ಯೋಗ ಜೀವ-ದೇವ ಬೆಸೆಯುವ ಬಂಧ: ರಾಘವೇಶ್ವರ ಶ್ರೀ

Upayuktha
0


ಕಾರವಾರ/ ಗೋಕರ್ಣ: ಯುಕ್ತ ಆಹಾರ, ವಿಹಾರ, ಚಟುವಟಿಕೆ ಮೂಲಕ ನಿದ್ದೆ, ಸ್ವಪ್ನ, ಜಾಗೃತಸ್ಥಿತಿ ಮತ್ತು ಸಮಾದಿ ಸ್ಥಿತಿಯನ್ನು ಆನಂದಿಸುವುದೇ ನಿಜವಾದ ಯೋಗ. ಯೋಗ ಜೀವಾತ್ಮ ಮತ್ತು ಪರಮಾತ್ಮನನ್ನು ಬೆಸೆಯುವ ಪವಿತ್ರ ಬಂಧ ಎಂದು ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀರಾಘವೇಶ್ವಭಾರತೀಮಹಾಸ್ವಾಮೀಜಿ ನುಡಿದರು.


ವಿಶ್ವ ಯೋಗ ದಿನಾಚರಣೆ ಅಂಗವಾಗಿ ಶ್ರೀರಾಮಚಂದ್ರಾಪುರ ಮಠದ ವಿಷ್ಣುಗುಪ್ತ ವಿಶ್ವವಿದ್ಯಾಪೀಠ ಸೋಮವಾರ ಹಮ್ಮಿಕೊಂಡಿದ್ದ "ಯೋಗಾಂತರಂಗ" ಅಂತರ್ಜಾಲ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.


ಆಹಾರ, ವಿಹಾರ, ಕ್ರಿಯೆ ಯುಕ್ತವಾಗಿದ್ದಾಗ ಜಾಗೃತಿ, ನಿದ್ದೆ, ಸ್ವಪ್ನಸ್ಥಿತಿಯ ಆನಂದ ಸವಿಯುವ ಜತೆಗೆ ಎಲ್ಲದಕ್ಕಿಂತ ಶ್ರೇಷ್ಠವಾದ ಸಮಾದಿಸ್ಥಿತಿಯ ಆನಂದವನ್ನೂ ಆಸ್ವಾದಿಸಬಹುದು. ಆ ಮೂರನ್ನು ಯುಕ್ತವಾಗಿ ಇಟ್ಟುಕೊಳ್ಳದಿದ್ದರೆ ನಾಲ್ಕನೇ ಸ್ಥಿತಿಗೆ ತಲುಪಲಾಗದು. ಅದು ಪರಮಾತ್ಮನೊಂದಿಗೆ ನಮ್ಮನ್ನು ಬೆಸೆಯುವ ಬಂಧ ಎಂದು ವಿಶ್ಲೇಷಿಸಿದರು.


ಯೋಗ ನಮ್ಮ ದುಃಖವನ್ನು ಪರಿಹಾರ ಮಾಡುತ್ತದೆ. ಸಿಂಧುವಿನಿಂದ ಬೇರೆಯಾದ ಬಿಂದುವಿಗೆ ಯಾವ ರೀತಿ ಅಸ್ತಿತ್ವವಿಲ್ಲವೋ ಅದೇ ರೀತಿ ಪರಮಾತ್ಮನಿಂದ ಬೇರ್ಪಟ್ಟ ಆತ್ಮಕ್ಕೂ ಇರುತ್ತದೆ. ಮೂಲವನ್ನು ಸೇರುವ ತುಡಿತ ಸದಾ ಎಲ್ಲ ಜೀವಾತ್ಮಗಳಲ್ಲೂ ಇರುತ್ತದೆ. ಆ ಸೇರುವಿಕೆಗೆ ಯೋಗ ಪೂರಕ ಎಂದು ಹೇಳಿದರು.


ಔಷಧದ ಜತೆ ಪಥ್ಯ ಹೇಗೆ ಮುಖ್ಯವೋ ಯೋಗದ ಜತೆ ಯುಕ್ತ ಜೀವನವೂ ಮುಖ್ಯ. ಒಂದು ಗಂಟೆ ಯೋಗ ಮಾಡಿ ಉಳಿದ 23 ಗಂಟೆ ಪೂರಕ ಜೀವನ ನಡೆಸದಿದ್ದರೆ ಅಂಥ ಯೋಗ ಯಾವ ಪ್ರಯೋಜನವನ್ನೂ ನೀಡದು. ಇಡೀ ಬದುಕು ಯೋಗಮಯವಾಗಬೇಕು. ಆದ್ದರಿಂದ ವರ್ಷಕ್ಕೊಮ್ಮೆ ಯೋಗ ದಿನಾಚರಣೆ ಮಾಡುವ ಬದಲು ದಿನವೂ ಯೋಗಾಚರಣೆ ಅಭ್ಯಾಸ ಮಾಡಿಕೊಳ್ಳೋಣ ಎಂದು ಕರೆ ನೀಡಿದರು.


