ಲಿಂಗಾನುಪಾತ ಸಾಧನೆಯಲ್ಲಿ ಹಿಂದೆ: ಬದಲಾಗಬೇಕು ದೃಷ್ಟಿಕೋನ

Upayuktha
0

ಲಿಂಗ ಸಮಾನತೆ ಮತ್ತು ಸಬಲೀಕರಣವು ಮಾನವ ಅಭಿವೃದ್ಧಿಯ ಪ್ರಮುಖ ಆಯಾಮ


ಕುಸಿದ ಲಿಂಗಾನುಪಾತ:

ಲಿಂಗ ಸಮಾನತೆ ಮತ್ತು ಸಬಲೀಕರಣವು ಮಾನವ ಅಭಿವೃದ್ಧಿಯ ಪ್ರಮುಖ ಆಯಾಮವಾಗಿದೆ. ಸ್ತ್ರೀ-ಪುರುಷ ಸಮಾನತೆಯ ವಿಚಾರದಲ್ಲಿ ಮುಖ್ಯವಾಗಿ ಆರ್ಥಿಕ ಅವಕಾಶಗಳು, ಆರೋಗ್ಯ, ಶಿಕ್ಷಣ, ರಾಜಕೀಯ ಕ್ಷೇತ್ರಗಳಲ್ಲಿ ನಮ್ಮ ಜಾಗತಿಕ ಸ್ಥಾನ ಮೇಲೇರುವ ಬದಲು ಕುಸಿಯುತ್ತಾ ಸಾಗಿರುವುದು ಕಳವಳಕಾರಿ.


ಪ್ರತಿ 1000 ಪುರುಷರಿಗೆ ಅಷ್ಟೇ ಪ್ರಮಾಣದಲ್ಲಿ ಹೆಣ್ಣಿನ ಜನನವೂ ಇರಬೇಕು. ಹಲವಾರು ಕಾರಣಗಳಿಂದ ಲಿಂಗಾನುಪಾತದ ಅಸಮಾನತೆಯು ಸಮಾಜದ ದೊಡ್ಡ ಆತಂಕದ ಸಂಗತಿಯಾಗಿದೆ. ಇದು ಪ್ರಕೃತಿಯ ಭಾರೀ ಅಸಮತೋಲನಕ್ಕೆ ನಾಂದಿಯಾಗಲಿದೆಯಾ ಎಂಬ ಸಹಜ ಆತಂಕ ಮೂಡಿದೆ. ಇತ್ತೀಚೆಗೆ ಬಿಡುಗಡೆಯಾದ 2019ರ ನಾಗರಿಕ ನೋಂದಣಿ ವ್ಯವಸ್ಥೆಯ ವರದಿಯು ಹಲವು ರಾಜ್ಯಗಳಲ್ಲಿನ ಗಂಡು-ಹೆಣ್ಣಿನ ನಡುವಿನ ಲಿಂಗಾನುಪಾತದ ಭಾರೀ ವ್ಯತ್ಯಯ ಕಂಡುಬಂದಿದೆ.


ಸಾಧನೆಯಲ್ಲಿ ನಿರಂತರತೆ ಸಾಧಿಸದಿದ್ದರೆ ಅದು ಸಾಧನೆಯಲ್ಲ ಎಂಬ ಮಾತಿದೆ. ಅದರಂತೆ ಲಿಂಗಾನುಪಾತದಲ್ಲಿ ಏರಿಳಿತಗಳು ಆರ್ಥಿಕ ಸಾಧನೆಯೊಡನೆ ಸಾಮಾಜಿಕ ಸ್ವಾಸ್ಥ್ಯ ಸಾಧನೆಯಲ್ಲಿ ಸ್ಥಿರತೆಯನ್ನು ಕಾಪಾಡುವಲ್ಲಿ ಎಡವಿದ್ದೇವೆನೋ ಎಂಬ ಅನುಮಾನ ಹುಟ್ಟುತ್ತದೆ.


ಕೆಲವೊಂದು ರಾಜ್ಯಗಳಲ್ಲಿ ಇದರ ಅನುಪಾತವು 2018ರಲ್ಲಿ ದಾಖಲಾಗಿದ್ದಕ್ಕಿಂತ ಕಡಿಮೆಯಾಗಿದೆ. ಕರ್ನಾಟಕ 2017 ರಲ್ಲಿ 949 ಲಿಂಗಾನುಪಾತ ಹೊಂದಿದ್ದರೆ 2018 ರಲ್ಲಿ 957ಕ್ಕೆ ತಲುಪಿತು. ಆದರೆ 2019ರಲ್ಲಿ 947ಕ್ಕೆ ಕುಸಿದಿರುವುದು ಕಳವಳಕಾರಿ.


ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ ಸ್ವಾಭಾವಿಕ ಲಿಂಗಾನುಪಾತದ ಪ್ರಮಾಣ 952. ಈಶಾನ್ಯ ರಾಜ್ಯವಾದ ಅರುಣಾಚಲ ಪ್ರದೇಶದಲ್ಲಿ ಈ ಅನುಪಾತ 1024 ಆಗಿದ್ದು ದೇಶದಲ್ಲೇ ಮೊದಲ ಸ್ಥಾನದಲ್ಲಿದೆ. ದಕ್ಷಿಣ ಭಾರತದಲ್ಲಿ ಕೇರಳದ ಸ್ಥಿತಿ ಉತ್ತಮವಾಗಿದ್ದರು (960) ಕೂಡಾ 2018 ಕ್ಕೆ ಹೋಲಿಸಿದರೆ (965) ತುಸು ಇಳಿಕೆಯೇ ಆಗಿದೆ.


ಲಿಂಗಾನುಪಾತ (Sex Ratio) ಎಂದರೆ…

ಒಂದು ದೇಶದ ಒಟ್ಟು ಜನಸಂಖ್ಯೆಯಲ್ಲಿ ಸ್ತ್ರೀಯರು ಮತ್ತು ಪುರುಷರ ನಡುವಿನ ಅನುಪಾತವನ್ನು ಲಿಂಗಾನುಪಾತ ಎನ್ನುವರು. 2011ರ ಜನಗಣತಿಯ ಪ್ರಕಾರ ಭಾರತದಲ್ಲಿ ಪ್ರತಿ 1000 ಪುರುಷರಿಗೆ 943 ಸ್ತ್ರೀಯರಿದ್ದಾರೆ. 2011 ರ ಜನಗಣತಿಯ ಪ್ರಕಾರ 0-6 ವಯೋಮಾನದವರಲ್ಲಿ 1000 ಗಂಡು ಮಕ್ಕಳಿಗೆ 918 ಹೆಣ್ಣು ಮಕ್ಕಳಿದ್ದರೆ, 2001ರ ಜನಗಣತಿಯ ಪ್ರಕಾರ 1000 ಗಂಡು ಮಕ್ಕಳಿಗೆ 928 ಹೆಣ್ಣು ಮಕ್ಕಳಿದ್ದರು. ಅಂದರೆ ದೇಶವು ಮಕ್ಕಳ ಲಿಂಗಾನುಪಾತದಲ್ಲಿ ಕುಸಿತವನ್ನು ದಾಖಲಿಸಿದೆ.


2011ರ ಜನಗಣತಿಯ ಪ್ರಕಾರ ದೇಶದ ಜನಸಂಖ್ಯೆಯು 121.08 ಕೋಟಿ. ಇದರಲ್ಲಿ ಪುರುಷರ ಪ್ರಮಾಣ ಶೇ.51.47 (62.32 ಕೋಟಿ) ಹಾಗೂ ಮಹಿಳೆಯರ ಪ್ರಮಾಣ ಶೇ. 48.53 (58.25 ಕೋಟಿ). ಪುರುಷರ ಸಂಖ್ಯೆಗಿಂತ ಮಹಿಳೆಯರ ಸಂಖ್ಯೆಯು 3.57 ಕೋಟಿ ಕಡಿಮೆ ಸಂಖ್ಯೆಯಲ್ಲಿರುವುದನ್ನು ಗಮನಿಸಬಹುದಾಗಿದೆ. ಇದೇ ಅವಧಿಯಲ್ಲಿ ಕರ್ನಾಟಕದಲ್ಲಿ ಮಹಿಳೆಯರ ಸಂಖ್ಯೆಯು 8 ಲಕ್ಷದಷ್ಟು ಕಡಿಮೆಯಿರುವುದನ್ನು ಕಂಡುಕೊಳ್ಳಬಹುದು.


