ಸಿಯಾಟಲ್‌ನಲ್ಲಿ ಪುತ್ತಿಗೆ ಶ್ರೀಗಳಿಗೆ ವೈಭವದ ಗುರುವಂದನಾ ಮಹೋತ್ಸವ

Shreya Hegde
0

ಸಿಯಾಟಲ್‌ನಲ್ಲಿ ಶ್ರೀವೆಂಕಟಕೃಷ್ಣನಿಗೆ ಭವ್ಯ ದೇವಾಲಯ ನಿರ್ಮಾಣವಾಗಲಿ: ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು




ಸಿಯಾಟಲ್, ಅಮೆರಿಕ: ಉಡುಪಿ ಶ್ರೀಪುತ್ತಿಗೆ ಮಠದ ಪರಮಪೂಜ್ಯ ಯತಿಕುಲ ಚಕ್ರವರ್ತಿ ಶ್ರೀ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು ತಮ್ಮ ಐತಿಹಾಸಿಕ ಚತುರ್ಥ ವಿಶ್ವಗೀತಾ ಪರ್ಯಾಯವನ್ನು ಯಶಸ್ವಿಯಾಗಿ ಪೂರೈಸಿದ ಹಿನ್ನೆಲೆಯಲ್ಲಿ, ಸಿಯಾಟಲ್ ಶ್ರೀಕೃಷ್ಣ ವೃಂದಾವನದ ವತಿಯಿಂದ ಶ್ರೀಪಾದರಿಗೆ ವೈಭವಪೂರ್ಣ ಗುರುವಂದನಾ ಮಹೋತ್ಸವವನ್ನು ಭಕ್ತಿಶ್ರದ್ಧೆಯಿಂದ ನೆರವೇರಿಸಲಾಯಿತು.


ಗುರುವಂದನೆ ಸ್ವೀಕರಿಸಿ ಆಶೀರ್ವಚನ ನೀಡಿದ ಶ್ರೀಪಾದರು, ಸಿಯಾಟಲ್ ಮಹಾನಗರವನ್ನು ‘ಶ್ರೀಅಚಲ’ ಎಂದು ಬಣ್ಣಿಸಿದರು. ಶ್ರೀ ಎಂದರೆ ಲಕ್ಷ್ಮೀದೇವಿ, ಅಚಲ ಎಂದರೆ ಪರ್ವತ. ಲಕ್ಷ್ಮೀದೇವಿಯ ಅನುಗ್ರಹವಿರುವ ಈ ಸಮೃದ್ಧ ನಗರದಲ್ಲಿ ಶ್ರೀಕೃಷ್ಣನು ನೆಲೆಸಿರುವುದು ಭಕ್ತರ ಶ್ರದ್ಧೆಯ ಫಲವಾಗಿದೆ ಎಂದರು. ಸಿಯಾಟಲ್‌ನಲ್ಲಿ ಈಗಾಗಲೇ ಶ್ರೀಕೃಷ್ಣ ವೃಂದಾವನ ಸ್ಥಾಪನೆಯಾಗಿದ್ದು, ಪ್ರಸ್ತುತ ಬಾಡಿಗೆ ಕಟ್ಟಡದಲ್ಲಿರುವ ಶ್ರೀಕೃಷ್ಣನಿಗೆ ಆದಷ್ಟು ಬೇಗ ಭವ್ಯವಾದ ಶಾಶ್ವತ ದೇವಾಲಯವನ್ನು ನಿರ್ಮಿಸಿಕೊಡಬೇಕು. ಭಕ್ತರೆಲ್ಲರೂ ಒಗ್ಗಟ್ಟಿನಿಂದ ಈ ಮಹತ್ಕಾರ್ಯವನ್ನು ನೆರವೇರಿಸಬೇಕೆಂದು ಕರೆ ನೀಡಿದರು.


ಚತುರ್ಥ ವಿಶ್ವಗೀತಾ ಪರ್ಯಾಯದ ಮೂಲಕ ಲೋಕಕಲ್ಯಾಣಕ್ಕಾಗಿ ಕೈಗೊಂಡ ಶ್ರೀಕೃಷ್ಣಾರಾಧನೆ ಹಾಗೂ ಕೋಟಿ ಗೀತಾ ಲೇಖನ ಯಜ್ಞದ ಮಹತ್ವವನ್ನು ವಿವರಿಸಿದ ಶ್ರೀಪಾದರು, ಭಗವದ್ಗೀತೆಯ ಪ್ರಚಾರವನ್ನು ಮುಂದುವರಿಸಿ ಮಕ್ಕಳು ಮತ್ತು ಯುವಜನರನ್ನು ಈ ಮಹಾಯಜ್ಞದಲ್ಲಿ ಭಾಗಿಗಳನ್ನಾಗಿ ಮಾಡಬೇಕೆಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಮನೋಗೌರ್ ಅವರು ಸ್ವಾಗತಿಸಿ, ಸಿಯಾಟಲ್‌ನ ಸಮಸ್ತ ಭಕ್ತರ ಪರವಾಗಿ ಶ್ರೀಪಾದರಿಗೆ ಗುರುವಂದನೆ ಸಲ್ಲಿಸಿದರು. ಶ್ರೀಕೃಷ್ಣ ವೃಂದಾವನದ ಸ್ಥಾಪನೆ ಹಾಗೂ ಅಭಿವೃದ್ಧಿಗೆ ಶ್ರೀಪಾದರು ನೀಡಿರುವ ಮಾರ್ಗದರ್ಶನವನ್ನು ಕೃತಜ್ಞತೆಯಿಂದ ಸ್ಮರಿಸಿದರು.


