ಸಾಗರ: "ಜನನಿ ಮತ್ತು ಜನ್ಮಭೂಮಿ ಸ್ವರ್ಗಕ್ಕಿಂತ ಮಿಗಿಲು. ಪ್ರತಿಯೊಬ್ಬರಲ್ಲೂ ದೇಶಪ್ರೇಮವಿದ್ದರೆ ಮಾತ್ರ ದೇಶವು ಸುಭಿಕ್ಷ ಹಾಗೂ ಸುಭದ್ರವಾಗಿರಲು ಸಾಧ್ಯ. ರಾಷ್ಟ್ರಗೀತೆ 'ಜನನಗಣಮನ' ಹಾಗೂ ತ್ರಿವರ್ಣ ಧ್ವಜದಷ್ಟೇ 'ವಂದೇಮಾತರಂ' ರಾಷ್ಟ್ರೀಯ ಗೀತೆಯೂ ಮಹತ್ವದ್ದಾಗಿದೆ. ಆದರೆ ರಾಷ್ಟ್ರೀಯ ಗೀತೆಯ ಪೂರ್ಣ ಸಾಹಿತ್ಯ ಹಲವರಿಗೆ ಕಂಠಪಾಠವಿರುವುದಿಲ್ಲ. ಪ್ರತಿಯೊಬ್ಬ ನಾಗತಿಗರಿಗೂ ಇದರ ಸಂಪೂರ್ಣ ಸಾಹಿತ್ಯ ಕಂಠಪಾಠವಾಗಬೇಕೆಂಬುದು ಕೇಂದ್ರ ಸರ್ಕಾರದ ಆಶಯವಾಗಿದ್ದು, ಈ ನಿಟ್ಟಿನಲ್ಲಿ ಭಾರತ ವಿಕಾಸ ಪರಿಷತ್ ಸಾಗರ ಘಟಕದಿಂದ ವಿಶೇಷ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ" ಎಂದು ವೇದ ನಾದ ಪ್ರತಿಷ್ಠಾನದ ವಿದೂಷಿ ಶ್ರೀಮತಿ ವಸುಧಾ ಶರ್ಮಾ ತಿಳಿಸಿದರು.
ಅವರು ನಗರದ ಗಾಂಧಿನಗರದ ಗಂಗಾ ಆತ್ಮ ಬಂಧು ಸ್ವಸಹಾಯ ಸಂಘದ ಸದಸ್ಯೆ ಎಸ್. ರೋಹಿಣಿ ಶರ್ಮಾ ಅವರ ಮನೆಯಲ್ಲಿ ಆಯೋಜಿಸಲಾಗಿದ್ದ 'ವಂದೇಮಾತರಂ' ಕಂಠಪಾಠ ಅಭಿಯಾನವನ್ನು ಉದ್ಘಾಟಿಸಿ, ಸಂಘದ ಸದಸ್ಯರಿಗೆ ಗೀತೆಯ ತರಬೇತಿ ನೀಡಿ ಮಾತನಾಡಿದರು. ಈ ಅಭಿಯಾನಕ್ಕೆ ಗಂಗಾ ಆತ್ಮ ಬಂಧು ಸ್ವಸಹಾಯ ಸಂಘವು ಕೈಜೋಡಿಸಿರುವುದು ಸಂತಸ ತಂದಿದೆ ಎಂದು ಅವರು ಹರ್ಷ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಸಂಘದ ಅಧ್ಯಕ್ಷೆ ಶ್ರೀಮತಿ ಆರತಿ ಅಶೋಕ್ ಹಾಗೂ ಕಾರ್ಯದರ್ಶಿ ಶ್ರೀಮತಿ ದಿವ್ಯ ಸುಬ್ರಹ್ಮಣ್ಯ ಅವರು ಅತಿಥಿಗಳಿಗೆ ಹೂಗುಚ್ಚ ನೀಡಿ ಅಭಿಯಾನಕ್ಕೆ ಚಾಲನೆ ನೀಡಿದರು. ಕುಮಾರಿ ಅಚಲ ಪ್ರಾರ್ಥನೆ ಮಾಡಿದರು. ಸಂಘದ ಸದಸ್ಯೆ ಶ್ರೀಮತಿ ರೋಹಿಣಿ ಶರ್ಮ ಸ್ವಾಗತಿಸಿದರು ಮತ್ತು ಶ್ರೀಮತಿ ಶಾಂತ ವಂದನಾರ್ಪಣೆಗೈದರು. ಕಾರ್ಯಕ್ರಮದಲ್ಲಿ ಸಂಘದ ಸದಸ್ಯರು ಉಪಸ್ಥಿತರಿದ್ದು ತರಬೇತಿ ಪಡೆದರು


