ಐ ಕೇರ್‌: ತಂಪು ಕಪ್ಪು ಕನ್ನಡಕಗಳ ಹಿಂದಿನ ಕರಾಳ ಕಟು ವಾಸ್ತವಗಳು

Upayuktha
0




ಕಣ್ಣು ನಮ್ಮ ದೇಹದ ಪ್ರಾಮುಖ್ಯವಾದ ಅಂಗವಾಗಿದ್ದು, ಬಾಹ್ಯ ಜಗತ್ತಿನ ಸೌಂದರ್ಯವನ್ನು ಆಸ್ವಾದಿಸಲು ಅತೀ ಅಗತ್ಯ. ಈ ಕಣ್ಣುಗಳ ಆರೈಕೆ ಮತ್ತು ಪೋಷಣೆಗೆ ನಾವು ಹೆಚ್ಚಿನ ಕಾಳಜಿ ವಹಿಸಲೇಬೇಕು. ಬೇಸಗೆಯಲ್ಲಂತೂ ಕಣ್ಣು ಬಿಸಿಲಿನ ಧಗೆಯನ್ನು ತಾಳಲಾರದೆ ವಿಲ ವಿಲನೆ ಒದ್ದಾಡುವುನ್ನು ತಡೆಯಲು ಯುವಜನರು ಹೆಚ್ಚು ಹೆಚ್ಚು ಬಣ್ಣ ಬಣ್ಣದ ರಂಗು ರಂಗಿನ ತಂಪು ಕಪ್ಪು ಕನ್ನಡಕಗಳಿಗೆ ದಾಸರಾಗುವುದು ಸಹಜ. ಈ ತಂಪು ಕನ್ನಡಕಗಳು ನಿಜವಾಗಿಯೂ ನಮ್ಮ ಕಣ್ಣನ್ನು ರಕ್ಷಿಸುತ್ತದೆಯೋ ಎಂಬುದನ್ನು ಯಾವತ್ತಾದರೂ ಆಲೋಚಿಸಿದ್ದೀರಾ?


ನೀವು ಬೇಸಗೆಯ ರಜೆಯಲ್ಲಿ ಮಕ್ಕಳೊಂದಿಗೆ ಕುಟುಂಬ ಸಮೇತವಾಗಿ ರಜಾ ದಿನದ ಮೋಜನ್ನು ಸವಿಯಲು ಹೊರಟಾಗ ತಂಪು ಕನ್ನಡಕ ಮನೆಯಲ್ಲಿ ಮರೆತು, ರಸ್ತೆ ಬದಿಯಲ್ಲಿ ಸಿಗುವ ರಂಗು ರಂಗಿನ ಕನ್ನಡಕವನ್ನು ಕಂಡು ಆಕರ್ಷಣೆಗೊಂಡು ಹಿಂದು ಮುಂದು ಯೋಚಿಸದೇ ಕಡಮೆ ದರದ ತಂಪು ಕನ್ನಡಕವನ್ನು ಖರೀದಿಸಿ, ಬಿಸಿಲಲ್ಲಿ ಓಡಾಡಿ, ಹತ್ತಾರು ಸೆಲ್ಪಿ ತೆಗೆದು ಮುಖಪುಟದಲ್ಲಿ (Face Bok) ಹಾಕುವ ಮೊದಲು ಒಂದು ಕ್ಷಣ ಯೋಚಿಸಿ. ಯಾಕೆಂದರೆ ಮಾರುಕಟ್ಟೆಯಲ್ಲಿ ಸಿಗುವ ಎಲ್ಲಾ ತಂಪು ಕನ್ನಡಕಗಳು ಸುರಕ್ಷಿತವಲ್ಲ. ಅತೀ ದುಬಾರಿ ವೆಚ್ಚದ ತಂಪು ಕನ್ನಡಕಗಳನ್ನು ಸುರಕ್ಷಿತ ಎಂದು ನೀವು ತಿಳಿಯಬೇಕಿಲ್ಲ. ಅದೇ ರೀತಿ ರಸ್ತೆ ಬದಿಯಲ್ಲಿ ಸಿಗುವ ತಂಪು ಕನ್ನಡಕಗಳು ಸುರಕ್ಷಿತವಲ್ಲ ಎಂಬ ಕಟು ಸತ್ಯವನ್ನು ನೀವು ಅರಗಿಸಿಕೊಳ್ಳಬೇಕು. 



