ವಿಟ್ಲ: ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿಯಿಂದ ವಿಜೃಂಭಣೆಯ ಸಾಮೂಹಿಕ ಗೋಪೂಜೆ

Upayuktha
0


ವಿಟ್ಲ: ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ ಕರ್ನಾಟಕ (ಎಸ್.ಪಿ.ವೈ.ಎಸ್ಸ್.ಎಸ್) ವಿಟ್ಲ ನಗರದ ವತಿಯಿಂದ ಕನ್ಯಾನದ ಭಾರತ ಸೇವಾಶ್ರಮದಲ್ಲಿ ದಿನಾಂಕ 09 ನವೆಂಬರ್ 2026ರ ಸೋಮವಾರದಂದು ಸಾಮೂಹಿಕ ಗೋಪೂಜಾ ಕಾರ್ಯಕ್ರಮವು ಶ್ರದ್ಧಾ-ಭಕ್ತಿಯಿಂದ ಹಾಗೂ ವಿಜೃಂಭಣೆಯಿಂದ ನೆರವೇರಿತು.


ಮುಂಜಾನೆಯ ವೇಳೆಯಲ್ಲಿ ವಿಟ್ಲ ನಗರದ 17 ವಿವಿಧ ಶಾಖೆಗಳ ಸುಮಾರು 150ಕ್ಕೂ ಹೆಚ್ಚು ಯೋಗಬಂಧುಗಳು ಭಾರತ ಸೇವಾಶ್ರಮದಲ್ಲಿ ನಿತ್ಯ ಯೋಗಾಭ್ಯಾಸ ನೆರವೇರಿಸಿದರು. ಬಳಿಕ ಆಶ್ರಮದ ದೋ ಕೊಟ್ಟಿಗೆಯನ್ನು (ಹಟ್ಟಿ) ಸ್ವಚ್ಛಗೊಳಿಸಿ, ಗೋವುಗಳಿಗೆ ಮಂಗಳಾರತಿ ಬೆಳಗಿ, ಗೋಗ್ರಾಸ ನೀಡುವ ಮೂಲಕ ಗೋಪೂಜೆಯನ್ನು ಭಕ್ತಿಯಿಂದ ಆಚರಿಸಿದರು.


ಯೋಗಬಂಧುಗಳ ಭಜನೆಯೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಮುಳಿಯ ದಂಬೆ ಶಾಖೆಯ ಶ್ರೀ ರಾಮ ಅವರು ಅಮೃತವಚನ ವಾಚಿಸಿದರು. ಶ್ರೀ ಕೈಲಾಸೇಶ್ವರ ಶಾಖೆ ನೀರ್ಕಜೆಯ ಶ್ರೀಮತಿ ಮೋಹಿನಿ ಅವರು ಪಂಚಾಂಗ ಪಠಣ ನೆರವೇರಿಸಿದರು.


ಭಾರತ ಸೇವಾಶ್ರಮದ ಪ್ರಮುಖರಾದ ಈಶ್ವರ ಭಟ್, ಶಂಕರನಾರಾಯಣ, ಪಂಚಲಿಂಗೇಶ್ವರ ಶಾಖೆಯ ಮಹೇಶ, ವಿಟ್ಲ ನಗರ ಶಿಕ್ಷಣ ಪ್ರಮುಖರಾದ ಮಂಜುನಾಥ ಹಾಗೂ ವರದಿ ಮತ್ತು ಜಾಲತಾಣ ಪ್ರಮುಖರಾದ ಶ್ರೀ ಭಾಸ್ಕರ ಅವರು ಜಂಟಿಯಾಗಿ ದೀಪ ಪ್ರಜ್ವಲನೆ ಮಾಡಿದರು.