ಸಾಮಾನ್ಯ ಜನಸಂಖ್ಯೆಗೆ ಹೋಲಿಸಿದರೆ ಅತೀ ಕಡಿಮೆ ಸಾಕ್ಷರತೆ ಇರುವ ಪರಿಶಿಷ್ಟ ಪಂಗಡದಲ್ಲಿ (ಸಾಕ್ಷರತೆ ಪ್ರಮಾಣ ಶೇ.59) ಲಿಂಗಾನುಪಾತ ಹೆಚ್ಚಿರುವುದು (1000: 990) ಸಾಕ್ಷರತೆ ಮತ್ತು ಲಿಂಗಾನುಪಾತ ನಡುವೆ ವಿಲೋಮ ಸಂಬಂಧವಿದೆಯೇ ಎಂಬ ಪ್ರಶ್ನೆಯನ್ನು ಹುಟ್ಟುಹಾಕುತ್ತದೆ.


ಕರ್ನಾಟಕ ರಾಜ್ಯದಲ್ಲಿ 2011ರ ಜನಗಣತಿಯ ಪ್ರಕಾರ ಅತೀ ಹೆಚ್ಚು ಲಿಂಗಾನುಪಾತ ಹೊಂದಿರುವ ಜಿಲ್ಲೆ ಉಡುಪಿ (1093/1000) ಹಾಗೂ ಅತೀ ಕಡಿಮೆ ಲಿಂಗಾನುಪಾತ ಹೊಂದಿರುವ ಜಿಲ್ಲೆ ಬೆಂಗಳೂರು ನಗರ (908/1000).


2011ರ ಜನಗಣತಿಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿದ್ದ ಕಳವಳಕಾರಿ ಮಕ್ಕಳ ಲಿಂಗಾನುಪಾತ ಬಳಿಕ ತುಸು ಸಮಾಧಾನಕರ ಮಟ್ಟ ತಲುಪಿದೆ. 1000 ಗಂಡು ಮಕ್ಕಳಿಗೆ 946 ಹೆಣ್ಣುಮಕ್ಕಳು (0-6 ಪ್ರಾಯ) ಇದ್ದ ಲಿಂಗಾನುಪಾತ 2018-19 ರಲ್ಲಿ 1000ಕ್ಕೆ  954 ಕ್ಕೇರಿರುವುದು ತುಸು ನಿರಾಳತೆಯನ್ನು ತಂದಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ರಾಜ್ಯದ ಸರಾಸರಿಗೆ ಹೋಲಿಸಿದರೆ ಅನುಪಾತ ಚೆನ್ನಾಗಿದೆ. ಆದರೆ ಇನ್ನೂ ಕೆಳಮಟ್ಟದಲ್ಲಿರುವುದು ಆತಂಕಕಾರಿ.


ಲಿಂಗ ಅಸಮಾನತೆಯ ಸೂಚಿ (Gender Inequality Index-GII) 