ನಮಗೆಲ್ಲಾ ತಿಳಿದಿರುವಂತೆ ಸೂರ್ಯನ ಕಿರಣಗಳಲ್ಲಿ ಬೆಳಕಿನ ಜೊತೆಗೆ ನೆರಳಾತೀತ ಕಿರಣಗಳು (Ultraviolet Radiations) ಭೂಮಿಗೆ ಸೇರುತ್ತದೆ. ಅಸಲಿಗೆ ಭೂಮಿಯ ಮೇಲೆ ಉದ್ಬವಿಸುವ ಪ್ರತಿ ಜೀವಿಗಳಿಗೂ ನೆರಳಾತೀತ ಕಿರಣಗಳಿಂದ ರಕ್ಷಣೆ ನೀಡುವ “ಓಜೋನ್” ಪದರವನ್ನು ಮನುಷ್ಯ ತನ್ನ ದುರಾಸೆ ಮತ್ತು ನಿರ್ಲಕ್ಷತೆಯಿಂದಾಗಿ ಶತಮಾನಗಳಿಂದ ಹಾಳುಗೆಡುವುತ್ತಿದ್ದಾನೆ. ನಮ್ಮ ಜೀವನ ಶೈಲಿ, ಪರಿಸರ ನಾಶ, ಕೈಗಾರೀಕರಣ ಮುಂತಾದವುಗಳಿಂದ “ಓಜೋನ್” ಪದರ ತೂತಾಗಿ ನೇರಳಾತೀತ ಕಿರಣಗಳು ಹೆಚ್ಚು ಹೆಚ್ಚು ಭೂಮಂಡಲಕ್ಕೆ ಬರುವಂತಾಗಿರುವುದೇ ನಮ್ಮ ಈ ಆಧುನಿಕತೆಯ ವಿಪರ್ಯಾಸ ಎಂದರೂ ತಪ್ಪಲ್ಲ. 



ಅಮೇರಿಕಾದ ಕಣ್ಣಿನ ತಜ್ಞರ ಸಂಘದ ವರದಿ ಪ್ರಕಾರ ಈ ನೆರಳಾತೀತ ಕಿರಣಗಳಲ್ಲಿ UVA ಮತ್ತು UVB ಎಂಬುದಾಗಿ ಎರಡು ವಿಧಗಳಿವೆ. ಈ ಎರಡೂ ಕಿರಣಗಳು ನಿಮ್ಮ ಕಣ್ಣಿಗೆ ಬಹಳ ಅಪಾಯಕಾರಿ ಮತ್ತು ಚರ್ಮದ ಕ್ಯಾನ್ಸರಿಗೆ ಕಾರಣವಾಗುತ್ತದೆ. ಅದೇ ರೀತಿ ಈ ನೆರಳಾತೀತ ಕಿರಣಗಳು ನಿಮ್ಮ ಕಣ್ಣಿಗೆ ಬಿದ್ದಲ್ಲಿ ಕುರುಡುತನವನ್ನು ಉಂಟುಮಾಡುತ್ತದೆ ಎಂಬುದಾಗಿ ಸಂಶೋಧನೆಗಳಿಂದ ಕಂಡು ಹಿಡಿದಿದ್ದಾರೆ.



ಸಾಮಾನ್ಯವಾಗಿ ನಾವು ಬಿಸಿಲಿಗೆ ಹೋದಾಗ ಕಣ್ಣುಗಳು ಸಂಕುಚಿತಗೊಂಡು ಸಣ್ಣದಾಗಿ ಅಥವಾ ಅರ್ಧ ಮುಚ್ಚಿಕೊಂಡಂತಾಗಿ ಮತ್ತು ಕಣ್ಣಿನ ಗೋಲದೊಳಗಿನ “ಪ್ಯುಪಿಲ್” ಎಂಬ ಸ್ನಾಯುಗಳಿಂದ ನಿಯಂತ್ರಿಸಲ್ಪಡುವ ರಂದ್ರದ ಸುತ್ತಳತೆ ಕಡಮೆಯಾಗಿ, (1mm ಗಿಂತಲೂ ಕಡಮೆಯಾಗಿ) ಕಣ್ಣಿನೊಳಗೆ ಪ್ರವೇಶವಾಗುವ ಸೂರ್ಯನ ಕಿರಣಗಳನ್ನು ಸಂರ್ಪೂಣವಾಗಿ ನೈಸರ್ಗಿಕವಾಗಿ ನಿಯಂತ್ರಿಸುತ್ತದೆ. ಆ ಮೂಲಕ ಕಣ್ಣಿನೊಳಗೆ ಪ್ರವೇಶಿಸುವ ನೆರಳಾತೀತ ಕಿರಣಗಳನ್ನು ನಿಯಂತ್ರಿಸುತ್ತದೆ ಮತ್ತು ಉಂಟಾಗುವ ತೊಂದರೆಗಳನ್ನು ಕಡಮೆ ಮಾಡುತ್ತದೆ.  



