ಅನ್ಯಾಯದ ವಿರುದ್ಧ ಸಣ್ಣ ದನಿ! ಹೀಗೂ ಪ್ರಕಟಿಸಬಹುದೆನ್ನಿ...

Upayuktha
0


ಇಲ್ನೋಡಿ... ಇವರು ರಾಜು. ಪುತ್ತೂರು ಅರುಣಾ ಥಿಯೇಟರ್ ಸನಿಹವಿರುವ 'ಸ್ವಾಗತ್ ಸ್ವೀಟ್ಸ್' ಬೇಕರಿಯಲ್ಲಿ ಸಹಾಯಕ. ಕಳೆದ ಮೂರುವರೆ ವರುಷಗಳಿಂದ ಗ್ರಾಹಕರ ಹಾಗೂ ಬೇಕರಿಯ ಯಜಮಾನರ ಒಲವು ಪಡೆದವರು. ನಿನ್ನೆ ಇವರು ಧರಿಸಿದ 'ಬನಿಯನ್' ಗಮನ ಸೆಳೆಯಿತು. ಅದರಲ್ಲೊಂದು ಘೋಷಣೆಯಿತ್ತು – “ರೋಹಿಣಿ ಸಿಂಧೂರಿಯಂತಹ ದಕ್ಷ ಅಧಿಕಾರಿ ನಮ್ಮ ರಾಜ್ಯಕ್ಕೆ ಬೇಕು. ಸರ್ಕಾರಿ ಕೆಲಸ ದೇವರ ಕೆಲಸ”.

ಮೈಸೂರಿನಲ್ಲಿ ಜಿಲ್ಲಾಧಿಕಾರಿಯಾಗಿದ್ದ ರೋಹಿಣಿಯವರನ್ನು ಅನ್ಯಾನ್ಯ ಕಾರಣಗಳಿಂದ ಸರಕಾರವು ಧಾರ್ಮಿಕ ದತ್ತಿ ಇಲಾಖೆಗೆ ವರ್ಗಾಯಿಸಿತ್ತು. ಕರ್ನಾಟಕದಲ್ಲಿ 'ದಕ್ಷತೆ' ತೋರಿಸಿದ ಅಧಿಕಾರಿ ಬಹುಬೇಗ ಎತ್ತಂಗಡಿಯಾಗ್ತಾರೆ ಎನ್ನುವುದಕ್ಕೆ ಹತ್ತಾರು ಉದಾಹರಣೆಗಳಿವೆ. ರೋಹಿಣಿಯವರು ತಾನು ವೃತ್ತಿ ನಿರ್ವಹಿಸಿದಲ್ಲೆಲ್ಲಾ ‘ದಕ್ಷತೆ’ಯನ್ನು ತೋರಿಸುತ್ತಾ ಬಂದರು. ಜನಮಾನಸದಲ್ಲಿ 'ದಕ್ಷ ಅಧಿಕಾರಿ' ಎಂದೇ ಜನರು ಸ್ವೀಕರಿಸಿದ್ದರು. ಇವರ ದಕ್ಷತೆಯನ್ನು ‘ಅಹಂಕಾರ, ಬಿಗುಮಾನ’ ಎಂದು ಕರೆದರು!

ಈ ಹಿನ್ನೆಲೆಯಲ್ಲಿ ರಾಜು ಧರಿಸಿದ ಬನಿಯನ್ ವಿಷಯಕ್ಕೆ ಬರೋಣ. ತನ್ನ ವೃತ್ತಿಯೊಂದಿಗೆ ಸದಾ ಒಂದಲ್ಲ ಒಂದು 'ಪಾಸಿಟಿವ್' ವಿಷಯ, ಸಮಾಜಕ್ಕೆ ಸೇವೆಗೈದವರ ನೆನಪು, ತಾಲೂಕಿಗೆ ಹಾಗೂ ಜಿಲ್ಲೆಗೆ ಬಂದಿರುವ ದಕ್ಷ ಅಧಿಕಾರಿಗಳನ್ನು ತನ್ನದೇ ಶೈಲಿಯಲ್ಲಿ ನೆನಪಿಸುವುದು ಇವರ ವ್ಯಕ್ತಿತ್ವದ ಭಾಗ. ವೈಯಕ್ತಿಕ ವಿಚಾರ, ರಾಜಕೀಯ ಹಿನ್ನೆಲೆಯ ಆಟೋಪಗಳು ಇವರಿಗೆ ಬೇಕಾಗಿಲ್ಲ.

