|ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946
ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಪ್ರಥಮ ಪಿಯು ವಿದ್ಯಾರ್ಥಿಗಳಿಗೆ ಶಾಕ್ ಆಗುವಂಥದ್ದು ಏನೂ ಇಲ್ಲ; ವಾಸ್ತವ ಏನು? ಇಲ್ಲಿದೆ ಸಂಪೂರ್ಣ ಮಾಹಿತಿ

ಪ್ರಥಮ ಪಿಯು ವಿದ್ಯಾರ್ಥಿಗಳಿಗೆ ಶಾಕ್ ಆಗುವಂಥದ್ದು ಏನೂ ಇಲ್ಲ; ವಾಸ್ತವ ಏನು? ಇಲ್ಲಿದೆ ಸಂಪೂರ್ಣ ಮಾಹಿತಿ

ಈಗ ನಡೆಸುತ್ತಿರುವುದು ಪರೀಕ್ಷೆಯಲ್ಲ, ಮೌಲ್ಯಾಂಕನ ಪ್ರಕ್ರಿಯೆ 

ಪರೀಕ್ಷೆ ರದ್ದಾದಾಗಲೇ ಇದನ್ನು ಸ್ಪಷ್ಟವಾಗಿ ಸೂಚಿಸಲಾಗಿತ್ತು



ಮಂಗಳೂರು: ಕೊರೊನಾ ಸಾಂಕ್ರಾಮಿಕದ ನಿಯಂತ್ರಣಕ್ಕೆ ಹೇರಲಾದ ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಪ್ರಥಮ ಪಿಯುಸಿ ವಿದ್ಯಾರ್ಥಿಗಳಿಗೆ  ಈ ಬಾರಿ ಪರೀಕ್ಷೆ ನಡೆಸದೆಯೇ ಮುಂದಿನ ತರಗತಿಗೆ ಉತ್ತೀರ್ಣಗೊಳಿಸಲು ಸರಕಾರದ ಆದೇಶದಂತೆ ಪಿಯು ಶಿಕ್ಷಣ ಮಂಡಳಿ ನಿರ್ಧರಿಸಿದೆ.


ಹಾಗಿದ್ದರೂ ಔಪಚಾರಿಕವಾಗಿ ವಿದ್ಯಾರ್ಥಿಗಳ ಕಲಿಕಾ ಮಟ್ಟವನ್ನು ಮೌಲ್ಯಮಾಪನ (ಮೌಲ್ಯಾಂಕನ) ಮಾಡುವ ಸಲುವಾಗಿ ಪ್ರತಿ ವಿಷಯಗಳಲ್ಲಿ ಎರಡು ಮಾದರಿ ಪ್ರಶ್ನೆಪತ್ರಿಕೆಗಳನ್ನು ಸಿದ್ಧಪಡಿಸಿದ್ದು, ವಿದ್ಯಾರ್ಥಿಗಳು ಅವುಗಳಿಗೆ ನಿಗದಿತ ದಿನಾಂಕಗಳಂದು ಉತ್ತರಗಳನ್ನು ಬರೆದು ವಾಟ್ಸಪ್ ಅಥವಾ ಇ-ಮೇಲ್ ಮೂಲಕ ಆಯಾ ಕಾಲೇಜುಗಳಿಗೆ ರವಾನಿಸಬೇಕಾಗಿದೆ. ಅಲ್ಲದೆ ಲಿಖಿತ ಉತ್ತರ ಪತ್ರಿಕೆಗಳನ್ನು ವಿದ್ಯಾರ್ಥಿಗಳ ಹೆತ್ತವರು/ ಪೋಷಕರು ಆಯಾ  ಕಾಲೇಜುಗಳಿಗೆ ತಲುಪಿಸುವಂತೆ ಸೂಚಿಸಲಾಗಿದೆ.


