ಸಮಯದ ಮೌಲ್ಯ ಅರಿಯದ ಇಂದಿನ ಯುವಪೀಳಿಗೆ: ಪ್ರಾಚಾರ್ಯ ಡಾ. ಕೆ.ಎಸ್. ಕಾಂಬಳೆ
ರಾಯಬಾಗ: ಇಂದಿನ ವಿದ್ಯಾರ್ಥಿಗಳು ಅಮೂಲ್ಯ ಸಮಯವನ್ನು ವ್ಯರ್ಥಗೊಳಿಸುತ್ತಾ ಮೊಬೈಲ್ ಬಳಕೆಗೆ ಅತಿಯಾಗಿ ದಾಸರಾಗುತ್ತಿರುವುದು ತೀವ್ರ ವಿಷಾದನೀಯ ಎಂದು ರಾಯಬಾಗದ ಆರ್.ವಿ.ಆರ್. ಸಂಯುಕ್ತ ಪದವಿ ಪೂರ್ವ ಮಹಾವಿದ್ಯಾಲಯದ ಪ್ರಾಚಾರ್ಯರು, ಪ್ರಬುದ್ಧ ಚಿಂತಕ ಡಾ. ಕೆ.ಎಸ್. ಕಾಂಬಳೆ ಕಳವಳ ವ್ಯಕ್ತಪಡಿಸಿದರು. ಮಾಧ್ಯಮಗಳೊಂದಿಗೆ ತಮ್ಮ ಅನಿಸಿಕೆಯನ್ನು ಹಂಚಿಕೊಂಡ ಅವರು, ವಿದ್ಯಾರ್ಥಿಗಳಲ್ಲಿ ಅಧ್ಯಯನದ ಕಡೆಗೆ ಇರಬೇಕಾದ ಆಸಕ್ತಿ, ಶಿಸ್ತು ಮತ್ತು ಬದ್ಧತೆ ಕ್ರಮೇಣ ಕ್ಷೀಣಿಸುತ್ತಿರುವುದು ಆತಂಕಕಾರಿ ಬೆಳವಣಿಗೆ ಎಂದು ಅಭಿಪ್ರಾಯಪಟ್ಟರು.
ಪೋಷಕರ ತ್ಯಾಗಕ್ಕೆ ಬೆಲೆ ನೀಡಲಿ
ತಂದೆ-ತಾಯಿಗಳು ತಮ್ಮ ಮಕ್ಕಳ ಉಜ್ವಲ ಭವಿಷ್ಯಕ್ಕಾಗಿ ಹಗಲಿರುಳು ಶ್ರಮಿಸುತ್ತಾರೆ. ಅವರ ಪರಿಶ್ರಮ, ತ್ಯಾಗ ಮತ್ತು ಕನಸುಗಳನ್ನು ಅರಿತು ವಿದ್ಯಾರ್ಥಿಗಳು ಶ್ರದ್ಧೆಯಿಂದ ಅಧ್ಯಯನ ಮಾಡಬೇಕು. ಆದರೆ, ಸಾಮಾಜಿಕ ಜಾಲತಾಣಗಳು ಹಾಗೂ ಅನಗತ್ಯ ಡಿಜಿಟಲ್ ಆಕರ್ಷಣೆಗಳಿಗೆ ಮಾರುಹೋಗಿ, ಕಲಿಕೆಯ ಅಮೂಲ್ಯ ಅವಕಾಶಗಳನ್ನು ಕೈಚೆಲ್ಲುತ್ತಿರುವುದು ಕಟು ವಾಸ್ತವವಾಗಿದೆ ಎಂದು ಅವರು ಹೇಳಿದರು.
ಸಮಯದ ಸದ್ಬಳಕೆಯೇ ಯಶಸ್ಸಿನ ಮೆಟ್ಟಿಲು
ದಿನದ ಅಮೂಲ್ಯ ಗಂಟೆಗಳನ್ನು ಮೊಬೈಲ್ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಕಳೆಯುವ ವಿದ್ಯಾರ್ಥಿಗಳು ತಮ್ಮ ಜ್ಞಾನವೃದ್ಧಿ, ವ್ಯಕ್ತಿತ್ವ ವಿಕಸನ ಹಾಗೂ ಭವಿಷ್ಯದ ಗುರಿಗಳತ್ತ ಗಮನಹರಿಸಲು ವಿಫಲರಾಗುತ್ತಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ವಿದ್ಯಾರ್ಥಿಗಳಿಂದ ನಾಡು ಮತ್ತು ರಾಷ್ಟ್ರದ ಅಭಿವೃದ್ಧಿಗೆ ಏನನ್ನು ನಿರೀಕ್ಷಿಸಲು ಸಾಧ್ಯ? ಎಂದು ಡಾ. ಕಾಂಬಳೆ ಪ್ರಶ್ನಿಸಿದರು. ಮೊಬೈಲ್ ತಂತ್ರಜ್ಞಾನ ಜ್ಞಾನಾರ್ಜನೆಗೆ ಪೂರಕವಾಗಬೇಕೇ ಹೊರತು, ವಿದ್ಯಾರ್ಥಿಗಳ ಬದುಕಿನ ಗುರಿಯನ್ನೇ ಮರೆಸುವ ಸಾಧನವಾಗಬಾರದು. ಸಮಯದ ಮೌಲ್ಯವನ್ನು ಅರಿತು, ಶಿಸ್ತು ಮತ್ತು ಪರಿಶ್ರಮವನ್ನು ಜೀವನದ ಅವಿಭಾಜ್ಯ ಅಂಗವಾಗಿಸಿಕೊಂಡಾಗ ಮಾತ್ರ ಯಶಸ್ಸು ಸಾಧ್ಯ ಎಂದು ಡಾ. ಕೆ ಎಸ್ ಕಾಂಬಳೆ ವ್ಯಾಖ್ಯಾನಿಸಿದರು.
- ಡಾ. ಜಯವೀರ ಎ. ಕೆ., ಖೇಮಲಾಪುರ

