ಮಹಿಪತಿ ರಾಯರು ಆದಿಲ್ಶಾಹಿ ಕಾಲದಲ್ಲಿ ಆಸ್ಥಾನದ ದಿವಾನರಾಗಿದ್ದು ನಂತರ ಎಲ್ಲ ತ್ಯಜಿಸಿ ಮಹಿಪತಿ ದಾಸರಾಗಿ ಹರಿದಾಸ ಪಥ ಹಿಡಿದರು. ಇವರು ಬಹುಭಾಷ ಪ್ರವೀಣರು. ಷಟ್ ಶಾಸ್ತ್ರ ಓದುವುದರ ಜೊತೆ, ಸೂಫಿ ಸಾಹಿತ್ಯ, ಶರಣ ಸಾಹಿತ್ಯ, ಅನುಭಾವ ಸಾಹಿತ್ಯ ತಿಳಿದವರಾಗಿದ್ದರು. ಇವರ ಪುರಾಣ ಪ್ರವಚನಕ್ಕೆ ಎಲ್ಲ ಜನಾಂಗದ ಜನ ಬಂದು ಆಲಿಸುತ್ತಿದ್ದರು.
ಶ್ರೀ ಮಹಿಪತಿ ದಾಸರ ಸಾಹಿತ್ಯ ದರ್ಶನವು ಜ್ಞಾನ ಯೋಗ,ಕರ್ಮ ಯೋಗ ಭಕ್ತಿ ಯೋಗ, ರಾಜಯೋಗ ಮಂತ್ರಯೋಗ, ಜಪ, ನಾಮಸಾಧನೆ ಹೀಗೆ ಅನೇಕ ಪ್ರಕಾರದ ಮೂಲಕ ಸಾಧನ ಶರೀರದಿಂದ ಸಾಧನೆ ಮಾಡುತ್ತಾ ಅಧ್ಯಾತ್ಮದ ಗುರಿಯನ್ನು ಮುಟ್ಟಿದ್ದಾರೆ. ಶ್ರೇಷ್ಠ ಸಾಧಕ ಹರಿದಾಸರಾದ ಶ್ರೀ ಮಹಿಪತಿದಾಸರು ಭಕ್ತಿ ಮತ್ತು ಯೋಗ ಮಾರ್ಗದ ಮೂಲಕ ಭಗವಂತನನ್ನು ಕಂಡಿದ್ದಾರೆ. ಇವರ ಅವಧಿ ಮಧ್ಯ 16ನೇ ಶತಮಾನ. ಪುರಂದರ ದಾಸರು ಮತ್ತು ಕನಕದಾಸರ ಅನಂತರ ಬರುವರು.
ಮಹಿಪತಿದಾಸರನ್ನು, ಮಹಿಪತಿ ರಾಜ, ಮಹಿಪತಿ ಸ್ವಾಮಿ, ಮಹಿಪತಿ ದಾಸರು, ಮಹಿಪತಿ ರಾಯ ಎಂದು ಕರೆಯುವುದು ಇದೆ. ಇವರು ಹರಿದಾಸ ಸಾಹಿತ್ಯವನ್ನು ವಿಶಿಷ್ಟ ರೀತಿಯಿಂದ ಕೂಡಿದೆ ಹರಿ ಸರ್ವೋತ್ತಮತೆ ಸಾರುವ ಮದ್ವ ಶಾಸ್ತ್ರ ಮತ್ತು ಭಾಗವತಾದಿ ಪುರಾಣಗಳನ್ನು ಸರಳ ಸುಂದರ ಪ್ರಾoತೀಯ ಆಡು ಭಾಷೆಯಲ್ಲಿ ರಚಿಸಿದ್ದಾರೆ, ಹಾಗೇ ಇವರು ಊರು ಊರು ಸುತ್ತಿ ಕಾಲಿಗೆ ಗೆಜ್ಜೆ ಕಟ್ಟಿ ಅಡ್ಡಾಡಿದವರಲ್ಲ, ಕಾಖಂಡಕಿಯಲ್ಲಿ ಸ್ಥಿರವಾಗಿ. ಇದ್ದು, ಯೋಗ ಜಪಗಳ ಮೂಲಕ ಭಗವಂತನ್ನನ್ನು ಕಂಡವರು.
ಶ್ರೀ ಮಹಿಪತಿ ದಾಸರ ಸಾಹಿತ್ಯ ಎಲ್ಲ ಹರಿದಾಸರ ಸಾಹಿತ್ಯಗಳಿಗಿಂತ ವಿಭಿನ್ನ ಶೈಲಿ. ಇವರು ವರಕವಿ, ತತ್ವಜ್ಞಾನಿ, ಅನುಭಾವಿಕರು ಅಂತಲೂ ಹೇಳಬಹುದು. ಗೂಢ ಅನುಭವಗಳನ್ನು ತಮ್ಮ ಪದಗಳನ್ನು ಕೀರ್ತನೆ, ಪದಗಳನ್ನು ರಚಿಸಿದವರು. ಪರಮಾತ್ಮನ ಸಾಕ್ಷಾತ್ಕಾರವನ್ನು ಸವಿದು ಸಾಹಿತ್ಯದ ಮೂಲಕ ಹರಿದಾಸ ಸಾಹಿತ್ಯ ಪೋಷಿಸಿದರು.
