ಕನ್ನಡ ಭಾಷೆ, ಸಂಸ್ಕೃತಿಯ ಉಳಿವು ಯುವಪೀಳಿಗೆಯ ಹೊಣೆ: ಸುಧಾಕರ ರಾವ್ ಪೇಜಾವರ

Shreya Hegde
0



ಸುರತ್ಕಲ್: ಭಾಷೆ, ಸಂಸ್ಕೃತಿ ಮತ್ತು ಇತಿಹಾಸದ ಅರಿವು ವಿದ್ಯಾರ್ಥಿಗಳಲ್ಲಿ ಮೂಡಬೇಕು. ಕನ್ನಡ ಕೇವಲ ಮಾತನಾಡುವ ಭಾಷೆಯಲ್ಲ, ಅದು ನಮ್ಮ ಉಸಿರು ಮತ್ತು ಅಸ್ಮಿತೆಯ ಸಂಕೇತ ಎಂದು ಶಾಲಾ ಸಂಚಾಲಕ ಸುಧಾಕರ ರಾವ್ ಪೇಜಾವರ ಹೇಳಿದರು.


ಹಿಂದು ವಿದ್ಯಾದಾಯಿನೀ ಸಂಘದ ಆಡಳಿತಕ್ಕೊಳಪಟ್ಟ ಸುರತ್ಕಲ್‌ನ ಅನುದಾನಿತ ವಿದ್ಯಾದಾಯಿನೀ ಪ್ರೌಢಶಾಲೆಯಲ್ಲಿ 71ನೇ ಕನ್ನಡ ರಾಜ್ಯೋತ್ಸವವನ್ನು ಸಂಭ್ರಮದಿಂದ ಆಚರಿಸಲಾಯಿತು. ಕಾರ್ಯಕ್ರಮದ ಅಂಗವಾಗಿ ಕನ್ನಡ ಧ್ವಜಾರೋಹಣ ನೆರವೇರಿಸಿ ನಾಡಿಗೆ ಗೌರವ ಸಲ್ಲಿಸಲಾಯಿತು. ಬಳಿಕ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಒಟ್ಟಾಗಿ ನಾಡಗೀತೆ 'ಜಯ ಭಾರತ ಜನನಿಯ ತನುಜಾತೆ'ಯನ್ನು ಹಾಡಿದರು.


ಸಭಾ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿದ ಹಿಂದು ವಿದ್ಯಾದಾಯಿನೀ ಸಂಘದ ಆಡಳಿತ ಮಂಡಳಿ ಗೌರವಾನ್ವಿತ ಸದಸ್ಯ ಹಾಗೂ ಶಾಲೆಯ ಹಳೆ ವಿದ್ಯಾರ್ಥಿ ಎಚ್. ಸಂತೋಷ್ ಹತ್ವಾರ್ ಮಾತನಾಡಿ, ಕನ್ನಡ ಕೇವಲ ಭಾಷೆಯಲ್ಲ, ಅದೊಂದು ಸಂಸ್ಕೃತಿ. ಆಧುನಿಕ ಯುಗದಲ್ಲಿ ವಿದ್ಯಾರ್ಥಿಗಳು ಇತರ ಭಾಷೆಗಳನ್ನು ಕಲಿಯುವುದರೊಂದಿಗೆ ತಮ್ಮ ಮಾತೃಭಾಷೆಯಾದ ಕನ್ನಡವನ್ನು ಮರೆಯದೆ ನಿತ್ಯ ಜೀವನದಲ್ಲಿ ಬಳಸಬೇಕು. ಕನ್ನಡ ನಾಡಿನ ಏಕೀಕರಣಕ್ಕಾಗಿ ಅನೇಕ ಮಹನೀಯರು ತ್ಯಾಗ, ಬಲಿದಾನ ಮಾಡಿದ್ದಾರೆ. ಅವರ ಕೊಡುಗೆಗಳನ್ನು ಸ್ಮರಿಸುವುದು ನಮ್ಮೆಲ್ಲರ ಕರ್ತವ್ಯ ಎಂದರು.


ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಮಂಗಳೂರಿನ ಲೇಡಿಹಿಲ್‌ನ ಎಸ್.ಎಲ್. ಶೇಟ್ ಡೈಮಂಡ್ ಹೌಸ್ ಮಾಲಕ ರವೀಂದ್ರ ಶೇಟ್ ಮಾತನಾಡಿ, ಇಂದಿನ ತಂತ್ರಜ್ಞಾನ ಯುಗದಲ್ಲಿ ವಿದ್ಯಾರ್ಥಿಗಳು ವಿವಿಧ ಭಾಷೆಗಳನ್ನು ಕಲಿಯಬೇಕು. ಆದರೆ, ಯಾವುದೇ ಕಾರಣಕ್ಕೂ ತಾಯ್ನುಡಿಯಾದ ಕನ್ನಡವನ್ನು ಮರೆಯಬಾರದು ಎಂದು ಕರೆ ನೀಡಿದರು. ಇನ್ನೋರ್ವ ಮುಖ್ಯ ಅತಿಥಿ ಹಾಗೂ ಶಾಲಾ ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷ ಶ್ರೀಹರಿ. ಎಂ. ಮಾತನಾಡಿ, ಕನ್ನಡ ಭಾಷೆಯು ಸಂಸ್ಕಾರ ಮತ್ತು ಸಂಸ್ಕೃತಿಯ ಸಂಕೇತವಾಗಿದೆ. ಯುವಪೀಳಿಗೆಯ ಕೈಯಲ್ಲಿ ಕನ್ನಡದ ಭವಿಷ್ಯವಿದೆ. ವಿದ್ಯಾರ್ಥಿಗಳು ಉತ್ತಮ ಶಿಕ್ಷಣ ಪಡೆದು ಉನ್ನತ ಸಾಧನೆ ಮಾಡುವ ಮೂಲಕ ಕರ್ನಾಟಕದ ಕೀರ್ತಿಯನ್ನು ಜಗತ್ತಿನಾದ್ಯಂತ ಪಸರಿಸಬೇಕು ಎಂದು ಹಾರೈಸಿದರು.


ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಲಾ ಸಂಚಾಲಕ ಸುಧಾಕರ ರಾವ್ ಪೇಜಾವರ ಮಾತನಾಡಿ, ವಿದ್ಯಾರ್ಥಿಗಳು ಪಠ್ಯಪುಸ್ತಕಗಳ ಅಧ್ಯಯನಕ್ಕೆ ಮಾತ್ರ ಸೀಮಿತವಾಗದೆ ನಮ್ಮ ಭಾಷೆ, ಸಂಸ್ಕೃತಿ ಹಾಗೂ ಇತಿಹಾಸದ ಬಗ್ಗೆಯೂ ತಿಳಿದುಕೊಳ್ಳಬೇಕು. ಕುವೆಂಪು, ಬೇಂದ್ರೆ, ಶಿವರಾಮ ಕಾರಂತರಂತಹ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿಗಳನ್ನು ಪಡೆದಿರುವುದು ಕನ್ನಡಿಗರ ಹೆಮ್ಮೆ. ವಿಜ್ಞಾನ, ತಂತ್ರಜ್ಞಾನ, ಕಲೆ ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲೂ ಕನ್ನಡಿಗರು ತಮ್ಮ ಪ್ರತಿಭೆ ಮೆರೆದಿದ್ದಾರೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಶಾಲಾ ವಿದ್ಯಾರ್ಥಿನಿಯರು ಪ್ರಖ್ಯಾತ ಕನ್ನಡ ಕವಿಗಳು ರಚಿಸಿದ ಕನ್ನಡ ರಾಜ್ಯೋತ್ಸವ ಗೀತೆಗಳನ್ನು ಹಾಡಿದರು. ಕನ್ನಡ ನಾಡು-ನುಡಿಯ ವೈಭವದ ಕುರಿತು ವಿದ್ಯಾರ್ಥಿನಿಯೊಬ್ಬರು ಭಾಷಣ ಮಾಡಿದರು.


ಶಾಲಾ ಮುಖ್ಯೋಪಾಧ್ಯಾಯ ದಿವಸ್ಪತಿ ಸ್ವಾಗತಿಸಿ, ಕನ್ನಡ ರಾಜ್ಯೋತ್ಸವದ ಮಹತ್ವವನ್ನು ವಿವರಿಸಿದರು. ಸಹಶಿಕ್ಷಕಿ ಉಮಾವತಿ ಕಾರ್ಯಕ್ರಮ ನಿರೂಪಿಸಿದರು. ಪುಷ್ಪಾ ವಂದಿಸಿದರು. ಶಾಲೆಯ ನಿವೃತ್ತ ಮುಖ್ಯೋಪಾಧ್ಯಾಯರಾದ ಶಶಿಕಲಾ ಮತ್ತು ರೇವತಿ, ರಕ್ಷಕ-ಶಿಕ್ಷಕ ಸಂಘದ ಸದಸ್ಯರು, ಪೋಷಕರು, ಶಿಕ್ಷಕ ಹಾಗೂ ಶಿಕ್ಷಕೇತರ ಸಿಬ್ಬಂದಿ ವರ್ಗದವರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top