ಮಕ್ಕಳ ಹಕ್ಕುಗಳನ್ನು ಗೌರವಿಸಿ ರಕ್ಷಿಸುವುದು ಎಲ್ಲರ ಜವಾಬ್ದಾರಿ

Shreya Hegde
0




ಹಾಸನ: ಮಕ್ಕಳು ದೇಶದ ಭವಿಷ್ಯದ ಆಸ್ತಿ. ಅವರ ಸುರಕ್ಷತೆ, ಶಿಕ್ಷಣ ಮತ್ತು ಸರ್ವತೋಮುಖ ಬೆಳವಣಿಗೆಗೆ ನಮ್ಮೆಲ್ಲರ ಹಾಗೂ ಸಮಾಜದ ಬೆಂಬಲ ಅಗತ್ಯವಾಗಿದೆ. ಪ್ರತಿ ಮಗುವೂ ತನ್ನ ಹಕ್ಕುಗಳ ಕುರಿತು ಅರಿವು ಮೂಡಿಸುವ ಮತ್ತು ಅನ್ಯಾಯದ ವಿರುದ್ಧ ಧ್ವನಿ ಎತ್ತುವ ಶಕ್ತಿಯನ್ನು ಮೈಗೂಡಿಸಿಕೊಳ್ಳಬೇಕು ಎಂದು ಜಿ.ಜಿ.ಜೆ.ಸಿ. ಪ್ರಧಾನ ಪ್ರೌಢಶಾಲಾ ಹಿರಿಯ ಶಿಕ್ಷಕರಾದ ಹೆಚ್.ಪಿ. ಮಂಜಳ ಹೇಳಿದರು.


ನಗರದ ಆರ್.ಸಿ.ರಸ್ತೆಯ ಜಿ.ಜಿ.ಜಿ.ಸಿ‌ (ಪ್ರಧಾನ), ಪ್ರೌಢಶಾಲಾ ವಿಭಾಗದಲ್ಲಿ ಏರ್ಪಾಟಾಗಿದ್ದ ಪ್ಯಾನ್ ಇಂಡಿಯಾ ಅರಿವು ನೆರವು ಮೊದಲ ಹಂತದಲ್ಲಿ ಆಯೋಜಿಸಿದ್ದ ಮಕ್ಕಳಿಗಾಗಿ ಕಾನೂನು ಅರಿವು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಹೆಚ್.ಪಿ. ಮಂಜುಳ ಅವರು ಮಾತನಾಡಿ, "ಶಾಲಾ ಹಂತದಲ್ಲೇ ಮಕ್ಕಳಿಗೆ ಈ ರೀತಿಯ ಕಾನೂನು ಅರಿವು ನೀಡುವುದು ಅವರಲ್ಲಿ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ. ಶಿಕ್ಷಕರು ಮತ್ತು ಪೋಷಕರು ಮಕ್ಕಳೊಂದಿಗೆ ಸ್ನೇಹಪರ ವಾತಾವರಣವನ್ನು ನಿರ್ಮಿಸಬೇಕು" ಎಂದರು.


ಕಾರ್ಯಕ್ರಮದ ಸಂಚಾಲಕ ಶಿಕ್ಷಕರಾದ ಕೆ.ಎನ್. ಚಿದಾನಂದ ಮಾತನಾಡಿ ಮಕ್ಕಳ ಹಕ್ಕುಗಳ ರಕ್ಷಣೆ ಮತ್ತು ಕಾನೂನು ಜಾಗೃತಿ ಮೂಡಿಸುವ ಉದ್ದೇಶದಿಂದ "ಪ್ಯಾನ್ ಇಂಡಿಯಾ- ಮಕ್ಕಳ ಹಕ್ಕುಗಳು- ಕಾನೂನು ಅರಿತು ನೆರವು " ಎಂಬುದು ಒಂದು ಅರ್ಥಪೂರ್ಣವಾದ  ಕಾರ್ಯಕ್ರಮವಾಗಿದ್ದು, ಇಂದು "ಮಾತನಾಡು, ಹೇಳು, ರಕ್ಷಿಸು" ಎಂಬ ಧ್ಯೇಯ ವಾಕ್ಯದೊಂದಿಗೆ ನಡೆಯುತ್ತಿದೆ. ಮಾತನಾಡು ಅಂದರೆ ಮಕ್ಕಳು ತಮ್ಮ ಮೇಲಾಗುವ ಯಾವುದೇ ರೀತಿಯ ದೌರ್ಜನ್ಯ, ತಾರತಮ್ಯ ಅಥವಾ ತೊಂದರೆಗಳ ಬಗ್ಗೆ ಮೌನವಾಗಿರದೆ, ಮುಕ್ತವಾಗಿ ಮಾತನಾಡಲು ಕಲಿಯಬೇಕು. ಹೇಳು ಎಂದರೆ ಮಕ್ಕಳು ತಮಗಾಗುವ ಸಮಸ್ಯೆಗಳನ್ನು ತಂದೆ-ತಾಯಿ, ಶಿಕ್ಷಕರು ಅಥವಾ ನಂಬಿಕಸ್ಥ ಹಿರಿಯರಿಗೆ ತಕ್ಷಣ ತಿಳಿಸಬೇಕು. ರಕ್ಷಿಸು ಎಂಬುದು ಪ್ರತಿಯೊಬ್ಬ ಮಗುವೂ ತನ್ನ ಸ್ವಂತ ಸುರಕ್ಷತೆಯ ಜೊತೆಗೆ ತನ್ನ ಸುತ್ತಮುತ್ತಲಿನ ಇತರ ಮಕ್ಕಳ ಹಕ್ಕುಗಳನ್ನು ಗೌರವಿಸಿ ರಕ್ಷಿಸುವ ಜವಾಬ್ದಾರಿ ಹೊಂದಿರಬೇಕು ಎಂಬುದಾಗಿದೆ. ಅದಲ್ಲದೇ ಪ್ಯಾನ್ ಇಂಡಿಯಾ ಅಭಿಯಾನದ ಮೂಲಕ ದೇಶಾದ್ಯಂತ ಮಕ್ಕಳ ಹಕ್ಕುಗಳ ಜಾಗೃತಿ ಮೂಡಿಸುವ ಕಾರ್ಯ ನಿರಂತರವಾಗಿ ನಡೆಯುತ್ತಿದೆ. ಇಂದಿನ ಯುವ ಪೀಳಿಗೆಗೆ ಕಾನೂನು ಜಾಗೃತಿ ತಲುಪಿಸುವುದೇ ಪ್ರಮುಖ ಗುರಿಯಾಗಿದೆ ಎಂದರು.


