ಭಾನುವಾರ ಎಷ್ಟು ಸುಂದರ... ಮಸ್ತಿ-ಕುಸ್ತಿ ಮಾಡೋಣ ಬಾರಾ

Upayuktha
0

 


ದಿನವೂ ಕಾಲೇಜಿಗೆ ರೈಲಿನಲ್ಲಿ ಪ್ರಯಾಣ ಮಾಡಿ ಮಾಡಿ ಕಾಲು ಸೋತಿರುತ್ತದೆ. ತನು ಆಯಾಸಗೊಂಡಿರುತ್ತದೆ ಮನವೂ ದಣಿದಿರುತ್ತದೆ. ಹೀಗೆ ದಣಿದ ನನ್ನ ದೇಹ ಮನಸ್ಸಿಗೆ ಹೊಸ ಶಕ್ತಿ ನವಚೈತನ್ಯ ಕೊಡುವ ವಾರವೇ ಆಗಿತ್ತು ಭಾನುವಾರ.


ಭಾನುವಾರದ ನನ್ನ ದಿನಚರಿಯೇ ತುಂಬಾ ಗಮ್ಮತ್ತು. ತುಂಬಾ ಮೋಜು ಸ್ವಲ್ಪ ಮಸ್ತಿ, ಸ್ವಲ್ಪ ಕುಸ್ತಿ ಎಲ್ಲವೂ ಇರುತ್ತದೆ. ಆ ದಿನ ಸೂರ್ಯೋದಯವನ್ನು ನಾನು ನೋಡೆನು. ಏಕೆಂದರೆ ಗಂಟೆ ಎಂಟಾದರೂ ಹಾಸಿಗೆಯಿಂದ ಏಳಲು ಒಂತರಾ ದಣಿವು ಎಲ್ಲವೂ. ಆ ದಿನ ಶುರುವಾಗುವುದೇ ಅಕ್ಕನ  ಸುಪ್ರಭಾತದಿಂದ. ಅವಳ ಸುಪ್ರಭಾತ ಕೇಳಲು ಆಗದೆ ಎಷ್ಟು ಬಾರಿ ನಾನು ಮುಸುಕು ಹಾಕಿಕೊಂಡ ಉದಾಹರಣೆ ಇದೆ.  


ಎದ್ದು ನಿತ್ಯಕರ್ಮ ಬೇಗನೆ ಮುಗಿಸಿ ಟಿವಿಯ ಮುಂದೆ ನಾನು, ನನ್ನ ಅಕ್ಕ, ಜೊತೆಗೆ ಅಪ್ಪನೂ ಹಾಜರು. ನನಗೆ ಸಿನಿಮಾ ನೋಡುವ ತವಕ ಅಕ್ಕನಿಗೆ ಮರುಪ್ರಸಾರ ಸೀರಿಯಲ್ ವೀಕ್ಷಿಸುವ ಧಾವಂತ. ಅಪ್ಪನಿಗೆ ಜೋತಿಷ್ಯ ಕೇಳುವ ಅವಸರ. ಆದರೆ ಇರುವುದು ಮಾತ್ರ ಒಂದೇ ಟಿವಿ. ಕ್ಯಾರಂ ಬೋರ್ಡ್ ನ ಕಾಯಿನ್ ಹಾಗೆ, ನನ್ನ ಕೈಯಿಂದ ಅಕ್ಕ ರಿಮೋಟ್ ಕಿತ್ತುಕೊಳ್ಳುವುದು ಅಕ್ಕನ ಕೈಯಿಂದ ನಾನು ರಿಮೋಟ್ ಕಿತ್ತುಕೊಳ್ಳುವುದು. ರಿಮೋಟ್ ಗಾಗಿ ನನ್ನ ಮತ್ತು ಅಕ್ಕನ ನಡುವೆ ಕುರುಕ್ಷೇತ್ರ ಕದನ. ಇಬ್ಬರ ಜಗಳ ಮೂರನೆಯವನಿಗೆ ಲಾಭ ಎಂಬಂತೆ ಅಪ್ಪ ನಮ್ಮಿಂದ ರಿಮೋಟ್ ತೆಗೆದುಕೊಳ್ಳುತ್ತಾರೆ. ಜ್ಯೋತಿಷ್ಯವಾಣಿಯನ್ನು ಹಾಯಾಗಿ ಕೇಳುತ್ತಾರೆ!