ಯೋಗಾಭ್ಯಾಸ ಮತ್ತು ಪ್ರಾತ್ಯಕ್ಷಿಕೆ:

ಶ್ರೀ ದುರ್ಗಾಪರಮೇಶ್ವರಿ ಶಾಖೆ ಅಡ್ಯನಡ್ಕದ ಶ್ರೀ ದಿನೇಶ ಅವರು ಮಾನಸಿಕ ಸಿದ್ಧತೆ, ಉಸಿರಾಟ ಕ್ರಿಯೆ ಹಾಗೂ ಗಣಪತಿ ನಮಸ್ಕಾರಗಳನ್ನು ನಡೆಸಿಕೊಟ್ಟರು. ಶ್ರೀ ಮಹಿಷಮರ್ಧಿನಿ ಶಾಖೆ ಪುಣಚದ ಶ್ರೀಮತಿ ಶೋಭನ ಅವರು ಸೂರ್ಯ ನಮಸ್ಕಾರ ಮತ್ತು ಅಮೃತಾಸನವನ್ನು ನೆರವೇರಿಸಿದರು. ಪ್ರಾತ್ಯಕ್ಷಿಕೆಯಲ್ಲಿ ಮುಳಿಯ ಶಾಖೆಯ ಶ್ರೀಮತಿ ಹರಿಣಾಕ್ಷಿ ಹಾಗೂ ನೀರ್ಕಜೆ ಶಾಖೆಯ ಸುಕುಮಾರ, ವಿನಯ ಮತ್ತು ಶ್ರೀಮತಿ ವಸಂತಿ ಅವರು ಸಹಕರಿಸಿದರು.


ಬೌದ್ಧಿಕ್ ಹಾಗೂ ಅಗ್ನಿಹೋತ್ರ:

ಪುಣಚ ಶ್ರೀ ಮಹಿಷಮರ್ಧಿನಿ ಶಾಖೆಯ ದಯಾನಂದ ಅವರು ಸಮಿತಿಯ ಪರಿಚಯ, ದೀಪಾವಳಿ ಹಬ್ಬದ ಮಹತ್ವ ಹಾಗೂ ಗೋಪೂಜೆಯ ಆಚರಣೆಯ ಕುರಿತು ಬೌದ್ಧಿಕ್ (ಬೌದ್ಧಿಕ ವಿಚಾರ) ನಡೆಸಿಕೊಟ್ಟರು. ಅಡ್ಯನಡ್ಕ ಶಾಖೆಯ ಶ್ರೀ ಲಕ್ಷ್ಮೀನಾರಾಯಣ ಅವರು ಅಗ್ನಿಹೋತ್ರವನ್ನು ನೆರವೇರಿಸಿಕೊಟ್ಟರು.


ಅಡ್ಯನಡ್ಕ ಶಾಖೆಯ ಶ್ರೀಮತಿ ಸುಜಾತ ಅವರು ಅನ್ನಪೂರ್ಣೇಶ್ವರಿ ಮಂತ್ರ ಪಠಿಸಿದರು. ಬಳಿಕ ಆಶ್ರಮದಲ್ಲಿ ಸಿದ್ಧಪಡಿಸಿದ ಪ್ರಸಾದ ವಿತರಣೆ ನಡೆಯಿತು.


ಯೋಗಾಭ್ಯಾಸದ ನಂತರ ಯೋಗಬಂಧುಗಳು ಹಟ್ಟಿಯನ್ನು ಸ್ವಚ್ಛಗೊಳಿಸಿ, ಗೋವುಗಳನ್ನು ತೊಳೆದು, ಆರತಿ ಬೆಳಗಿ ಗೋಗ್ರಾಸ ನೀಡಿದರು. ಇದೇ ಸಂದರ್ಭದಲ್ಲಿ ಸಮಿತಿಯ ವತಿಯಿಂದ ಗೋವುಗಳ ಗೋಗ್ರಾಸಕ್ಕಾಗಿ ದೇಣಿಗೆಯನ್ನು ಸಮರ್ಪಿಸಲಾಯಿತು.


ಕಾರ್ಯಕ್ರಮದಲ್ಲಿ ಜಿಲ್ಲಾ ಸಹ ಸಂಚಾಲಕರಾದ ಶ್ರೀಮತಿ ಮಾಧುರಿ ಹಾಗೂ ಸಮಿತಿಯ ನಗರ ಪ್ರಮುಖರು ಉಪಸ್ಥಿತರಿದ್ದು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು. ಕಾರ್ಯಕ್ರಮದ ಸಂಚಾಲಕರಾದ ಶ್ರೀ ಮಂಜುನಾಥ ಧನ್ಯವಾದ ಸಮರ್ಪಿಸಿದರು.

Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top