ಮುಖ್ಯ ಅತಿಥಿ ಹಾಗೂ ಹಿಂದಿ ವಿಷಯ ಶಿಕ್ಷಕರಾದ ಎ.ವಿ. ಗೀತಾರಾಣಿ ಅವರು ಮಾತನಾಡಿ, "ಮಕ್ಕಳ ಮೇಲಿನ ದೌರ್ಜನ್ಯ ತಡೆಯಲು ಕಾನೂನು ಅರಿವು ಅತ್ಯಂತ ಪ್ರಮುಖವಾಗಿದೆ. ಪೊಕ್ಸೋ ಕಾಯ್ದೆ, ಉಚಿತ ಮತ್ತು ಕಡ್ಡಾಯ ಶಿಕ್ಷಣ ಹಕ್ಕು, ಬಾಲಕಾರ್ಮಿಕ ಪದ್ಧತಿ ನಿಷೇಧ ಕಾಯ್ದೆ ಮುಂತಾದ ಕಾನೂನುಗಳು ಮಕ್ಕಳ ರಕ್ಷಣೆಗೆ ಬದ್ಧವಾಗಿವೆ. ಮಕ್ಕಳಿಗೆ ಯಾವುದೇ ತೊಂದರೆಯಾದಾಗ 1098 ಸಂಪರ್ಕಿಸಿ ನೆರವು ಪಡೆಯಬಹುದು" ಎಂದು ಮಾಹಿತಿ ನೀಡಿದರು.


ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿ, ಅವರ ಸಂಶಯಗಳಿಗೆ ಸೂಕ್ತ ಉತ್ತರ ಹಾಗೂ ಸ್ಪಷ್ಟನೆಗಳನ್ನು ಪಡೆಯುವುದು, ಮಕ್ಕಳಲ್ಲಿ ಅರಿವು, ಧೈರ್ಯ ಮತ್ತು ಜಾಗೃತಿಯನ್ನು ಮೂಡಿಸುವುದು. ಮಕ್ಕಳ ಹಕ್ಕುಗಳನ್ನು ಎತ್ತಿಹಿಡಿಯುವಲ್ಲಿ ಪ್ರತಿಯೊಬ್ಬರ ಪಾತ್ರವೂ ಮುಖ್ಯವಾಗಿದೆ. ಆಗ ಮಾತ್ರ "ಮಾತನಾಡು, ಹೇಳು, ರಕ್ಷಿಸು" ಎಂಬ ಸಂದೇಶವು ಅರ್ಥಪೂರ್ಣವಾಗುತ್ತದೆ ಎಂದರು. ಶಿಕ್ಷಕರಾದ ಎಸ್. ಕೆ. ಪೂರ್ಣಿಮಾ, ಎಂ.ಆರ್. ರಂಗಾಮಣಿ ಮತ್ತು ಅಹಲ್ಯ ಅವರು ವಿದ್ಯಾರ್ಥಿಗಳಿಗೆ ಕಾನೂನು ಅರಿವಿನ ಮಹತ್ವವನ್ನು ವಿವರಿಸಿ, ದಿನನಿತ್ಯದ ಜೀವನದಲ್ಲಿ ಸುರಕ್ಷತಾ ಕ್ರಮಗಳನ್ನು ಹೇಗೆ ಪಾಲಿಸಬೇಕು ಎಂಬುದನ್ನು ತಿಳಿಸಿದರು. ಶಿಕ್ಷಕರು, ಸಿಬ್ಬಂದಿ ವರ್ಗ, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top