ಮೈಸೂರು ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಸಂಸ್ಥೆ ಪ್ರಕಟಿಸಿದ "ಮಹಿಪತಿ ರಾಯರ ಕೃತಿಗಳು" ಸಂಗ್ರಹದಲ್ಲಿ ದೊರೆತ ಮಹಿಪತಿ ದಾಸರ ಒಟ್ಟು ಕೃತಿಗಳು 754, ಇವುಗಳಲ್ಲಿ ಹಿಂದಿ, ಮಾರಾಠಿ, ಉರ್ದು, ತೆಲಗು ಮಿಶ್ರ ಭಾಷಾ ಕೃತಿಗಳು ಸೇರ್ಪಡೆಯಾಗಿವೆ. ಕನ್ನಡ ಕೃತಿಗಳು 685, ಮರಾಠಿ ಕೃತಿಗಳು 46 ಹಿಂದಿ ಕೃತಿಗಳು 18, ಮಿಶ್ರ ಕೃತಿಗಳು 5. ಇನ್ನು ಕನ್ನಡ ಕೃತಿಗಳಲ್ಲಿ 322 ಹರಿವಾಯು ಗುರುಗಳು, ಅನುಭಾವ, ಸಾಕ್ಷಾತ್ಕಾರ 134, ಸ್ವಾನುಭಾವ ಉಪದೇಶ 153, ದ್ವೈತ ಮತ 15, ಇತರ 63.
ಹೀಗೆ ಮಹಿಪತಿದಾಸರ ಕೃತಿಗಳು ವಿಪುಲ. ಹಾಗೆ ವೈವಿಧ್ಯಮಯ.ಇವರು ಬಹು ಭಾಷಾ ವಿಶಾರದಾಗಿದ್ದರಲ್ಲದೆ ಬಹು ಭಾಷೆಯಲ್ಲಿ ಸಾಹಿತ್ಯಗಳನ್ನು ರಚಿಸಿದ್ದಾರೆ. ಕನ್ನಡ, ತೆಲಗು, ದಖಣಿ, ಮರಾಠಿ, ಪರ್ಷಿಯನ್ ಭಾಷಾಗಳಲ್ಲಿ ಇವರ ಸಾಹಿತ್ಯ ರಚನೆಗಳು ಇವೆ. ಕೀರ್ತನೆಗಳು,ಸ್ತೋತ್ರ, ಆರತಿ ಪದ, ಕೋಲಾಟದ ಪದ(ದಶಾವತಾರದ ಕೋಲು ಕೊಲೆನ್ನ ಕೋಲ ಶ್ರೀಹರಿಯ ಬಲಗೊಂಬೆ ಕೋಲೆ), ಶೋಭಾನ ಪದ, ಜನ ಸಾಮಾನ್ಯರಿಗೆ ಲಾವಣಿ ಪದ, ಹ0ತಿಪದ, ಸುಗ್ಗಿ ಪದ, ಸತ್ಸಂಗದ ಹಾಡು, ತ್ರಿಪದಿ, ಚೌಪದಿಗಳು, ಸಾಂಗತ್ಯ ಭಾಮಿನಿ, ವಾರ್ಧಕ ಷಟ್ಪದಿ ಹೀಗೆ ಮಹಿಪತಿರಾಯರ ಸಾಹಿತ್ಯವು ಸಂಪದ್ಭರಿತ ಹಾಗೆ ವಿಶಾಲ ದೃಷ್ಟಿಯಿಂದ ಕೋನದಿಂದ ಕೂಡಿದೆ.
ಇವರು ಕನ್ನಡ,ಉರ್ದು, ಮರಾಠಿ, ತೆಲಗು, ಪಾರ್ಸಿ, ಸಂಸ್ಕೃತ ಬಹು ಭಾಷಾ ಪಂಡಿತರಿದ್ದರು. ಇವರ ಒಟ್ಟು ಅಂಕಿತ ೧೪ ಇವೆ. ಇವರ ಸಾಹಿತ್ಯ 700 ಕೃತಿಗಳಿಗಿಂತ ಹೆಚ್ಚು ರಚಿಸಿ ,ಅದರಲ್ಲಿ ಹರಿ ಸರ್ವೋತ್ತಮತ್ವದ ಬಗ್ಗೆ ಬಹಳ ಪದ್ಯಗಳು ಇವೆ. ಹೀಗೆ ಹರಿದಾಸ ಸಾಹಿತ್ಯವನ್ನು ಶ್ರೀಮಂತಗೊಳಿಸಿದ್ದಾರೆ. ಆದ್ದರಿಂದ ಇದೇ ನವಂಬರ್ 27 ದಿನಾಂಕದಂದು ಬಿಡುಗಡೆ ಆಗುತ್ತದೆ, ಎಲ್ಲರೂ ಚಲನಚಿತ್ರ ನೋಡಿ ಹರಿದಾಸರ ಚರಿತ್ರೆ ಚಲನಚಿತ್ರ ಮಾಧ್ಯಮದ ಮೂಲಕ ಬರುವುದರಿಂದ ಹೆಚ್ಚು ಜನರಿಗೆ ತಲುಪುತ್ತದೆ. ನೋಡಿ ಪ್ರೋತ್ಸಾಹಿಸಿ.
- ಪ್ರಿಯಾ ಪ್ರಾಣೇಶ ಹರಿದಾಸ