ಲಿಂಗ ಅಸಮಾನತೆ ತೊಡೆದುಹಾಕಲು ಮತ್ತು ಮಹಿಳೆಯರ ಸಬಲೀಕರಣದ ಪ್ರಾಮುಖ್ಯತೆ ಅಂತರರಾಷ್ಟ್ರೀಯವಾಗಿ ಮಾನ್ಯತೆ ಪಡೆದು ಬೆಳೆಯುತ್ತಿದ್ದು, ಯುಎನ್‍ಡಿಪಿಯು ಲಿಂಗ ಅಸಮಾನತಾ ಸೂಚಿಯನ್ನು (ಜಿಐಐ) 2010ರ ಮಾನವ ಅಭಿವೃದ್ಧಿ ವರದಿಯಲ್ಲಿ ಲಿಂಗ ಅಸಮಾನತೆಯಲ್ಲಿ ಹೊಸ ಮಾಪನವಾಗಿ ಪರಿಚಯಿಸಿತು. ಹೊಸ ಸೂಚಿಯು ಸಂಯುಕ್ತ ಮಾಪನವಾಗಿದ್ದು ಮೂರು ಸಂಬಂಧಿತ ಅಯಾಮಗಳಿಂದ ಲಿಂಗ ಅಸಮಾನತೆಯನ್ನು ತೋರಿಸುತ್ತದೆ: ಸಂತಾನೋತ್ಪತ್ತಿಯ ಆರೋಗ್ಯ, ಸಬಲೀಕರಣ ಮತ್ತು ಕಾರ್ಮಿಕ ಮಾರುಕಟ್ಟೆಯಲ್ಲಿ ಭಾಗವಹಿಸುವಿಕೆ. ಜಿಐಐ ಮೌಲ್ಯವು ಸೊನ್ನೆ (0) ಆಗಿದ್ದಲ್ಲಿ ಪರಿಪೂರ್ಣ ಲಿಂಗ ಸಮಾನತೆಯನ್ನು ಸೂಚಿಸಿದರೆ, ಒಂದು (1) ಪರಿಪೂರ್ಣ ಲಿಂಗ ಅಸಮಾನತೆಯನ್ನು ಸೂಚಿಸುತ್ತದೆ. ಜಿಐಐ ಮೌಲ್ಯವು ಹೆಚ್ಚಿದ್ದರೆ ತಾರತಮ್ಯ ಹೆಚ್ಚಿರುತ್ತದೆ ಮತ್ತು ಜಿಐಐ ಮೌಲ್ಯ ಕಡಿಮೆಯಿದ್ದರೆ ತಾರತಮ್ಯ ಕಡಿಮೆಯಾಗಿದೆ ಎಂದು ಅರ್ಥ. ದಕ್ಷಿಣ ಕನ್ನಡದ ಜಿಐಐಯು 0.043 ಇದ್ದು ಅದು ಜಿಲ್ಲೆಯಲ್ಲಿ ಕನಿಷ್ಟ ಲಿಂಗ ಅಸಮಾನತೆಯನ್ನು ತೋರಿಸುತ್ತದೆ. ಲಿಂಗ ಸಂಬಂಧಿ ಸುಧಾರಣೆಗೆ ಬಹು ಮುಖ್ಯವಾದ ಕೊಡುಗೆಯು ಆರೋಗ್ಯ ಮತ್ತು ಶಿಕ್ಷಣದಿಂದ ಬಂತು.


ಮಹಿಳೆಯರ ಬಗೆಗಿನ ದೃಷ್ಟಿಕೋನ ಬದಲಾಗಬೇಕು:

ಹೆಣ್ಣು ಮಕ್ಕಳ ಜನನ ಪ್ರಮಾಣ ಇಳಿಮುಖವಾಗುತ್ತಿದೆ ಎಂಬುದು ಭಾರತದ ಕಹಿ ವಾಸ್ತವ. ಲಿಂಗಾನುಪಾತದ ಇಳಿಕೆಯು ತೀವ್ರ ರೀತಿಯ ಸಾಮಾಜಿಕ ಜೀವನದ ಏರುಪೇರಿಗೂ ಕಾರಣವಾಗುತ್ತದೆ. ಈಗಾಗಲೇ ಕೆಲವು ಪಂಗಡಗಳಲ್ಲಿ ಲಿಂಗಾನುಪಾತದ ಇಳಿಕೆಯಿಂದ ಸಮಸ್ಯೆಗಳು ಸೃಷ್ಟಿಯÁಗಿದ್ದು, ಇದು ಎಲ್ಲಾ ಪಂಗಡಗಳಿಗೆ ವ್ಯಾಪಿಸುವ ಸಾಧ್ಯತೆಯಿದೆ. ಗ್ರಾಮೀಣ ಪ್ರದೇಶದಲ್ಲಿ ಈ ಅಂತರ ಒಂದಿಷ್ಟು ಕಡಿಮೆ ಇದ್ದರೂ ನಗರ ಪ್ರದೇಶದಲ್ಲಿ ಬಹಳ ಹೆಚ್ಚಾಗಿದೆ. ಲಿಂಗಾನುಪಾತದ ಅಸಮತೋಲನವು ಸಮಾಜದ ಮೇಲ್ ಸ್ತರದಲ್ಲೇ ಆಗುತ್ತಿರುವುದು ಇನ್ನೂ ಹೆಚ್ಚಿನ ಆತಂಕಕ್ಕೆ ಕಾರಣ.