ಪಿಯು ಶಿಕ್ಷಣ ಮಂಡಳಿ ಈ ಸಂಬಂದ ಮಾರ್ಗಸೂಚಿಯನ್ನು ತನ್ನ ಅಧಿಕೃತ ವೆಬ್‌ಸೈಟ್‌ನಲ್ಲಿ ಅಪ್ಲೋಡ್ ಮಾಡಿದ್ದು, ಇಂದು ಆಯಾ ಕಾಲೇಜುಗಳು ತಮ್ಮ ವಿದ್ಯಾರ್ಥಿಗಳು/ ಪೋಷಕರಿಗೆ ಈ ಸಂಬಂಧ ಸೂಚನೆಗಳನ್ನು ರವಾನಿಸಿವೆ.


ನಿನ್ನೆಯೇ ಕೆಲವು ಮಾಧ್ಯಮಗಳು ಈ ಬಗ್ಗೆ ವರದಿ ಮಾಡಿದ್ದರೂ, ಸಂಪೂರ್ಣ ಮಾಹಿತಿಗಳು ವರದಿಯಲ್ಲಿ ಇರಲಿಲ್ಲ. ತಾವೇ ಮೊದಲು ಸುದ್ದಿ ನೀಡಬೇಕೆಂಬ ಧಾವಂತದಲ್ಲಿ- ಪಿಯುಸಿ ವಿದ್ಯಾರ್ಥಿಗಳಿಗೆ ಶಾಕ್, ಮೊದಲು ಪರೀಕ್ಷೆ ರದ್ದುಮಾಡಿ ಈಗ ಮತ್ತೆ ಪರೀಕ್ಷೆ ನಡೆಸುತ್ತಿರುವ ಇಲಾಖೆ- ಎಂಬ ಅರ್ಥ ಬರುವಂತೆ ಸುದ್ದಿಗಳನ್ನು ಪ್ರಕಟಿಸಿದ್ದವು.


ವಾಸ್ತವದಲ್ಲಿ ಈಗ ನಡೆಸಲು ನಿರ್ಧರಿಸಿರುವುದು ಮೌಲ್ಯಾಂಕನ ಪ್ರಕ್ರಿಯೆಯ ಔಪಚಾರಿಕ ಕ್ರಿಯೆಯೇ ಹೊರತು ಪರೀಕ್ಷೆ ಎಂದು ವ್ಯಾಖ್ಯಾನಿಸುವಂತಿಲ್ಲ. ಇಲ್ಲಿ ವಿದ್ಯಾರ್ಥಿಗಳ ವಿಷಯ ಜ್ಞಾನದ ಜತೆಗೆ ಪ್ರಾಮಾಣಿಕತೆಯ ಪರೀಕ್ಷೆಯೂ ನಡೆಯುತ್ತದೆ. ಮಾದರಿ ಪ್ರಶ್ನೆ ಪತ್ರಿಕೆಗಳನ್ನು ಪಿಯು ಮಂಡಳಿ ವೆಬ್‌ಸೈಟ್‌ನಲ್ಲಿ ಅಪ್ಲೋಡ್ ಮಾಡಲಾಗಿದ್ದು, ಅವುಗಳಿಗೆ ವಿದ್ಯಾರ್ಥಿಗಳು ಪ್ರಾಮಾಣಿಕವಾಗಿ ಉತ್ತರಿಸಿ ಉತ್ತರ ಪತ್ರಿಕೆಗಳನ್ನು ರವಾನಿಸಬೇಕಿದೆ.