ಮೈಸೂರಿನ ಶ್ರೀಭಾರತೀ ಯೋಗಧಾಮದ ಯೋಗಾಚಾರ್ಯ ಮಧುಕೇಶ್ವರ ಹೆಗಡೆ ಪ್ರಮುಖ ಉಪನ್ಯಾಸ ನೀಡಿ, "ಯೋಗದ ಬಗ್ಗೆ ಜ್ಞಾನ ಇಲ್ಲದವರು ಅಥವಾ ಅರ್ಧ ಜ್ಞಾನ ಇರುವವರು ಯೋಗ ಬೋಧಿಸುವ ಪರಿಸ್ಥಿತಿ ಇದೆ. ಅದರಿಂದ ಯಾವ ಪ್ರಯೋಜವೂ ಇಲ್ಲ. ಯೋಗವನ್ನು ಪರಿಪೂರ್ಣವಾಗಿ ಅರಿತುಕೊಳ್ಳಬೇಕಾದರೆ ಶಾಸ್ತ್ರಗಳನ್ನು ತಿಳಿದುಕೊಳ್ಳಬೇಕು. ಋಷಿಮುನಿಗಳು ನಮಗೆ ಹೇಳಿಕೊಟ್ಟ ಯೋಗದ ಸ್ವರೂಪ ವ್ಯಾಪ್ತಿ ಬಹುದೊಡ್ಡದು ಎಂದು ಅಭಿಪ್ರಾಯಪಟ್ಟರು.


ಯೋಗ ಚಾರಿತ್ರ್ಯಜೀವನದ ಒಂದು ಅಂಗ. ಯೋಗದೃಷ್ಟಿ ಹೊಂದಿರುವವರಿಂದ ಮಾತ್ರ ನೈಜ ಯೋಗದ ಪರಿಕಲ್ಪನೆಯನ್ನು ತಿಳಿದುಕೊಳ್ಳಬಹುದು. ಆದರೆ ಇಂದು ಯೋಗದ ಹೆಸರಿನಲ್ಲಿ ಕೇವಲ ವ್ಯಾಯಾಮ ಮಾತ್ರ ನಡೆಯುತ್ತಿದೆ.


ಅಷ್ಟಾಂಗ ಯೋಗದಲ್ಲಿ ಪ್ರಾಣಾಯಾಮ, ಯಮನಿಯಮ, ಕ್ರಿಯೆಯೇ ಮೊದಲಾಗಿ ಶಾಸ್ತ್ರಸಮ್ಮತ ಬದುಕು, ಸದಾಚಾರ ಎಲ್ಲವೂ ಸೇರುತ್ತದೆ. ನೆಮ್ಮದಿಯ ಜೀವನಕ್ಕೆ ಯೋಗವೇ ಮದ್ದು ಎಂದು ವಿವರಿಸಿದರು.


ವಿವಿವಿ ಆಡಳಿತಾಧಿಕಾರಿ ಸುರೇಂದ್ರ ಹೆಗಡೆ, ವಿದ್ಯಾ ಪರಿಷತ್ ಅಧ್ಯಕ್ಷ ಎಂ.ಆರ್.ಹೆಗಡೆ, ಉಪಾಧ್ಯಕ್ಷ ಮರುವಳ ನಾರಾಯಣ ಭಟ್, ಕಾರ್ಯದರ್ಶಿ ನೀಲಕಂಠ ಯಾಜಿ, ಪಾರಂಪರಿಕ ವಿಭಾಗದ ಪ್ರಾಚಾರ್ಯ ಸತ್ಯನಾರಾಯಣ ಶರ್ಮಾ, ಪ್ರಾಚಾರ್ಯ ಗುರುಮೂರ್ತಿ ಮೇಣ ಮತ್ತಿತರರು ಉಪಸ್ಥಿತರಿದ್ದರು. ಮಹೇಶ್ ಭಟ್ ದೇವತೆ ನಿರೂಪಿಸಿದರು.


(ಉಪಯುಕ್ತ ನ್ಯೂಸ್)


Visit: Upayuktha Directory- You get here You want


‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top