ಬದಿಯಡ್ಕ: ದೊಡ್ಡದಿರಲಿ, ಸಣ್ಣದಿರಲಿ ಆ ಮನೆಯೇ ದೇವಾಲಯ, ವಿದ್ಯಾಲಯ, ಆದರಾಲಯ, ಸೇವಾಲಯವೆಂಬ ಕಲ್ಪನೆಯೊಂದಿಗೆ ಮಕ್ಕಳನ್ನು ಬೆಳೆಸಿದಾಗ ನಮ್ಮ ಕನಸು ನನಸಾಗುತ್ತದೆ. ಕುಟುಂಬದ ಪ್ರತಿಯೊಬ್ಬರು ನಿತ್ಯ ಭಾರತೀಯ ಸಂಸ್ಕೃತಿಯನ್ನು ಅನುಸರಿಸಿದಾಗ ಮನೆ ದೇವಾಲಯವಾಗುವುದು ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಅಖಿಲ ಭಾರತ ಕುಟುಂಬ ಪ್ರಬೋಧನ್ ಪ್ರಮುಖ್ ಕಜಂಪಾಡಿ ಸುಬ್ರಹ್ಮಣ್ಯ ಭಟ್ ತಿಳಿಸಿದರು.
ಬದಿಯಡ್ಕ ಸಮೀಪದ ಗೋಳಿಯಡ್ಕದಲ್ಲಿ 4 ವರ್ಷಗಳಿಂದ ನೀರಿನ ಟ್ಯಾಂಕಿನ ಅಡಿಯಲ್ಲಿ ವಾಸಿಸುತ್ತಿದ್ದ ಸುಂದರ ಮತ್ತು ಕುಟುಂಬಕ್ಕೆ ಸೇವಾಭಾರತಿ ಬದಿಯಡ್ಕ ಹಾಗೂ ಅಭಯ ಸೇವಾನಿಧಿ ಬದಿಯಡ್ಕ ಇವರ ನೇತೃತ್ವದಲ್ಲಿ ನಿರ್ಮಿಸಲಾದ ಮನೆಯ ಪ್ರವೇಶ ಸಮಾರಂಭದ ಸಂದರ್ಭದಲ್ಲಿ ನಡೆದ ಮಂಗಲನಿಧಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ದಿನನಿತ್ಯ ಸ್ನಾನ ಮಾಡಿ ಪರಿಶುದ್ಧರಾಗಿ ದೇವರ ಧ್ಯಾನದೊಂದಿಗೆ ಹೊರಗಿನ ಕಣ್ಣನ್ನು ಮುಚ್ಚಿ ಒಳಗಣ್ಣಿನಿಂದ ಪರಮಾತ್ಮನನ್ನು ಕಾಣಬೇಕು ಎಂದು ತಿಳಿಸಿದ ಅವರು ಮನೆಯ ಉತ್ತಮ ಸಂಸ್ಕೃತಿ ಇತರರಿಗೆ ಪಾಠವಾಗಿರಬೇಕು. ಅತಿಥಿಗಳ ಸತ್ಕಾರ, ಬಡಜನರ ಸೇವೆಯಲ್ಲಿ ಪಾಲ್ಗೊಳ್ಳುವ ಮನಸ್ಸಿರಬೇಕು ಎಂದರು.
ಧಾರ್ಮಿಕ ಮುಂದಾಳು ಬ್ರಹ್ಮಶ್ರೀ ರವೀಶ ತಂತ್ರಿ ಕುಂಟಾರು ಅವರು ಪ್ರಾರ್ಥನೆಯನ್ನು ನಡೆಸಿಕೊಟ್ಟು ಮಾತನಾಡುತ್ತಾ ಶಾರೀರಿಕವಾಗಿ, ಮಾನಸಿಕವಾಗಿ, ಆರ್ಥಿಕವಾಗಿ ನಾವು ಸೋತಾಗ ನಮಗೆ ಬೆಂಬಲ ನೀಡುವವರು ಬೇಕು. ಉತ್ತಮ ಚಿಂತನೆಯಿರುವವರಿಗೆ ದೇವರು ಯಾವುದೇ ರೀತಿಯಲ್ಲಿ ಸಹಾಯವನ್ನು ಮಾಡಿಯೇ ಮಾಡುತ್ತಾರೆ. ಪೂರ್ವ ಜನ್ಮದ ಪಾಪದ ಫಲ, ಭೂಮಿಯ ದೋಷಗಳು, ಕುಟುಂಬದ ಕರ್ಮಾಪರಾಧದ ಫಲವು ನಮ್ಮನ್ನು ಸಂಕಷ್ಟಕ್ಕೆ ತಳ್ಳಲ್ಪಡುತ್ತದೆ ಎಂದರು. ವೇದಮೂರ್ತಿ ಎಸ್.ಎಂ. ಉಡುಪ ಬೆಳಗ್ಗೆ ಗಣಪತಿ ಹೋಮ ನಡೆಸಿಕೊಟ್ಟರು. ನಂತರ ಸುಂದರ ದಂಪತಿಗಳು ಉರಿಯುವ ದೀಪದೊಂದಿಗೆ ಮನೆಗೆ ಪ್ರದಕ್ಷಿಣೆಯನ್ನು ಹಾಕಿ ಗೃಹಪ್ರವೇಶ ಮಾಡಿದರು. ತುಳಸಿಗಿಡವನ್ನು ನೆಟ್ಟು ಪೂಜೆಯನ್ನು ಸಲ್ಲಿಸಲಾಯಿತು. ಮನೆಯಲ್ಲಿ ಹಾಲನ್ನು ಕುದಿಸಿ ಪ್ರಸಾದವನ್ನು ನೀಡಲಾಯಿತು.
ಈ ಸಂದರ್ಭದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಮಂಗಳೂರು ವಿಭಾಗ ಸಂಘ ಚಾಲಕ್ ಬಿ. ಗೋಪಾಲ ಚೆಟ್ಟಿಯಾರ್ ಪೆರ್ಲ, ಬದಿಯಡ್ಕ ತಾಲೂಕು ಸಂಘ ಚಾಲಕ್ ಗುಣಾಜೆ ಶಿವಶಂಕರ ಭಟ್, ಬ್ಲಾಕ್ ಪಂಚಾಯಿತಿ ಸದಸ್ಯೆ ಅಶ್ವಿನಿ ಮಲ್ಲಡ್ಕ ಹಾಗೂ ಕಾರ್ಯಕರ್ತರು ಪಾಲ್ಗೊಂಡಿದ್ದರು.
(ಉಪಯುಕ್ತ ನ್ಯೂಸ್)
Visit: Upayuktha Directory- You get here You want
‘ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