ಮಾರುಕಟ್ಟೆಗಳಲ್ಲಿ ಸಿಗುವ ಬಗೆ ಬಗೆಯ ಬ್ರಾಂಡಿನ, ಬಗೆ ಬಗೆಯ ವಿನ್ಯಾಸದ ಬಣ್ಣದ ತಂಪು ಕನ್ನಡಕಗಳು ಈ ನೆರಳಾತೀತ ಕಿರಣಗಳಿಂದ ರಕ್ಷಿಸಲೇಬೇಕೆಂದಿಲ್ಲ. ತಂಪು ಕನ್ನಡಕಗಳಲ್ಲಿ ಬರೆದಿರುವ UV Protection ಅಥವಾ “ನೆರಳಾತೀತ ಕಿರಣಗಳನ್ನು ಹೀರುತ್ತವೆ” ಎಂಬ ತಲೆಬರಹಕ್ಕೆ ಮಾರು ಹೋಗಬೇಡಿ. ಇವೆಲ್ಲವೂ ಗ್ರಾಹಕರನ್ನು ಸೆಳೆಯಲು ಮಾಡುವ ಗಿಮಿಕ್ ಅಷ್ಟೇ. ತಂಪು ಕನ್ನಡಕಗಳ ಮೇಲೆ VU400 (ಅಂದರೆ Uಗಿಂ ಮತ್ತು Uಗಿಃ ಎರಡನ್ನೂ ಹೀರುತ್ತದೆ ಎಂದರ್ಥ) ಮತ್ತು ಶೇಕಡಾ 100 UV ರಕ್ಷಣೆ ಎಂದು ಬರೆದಿದ್ದಲ್ಲಿ ಮಾತ್ರ ಖರೀದಿಸಿ. ಇಲ್ಲವಾದಲ್ಲಿ ಖಂಡಿತವಾಗಿಯೂ ಕಣ್ಣಿಗೆ ತೊಂದರೆ ತಪ್ಪಿದ್ದಲ್ಲ. ನೆರಳಾತೀತ ಕಿರಣಗಳ (UV Rays) ರಕ್ಷಣೆ ಇಲ್ಲದ ಕೇವಲ ರಂಗುರಂಗಿನ ತಂಪು ಕನ್ನಡಕ ಧರಿಸುವುದರಿಂದ ಕಣ್ಣಿಗೆ ಹೆಚ್ಚಿನ ಹಾನಿಯಾಗುತ್ತದೆಯೇ ಹೊರತು ರಕ್ಷಣೆ ಖಂಡಿತಾ ಸಾಧ್ಯವಿಲ್ಲ. ಯಾಕೆಂದರೆ ತಂಪು ಕನ್ನಡಕ ಧರಿಸಿದ್ದೇವೆ ಎಂದು ಬಿಸಿಲಿಗೆ ಕಣ್ಣು ಒಡ್ಡಿದಾಗ, ಹೇಗೆ ಬಿಸಿಲಿನಿಂದ ಕತ್ತಲಿನ ಕೊಣೆಗೆ ಹೋದಾಗ ನಿಮ್ಮ ಕಣ್ಣಿನ ಗೋಲದೊಳಗಿನ “ಪ್ಯೂಪಿಲ್” ತನ್ನ ಸುತ್ತಳತೆಯನ್ನು ಹೆಚ್ಚಿಸಿಕೊಂಡು (5mm ರಿಂದ 6mm) ಹೆಚ್ಚು ಬೆಳಕು ಕಣ್ಣನ್ನು ಪ್ರವೇಶಿಸುವಂತೆ ಮಾಡಿ ಮಸೂರ ಮತ್ತು ಅಕ್ಷಿಪಟಲದ ಮೇಲೆ ಹೆಚ್ಚಿನ ಬೆಳಕು ಪ್ರವೇಶಿಸುವಂತೆ ಮಾಡುತ್ತದೆಯೋ, ಅದೇ ರೀತಿ ಪ್ಯೂಪಿಲ್‍ಗಳು ಕಾರ್ಯಚರಣೆ ನಡೆಸಿ ಕಣ್ಣಿನೊಳಗೆ ಹೆಚ್ಚು ಬೆಳಕು ಪ್ರವೇಶಿಸುವಂತೆ ಮಾಡುತ್ತದೆ.