ವಿದ್ಯಾರ್ಥಿಗಳು ತಮ್ಮ ದೀರ್ಘಕಲಿಕಾ ಪ್ರಕ್ರಿಯೆಯಲ್ಲಿ ನಿರಂತರತೆಯನ್ನು ಕಾಯ್ದುಕೊಳ್ಳಲು ಹಾಗೂ ಶೈಕ್ಷಣಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವಂತೆ  ಮಾಡುವ ಉದ್ದೇಶದಿಂದ ಅಸೈನ್‌ಮೆಂಟ್‌ಗಳನ್ನು ಪೂರ್ಣಗೊಳಿಸಿ ನೀಡುವಂತೆ ಜಿಲ್ಲಾ ಉಪನಿರ್ದೇಶಕರ ಸಭೆಯಲ್ಲಿ ಚರ್ಚಿಸಲಾಗಿತ್ತು. ವಿದ್ಯಾರ್ಥಿಗಳು ಸಿದ್ಧಪಡಿಸಿ ಉಪನ್ಯಾಸಕರಿಗೆ ಸಲ್ಲಿಸಿದ ಅಸೈನ್‌ಮೆಂಟ್‌ಗಳನ್ನು ಮೌಲ್ಯಮಾಪನ ಮಾಡಿ ಎಸ್‌ಎಟಿಎಸ್‌ ನಲ್ಲಿ ಅಳವಡಿಸಲು ಪಿಯು ಶಿಕ್ಷಣ ಮಂಡಳಿ ತೀರ್ಮಾನಿಸಿದೆ.


ಮೌಲ್ಯಮಾಪನ ವಿಧಾನ:

ಎಲ್ಲಾ ಕಾಲೇಜುಗಳ ಪ್ರಾಚಾರ್ಯರು ತಮ್ಮ ಹಂತದಲ್ಲಿ ವಿದ್ಯಾರ್ಥಿಗಳನ್ನು ಕಾಲೇಜಿಗೆ ಭೌತಿಕವಾಗಿ ಬಾರದಂತೆ ಕ್ರಮವಹಿಸಿ, ಇಲಾಖೆಯ ಜಾಲತಾಣದಲ್ಲಿ ನೀಡಿದ ಎರಡು ಪ್ರಶ್ನೆಪತ್ರಿಕೆಗಳಿಗೆ ಹಾಳೆಗಳಲ್ಲಿ ಉತ್ತರಿಸಿ ಸ್ಕ್ಯಾನ್ ಮಾಡಿ ವಾಟ್ಸ್‌ ಆಪ್ ಅಥವಾ ಇ-ಮೇಲ್ ಮೂಲಕ ಅಥವಾ ಬರೆದಿರುವ ಅಸೈನ್‌ಮೆಂಟ್‌ಗಳನ್ನು ಅಂಚೆ ಮೂಲಕ ಅಥವಾ ಇನ್ಯಾವುದೇ ರೀತಿಯಲ್ಲಿ ಸಂಬಂಧಿಸಿದ ಉಪನ್ಯಾಸಕರಿಗೆ ಸಲ್ಲಿಸುವಂತೆ ವಿದ್ಯಾರ್ಥಿಗಳಿಗೆ ತಿಳಿಸಿ, ಎರಡೂ ಅಸೈನ್‌ಮೆಮಟ್‌ಗಳನ್ನು ಸಂಬಂಧಿಸಿದ ಉಪನ್ಯಾಸಕರು ಮೌಲ್ಯಮಾಪನ ಮಾಡಿ ಅಂಕಗಳನ್ನು ನೀಡಿ ಎಸ್‌ಎಟಿಎಸ್‌ ತಂತ್ರಾಂಶದಲ್ಲಿ ನಮೂದಿಸಲು ಸೂಚಿಸಲಾಗಿದೆ.


