ಪರಿಸರವಾದಿಗಳ ಆಕ್ರೋಶ, ಬಿಜೆಪಿ ರಾಜ್ಯಾಧ್ಯಕ್ಷರ ಮೇಲೆ ಅರಣ್ಯ ಕಾಯಿದೆ ಉಲ್ಲಂಘನೆಯ ಆರೋಪ
ಚಿಕ್ಕಮಗಳೂರು: ಕಾಡು ಪ್ರಾಣಿಗಳಿಗೆ ಹಣ್ಣುಹಂಪಲು, ಆಹಾರ ನೀಡಬಾರದು ಎಂಬುದು ಅರಣ್ಯ ಇಲಾಖೆಯ ನಿಯಮ. ಮಂಗಗಳಿಗೆ ಆಹಾರ ನೀಡುವವರ ವಿರುದ್ಧ ಕಠಿಣ ಕ್ರಮ ಜರುಗಿಸುವುದಾಗಿ ಅರಣ್ಯ ಇಲಾಖೆ ಎಚ್ಚರಿಸಿದರೂ ಚಾರ್ಮಾಡಿ ಘಾಟಿಯಲ್ಲಿ ಮಂಗಗಳಿಗೆ ಬಿಜೆಪಿ ರಾಜ್ಯಾಧ್ಯಕ್ಷರು ಹಣ್ಣು ನೀಡಿರುವುದು ಈಗ ವಿವಾದವಾಗಿ ಪರಿಣಮಿಸಿದೆ.
ಬಜರಂಗದಳ ವತಿಯಿಂದ ಚಾರ್ಮಾಡಿ ಘಾಟ್‌ನ ಮಂಗಗಳಿಗೆ ಹಣ್ಣು ವಿತರಣೆ ಮಾಡುತ್ತಿದ್ದಾಗ ಅದೇ ಮಾರ್ಗದಲ್ಲಿ ಸಂಚರಿಸುತ್ತಿದ್ದ ನಳಿನ್ ಕುಮಾರ್ ಕಟೀಲ್ ಕೂಡ ಹಣ್ಣು ನೀಡಿದ್ದರು.
ಲಾಕ್ ಡೌನ್‌ನಿಂದ ವಾಹನ ಸಂಚಾರವಿಲ್ಲದೆ ಆಹಾರಕ್ಕಾಗಿ ಮಂಗಗಳು ಪರದಾಡುತ್ತಿವೆ ಎಂದು ಶನಿವಾರ 100 ಕೆಜಿಗೂ ಹೆಚ್ಚು ಬಾಳೆಹಣ್ಣನ್ನು ಬಜರಂಗದಳ ಕಾರ್ಯಕರ್ತರು ನೀಡಿದ್ದರು.
ಚಾರ್ಮಾಡಿ ಘಾಟ್ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ವ್ಯಾಪ್ತಿಗೆ ಸೇರುತ್ತದೆ. ಕಾಡಿನಲ್ಲಿ ಬದುಕುವ ಮಂಗಗಳಿಗೆ ಕೃತಕ ಆಹಾರ ನೀಡಿದ್ದಕ್ಕೆ ಪರಿಸರವಾದಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಉಪಯುಕ್ತ ನ್ಯೂಸ್ ನಿಲುವು:
ಕಾನೂನು ಇರುವುದು ಸರ್ವರ ಒಳಿತಿಗಾಗಿಯೇ ಹೊರತು ವಿವೇಚನೆ ಇಲ್ಲದೆ ಬಳಸುವುದಕ್ಕೂ ಅಲ್ಲ; ರಾಜಕೀಯ ಹಿತಾಸಕ್ತಿಗಳನ್ನು ಈಡೇರಿಸಿಕೊಳ್ಳುವುದಕ್ಕೂ ಅಲ್ಲ. ಕಾನೂನಿನ ಭಾಷೆಗೆ ಸಮಯ-ಸಂದರ್ಭ-ಸನ್ನಿವೇಶ, ವಿವೇಕದ ಕಣ್ಣು ಇದ್ದಲ್ಲಿ ಇಂತಹ ವಿಷಯಗಳು ವಿವಾದ ಆಗಬೇಕಾಗಿಲ್ಲ. ಅರಣ್ಯ ಇಲಾಖೆಯ ಕಾನೂನಿನಲ್ಲಿ ವನ್ಯ ಜೀವಿಗಳಿಗೆ ಆಹಾರ ನೀಡುವುದು ಅಪರಾಧ ಅಂತ ಇರಬಹುದು ನಿಜ. ಆದರೆ ಮಾನವೀಯತೆಯಿಂದ ವರ್ತಿಸುವುದು ಅಪರಾಧ ಅಂತ ಯಾವ ಕಾನೂನೂ ಹೇಳುವುದಿಲ್ಲ. ಮಾನವೀಯತೆ ಎಂಬುದು ಎಲ್ಲ ಕಾನೂನು-ಕಾಯ್ದೆಗಳಿಗಿಂತ ಮೇಲಿರುತ್ತದೆ ಎಂಬುದು ಸಾಮಾನ್ಯ ತಿಳುವಳಿಕೆ.
(ಉಪಯುಕ್ತ ನ್ಯೂಸ್)
Visit: Upayuktha Directory- You get here You want
‘ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