“ದಕ್ಷ ಅಧಿಕಾರಿಯನ್ನು ವರ್ಗಾವಣೆ ಮಾಡಿದ್ದು ತಪ್ಪು. ಹಾಗಾದರೆ ದಕ್ಷವಾಗಿ ಕೆಲಸ ಮಾಡುವುದು ಸಾಧ್ಯವಿಲ್ಲ ಎಂದಾಯಿತಲ್ಲಾ? ಪ್ರಾಮಾಣಿಕತೆಗೆ ಬೆಲೆಯಿಲ್ವಾ ಅಕ್ಷರ ಕಲಿಯುವುದು ವ್ಯರ್ಥ ಎಂದಾಯಿತಲ್ಲ,” ಹೀಗೆ ಕಳೆದೆರಡು ವಾರದಿಂದ ರಾಜು ಎಲ್ಲರನ್ನೂ ಮಾತಿಗೆಳೆಯುತ್ತಿದ್ದರು. ತನ್ನ ಮನಸ್ಸಿನ ಆತಂಕಕ್ಕೆ ಮಾತಿನ ಸ್ವರೂಪ ನೀಡುತ್ತಿದ್ದರು.

ಅವರ ಮಾತುಗಳನ್ನು ಪ್ರತಿಕ್ರಿಯೆ ಪ್ರಕಟಿಸದೆ ಆಲಿಸುತ್ತಾ ಇದ್ದೆ. ಆದರೆ ಆತಂಕದ ಮೌನಕ್ಕೆ ಮಾತನ್ನು ಕೊಡುವ ಕೆಲಸ ಅವರ ಬನಿಯನ್ ಮಾಡಿತು. ಒಂದು ಘೋಷಣೆಯನ್ನು ಮುದ್ರಿಸಿ, ಗಮನವನ್ನು ಸೆಳೆದು 'ಒಳ್ಳೆಯ ಸಂದೇಶ'ವನ್ನು ಹಬ್ಬಿಸಿದರು. ಭ್ರಷ್ಟಾಚಾರದ ವಿರುದ್ಧ ದನಿಯೆತ್ತಿದರು. ನ್ಯಾಯವನ್ನು ಬಯಸಿದರು. ಈ ದನಿಯ ವ್ಯಾಪ್ತಿ ಕಿರಿದಾದರೂ ನೀಡುವ ಸಂದೇಶ ದೊಡ್ಡದು ಅಲ್ವಾ. ಆಶ್ಚರ್ಯ ಮೂಡಿಸುತ್ತದೆ. ನಿಜಕ್ಕೂ ಗ್ರೇಟ್. 'ಅಭಿವ್ಯಕ್ತಿ ಸ್ವಾತಂತ್ರ್ಯ' ಪದದ ಅರ್ಥವನ್ನು ಕೆಡಿಸಿ, ಬೇಕಾದಂತೆ ಮಾತನಾಡುವ ಕಾಲಘಟ್ಟದಲ್ಲಿ ರಾಜು ಅವರು ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಗೌರವ ತಂದಿದ್ದಾರೆ.

“ದೇಶವನ್ನು ಪ್ರೀತಿಸಬೇಕು. ದಕ್ಷ ಅಧಿಕಾರಿಗಳನ್ನು ಗೌರವಿಸಬೇಕು. ಸೈನಿಕರಿಗೆ ಗೌರವ ಕೊಡಬೇಕು. ಕಷ್ಟಪಟ್ಟು ದುಡಿಯುವವರನ್ನು ಸಮಾಜ ಗುರುತಿಸಬೇಕು. ನಿತ್ಯದ ಮಾತುಕತೆಯಲ್ಲಿ ಹಗುರ ಮಾತುಗಳ ಬದಲು ಗೌರವ ಕೊಡುವ ಪರಿಪಾಠ ರೂಢಿಸಿಕೊಳ್ಳಬೇಕು,” ಎನ್ನುತ್ತಾರೆ ರಾಜು. ಅವರಿಗೆ ನಮ್ಮೆಲ್ಲರ 'ಸಲಾಂ' ಇರಲಿ.

-ನಾ. ಕಾರಂತ ಪೆರಾಜೆ

Key words: Rohini Sindhuri, IAS, Puttur, Protest, ಅವಿವೇಕದ ವರ್ಗಾವಣೆ, ಪ್ರತಿಭಟನೆ, ಪುತ್ತೂರು, ರೋಹಿಣಿ ಸಿಂಧೂರಿ,


إرسال تعليق

0 تعليقات
إرسال تعليق (0)
Mandovi Motors Presents MONSOON BONANZA
Mandovi Motors Presents MONSOON BONANZA
To Top