ಅಸೈನ್ಮೆಂಟ್‌ಗಳು ಈಗಾಗಲೇ ಮಾದರಿ ಪ್ರಶ್ನೆ ಪತ್ರಿಕೆ ರೂಪದಲ್ಲಿ ಇಲಾಖಾ ಜಾಲತಾಣದಲ್ಲಿ ಲಭ್ಯವಿದೆ. ವಿದ್ಯಾರ್ಥಿಗಳ ಹೆಸರಿನೊಂದಿಗೆ ನೋಂದಣಿಯಾಗಿರುವ ಮೊಬೈಲ್ ಸಂಖ್ಯೆಗೆ ಇಲಾಖಾ ಜಾಲತಾಣದಲ್ಲಿ ಈಗಾಗಲೇ ಪ್ರಕಟಿಸಿದ ಮಾದರಿ ಪ್ರಶ್ನೆಪತ್ರಿಕೆಗಳ ಲಿಂಕ್ ಸಹ ಕಳುಹಿಸಲಾಗುತ್ತದೆ. ವಿದ್ಯಾರ್ಥಿಗಳು ಅವರ ವಿಷಯದ ಪ್ರಶ್ನೆ ಪತ್ರಿಕೆಯ ಲಿಂಕ್ ಕ್ಲಿಕ್ ಮಾಡಿ ಪ್ರಶ್ನೆಪತ್ರಿಕೆ ಡೌನ್‌ಲೋಡ್ ಮಾಡಿಕೊಂಡು ಉತ್ತರಿಸಬೇಕು. ನಂತರದಲ್ಲಿ ಉಪನ್ಯಾಸಕರಿಗೆ ವಾಟ್ಸ್‌ಆಪ್ ಅಥವಾ ಇ-ಮೇಲ್ ಮೂಲಕ ಅಥವಾ ಪೋಷಕರು ಭೌತಿಕವಾಗಿ ಕಾಲೇಜಿಗೆ ತೆರಳಿ ಸಲ್ಲಿಸಬೇಕಾಗುತ್ತದೆ.


ಅಂಕಗಳನ್ನು ನೀಡುವ ಮಾರ್ಗಸೂಚಿ:

ಮೌಲ್ಯಾಂಕನಗಳನ್ನು ಉಪನ್ಯಾಸಕರು ಕೆಳಕಂಡ ಮಾನದಂಡಗಳನ್ನು ಅನುಸರಿಸಿ ವಿದ್ಯಾರ್ಥಿಯು ಗಳಿಸಿದ ಅಂಕಗಳನ್ನು ಪರಿವರ್ತಿಸಿ ಎಸ್‌ಎಟಿಎಸ್ ತಂತ್ರಾಂಶದಲ್ಲಿ ಅಳವಡಿಸಬೇಕು.


1. ಪ್ರಯೋಗರಹಿತ ವಿಷಯಗಳಿಗೆ (ಪ್ರಾಕ್ಟಿಕಲ್ಸ್‌ ಇಲ್ಲದ ವಿಷಯಗಳು): ಎಲ್ಲಾ ಪ್ರಥಮ ಪಿಯುಸಿ ವಿದ್ಯಾರ್ಥಿಗಳಿಗೆ ಪ್ರತಿ ವಿಷಯಗಳಲ್ಲಿ 35 ಅಂಕ ನೀಡುವುದು. ಎರಡು ಪ್ರಶ್ನೆ ಪತ್ರಿಕೆಗಳಿಗೆ ಉತ್ತರ ಬರೆದು ತರಗತಿಯ ಉಪನ್ಯಾಸಕರಿಗೆ ಸಲ್ಲಿಸಬೇಕು. ಕನಿಷ್ಠ ಒಂದಾದರೂ ಉತ್ತರ ಪತ್ರಿಕೆ ಸಲ್ಲಿಸಿದರೂ 5 ಅಂಕ ನೀಡಲಾಗುವುದು.


ಎರಡೂ ಉತ್ತರ ಪತ್ರಿಕೆಗಳನ್ನು ಪರಿಶೀಲಿಸಿ ಈ ಆಧಾರದ ಮೇಲೆ ಒಟ್ಟು 30 + 30 = 60 ಅಂಕಗಳನ್ನು ನೀಡುವುದು. ಇನ್ನೂ ಉಳಿದ 5 ಅಂಕಗಳನ್ನು ಉಪನ್ಯಾಸಕರು ಆಂತರಿಕ ಮೌಲ್ಯಮಾಪನವೆಂದು ಅಂಕ ನೀಡುವುದು. ಒಟ್ಟಾರೆ ಅಂಕಗಳು 35+30+30+5= 100 ಆಗುವುದು.



