ಮನೆಯ ಹಿತ್ತಲಲ್ಲೇ ಸೂರಕ್ಕಿಯ ಸಂಸಾರ

Upayuktha
0

ಈ ಸೂರೆ ಹಕ್ಕಿ (Sunbird) ಕೆಲ ವರ್ಷಗಳಿಂದ ನಮ್ಮ ಹಿತ್ತಿಲಲ್ಲಿ ಗೂಡು ಮಾಡಿ ಸಂಸಾರ ಹೂಡಿ ಇಲ್ಲೇ ಠಿಕಾಣಿ ಹೂಡಿದೆ ಎನ್ನಬಹುದು. ಮನೆಯನೆಂದು ಕಟ್ಟದಿರು ಕೊನೆಯನೆಂದು ಮುಟ್ಟದಿರು ಎಂದರೂ ಅನಿವಾರ್ಯತೆಗಾಗಿ ಮನೆಯನ್ನು ಕಟ್ಟ ಬೇಕಾಗುತ್ತದೆ. ಜಂಗಮಕ್ಕಳಿವಿಲ್ಲ ಸ್ಥಾವರಕ್ಕಳಿವುಂಟು ಎಂದರೇನಯ್ಯ. ಸಂಸಾರದ ಮಂದಿಗೊಂದು ಸ್ಥಾವರ ಬೇಕಲ್ಲ. ಹೀಗೆ ಪ್ರತಿ ವರ್ಷ ಮಾರ್ಚ್ ಏಪ್ರಿಲ್‌ನಲ್ಲಿ ಒಂದು ಬಾರಿ  ಮತ್ತು ಜೂನ್-ಜುಲೈ ತಿಂಗಳ ನಡುವಿನಲ್ಲೇ ಇನ್ನೊಂದು ಬಾರಿ ಗೂಡು ಕಟ್ಟುತ್ತದೆ.


ಕಳೆದ ವರ್ಷ ವರ್ಕ್ ಏರಿಯಾದಲ್ಲಿ ವಾಷಿಂಗ್ ಮೆಷಿನ್‌ನ ಸಮೀಪದಲ್ಲೇ ಗೂಡು ಕಟ್ಟಿತ್ತು. ಮನೆಯಿಂದ ಹೊರಬರುವ ಬಾಗಿಲನ್ನು ವೇಗವಾಗಿ ತೆರೆದರೆ ಗೂಡಿಗೆ ಅಪ್ಪಳಿಸುವ ಸಾಧ್ಯತೆ ಇತ್ತು. ಆ ದಿನಗಳಲ್ಲಿ ನಾವು ಆ ಗೂಡಿನಿಂದ ಮರಿಗಳು ಹಾರಿ ಹೋಗುವ ತನಕ ಎಷ್ಟು ಜಾಗ್ರತೆ ವಹಿಸಿದೆವೆಂದರೆ, ನಂತರ ಏಪ್ರಿಲ್ ತಿಂಗಳಲ್ಲಿ ಪ್ಯಾಶನ್ ಫ್ರೂಟ್ ಬಳ್ಳಿಯಲ್ಲಿ ಒಂದು ಗೂಡು ನಿರ್ಮಾಣವಾಯ್ತು. ಅವುಗಳು ಮರಿಗಳಾಗಿ ಹಾರಿ ಹೋದವು. ವಿನಾಯಕ್ ನಾಯಕ್‌ರವರು ಅದರ ಕೆಲವು ಛಾಯಾಚಿತ್ರಗಳನ್ನು ಸೆರೆ ಹಿಡಿದಿದ್ದರು. ಎರಡು ವರ್ಷಗಳ ಹಿಂದೆ ನಮ್ಮ ಸೌಗಂಧಿಕಾ ಅಂಗಡಿಯಲ್ಲಿ ಗೂಡು ನಿರ್ಮಾಣವಾಗಿತ್ತು. ಅದು ಗ್ಯಾಸ್ ಸ್ಟವ್‌ಗಿಂತ ನೇರಾನೇರ ಮೇಲೆ. ಆ ದಿನಗಳಲ್ಲೂ ನಮಗೆ ಬಹಳ ಭಯವಾಗಿತ್ತು. ಬೆಂಕಿಯಿಂದ ಬಾಣಲೆ.. ಬಾಣಲೆಯಿಂದ ಮಸಾಲಾ ಎಲ್ಲಾ ನೆನಪಾಗಿ ಭಯವಾಗಿತ್ತು. ಅಲ್ಲೂ ಬಹಳ ಜೋಪಾನ ಮಾಡಿ ಎರಡು ಮರಿಗಳು ಹಾರಿಹೋದವು.


