಧಿತ ಉತ್ಪನ್ನ ಇದು. ಪೋಷಕಾಂಶಗಳ ಶಕ್ತಿಕೇಂದ್ರ. ಇದರ ತಯಾರಿ- ಬಳಕೆಗಳ ಬಗ್ಗೆ ಊರಲ್ಲಿ ಕೃಷಿಕ ಸಮುದಾಯದಲ್ಲಿ ಇರುವ ಅರಿವು ತೀರಾ ಕಮ್ಮಿ.
ಊರೂರುಗಳಲ್ಲಿ ಮನೆನಿರ್ಮಿತ ಬಾಕಾಹುವನ್ನು ಪ್ರಸಿದ್ಧಗೊಳಿಸಬೇಕು. ಎಲ್ಲಾ ಪೇಟೆ ಪಟ್ಟಣಗಳಲ್ಲಿ ಅದು ಸಿಗುವಂತಾಗಬೇಕು. ಮೈದಾಕ್ಕೆ ಪರ್ಯಾಯ, ಗೋಧಿ ಹುಡಿಗೆ ಪರ್ಯಾಯ ಅಲ್ಲದಿದ್ದರೂ ಬದಲಿ, ಪೂರಕ ಹಿಟ್ಟು ಆಗಬೇಕು. ಇದರ ವೈವಿಧ್ಯಮಯ ಬಳಕೆಗೆ ಸುರು ಹಚ್ಚಬೇಕು. ಅಸಾಧ್ಯ ಅಂತೀರಾ? ನೀವೆಲ್ಲಾ ಹೃದಯದಿಂದ ಕೆಲಸ ಮಾಡಿದರೆ ಖಂಡಿತ ಸಾಧ್ಯ.
ಬಾಕಾಹುವನ್ನು ಜನಪ್ರಿಯಗೊಳಿಸಲು, ಅದರ ಅರಿವು ವರ್ಧಿಸಲು ನೂರೆಂಟು ದಾರಿಗಳಿವೆ. ಅದರಲ್ಲೊಂದು- ಇದರ ಕೃಷಿ ಮಾಡುವ ಜಿಲ್ಲೆಗಳ ಸಭೆ-ಸಮಾರಂಭಗಳಲ್ಲಿ ಒಂದೆರಡು ಬಾಕಾಹು ತಿಂಡಿತಿನಸು ಕಡ್ಡಾಯವಾಗಿ ಮಾಡುವುದು- ಆ ಬಗ್ಗೆ ಹೆಮ್ಮೆಯಿಂದ ತಿಳಿಯಪಡಿಸುವುದು.
"ಹೋಗ್ರೀ, ಬಾಳೆಕಾಯಿ ಪುಡಿಯಿಂದ ಸಭೆ-ಸಮಾರಂಭ, ಮದುವೆ -ಮುಂಜಿಗಳಲ್ಲೇನು ಮಾಡಲು ಸಾಧ್ಯ" ಅಂತ ಕೇಳುವವರಿದ್ದಾರು. ಕಳೆದೊಂದು ಮಾಸಾರ್ಧದಲ್ಲಿ ನಮ್ಮ ಕೃಷಿಕುಟುಂಬಗಳ ಹೆಣ್ಮಕ್ಕಳು ಮಾಡಿದ ಸಂಶೋಧನೆಯ ಬಗ್ಗೆ ತಿಳಿದರೆ ಯಾರೂ ಈ ಪ್ರಶ್ನೆ ಎತ್ತಲಾರರು.
ವಸುಂಧರಾ ಹೆಗಡೆ, ನಯನಾ ಆನಂದ್, ಆಶ್ರಿತಾ ಹೆಗಡೆ, ವಸಂತಿ ಭಟ್, ಸವಿತಾ ಭಟ್, ಜಾಹ್ನವಿ ಹೆಗಡೆ, ವಿನಯಾ ರಾಜೇಶ್, ಗೀತಾ ಸಾರಡ್ಕ, ಸುಮ ಆರ್ ಶಾಸ್ತ್ರಿ, ಗಂಗಾ ಹೆಗಡೆ, ಉಮಾ ಪ್ರಸನ್ನ, ವಿಮಲ - ಪ್ರಭಾವತಿ ಹೆಗಡೆ, ವಿನುತಾ ಹೆಗಡೆ, ಕುಸುಮಾ ಹೆಗಡೆ - ಇನ್ನೂ ಅನೇಕರಿದ್ದಾರೆ. ಅವರೆಲ್ಲರಿಗೂ ವಂದನೆಗಳು. ತಾಲಿಪ್ಪಿಟ್ಟು, ರೊಟ್ಟಿ, ಕಡುಬು, ತೆಳ್ಳೇವು, ಉಪ್ಪಿಟ್ಟು, ಚಕ್ಕುಲಿ, ನಿಪ್ಪಟ್ಟು, ಪೂರಿ, ದೋಸೆ, ಬಿಸ್ಕೆಟ್, ಕುಕೀಸ್, ಡ್ರೈ ಜಾಮೂನು, ದೂದ್ ಪೇಡಾ, ಚಿವ್ಡಾ, ಗುಳಿಯಪ್ಪ, ಮಾಲ್ಟ್ - ಪಟ್ಟಿ ಇನ್ನೂ ದೀರ್ಘ.