ಮಾಧವ ರಾವ್ ಕುಲಕರ್ಣಿ ಅವರು ಶ್ರೀಪಾದರ ಚತುರ್ಥ ವಿಶ್ವಗೀತಾ ಪರ್ಯಾಯದ ಅದ್ಭುತ ಸಾಧನೆಗಳು ಹಾಗೂ ಲೋಕಕಲ್ಯಾಣಕ್ಕಾಗಿ ಕೈಗೊಂಡ ವಿಶಿಷ್ಟ ಸೇವಾಕಾರ್ಯಗಳನ್ನು ವಿವರಿಸಿದರು. ಭಾರತೀಯ ಕಾನ್ಸುಲೇಟ್‌ನ ಪ್ರತಿನಿಧಿ ಶ್ರೀ ಪ್ರಕಾಶ್ ಗುಪ್ತಾ ಅವರು ಶ್ರೀಪಾದರ ವಿಶ್ವವ್ಯಾಪಿ ಧರ್ಮಪ್ರಚಾರ ಹಾಗೂ ಭಾರತೀಯ ಸಂಸ್ಕೃತಿಯ ಸಂರಕ್ಷಣೆಗೆ ನೀಡುತ್ತಿರುವ ಕೊಡುಗೆಯನ್ನು ಶ್ಲಾಘಿಸಿ, ಕಾರ್ಯಕ್ರಮದಲ್ಲಿ ಭಾಗವಹಿಸಿರುವುದಕ್ಕೆ ಸಂತಸ ವ್ಯಕ್ತಪಡಿಸಿದರು.


ಈ ಸಂದರ್ಭದಲ್ಲಿ ಭಕ್ತರು ಶ್ರೀಪಾದರಿಗೆ ಪುಷ್ಪಹಾರ, ಶಾಲು ಹಾಗೂ ವಿಶೇಷ ಕಿರೀಟವನ್ನು ಸಮರ್ಪಿಸಿ ಗೌರವಪೂರ್ವಕವಾಗಿ ಗುರುವಂದನೆ ಸಲ್ಲಿಸಿದರು. ದೀಪಿಕಾ ಅವರು ಕಾರ್ಯಕ್ರಮವನ್ನು ನಿರೂಪಿಸಿದರು. ಪ್ರಸಾದ್ ಅವರು ವಂದನಾರ್ಪಣೆ ಸಲ್ಲಿಸಿದರು. ಮಠದ ಪ್ರಸಾದಾಚಾರ್ಯರು, ಅಂತಾರಾಷ್ಟ್ರೀಯ ಕಾರ್ಯದರ್ಶಿ ಪ್ರಸನ್ನಾಚಾರ್ಯರು, ದಿವಾನ್ ನಾಗರಾಜ ಆಚಾರ್ಯರು, ಸಿಯಾಟಲ್ ಶ್ರೀಕೃಷ್ಣ ವೃಂದಾವನದ ಪ್ರಧಾನ ಅರ್ಚಕ ಜಾರ್ಕಳ ಶ್ರೀಪತಿ ತಂತ್ರಿ,ಹಾಗೂ ಫೀನಿಕ್ಸ್ ಶ್ರೀವೆಂಕಟಕೃಷ್ಣ ಕ್ಷೇತ್ರದ ಪ್ರಧಾನ ಅರ್ಚಕ ಶ್ರೀ ಕಿರಣ್ ಅವರು ಉಪಸ್ಥಿತರಿದ್ದರು. ಸುರೇಶ್ ಭಟ್ ಹಾಗೂ ಸಿಯಾಟಲ್ ಶ್ರೀಕೃಷ್ಣ ವೃಂದಾವನದ ಕಾರ್ಯಕರ್ತರ ಸಹಕಾರದೊಂದಿಗೆ ಕಾರ್ಯಕ್ರಮವು ಅತ್ಯಂತ ಯಶಸ್ವಿಯಾಗಿ ಸಂಪನ್ನಗೊಂಡಿತು.

Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top