ಶಿವಮೊಗ್ಗದಲ್ಲಿ ನಿರ್ಮಾಣವಾಗಲಿದೆ ಥೀಮ್ ಪಾರ್ಕ್: ಏನಿದರ ವಿಶೇಷತೆಗಳು?

Upayuktha
0

ಗಾಂಧೀಪಾರ್ಕನ್ನು ಅತ್ಯಾಧುನಿಕ ರೀತಿಯಲ್ಲಿ ಅಭಿವೃದ್ಧಿಪಡಿಸಲು ಕ್ರಮ: ಸಚಿವ ಈಶ್ವರಪ್ಪ



ಶಿವಮೊಗ್ಗ: ನಗರದ ಹೃದಯಭಾಗದಲ್ಲಿರುವ ಗಾಂಧೀಪಾರ್ಕನ್ನು ಅತ್ಯಾಧುನಿಕ ರೀತಿಯಲ್ಲಿ ಅಭಿವೃದ್ಧಿಪಡಿಸಲು ಅಗತ್ಯ ಕ್ರಮ ಕೈಗೊಳ್ಳುವುದಾಗಿ ಗ್ರಾಮೀಣಾಭಿವೃದ್ಧಿ, ಪಂಚಾಯತ್‌ರಾಜ್ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದರು.


ಇಂದು (ಜೂ.24) ಸಂಸದ ಬಿ.ವೈ.ರಾಘವೇಂದ್ರ, ಸ್ಥಳೀಯ ಸಂಸ್ಥೆಗಳ ಚುನಾಯಿತ ಪ್ರತಿನಿಧಿಗಳು ಹಾಗೂ ಪಾಲಿಕೆಯ ಅಧಿಕಾರಿಗಳೊಂದಿಗೆ ಭೇಟಿ ನೀಡಿ, ಅಲ್ಲಿನ ವ್ಯವಸ್ಥೆಗಳನ್ನು ಪರಿಶೀಲಿಸಿ ಅಧಿಕಾರಿಗಳಿಂದ ಮಾಹಿತಿ ಪಡೆದ ನಂತರ ಅವರು ಸುದ್ದಿಗಾರರೊಂದಿಗೆ ಅವರು ಮಾತನಾಡುತ್ತಿದ್ದರು.


ನೂರಾರು ವರ್ಷಗಳ ಭವ್ಯ ಇತಿಹಾಸ ಹೊಂದಿರುವ ಈ ಉದ್ಯಾನವನ್ನು ಈ ಹಿಂದೆ ಕೋಟ್ಯಾಂತರ ರೂ.ಗಳ ವೆಚ್ಚದಲ್ಲಿ ಗಾಂಧೀಪಾರ್ಕ್‌ನ್ನು ಅಭಿವೃದ್ಧಿಪಡಿಸಲಾಗಿತ್ತು. ಪ್ರಸ್ತುತ ಇಲ್ಲಿ ಪ್ರತಿನಿತ್ಯ ವಾಯುವಿಹಾರಕ್ಕಾಗಿ ಬರುವವರು ಹಾಗೂ ಉದ್ಯಾನವನಕ್ಕೆ ಆಗಾಗ್ಗೆ ಭೇಟಿ ನೀಡುವ ಮಕ್ಕಳು, ಪೋಷಕರು ಹಾಗೂ ಸಾರ್ವಜನಿಕರ ಅಪೇಕ್ಷೆಯಂತೆ ಅಭಿವೃದ್ಧಿಪಡಿಸಲು ಉದ್ದೇಶಿಸಲಾಗಿದೆ. ಈ ಉದ್ಯಾನದಲ್ಲಿ ಮಕ್ಕಳ ಆಟೋಟ ಹಾಗೂ ಮನೋರಂಜನಾ ಚಟುವಟಿಕೆಗಳಿಗೆ ಅವಕಾಶ ಕಲ್ಪಿಸಲಾಗಿದೆ ಎಂದರು.