ಹೀಗಾದಾಗ ಬೆಳಕಿನ ಜೊತೆಗೆ ನೆರಳಾತೀತ ಕಿರಣಗಳು ಕಣ್ಣಿನೊಳಗೆ ಸೇರಿಕೊಂಡು ಕಣ್ಣಿಗೆ ಹಾನಿ ಮಾಡುವ ಸಾಧ್ಯತೆ ಹೆಚ್ಚಾಗಿರುತ್ತದೆ. ನೆರಳಾತೀತ ಕಿರಣಗಳಿಂದ ರಕ್ಷಣೆ ಇಲ್ಲದ ತಂಪು ಕನ್ನಡಕಗಳನ್ನು ಬಳಸುವುದಕ್ಕಿಂತ ಬರಿಗಣ್ಣಿನಲ್ಲಿ ಬಿಸಿಲಲ್ಲಿ ಓಡಾಡುವುದು ಸೂಕ್ತ ಎಂದು ಸಂಶೋಧನೆಗಳಿಂದ ತಿಳಿದು ಬಂದಿದೆ. ಯಾಕೆಂದರೆ ಬಿಸಿಲಿನಲ್ಲಿ ಬರಿಗಣ್ಣಿನಲ್ಲಿ ಓಡಾಡಿದಾಗ ಪ್ಯೂಪಿಲ್‍ಗಳು ತನ್ನ ಸುತ್ತಳತೆಯನ್ನು ಸ್ನಾಯುಗಳಿಂದ ನಿಯಂತ್ರಿಸಿ, ಕಣ್ಣಿನೊಳಗೆ ಸುಳಿಯುವ ನೆರಳಾತೀತ ಕಿರಣಗಳನ್ನು ಕಡಿಮೆ ಮಾಡಿ ರಕ್ಷಿಸುತ್ತದೆ. ಒಟ್ಟಿನಲ್ಲಿ ನಿಮಗೆ ನಿಜವಾಗಿಯೂ ಕಣ್ಣಿನ ಆರೋಗ್ಯದ ಮೇಲೆ ಕಾಳಜಿ ಇದ್ದಲ್ಲಿ ಸರಿಯಾದ ಬ್ರಾಂಡಿನ ಮತ್ತು ಸೂಕ್ತ ಬೆಲೆಯ ಮತ್ತು ಸುರಕ್ಷಿತವಾದ ತಂಪು ಕನ್ನಡಕವನ್ನು ಆರಿಸಿಕೊಳ್ಳಬೇಕು. ಹಾಗೆಂದ ಮಾತ್ರಕ್ಕೆ ಅಂತರಾಷ್ಟೀಯ ಬ್ರಾಂಡಿನ, ಹೆಚ್ಚಿನ ಬೆಲೆಯ ದೊಡ್ಡ ಅವಾನಿಯಂತ್ರಕ ಶೋ ರೂಮ್‍ಗಳಲ್ಲಿ ಸಿಗುವ ತಂಪು ಕನ್ನಡ ಒಳ್ಳೆಯದು, ಕಡಿಮೆ ಬೆಲೆಯ ರಸ್ತೆ ಬದಿಯಲ್ಲಿ ಸಿಗುವ ತಂಪು ಕನ್ನಡಕ ಒಳ್ಳೆಯದಲ್ಲ ಎಂದರ್ಥವಲ್ಲ. ನಿಮಗೆ ನಿಜವಾಗಿಯೂ ಸಂಶಯವಿದ್ದಲ್ಲಿ ಸಮೀಪದ “ಕಣ್ಣಿನ ಪರೀಕ್ಷೆ” ಕೇಂದ್ರಕ್ಕೆ ಹೋಗಿ, ನೀವು ಆರಿಸಿದ ತಂಪು ಕನ್ನಡಕ ನೆರಳಾತೀತ ಕಿರಣಗಳಿಂದ ನಿಜವಾಗಿಯೂ ರಕ್ಷಿಸುತ್ತದೆಯೋ ಇಲ್ಲವೋ ಎಂಬದನ್ನು ಅರಿತು ಕೊಳ್ಳವುದು ಒಳಿತು. ಈ ಪ್ರಕ್ರಿಯೆಗೆ ತಗಲುವ ಸಮಯ ಕೇವಲ 2 ನಿಮಿಷ ಮಾತ್ರ ....!!! 

