ಓದು ಸಂತಸಕಾಗಿ
ಓದು ಜ್ಞಾನಕ್ಕಾಗಿ
ಓದು ಸಾಹಿತ್ಯ ಸಾಗರದ ಪರಿಚ-
ಯಕಾಗಿ
ಓದು ವ್ಯಾಕರಣ ಛಂದಸ್ಸಲಂ -
ಕಾರಗಳ
ಓದು ಚೆನ್ನಾಗಿ ಓದು |
ಓದಿ ನೀಂ ಜಾಣನಾಗು ||
ಓದು ಆಚಾರವನು ತಿಳಿಯಲಿಕೆ
ಓದು ವಿಚಾರವದು ಹೊಳೆಯಲಿಕೆ
ಓದು ಶಿಷ್ಟ ಸಂಪ್ರದಾಯವನು
ಕಲಿಯಲಿಕೆ||
ಓದು ನಿನ್ನ ನೀನರಿವುದಕೆ
ಓದು ವೈಷಮ್ಯ ಮರೆವುದಕೆ
ಓದು ಲೋಕದೊಳು ಒಲವ
ಬೆಳೆಸಲಿಕೆ||
ಓದು ಮನವರಳೆ ಸ್ವಾರ್ಥತೆಯು
ಹೊರತೆರಳೆ
ಓದು ಚೆನ್ನಾಗಿ ಓದು ||
ಓದು ಬರೆಯಲಿಕೆ ಹೃದಯ ತೆರೆ-
ಯಲಿಕೆ
ಓದು ಉದರವನು ಹೊರೆಯಲಿಕೆ
ಓದು ಕಷ್ಟಗಳ ನೀಗಲಿಕೆ
ಓದು ಕಣ್ದೆರೆದು ನೋಡಲಿಕೆ
ಓದು ಕಲಿತನವ ಗಳಿಸಲಿಕೆ
ಓದು ಹೃದಯಗಳ ಬೆಸೆಯಲಿಕೆ
ಓದು ಪರಿಸರವ ಪೊರೆಯಲಿಕೆ
ಓದು ಭವಸಾಗರವನೀಸಲಿಕೆ ||
ಓದಿನಿಂ ಮನುಷ್ಯತ್ವ
ಓದಿನಿಂ ದೈವತ್ವ
ಓದಿನಿಂ ಸರ್ವಸ್ವ
ಓದಿನಿಂ ಸಕಲ ಸಂಪದವು ||
ಓದುವಿಕೆ ಬೆಳಕಾಗಿ ದಾರಿಯನು
ತೋರುವುದು
ಓದುವಿಕೆ ಸಂಕುಚಿತ ಭಾವನೆಯ
ನೀಗುವುದು
ಓದುವಿಕೆಯೊಳು ಕಾಣು ಸಾಕ್ಷ -
ರತೆಯ ಮೂಲವನು ||
ಓದುವಿಕೆಯೇ ನಿತ್ಯ
ಓದುವಿಕೆಯೇ ಸತ್ಯ
ಓದುವಿಕೆಯಿಲ್ಲದಾ ಪ್ರತಿಭೆ
ಮಿಥ್ಯ ||
ಓದುವಿಕೆಯೆ ಜೀವನವು
ಓದುವಿಕೆಯೆ ಪಾವನವು
ಓದುವಿಕೆಯ ಮರೆತಾಗ ಸಾಕ್ಷರ-
ನೆ ರಾಕ್ಷಸನು ||
ಓದುವುದೆ ನುಡಿಯೊಲವು
ಓದುವುದೆ ಹಗೆಗೆಲುವು
ಓದುವುದೆ ತಾಯ ಮಡಿಲ
ಸುಖವು ||
ಓದಿದರೆ ಪಾಂಡಿತ್ಯ
ಓದಿದರೆ ಸಾಂಗತ್ಯ
ಓದಿ ಓದಿಸಿದ ಓಜ ತಾ ಪಡೆವ
ಸಾಯುಜ್ಯ ||
ರಚನೆ:- ವಿ.ಬಿ.ಕುಳಮರ್ವ, ಕುಂಬ್ಳೆ
(ಉಪಯುಕ್ತ ನ್ಯೂಸ್)
Visit: Upayuktha Directory- You get here You want
‘ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ
(ಕೇರಳದ ಶಾಲೆಗಳಲ್ಲಿ ಇಂದಿನಿಂದ ಒಂದು ವಾರದ ತನಕ ವಾಚನಾ ಸಪ್ತಾಹ ಅಥವಾ ಓದುವ ವಾರಾಚರಣೆ.ಆ ನಿಮಿತ್ತವಾಗಿ ಓದುವಿಕೆಯ ಮಹತ್ವದ ಕುರಿತು ರಚಿಸಿರುವ ಒಂದು ಕವನ.)