ಇದೀಗ ಬಿಸಿ ನೀರಿನ ಹಂಡೆಯ ಪಕ್ಕ ಗೂಡಿನ ನಿರ್ಮಾಣ ಕಾರ್ಯ ಭರದಿಂದ ಸಾಗುತ್ತಿದೆ. ಬೆಲೆ ಏರಿಕೆಯ ಈ ದಿವಸಗಳಲ್ಲಿ ಸಾಮಾನ್ಯರಿಗೆ ಮನೆಕಟ್ಟುವುದು ದುಸ್ತರವೆನಿಸುವ ಈ ಸಂದರ್ಭದಲ್ಲಿ ಇವುಗಳು ಎಷ್ಟು ವೇಗವಾಗಿ ಮನೆಗಳನ್ನು ಕಟ್ಟಿಕೊಳ್ಳುತ್ತವೆ. ಅಬ್ಬಬ್ಬ... ಮನೆ ಕಟ್ಟುವ ಕೆಲಸಗಳಿಲ್ಲದ ದಿನಗಳಲ್ಲಿ ರತ್ನಗಂಧಿಯ ಗಿಡದಿಂದ ಲಾಂಟಾನದತ್ತ ಅಲ್ಲಿಂದ ರಂಬುಟಾನ್ ಮರದತ್ತ. ಇಲ್ಲದಿದ್ದರೆ ಈ ಲಿಲ್ಲಿಗಳ ಕೊಳದ ಬಳಿ ಎಲ್ಲೆಂದರಲ್ಲಿ ಕಾಣಿಸುತ್ತಿರುತ್ತದೆ. ಮಾಮೂಲು ಬುಲ್ ಬುಲ್ ಹಕ್ಕಿಯ ಜೊತೆ ಏನೋ ಗೆಳೆತನ. ಒಂದೇ ಸಮನೆ ವಟಗುಟ್ಟುತ್ತಾ ಗಂಟೆಗಟ್ಟಲೆ ಕೂತಿರುತ್ತಾವೆ ಗಾರ್ಲಿಕ್ ಬಳ್ಳಿಯ ಮೇಲೆ... ಮಕರಂದದ ವಾರಸುದಾರರಂತೆ. ಯಾವುದಾದರೂ ಹೊಸತೊಂದು ಹಕ್ಕಿ ಹಿತ್ತಿಲೊಳಗೆ ಬಂದರೆ ಸಾಕು ಎಷ್ಟೊಂದು ಎನ್ಕ್ವೈರಿ. ನೀವು ಯಾವ ರಾಜ್ಯದವರು? ಯಾವ ಜಿಲ್ಲೆಯವರು? ಹೇಗೆ ಬಂದಿರಿ ಗಡಿ ದಾಟಿ ಬಂದಿರೋ ಇಲ್ಲಿಗೆ ಯಾಕೆ ಬಂದಿರಿ? ಇತ್ಯಾದಿ ಸಾವಿರ ಪ್ರಶ್ನೆಗಳು ನಂತರ ಜೊತೆಯಾಗಿಯೇ ಸವಿಭೋಜನ.


ಈ ಕೆಲವು ಪಕ್ಷಿಗಳು ಮನುಷ್ಯನ ಸಹವಾಸದ ಜೊತೆಗೆ ಜೀವನಕ್ಕೆ ಹೇಗೆ ಒಗ್ಗಿಕೊಂಡಿರುತ್ತವೆ ಎನ್ನುವುದೇ ನನಗೆ ಕುತೂಹಲ. ಅವುಗಳು ದಿನಗಳೆದಂತೆ ಎಷ್ಟು ಆಪ್ಯಾಯಮಾನ ವಾಗುತ್ತವೆ. ಇವುಗಳು ಈ ಬೆಚ್ಚಗಿನ ಪ್ರದೇಶವನ್ನೇ ಆಯ್ದುಕೊಂಡು ಯಾಕೆ ಗೂಡು ಕಟ್ಟುತ್ತವೆ? ಇತ್ತೀಚೆಗೆ ಕೆಲವು ವರ್ಷಗಳಿಂದ ಈ ಸೂರೆ ಹಕ್ಕಿಯು ಮಳೆಗಾಲದ ಗೂಡನ್ನು ನಮ್ಮ ಬಿಸಿ ನೀರಿನ ಹಂಡೆಯ ಒಲೆಯ ಸಮೀಪವೇ ಯಾಕೆ ನಿರ್ಮಾಣ ಮಾಡುತ್ತದೆ? ಒಲೆಯಿಂದ ಬೀಸುವ ಬಿಸಿ ಗಾಳಿಯು ಮೊಟ್ಟೆಗಳು ಒಡೆದು ಮರಿಗಳು ಹೊರ ಬರಲು ಸಹಾಯಕಾರಿಯಾಗುತ್ತದೆಯೆ? ಹೀಗೆ ಹಲವಾರು ಪ್ರಶ್ನೆಗಳು.

Key Words: Sun bird, Soorakki, Bul Bul, Bird watch, ಪಕ್ಷಿವೀಕ್ಷಣೆ, ಸೂರಕ್ಕಿ, ಬುಲ್‌ಬುಲ್‌,


-ಚಂದ್ರ ಸೌಗಂಧಿಕಾ

(ಉಪಯುಕ್ತ ನ್ಯೂಸ್)


Visit: Upayuktha Directory- You get here You want


‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top