ನಾನೊಂದು ತೀರ ನನ್ನ ಸಹೋದರಿ ಇನ್ನೊಂದು ತೀರ. ನನ್ನ ಮತ್ತು ಅವಳ ಜಗಳಕ್ಕೆ ಸಂಧಾನ ಮಾಡಲು ಅಮ್ಮ ಮತ್ತು ದೊಡ್ಡಮ್ಮ. ಹಾಗೂ-ಹೀಗೂ ಬೆಳಗಿನ ಜಾವ ಮುಗಿಯುವುದೇ ಗೊತ್ತಾಗದು. ನಂತರ ಅಕ್ಕ ಮತ್ತು ನಾನು ಬೇಗನೆ ರಾಜಿಯಾಗುತ್ತಿದ್ದೆವು. ಆ ಬಳಿಕ ನದಿಯ ಕಿನಾರೆಗೆ ಹೋಗಿ ಅಲ್ಲಿ ದೋಣಿ ಬಿಡುತ್ತಿದ್ದೆವು. ಮಾವಿನ ಮರದ ಹಣ್ಣಿಗೆ ಕಲ್ಲು ಹೊಡೆಯುತ್ತಿದ್ದೆವು. ಹಿತ್ತಲ ಸುತ್ತ ತಿರುಗುವುದು, ಬಯಲಲ್ಲಿ ಬೀಸುವ ತಂಗಾಳಿಯ ಆಸ್ವಾದಿಸುತ್ತಿದ್ದೆವು. ಕೆಲವೊಮ್ಮೆ ಅಪ್ಪನ ಜೊತೆಯಲ್ಲಿ ಸಂತೆ ಸುತ್ತುತ್ತಿದ್ದೆವು.


ಭಾನುವಾರದ ಮಧ್ಯಾಹ್ನ ಸ್ವಲ್ಪ ವಿಭಿನ್ನ. ಆ ದಿನ ನನಗಿಷ್ಟದ ಬೊಂಬಾಟ್ ಔತಣಕೂಟವೇ ಏರ್ಪಡಿಸುತ್ತಾರೆ ನನ್ನ ಅಮ್ಮ. ಅದನ್ನು ಬಕಾಸುರನಂತೆ ಚಪ್ಪರಿಸಿ ನಿದ್ರೆಗೆ ಜಾರುತ್ತಿದ್ದೆ. ಸಂಜೆ ಆಗುವರೆಗೂ ನಿದ್ರಿಸುತ್ತಿದ್ದೆ . ಬಳಿಕ ಆಟದ ಮೈದಾನಕ್ಕೆ ಹೋಗುತ್ತಿದ್ದೆ. ಅಲ್ಲಿ ಗೆಳೆಯರೊಂದಿಗೆ ಕ್ರಿಕೆಟ್- ಫುಟ್ಬಾಲ್ ಆಡುತ್ತಿದ್ದೆ. ನದಿಯು ಸಮೀಪ ಇದ್ದುದ್ದರಿಂದ ಅಲ್ಲಿ ಮೀನು ಹಿಡಿದು ಆ ಮೀನನ್ನು ಬಾವಿಯಲ್ಲಿ ಜೋಪಾನವಾಗಿ ಹಾಕುತ್ತಿದ್ದೆವು. ಮುಸ್ಸಂಜೆ ಆಗುತ್ತಿದ್ದಂತೆಯೇ ಮನದಲ್ಲಿ ಬೇಸರ ನಾಳೆ ಪುನಃ ಬೆಳಗ್ಗೆ ಏಳಬೇಕು. ಆ ಹೋಂವರ್ಕ್ ಮಾಡಲೇಬೇಕು. ನಂತರ ಆ ಪಾಠ ಕೇಳಬೇಕು ಎಂಬ ವಿಷಯ ನೆನಪಾದಾಗಲೇ ಮೈ ಜುಮ್ ಎನ್ನುತ್ತಿತ್ತು. ಇನ್ನು ಈ ಭಾನುವಾರ ಬರಲು ಒಂದು ವಾರ ಕಾಯಬೇಕು ಅಯ್ಯೋ ದೇವರೇ ಎಂದು ಯೋಚಿಸುತ್ತಿದ್ದೆ. ಮನೆಗೆ ಬಂದು ಹೀಗೆ ಯೋಚಿಸುವಾಗ ಸಮಯ ಹೋದದ್ದೇ ಗೊತ್ತಾಗುವುದಿಲ್ಲ. ಊಟ ಮಾಡಿ ಹಾಗೇ ನಿದ್ರೆಗೆ ಜಾರುತ್ತಿದ್ದೆ ಕಾಯುವಿಕೆ ಶುರುವಾಗುತ್ತಿತ್ತು ಮುಂದಿನ ಭಾನುವಾರಕ್ಕಾಗಿ…  


-ಗಿರೀಶ್ ಪಿಎಂ

ದ್ವಿತೀಯ ಬಿಎ (ಪತ್ರಿಕೋದ್ಯಮ)

ವಿವಿ ಕಾಲೇಜು ಮಂಗಳೂರು


(ಉಪಯುಕ್ತ ನ್ಯೂಸ್)


Visit: Upayuktha Directory- You get here You want


‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

Post a Comment

0 Comments
Post a Comment (0)
To Top