ತಂಪು ಕನ್ನಡಕ ಖರೀದಿಸುವಾಗ ನೆನಪಿಡಬೇಕಾದ ಅಂಶಗಳು :-


1.ದುಬಾರಿ ಬೆಲೆಯ, ಅಂತರಾಷ್ಟೀಯ ಬ್ರಾಂಡ್‍ನ ತಂಪು ಕನ್ನಡಕ ಸುರಕ್ಷಿತವಾಗಿರಲೇಬೇಕೆಂದಿಲ್ಲ.

2.VU 400 ಎಂದು ನಮೂದಿಸಿದ ತಂಪು ಕನ್ನಡಕವನ್ನೇ ಖರೀದಿಸಿ, ಬರೀ “UV Absorption”” ಅಥವಾ “ನೆರಳಾತೀತ ಕಿರಣ” ಹೀರುತ್ತದೆ ಎಂದು ಬರೆದ ತಂಪು ಕನ್ನಡಕವನ್ನು ಖರೀದಿಸಬೇಡಿ.

3.ಪೋಲರೈಸ್ಡ್ ಕನ್ನಡಕಗಳನ್ನೇ ಖರೀದಿಸಿ.

4.ಕಡುಬಣ್ಣದ ತಂಪು ಕನ್ನಡಕದಿಂದ ಹೆಚ್ಚಿನ ರಕ್ಷಣೆ ಮತ್ತು ನಸು ಬಣ್ಣದ ತಂಪು ಕನ್ನಡಕದಿಂದ ಕಡಮೆ ರಕ್ಷಣೆ ಎಂಬ ಬ್ರಾಂತಿ ಬೇಡ. ಯಾಕೆಂದರೆ ಗ್ರೇ, ಹಸಿರು, ಗುಲಾಬಿ, ಹಳದಿ ಮುಂತಾದ ನಸು ಬಣ್ಣದ ತಂಪು ಕನ್ನಡಕಗಳೂ ನೆರಳಾತೀತ ಕಿರಣಗಳಿಂದ ಹೆಚ್ಚಿನ ರಕ್ಷಣೆ ನೀಡಬಲ್ಲದು.

5.ನಿಮಗೇನಾದರೂ ಸಂದೇಹವಿದ್ದಲ್ಲಿ ಅಥವಾ ತಂಪು ಕನ್ನಡ ಬಳಸಿ ತಲೆ ನೋವು ಬಂದಲ್ಲಿ ತಕ್ಷಣ ಕಣ್ಣಿನ ತಜ್ಞರಲ್ಲಿ ತೋರಿಸಿಕೊಳ್ಳಿ. 

6.ತಂಪು ಕನ್ನಡಕದ ವಿನ್ಯಾಸ, ಗಾತ್ರ, ತೂಕ, ಬಣ್ಣಕ್ಕಿಂತ ಹೆಚ್ಚಿನ ಪ್ರಾಮುಖ್ಯತೆಯನ್ನು ನೆರಳಾತೀತ ಕಿರಣಗಳಿಂದ ರಕ್ಷಣೆ ನೀಡುವ ತಂಪು ಕನ್ನಡಕಗಳಿಗೆ ಹೆಚ್ಚಿನ ಆದ್ಯತೆ ನೀಡಬೇಕು.