2. ಪ್ರಯೋಗ ಸಹಿತ ವಿಷಯಗಳಿಗೆ

ಎಲ್ಲಾ ಪ್ರಥಮ ಪಿಯುಸಿ ತರಗತಿಯ ವಿದ್ಯಾರ್ಥಿಗಳಿಗೆ ಪ್ರತಿ ವಿಷಯಗಳಲ್ಲಿ 21 ಅಂಕಗಳು ಮತ್ತು ಪ್ರಾಯೋಗಿಕ ತರಗತಿಗಳಿಗೆ ಸಂಬಂಧಿಸಿದಂತೆ 10 ಅಂಕಗಳು- ಹೀಗೆ ಒಟ್ಟು 31 ಅಂಕಗಳು ಲಭ್ಯವಾಗುತ್ತವೆ. ಎರಡು ಅಸೈನ್‌ಮೆಂಟ್‌ಗಳ ಉತ್ತರ ಬರೆದು ತರಗತಿಯ ಉಪನ್ಯಾಸಕರಿಗೆ ನೀಡಬೇಕು. ಕನಿಷ್ಠ ಒಂದಾದರೂ ಉತ್ತರ ಪತ್ರಿಕೆ ನೀಡಿದರೂ 5 ಅಂಕ ನೀಡಲಾಗುವುದು.


ವಿಷಯ ಉಪನ್ಯಾಸಕರು ಎರಡೂ ಉತ್ತರ ಪತ್ರಿಕೆಗಳನ್ನು ಪರಿಶೀಲಿಸಿ ಈ ಆಧಾರದ ಮೇಲೆ ಒಟ್ಟು 22+22= 44 ಅಂಕಗಳನ್ನು ನೀಡುವುದು. ಇನ್ನೂ ಉಳಿದ 5 ಅಂಕಗಳನ್ನು ವಿದ್ಯಾರ್ಥಿಗಳು ಆಯಾ ತರಗತಿಗೆ ಹಾಜರಾದ ಬಗ್ಗೆ ಉಪನ್ಯಾಸಕರ ವಿವೇಚನೆ ಮೇರೆಗೆ ಅಂಕ ಕೊಡುವುದು. ಅಲ್ಲದೇ ಪ್ರಾಯೋಗಿಕ ವಿಷಯಕ್ಕೆ ಸಂಬಂಧಿಸಿದಂತೆ ಆಯಾ ವಿಷಯದ ಉಪನ್ಯಾಸಕರುಗಳು ವಿಷಯಕ್ಕೆ ಸಂಬಂಧಿಸಿದಂತೆ ಈ ಹಿಂದೆ ನಡೆಸಿದ ಪ್ರಾಯೋಗಿಕ ತರಗತಿಗಳ ಆಧಾರದ ಮೇಲೆ ನಿಷ್ಪಕ್ಷಪಾತವಾಗಿ ಅಂಕಗಳನ್ನು ನೀಡುವುದು.


ಒಟ್ಟಾರೆ 21+10 (ಪ್ರಾಯೋಗಿಕ ಅಂಕಗಳು) + 22+22+5+20 (ಪ್ರಾಯೋಗಿಕ ಅಂಕಗಳು= ರೆಕಾರ್ಡ್ ಬರವಣಿಗೆಗೆ 10 ಅಂಕಗಳು ಹಾಗೂ ಉಪನ್ಯಾಸಕರು ಆಂತರಿಕ ಮೌಲ್ಯಮಾಪನವೆಂದು ನೀಡುವ 10 ಅಂಕಗಳು)= 100 ಆಗುವುದು.