ಅಲ್ಲದೇ 3.00 ಕೋಟಿ ರೂ.ಗಳ ವೆಚ್ಚದಲ್ಲಿ ಈ ಉದ್ಯಾನವನ್ನು ಅತ್ಯಾಧುನಿಕ ರೀತಿಯಲ್ಲಿ ಅಭಿವೃದ್ಧಿಪಡಿಸಲು ಕ್ರಿಯಾಯೋಜನೆ ರೂಪಿಸಲಾಗಿದೆ. ಈ ಕಾಮಗಾರಿಯಲ್ಲಿ ಬೆಳಕಿನ ವ್ಯವಸ್ಥೆ, ಪಾದಚಾರಿಗಳ ಪಥ, ಮಕ್ಕಳ ಆಟಕ್ಕೆ ಅನುಕೂಲವಾಗುವಂತೆ ಪ್ರತ್ಯೇಕ ಸ್ಥಳ, ಈಜುಕೊಳ, ಓಪನ್‌ಜಿಮ್ ಮುಂತಾದವುಗಳನ್ನು ಅಳವಡಿಸಿಕೊಳ್ಳಲಾಗಿದೆ. ಮುಂದಿನ 151 ದಿನಗಳಲ್ಲಿ ಟೆಂಡರ್ ಪ್ರಕ್ರಿಯೆ ಪೂರ್ಣಗೊಳಿಸಿ, ಕಾರ್ಯಾರಂಭಗೊಳಿಸಲಾಗುವುದು ಎಂದರು.


ಸ್ಮಾರ್ಟ್‌ಸಿಟಿ ಯೋಜನೆಯಡಿ 8.50 ಕೋಟಿ ರೂ.ಗಳ ವೆಚ್ಚದಲ್ಲಿ ಥೀಮ್ ಪಾರ್ಕ್ ನಿರ್ಮಿಸಲು ಉದ್ದೇಶಿಸಲಾಗಿದ್ದು, ಅದಕ್ಕೆ ಸಂಬಂಧಿಸಿದಂತೆ ರೂಪಿಸಲಾಗಿದ್ದ ಕ್ರಿಯಾ ಯೋಜನೆ ಅನುಮೋದನೆ ದೊರೆತಿದ್ದು, ಅಂತಿಮ ಹಂತದಲ್ಲಿದೆ. ಗುಜರಾತಿನ ಕಂಪನಿಯೊಂದು ಈ ಥೀಮ್ ಪಾರ್ಕ್ ನಿರ್ಮಾಣಕ್ಕೆ ಉತ್ಸಾಹ ತೋರಿಸಿದ್ದಾರೆ. ಈ ಪಾರ್ಕ್‌ನ ನಿರ್ವಹಣೆ ವ್ಯವಸ್ಥಿತವಾಗಿರುವ ಕುರಿತು ಪಾಲಿಕೆ ವತಿಯಿಂದ, ಖಾಸಗಿ ಸಂಸ್ಥೆಗಳಿಂದ ಅಥವಾ ಖಾಸಗಿ ಕೈಗಾರಿಕೆಗಳಿಂದ ನಿರ್ವಹಿಸುವ ಕುರಿತು ಚರ್ಚಿಸಲಾಗಿದೆ. ಈ ಸಂಬಂಧ ಮುಂದಿನ ಒಂದು ವಾರದಲ್ಲಿ ಆಸಕ್ತ ಕೈಗಾರಿಕೆಗಳ ಮುಖ್ಯಸ್ಥರ ಸಭೆ ಕರೆದು ನಿರ್ಣಯ ಕೈಗೊಳ್ಳಲಾಗುವುದು ಎಂದರು.


ಸಂಸದ ಬಿ.ವೈ. ರಾಘವೇಂದ್ರ ಅವರು ಮಾತನಾಡಿ, ಅಗತ್ಯ ಸೌಲಭ್ಯಗಳೊಂದಿಗೆ ವೇಗವಾಗಿ ಬೆಳೆಯುತ್ತಿರುವ ಶಿವಮೊಗ್ಗ ನಗರದ ಮಧ್ಯಭಾಗದಲ್ಲಿರುವ ಗಾಂಧೀ ಉದ್ಯಾನ ಶಿವಮೊಗ್ಗಕ್ಕೆ ಶೋಭೆ ಹೆಚ್ಚಿಸಿದೆ. ಈಗಾಗಲೇ ಪ್ರವಾಸಿಗರವನ್ನು ಆಕರ್ಷಿಸುವ ಪ್ರವಾಸಿ ತಾಣವಾಗಿ ಶಿವಮೊಗ್ಗ ಪರಿವರ್ತನೆಗೊಳ್ಳುತ್ತಿದೆ ಎಂದರು.