ಮುಕ್ತಾಯಕ್ಕೆ ಮುನ್ನ:

ಕಣ್ಣು ನಮ್ಮ ದೇಹದ ಅತೀ ಪ್ರಾಮುಖ್ಯವಾದ ಅಂಗ. ನೆನಪಿರಲಿ, ಕಣ್ಣಿನ ಸುದೃಡ ಆರೋಗ್ಯಕ್ಕಾಗಿ ಮತ್ತು ಕಾಂತಿಗಾಗಿ ಸೂರ್ಯನ ಶಾಖ ಮತ್ತು ಬೆಳಕು ಅತೀ ಅನಿವಾರ್ಯ. ಆದರೆ ಅತೀ ಆದರೆ ಅಮೃತವೂ ವಿಷವೆಂಬಂತೆ, ಅತಿಯಾದ ಸೂರ್ಯ ಕಿರಣಗಳ ಬೀಳುವಿಕೆಯಿಂದ ಅಪಾಯ ಕಟ್ಟಿಟ್ಟ ಬುತ್ತಿ. ನೆನಪಿರಲಿ, ನಮ್ಮ ಪೂರ್ವಜರು ಪುರಾತನ ಗ್ರೀಕ್, ಈಜಿಪ್ಟ್‌ ಮತ್ತು ಟಿಬೆಟಿಯನ್ನರು “ಸನ್ ಗೇಜಿಂಗ್” (ಸೂರ್ಯ ಯೋಗ, ಸೂರ್ಯ ವೀಕ್ಷಣೆ, ಸೌರ ವೀಕ್ಷಣೆ, ಸೌರ ವೈದ್ಯಕೀಯ) ಎಂಬ ವಿಧಾನದ ಮೂಲಕ ಸೂರ್ಯಸ್ತದ ಕೊನೆಯ ಒಂದು ಗಂಟೆ ಮತ್ತು ಸೂರ್ಯೋದಯದ ಮೊದಲ ಒಂದು ಗಂಟೆಗಳಲ್ಲಿ ಸೂರ್ಯನಲ್ಲಿ ನೇರವಾಗಿ ದಿಟ್ಟಿಸಿಕೊಂಡು, ದೇಹದ ಮತ್ತು ಕಣ್ಣಿನ ಆರೋಗ್ಯಕ್ಕಾಗಿ ಮತ್ತು ಆಧ್ಯಾತ್ಮಿಕ ಬೆಳವಣಿಗೆಗಾಗಿ ಈ ಪ್ರಕ್ರಿಯೆ ಮಾಡುತ್ತಿದ್ದರು ಎಂದು ಪುರಾತನ ಪುಣ್ಯ ಗ್ರಂಥಗಳಲ್ಲಿ ಉಲ್ಲೇಖವಾಗಿದೆ. ಯಾಕೆಂದರೆ ಈ ಸಮಯದಲ್ಲಿ ಸೂರ್ಯ ಕಿರಣಗಳು ತುಂಬಾ ಮಂದವಾಗಿದ್ದು ದೇಹದ ಸರ್ವತೋಮುಖ ಆರೋಗ್ಯಕ್ಕೆ ಪೂರಕ ಎಂದು ಭಾವಿಸಿದ್ದರು. ಆದರೆ ಕಡು ಬಿಸಿಲಿನಲ್ಲಿ ನೀವು ಸೂರ್ಯನನ್ನ ದಿಟ್ಟಿಸಿ, ಆರೋಗ್ಯವನ್ನು ಹೆಚ್ಚಿಸುತ್ತೇನೆ ಎನ್ನುವುದು ಕೂಡ ಮೂರ್ಖತನದ ಪರಾಮಾವಧಿ ಆದೀತು ಜೋಕೆ. ಹಾಗೇನಾದರೂ ಮಾಡಬೇಕಿದ್ದಲ್ಲಿ ಸುರಕ್ಷಿತವಾದ ನೆರಳಾತೀತ ಕಿರಣಗಳಿಂದ ರಕ್ಷಣೆ ಒದಗಿಸುವ ತಂಪು ಕನ್ನಡಕಗಳನ್ನೇ ಬಳಸುವುದರಲ್ಲಿಯೇ ನಿಮ್ಮ ಕಣ್ಣಿನ ಹಿತ ಮತ್ತು ಒಳಿತು ಅಡಗಿದೆ.  


-ಡಾ|| ಮುರಲೀ ಮೋಹನ್ ಚೂಂತಾರು

ಸುರಕ್ಷಾದಂತ ಚಿಕಿತ್ಸಾಲಯ

ಹೊಸಂಗಡಿ – 671 323

ಮೊ : 09845135787

(ಉಪಯುಕ್ತ ನ್ಯೂಸ್)


Visit: Upayuktha Directory- You get here You want


‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


إرسال تعليق

0 تعليقات
إرسال تعليق (0)
Maruti Suzuki Festival of Colours
Maruti Suzuki Festival of Colours
To Top