ವಿದ್ಯಾರ್ಥಿಗಳ ಅಂಕಗಳನ್ನು SATS Portal ನಲ್ಲಿ ನಮೂದು ಮಾಡುವ ವಿಧಾನದ ಬಗ್ಗೆ ಪ್ರತ್ಯೇಕ ಸುತ್ತೋಲೆ ಹೊರಡಿಸಲಾಗುವುದು ಎಂದು ಪದವಿ ಪೂರ್ವ ಶಿಕ್ಷಣ ಮಂಡಳಿಯ ಪ್ರಕಟಣೆ ತಿಳಿಸಿದೆ.


ವಿದ್ಯಾರ್ಥಿಗಳ ಪ್ರಾಮಾಣಿಕತೆಯ 'ಪರೀಕ್ಷೆ'

ಉಪಯುಕ್ತ ನ್ಯೂಸ್ ನಿಲುವು:

ಅಂಕಗಳು ಮತ್ತು ರ‍್ಯಾಂಕ್‌ ಗಳ ಬೆನ್ನಟ್ಟಿ ಪರೀಕ್ಷೆ ಎಂಬ ಭೂತದ ಹಿಂದೆ ಹುಚ್ಚುಗುದುರೆಯಂತೆ ಓಡುತ್ತಿದ್ದ ಶೈಕ್ಷಣಿಕ ವ್ಯವಸ್ಥೆಯನ್ನು ನಿಜವಾದ ಅರಿವು ಮತ್ತು ಜ್ಞಾನದ ವ್ಯವಸ್ಥೆಯತ್ತ ಹೊರಳಿಸಲು ಇದೊಂದು ಸುವರ್ಣಾವಕಾಶವಾಗಿದೆ. ನೂತನ ರಾಷ್ಟ್ರೀಯ ಶಿಕ್ಷಣ ನೀತಿಯ ಧ್ಯೇಯವೂ ಇದೇ ಆಗಿದ್ದು, ವಿದ್ಯಾರ್ಥಿಗಳನ್ನು ಜ್ಞಾನವಂತರನ್ನಾಗಿಸುವುದೇ ಹೊರತು ಅಂಕಗಳ ಮತ್ತು ರ‍್ಯಾಂಕ್‌ಗಳ ಮಾನದಂಡದಲ್ಲಿ ಸೀಮಿತಗೊಳಿಸುವುದಲ್ಲ. ಆ ಮೂಲಕ ಅರಿವಿನ ವ್ಯಾಪ್ತಿಯನ್ನು ಹಿಗ್ಗಿಸುವುದರ ಜತೆಗೆ ಬದುಕಿಗೆ ಪೂರಕ ಕಲಿಕೆಯನ್ನು ಒದಗಿಸುವುದು ನೂತನ ಶೈಕ್ಷಣಿಕ ನೀತಿಯ ಧ್ಯೇಯವಾಗಿದೆ.

ಈ ಹಿನ್ನೆಲೆಯಲ್ಲಿ ಮೌಲ್ಯಾಂಕನ ಪ್ರಕ್ರಿಯೆ ನಿಜಕ್ಕೂ ಸ್ವಾಗತಾರ್ಹ ನಡೆಯಾಗಿದೆ.

ಎಲ್ಲ ಪ್ರಥಮ ಪಿಯುಸಿ ವಿದ್ಯಾರ್ಥಿಗಳಿಗೆ ಆಲ್‌ ದಿ ಬೆಸ್ಟ್. ನಿಮ್ಮ ಜ್ಞಾನದ ಮಟ್ಟವನ್ನು ಬಿಂಬಿಸುವುದರ ಜತೆಗೆ ಪೂರ್ಣ ಪ್ರಾಮಾಣಿಕತೆಯ ಮೌಲ್ಯವನ್ನು ಪ್ರತಿಬಿಂಬಿಸಲು ಇದು ಸದವಕಾಶವಾಗಿದೆ.


0 Comments

Post a Comment

Post a Comment (0)

Previous Post Next Post