ಆಯುಷ್ ಇಲಾಖೆ- ದೇಲಂಪಾಡಿ ಯೋಗ ಪ್ರತಿಷ್ಠಾನದಿಂದ ಅಂ.ರಾ. ಯೋಗ ದಿನಾಚರಣೆ

Upayuktha
0

ಮಂಗಳೂರು: ವಿಶಿಷ್ಟವಾದ ರೀತಿಯಲ್ಲಿ ಆನ್‍ಲೈನ್ ಮುಖಾಂತರ ಆಯುಷ್ ಇಲಾಖೆ, ಮಂಗಳೂರು, ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜ್ ಆಫ್ ಬಿಸ್‍ನೆಸ್ ಮ್ಯಾನೇಜ್‍ಮೆಂಟ್ ಹಾಗೂ ದೇಲಂಪಾಡಿ ಯೋಗ ಪ್ರತಿಷ್ಠಾನ ಇವುಗಳ ಜಂಟಿ ಆಶ್ರಯದಲ್ಲಿ ಅಂತರಾಷ್ಟ್ರೀಯ ಯೋಗ ದಿನಾಚರಣೆಯನ್ನು ನೆರವೇರಿಸಲಾಯಿತು.


ವಿದ್ಯಾರ್ಥಿಗಳೂ ಸೇರಿದಂತೆ 150ಕ್ಕೂ ಮಿಕ್ಕ ಯೋಗ ಬಂಧುಗಳು ದೇಶ ವಿದೇಶಗಳಿಂದ ತಮ್ಮ ಕುಟುಂಬ ಸಮೇತ, ಯೋಗರತ್ನ ಶ್ರೀ ಗೋಪಾಲಕೃಷ್ಣ ದೇಲಂಪಾಡಿಯವರ ನಿರ್ದೇಶನದಲ್ಲಿ ಯೋಗ, ಪ್ರಾಣಾಯಾಮ ಹಾಗೂ ಯೋಗ ಮುದ್ರೆಗಳಲ್ಲಿ ಭಾಗವಹಿಸಿ ‘ಮನೆಯಲ್ಲಿ ಇರಿ ಯೋಗದೊಂದಿಗೆ ಇರಿ’ ಎಂಬ ಪ್ರಸಕ್ತ ಪರಿಸ್ಥಿತಿಯ ಧ್ಯೇಯ ವಾಕ್ಯವನ್ನು ಸಾಕಾರಗೊಳಿಸಿದರು.


ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕ ಭಾಷಣ ಮಾಡಿದ ಎಸ್‌ಡಿಎಂ ಬಿಬಿಎಂ ಕಾಲೇಜಿನ ಪ್ರಾಂಶುಪಾಲೆ ಶ್ರೀಮತಿ ಅರುಣಾ ಪಿ. ಕಾಮತ್ ಇವರು ಈ ಆಚರಣೆ ಕೇವಲ ಒಂದು ದಿನಕ್ಕೆ ಸೀಮಿತವಾಗಿರದೆ ಎಲ್ಲರಿಗೂ ಅನುಕೂಲವಾಗುವಂತೆ ವರ್ಷದ ಪೂರ್ತಿ, ದಿನಕ್ಕೆ 3 ಬಾರಿ ನಡೆಯುವ ಯೋಗ ತರಬೇತಿಗಳಲ್ಲಿ ಭಾಗವಹಿಸಿ ತಮ್ಮ ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಸುಸ್ಥಿತಿಯಲ್ಲಿ ಇಟ್ಟುಕೊಳ್ಳಲು ಯೋಗ ವಿದ್ಯಾರ್ಥಿಗಳಿಗೆ ಕರೆ ನೀಡಿದರು.


ಯೋಗ ಗುರುಗಳಾದ ಯೋಗರತ್ನ ಶ್ರೀ ಗೋಪಾಲಕೃಷ್ಣ ದೇಲಂಪಾಡಿಯವರು ಮಾತನಾಡಿ ಪ್ರಸಕ್ತ ಪರಿಸ್ಥಿತಿಯಲ್ಲಿ ಯೋಗ ಕಲಿಯಲು ಆನ್‍ಲೈನ್ ಬಹಳ ಉತ್ತಮ ಮಾಧ್ಯಮ. ಕಳೆದ ವರ್ಷ ಲಾಕ್‍ಡೌನ್ ಪ್ರಾರಂಭವಾದಾಗ ಮಾರ್ಚ್‍ನಲ್ಲಿಯೇ ಆನ್‍ಲೈನ್ ತರಗತಿಗಳನ್ನು ಪ್ರಾರಂಭಿಸಿದಾಗ ಸಾರ್ವಜನಿಕರು ಅತ್ಯುತ್ಸಾಹದಿಂದ ಸೇರಿ ಯೋಗ ಮತ್ತು ಪ್ರಾಣಾಯಾಮವನ್ನು ಕಲಿತು ಅದರಿಂದ ಬಹಳ ಪ್ರಯೋಜನ ಪಡೆದಿದ್ದಾರೆಂದು ಹೇಳಿದರು.


ಈ ಸಂದರ್ಭದಲ್ಲಿ ಯೋಗದಿಂದ ದೈಹಿಕ ಮತ್ತು ಮಾನಸಿಕ ಒತ್ತಡ ನಿವಾರಿಸುವಲ್ಲಿ ತಮಗೆ ಹೇಗೆ ಯೋಗ ಸಹಾಯಕವಾಯಿತು ಎಂದು ಕೆಲವು ಯೋಗ ಬಂಧುಗಳು ತಮ್ಮ ಅನುಭವವನ್ನು ಹಂಚಿಕೊಂಡರು.


ಶ್ರೀಮತಿ ವೀಣಾ ದೇಲಂಪಾಡಿ ಹಾಗೂ ಇತರ ಕೆಲವು ಯೋಗ ಸಾಧಕರು ಕೆಲವು ಕ್ಲಿಷ್ಟಕರವಾದ ಭಂಗಿಗಳನ್ನು ಪ್ರದರ್ಶಿಸಿ ವಿದ್ಯಾರ್ಥಿಗಳನ್ನು ಹುರಿದುಂಬಿಸಿದರು. ರಾಜ್ಯೋತ್ಸವ ಪ್ರಶಸ್ತಿ ವಿಜೇತ ಶ್ರೀ ಗೋಪಾಲಕೃಷ್ಣ ದೇಲಂಪಾಡಿಯವರು ಕಳೆದ ಸುಮಾರು ಎರಡುವರೆ ದಶಕಗಳಿಂದ 2 ಲಕ್ಷಕ್ಕೂ ಮೀರಿ ಯೋಗಾಸಕ್ತರಿಗೆ ಉಚಿತವಾಗಿ ಯೋಗ ವಿದ್ಯಾದಾನವನ್ನು ನೀಡುತ್ತಿದ್ದು, ದೇಶ ವಿದೇಶದ ವಿದ್ಯಾರ್ಥಿಗಳು ಆನ್‍ಲೈನ್ ಮೂಲಕ ಯೋಗಾಭ್ಯಾಸವನ್ನು ಕಲಿಯುತ್ತಿದ್ದಾರೆ.

(ಉಪಯುಕ್ತ ನ್ಯೂಸ್)


Visit: Upayuktha Directory- You get here You want


‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top