ಗಂಡು ಬೇಕೆನ್ನುವ ಹಂಬಲ, ಮೊದಲ ಮಗು ಗಂಡು ಆಗಿದ್ದಲ್ಲಿ ಒಬ್ಬನೇ ಸಾಕು ಎಂಬ ಮನೋಭಾವ ಪ್ರಮುಖ ಪಾತ್ರ ವಹಿಸುತ್ತದೆ. ಇಂತಹ ಮನಸ್ಥಿತಿಯಿಂದಾಗಿ ಹೆಣ್ಣು ಮಗು ಜನನಕ್ಕೆ ಪರೋಕ್ಷವಾಗಿ ತಡೆಯಾಗಿ ಪರಿಣಮಿಸುತ್ತಿದೆ. ಇದರೊಂದಿಗೆ ಕಾನೂನುಬಾಹಿರ ಲಿಂಗ ಪರೀಕ್ಷೆ, ಹೆಣ್ಣುಮಕ್ಕಳಿಗಿರುವ ಕಡಿಮೆ ಸ್ಥಾನಮಾನ, ಸುರಕ್ಷತೆಯಿಲ್ಲದಿರುವುದು ಅಸಮತೋಲನ ಲಿಂಗಾನುಪಾತದ ಹಿಂದಿರುವ ಮುಖ್ಯ ಕಾರಣಗಳು. ವಿದ್ಯಾವಂತರ ಜಿಲ್ಲೆ ಎಂಬ ಗರಿಮೆ ಇದ್ದರೂ ಸಮಾಜದಲ್ಲಿ ಗಂಡು ಮಕ್ಕಳೇ  ಉತ್ತಮ ಎಂಬ ಅಭಿಪ್ರಾಯ ಹಾಸುಹೊಕ್ಕಾಗಿರುವುದು ಆತಂಕಕಾರಿ.


ಮಹಿಳೆಯರ ಬಗೆಗಿನ ದೃಷ್ಟಿಕೋನ ಬದಲಾಗದ ಹೊರತು ಮತ್ತು ಸಮಾಜದಲ್ಲಿ ಹೆಣ್ಣು ಮಕ್ಕಳಿಗೆ ಭದ್ರತೆಯ ಮನಸ್ಥಿತಿಯಿಂದ ಮಾತ್ರ ಲಿಂಗಾನುಪಾತ ಸರಿದೂಗಿಸಲು ಸಾಧ್ಯ. ಸ್ತ್ರೀಯರ ಸುರಕ್ಷತೆ ಮತ್ತು ಸ್ಥಾನಮಾನಗಳ ಸುಧಾರಣೆಯಿಂದ ಮಾತ್ರ ಲಿಂಗಾನುಪಾತವನ್ನು ಹೆಚ್ಚಿಸಬಲ್ಲುದು. ಹೆಣ್ಣು ಮಕ್ಕಳನ್ನು ಹೊಂದಲು ಜನತೆಗೆ ಪೆÇ್ರೀತ್ಸಾಹವಾಗುವಂತಹ ಇನ್ನಷ್ಟು ಯೋಜನೆಗಳನ್ನು ಜಾರಿಗೆ ತರುವ ಅಗತ್ಯವಿದೆ. ಬೇಟಿ ಬಚಾವೋ ಆಂದೋಲನದ ಬಗ್ಗೆ ಜಾಗೃತಿ ಮೂಡಿಸಬೇಕು.


ಮಗ ಮತ್ತು ಮಗಳು ಸಮಾನ:

ವಿಶ್ವ ಆರ್ಥಿಕ ವೇದಿಕೆಯು 30 ಮಾರ್ಚ್ 2021ರಂದು ಬಿಡುಗಡೆ ಮಾಡಿದ ಜಾಗತಿಕ ಲಿಂಗ ಅಂತರ ಸೂಚ್ಯಂಕದಲ್ಲಿ 2010ಕ್ಕೆ ಹೋಲಿಸಿದರೆ ಭಾರತವು 28 ಸ್ಥಾನಗಳನ್ನು ಕಳೆದುಕೊಂಡು 156 ದೇಶಗಳಲ್ಲಿ 140ನೇ ಸ್ಥಾನದಲ್ಲಿದೆ.