ಗಾಂಧೀ ಉದ್ಯಾನವನ್ನು ಆಕರ್ಷಕ ಉದ್ಯಾನವನ್ನಾಗಿ ಪರಿವರ್ತಿಸುವ ಅಗತ್ಯವಿದೆ. ಅಲ್ಲದೆ ವ್ಯವಸ್ಥಿತವಾಗಿ ನಿರ್ವಹಿಸುವ ತುರ್ತು ಅಗತ್ಯವಿದೆ. ಇಲ್ಲಿನ ವಾತಾವರಣ ಶುದ್ಧವಾಗಿರುವಂತೆ ನೋಡಿಕೊಳ್ಳಬೇಕಾಗಿದೆ. ಪಾದಚಾರಿ ಪಥ ಅಭಿವೃದ್ಧಿ, ಯುಜಿಡಿ, ಲೈನ್ ಪೂರ್ಣಗೊಳ್ಳಬೇಕು. ಶೌಚಾಲಯ, ಮಕ್ಕಳ ರೈಲು ಮುಂತಾದ ಕೆಲಸಗಳು ಪೂರ್ಣಗೊಳ್ಳಬೇಕು. ಈ ಎಲ್ಲವನ್ನು ಗಮನದಲ್ಲಿಟ್ಟುಕೊಂಡು ಶೀಘ್ರದಲ್ಲಿ ಪಾರ್ಕ್‌ನ್ನು ಅಭಿವೃದ್ಧಿಪಡಿಸಿ ಲೋಕಾರ್ಪಣೆಗೊಳಿಸಲಾಗುವುದು ಎಂದರು.


ಶಿವಮೊಗ್ಗ ಜಿಲ್ಲೆ ಶಿವಶರಣರ ಅಪೂರ್ವ ಇತಿಹಾಸ ಹೊಂದಿದೆ. ಇಲ್ಲಿನ ಗಾಂಧಿಪಾರ್ಕ್‌ನ ಪ್ರವೇಶದ್ವಾರದಲ್ಲಿ ಬಸವೇಶ್ವರ ಪುತ್ಥಳಿ ಅನಾವರಣಗೊಳಿಸುವ ವಿಷಯ ಕ್ಯಾಬಿನೆಟ್‌ನಲ್ಲಿ ಚರ್ಚೆಗೆ ಬಂದಿದೆ. ಮುಂದಿನ ಕ್ಯಾಬಿನೆಟ್ ಸಭೆಯಲ್ಲಿ ಅನುಮೋದನೆ ದೊರೆತು ಈಗಾಗಲೇ ಗುರುತಿಸಲಾಗಿರುವ ಈ ಸ್ಥಳದಲ್ಲಿ ಪುತ್ಥಳಿ ಲೋಕಾರ್ಪಣೆಗೊಳಿಸಲಾಗುವುದು ಎಂದರು.


ಈ ಸಂದರ್ಭದಲ್ಲಿ ಸೂಡಾ ಅಧ್ಯಕ್ಷ ಜ್ಯೋತಿಪ್ರಕಾಶ್, ಮೇಯರ್ ಸುನಿತಾ ಅಣ್ಣಪ್ಪ, ಪಾಲಿಕೆ ಆಯುಕ್ತ ಚಿದಾನಂದ ವಟಾರೆ, ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್. ಷಡಾಕ್ಷರಿ ಮುಂತಾದವರು ಉಪಸ್ಥಿತರಿದ್ದರು.


(ಉಪಯುಕ್ತ ನ್ಯೂಸ್)


Visit: Upayuktha Directory- You get here You want


‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top