’ಅಡಿಕೆ ಪತ್ರಿಕೆ’ ಕಳೆದೊಂದು ತಿಂಗಳಿಂದ ಬಾಳೆಕಾಯಿ/ಹಣ್ಣುಗಳ ಮೌಲ್ಯವರ್ಧನೆಯ ಬಗ್ಗೆ ನಾಲ್ಕು ರಾಜ್ಯಗಳಲ್ಲಿ ತೀವ್ರ ಅಧ್ಯಯನ ನಡೆಸುತ್ತಿದೆ. ಒಂದು ಹೆಮ್ಮೆಯ ಸತ್ಯ ಹೇಳುವೆ. ತಲೆತಲಾಂತರದಿಂದ ಬಾಳೆಕಾಯಿ ಹಿಟ್ಟು ತಯಾರಿಸುವ ಯಾವ ಊರುಗಳಲ್ಲಿ ಬಾಕಾಹು ಈ ಥರ ಸಕಲಪಾಕಗಳ ರೂಪ ಪಡೆದದ್ದಿಲ್ಲ! ನಮ್ಮ ಎಲ್ಲಾ ಗೃಹಿಣಿ ಸಂಶೋಧಕಿಯರಿಗೆ ನಮೋ! ನಿಮ್ಮೆಲ್ಲರದೂ ಚಾರಿತ್ರಿಕ ಸಂಶೋಧನೆಯೇ! ಯಾವ ಆಹಾರ ವಿಜ್ಞಾನಿಗೂ ಕಡಮೆಯಲ್ಲ.
"ಬಹುತೇಕ ಎಲ್ಲಾ ತಿಂಡಿಯನ್ನೂ ಬಾಕಾಹುವಿನಿಂದ ಮಾಡಿಬಿಟ್ಟಿದ್ದಾರೆ", ಎಂದು ಬೆಂಗಳೂರಿನ ಒಬ್ಬರು ಪತ್ರಕರ್ತೆ ಉದ್ಗರಿಸಿದ್ದಾರೆ. "ಅದ್ಭುತ, ಈ ಹೊಸಪಾಕಗಳದ್ದೇ ಒಂದು ಪುಸ್ತಿಕೆ ತಂದುಬಿಡಿ ಸರ್", ಕೇರಳದ ಇನ್ನೊಬ್ಬರು ಪತ್ರಕರ್ತೆಯ ಸಲಹೆ. (ಇದಕ್ಕೆ ಹೆಚ್ಚು ಹೆಗಲುಗಳು ಬೇಕು. ಮುಂದೆ ಬರುವವರಿದ್ದರೆ ಸಹಕರಿಸೋಣ. ಯಾವುದಾದರೂ ಕೃಷಿಕರ ಕೂಟ, ಕೇವೀಕೆ, ಸರಕಾರೇತರ ಸಂಸ್ಥೆಗಳು ಮುಂದೆ ಬರುತ್ತೀರಾ?)
ಉತ್ತರ ಕನ್ನಡ ಬಾಕಾಹುವನ್ನು ಎರಡೂ ಕೈಚಾಚಿ ಸ್ವೀಕರಿಸಿ ಎತ್ತಿ ಮುಂದೊಯ್ಯುತ್ತಿರುವ ಮುಂಚೂಣಿ ಜಿಲ್ಲೆ. ’ಕಾರ್ಯ’ (ಜಂಬ್ರ, ಮದುವೆ - ಮುಂಜಿಯಂತಹ ಸಮಾರಂಭ) ಗಳಲ್ಲಿ ಅಡುಗೆ ಸುತ್ತಮುತ್ತಲ ಗೃಹಿಣಿಯರದು. ಪ್ರತಿ ’ಕಾರ್ಯ’ ಸಭೆಗಳಲ್ಲೂ ಒಂದೆರಡು ಬಾಕಾಹು ಪಾಕ ತಪ್ಪದೆ ಸೇರಿಸಿ. ತಯಾರಿಸಿ ಉಣಿಸಿದರೆ ಸಾಲದು - ಫ್ಲೆಕ್ಸಿ ಮೂಲಕವೋ, ಆಮಂತ್ರಣ, ಸಾಮಾಜಿಕ ಮಾಧ್ಯಮಗಳ ಮೂಲಕವೋ ಇದನ್ನು ಎಲ್ಲರಿಗೂ ಹೆಮ್ಮೆಯಿಂದ ಹೇಳಿಕೊಳ್ಳಿ.
’ಬಾಕಾಹು, ನಮ್ಮ ಜಿಲ್ಲೆಯ ಹೆಮ್ಮೆ’ - ಘೋಷಣೆ ಮೊಳಗಲಿ. ಏನಂತೀರಿ?
- ಶ್ರೀಪಡ್ರೆ
ಅಡಿಕೆ ಪತ್ರಿಕೆ ಸಂಪಾದಕರು
ವ್ಯಂಗ್ಯಚಿತ್ರ: ಎಸ್ಸಾರ್ ಪುತ್ತೂರು
Key Words: Banana Flour, Banana Powder, Banana Flour Recipes, Bakahu Campaign, ಬಾಕಾಹು ಅಭಿಯಾನ, ಬಾಕಾಹು ಪ್ರಯೋಗ, ಬಾಳೆಕಾಯಿ ಹುಡಿ, ಬಾಕಾಹು
(ಉಪಯುಕ್ತ ನ್ಯೂಸ್)
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