ಸುಸ್ಥಿರ ಅಭಿವೃದ್ಧಿಯ ಬಹುಮುಖ್ಯವಾದ ಸಾಧನ ಲಿಂಗ ಸಮಾನತೆ. ಅಸುರಕ್ಷಿತ ವಾತಾವರಣವು ಖಂಡಿತವಾಗಿಯೂ ಅವರ ಬೆಳವಣಿಗೆಗೆ ಮತ್ತು ಮುಖ್ಯವಾಗಿ ದೇಶದ ಬೆಳವಣಿಗೆಗೆ ಅವರು ನೀಡಬಹುದಾದ ಕೊಡುಗೆಗೆ ಬಹುದೊಡ್ಡ ಅಡ್ಡಿಯೇ ಹೌದು. ಲಿಂಗ ಸಮಾನತೆಯ ಸಮ ಸಮಾಜವನ್ನು ಸೃಷ್ಟಿಸುವ ವಿಚಾರದಲ್ಲಿ ಸರಕಾರಗಳ ಮೇಲೆ ಎಷ್ಟು ಜವಾಬ್ದಾರಿ ಇದೆಯೋ, ಅಷ್ಟೇ ಜವಾಬ್ದಾರಿ ಸಮಾಜದ ಮೇಲೆಯೂ ಇದೆ ಎನ್ನುವುದನ್ನು ಮನಗಾಣಬೇಕಾಗಿದೆ.


“ಪಕ್ಷಿಗೆ ಹೇಗೆ ಒಂದೇ ರೆಕ್ಕೆಯಿಂದ ಹಾರುವುದು ಅಸಾಧ್ಯವಾಗಿರುತ್ತದೋ ಹಾಗೆ ಮಹಿಳೆಯರ ಸ್ಥಿತಿಗತಿಗಳು ಉತ್ತಮಗೊಳ್ಳದ ಹೊರತು ಜಗತ್ತಿನ ಕಲ್ಯಾಣದ ಬಗ್ಗೆ ಚಿಂತಿಸುವುದು ಅಸಾಧ್ಯವಾಗಿರುತ್ತದೆ” ಎಂದು ಸ್ವಾಮಿ ವಿವೇಕಾನಂದರು ಅಭಿಪ್ರಾಯಪಟ್ಟಿದ್ದರು. ಒಂದು ಸಲ ಮಹಿಳೆ ಪ್ರಗತಿಪಥದಲ್ಲಿ ಚಲಿಸಲು ಆರಂಭಿಸಿದರೆ ಇಡೀ ಕುಟುಂಬ, ಹಳ್ಳಿ ಮತ್ತು ಸಂಪೂರ್ಣ ದೇಶ ಪ್ರಗತಿಯಾಗುತ್ತದೆ ಎಂಬುದನ್ನು ತ್ರಿಕರಣಪೂರ್ವಕವಾಗಿ ಒಪ್ಪಿಕೊಂಡು ಮಹಿಳಾ ಸಬಲೀಕರಣದ ಹೆಜ್ಜೆಗಳನ್ನು ಬಲಗೊಳಿಸಬೇಕಾಗಿದೆ.


‘ಬೇಟಿ ಬಚಾವೋ ಬೇಟಿ ಪಡಾವೋ’ ಘೋಷಣೆಯೊಂದಿಗೆ ಮಾನ್ಯ ಪ್ರಧಾನ ಮಂತ್ರಿಯವರು “ಹೆಣ್ಣು ಮಕ್ಕಳಿಗೆ ಹಾಕಿದಷ್ಟೇ ಬೇಲಿಗಳನ್ನು ಗಂಡು ಮಕ್ಕಳಿಗೂ ಹಾಕಬೇಕು” ಎಂದು ದೇಶಕ್ಕೆ ಕರೆ ಕೊಡುವ ಮೂಲಕ ಗಂಡು ಹಾಗೂ ಹೆಣ್ಣು ಮಕ್ಕಳನ್ನು ಸಮನಾಗಿ ನಡೆಸಿಕೊಳ್ಳುವ ಅಗತ್ಯವನ್ನು ಮನದಟ್ಟು ಮಾಡಿದ್ದಾರೆ. ಹೌದು-ಮಗ ಮತ್ತು ಮಗಳು ಸಮಾನರು ಎನ್ನುವುದು ನಮ್ಮ ಮಂತ್ರವಾಗಬೇಕು.


-ಡಾ.ಎ.ಜಯ ಕುಮಾರ ಶೆಟ್ಟಿ

ಅರ್ಥಶಾಸ್ತ್ರ ಪ್ರಾಧ್ಯಾಪಕ, 

ಶ್ರೀ.ಧ.ಮಂ.ಕಾಲೇಜು, ಉಜಿರೆ

9448154001/ajkshetty@sdmcujire.in

(ಉಪಯುಕ್ತ ನ್ಯೂಸ್)


Visit: Upayuktha Directory- You get here You want


‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top