* ಖಾಲಿ ಸೀಟುಗಳಿಗಿಂತ ಗುಣಮಟ್ಟ, ಸ್ಪರ್ಧೆ ಮತ್ತು ಸಮಾನತೆಗೆ ಆದ್ಯತೆ
* ಹೊಸ ಪಿಯು ಕಾಲೇಜುಗಳಿಗೆ ಮೂರು ವರ್ಷಗಳ ವಿರಾಮ
ಕರ್ನಾಟಕದಲ್ಲಿ ಮುಂದಿನ ಮೂರು ಶೈಕ್ಷಣಿಕ ವರ್ಷಗಳಲ್ಲಿ (2027-30) ಹೊಸ ಖಾಸಗಿ ಪದವಿಪೂರ್ವ (ಪಿಯು) ಕಾಲೇಜುಗಳ ಸ್ಥಾಪನೆಗೆ ಅನುಮತಿ ನೀಡದಿರಲು ಪದವಿಪೂರ್ವ ಶಿಕ್ಷಣ ಇಲಾಖೆ ನಿರ್ಧರಿಸಿರುವುದು ಶೈಕ್ಷಣಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ. ರಾಜ್ಯದಲ್ಲಿ ಈಗಾಗಲೇ ಹೆಚ್ಚಿನ ಸಂಖ್ಯೆಯಲ್ಲಿ ಪಿಯು ಕಾಲೇಜುಗಳು ಮತ್ತು ಸೀಟುಗಳು ಲಭ್ಯವಿರುವುದರಿಂದ, ಹೊಸ ಸಂಸ್ಥೆಗಳ ಸ್ಥಾಪನೆಗೆ ವಿರಾಮ ನೀಡುವ ಮೂಲಕ ಅಸ್ತಿತ್ವದಲ್ಲಿರುವ ಸಂಪನ್ಮೂಲಗಳ ಸಮರ್ಪಕ ಬಳಕೆ ಹಾಗೂ ಕಾಲೇಜುಗಳ ಗುಣಮಟ್ಟ ಸುಧಾರಣೆಗೆ ಆದ್ಯತೆ ನೀಡುವುದು ಇಲಾಖೆಯ ಉದ್ದೇಶವಾಗಿದೆ. ಆದರೆ ಶಿಕ್ಷಣವು ಕೇವಲ ಬೇಡಿಕೆ ಮತ್ತು ಪೂರೈಕೆಯ ಆಧಾರದಲ್ಲಿ ನಿರ್ಧರಿಸಬಹುದಾದ ಕ್ಷೇತ್ರವಲ್ಲ. ಹೀಗಾಗಿ ಈ ನಿರ್ಧಾರವನ್ನು ಆರ್ಥಿಕ ದಕ್ಷತೆ, ಆರೋಗ್ಯಕರ ಸ್ಪರ್ಧೆ, ಪ್ರಾದೇಶಿಕ ಸಮತೋಲನ ಮತ್ತು ಸಾಮಾಜಿಕ ನ್ಯಾಯದ ದೃಷ್ಟಿಯಿಂದ ಪರಿಶೀಲಿಸುವುದು ಅಗತ್ಯವಾಗಿದೆ.
ಪ್ರಸ್ತುತ ಶೈಕ್ಷಣಿಕ ಚಿತ್ರಣ
ಕರ್ನಾಟಕದಲ್ಲಿ ಪ್ರಸ್ತುತ 5,000ಕ್ಕೂ ಅಧಿಕ ಪಿಯು ಕಾಲೇಜುಗಳಿದ್ದು, ಅವುಗಳಲ್ಲಿ 1,229 ಸರ್ಕಾರಿ, 797 ಖಾಸಗಿ ಅನುದಾನಿತ, 3,147 ಖಾಸಗಿ ಅನುದಾನರಹಿತ ಹಾಗೂ 178 ಇತರ ಕಾಲೇಜುಗಳಿವೆ. ರಾಜ್ಯದಲ್ಲಿ ಲಭ್ಯವಿರುವ ಒಟ್ಟು ಪಿಯು ಸೀಟುಗಳ ಸಂಖ್ಯೆ ವಿದ್ಯಾರ್ಥಿಗಳ ವಾರ್ಷಿಕ ದಾಖಲಾತಿಗಿಂತ ಹೆಚ್ಚಾಗಿದೆ. ಪ್ರತಿವರ್ಷ ಸುಮಾರು ಎಂಟು ಲಕ್ಷ ವಿದ್ಯಾರ್ಥಿಗಳು ಎಸ್ಎಸ್ಎಲ್ಸಿ ಪರೀಕ್ಷೆ ಬರೆಯುತ್ತಿದ್ದು, ಈ ಶೈಕ್ಷಣಿಕ ವರ್ಷದಲ್ಲಿ ಶೇ.98ಕ್ಕೂ ಅಧಿಕ ಫಲಿತಾಂಶದೊಂದಿಗೆ ಏಳು ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಆದರೂ ಪಿಯು ಕಾಲೇಜುಗಳಲ್ಲಿ ಲಕ್ಷಾಂತರ ಸೀಟುಗಳು ಖಾಲಿ ಉಳಿಯುತ್ತಿರುವುದು ಗಮನಾರ್ಹ. ವಿದ್ಯಾರ್ಥಿಗಳ ಸಂಖ್ಯೆಗೆ ಹೋಲಿಸಿದರೆ ಕಾಲೇಜುಗಳು ಮತ್ತು ಸೀಟುಗಳ ಲಭ್ಯತೆ ಹೆಚ್ಚಿರುವ ಈ ಪರಿಸ್ಥಿತಿಯೇ ಹೊಸ ಕಾಲೇಜುಗಳ ಸ್ಥಾಪನೆಗೆ ತಾತ್ಕಾಲಿಕ ವಿರಾಮ ನೀಡುವ ನಿರ್ಧಾರಕ್ಕೆ ಪ್ರಮುಖ ಹಿನ್ನೆಲೆಯಾಗಿದೆ.
ಆರ್ಥಿಕ ದೃಷ್ಟಿಕೋನ: ಬೇಡಿಕೆ, ಪೂರೈಕೆ ಮತ್ತು ಮಾರುಕಟ್ಟೆ ವೈಫಲ್ಯ
ಅರ್ಥಶಾಸ್ತ್ರದ ಮೂಲತತ್ತ್ವದ ಪ್ರಕಾರ ಯಾವುದೇ ಕ್ಷೇತ್ರದಲ್ಲಿ ಬೇಡಿಕೆಗಿಂತ ಪೂರೈಕೆ ನಿರಂತರವಾಗಿ ಹೆಚ್ಚಾದರೆ ಸಂಪನ್ಮೂಲಗಳ ಸಮರ್ಪಕ ಬಳಕೆಗೆ ಅಡ್ಡಿಯಾಗುತ್ತದೆ. ಪಿಯು ಶಿಕ್ಷಣ ಕ್ಷೇತ್ರದಲ್ಲಿಯೂ ವಿದ್ಯಾರ್ಥಿಗಳ ಸಂಖ್ಯೆಗೆ ಹೋಲಿಸಿದರೆ ಕಾಲೇಜುಗಳು ಮತ್ತು ಸೀಟುಗಳು ಹೆಚ್ಚಾದಾಗ ಕಟ್ಟಡ, ಪ್ರಯೋಗಾಲಯ, ಗ್ರಂಥಾಲಯ, ಬೋಧಕ ಸಿಬ್ಬಂದಿ ಮತ್ತು ಇತರ ಮೂಲಸೌಕರ್ಯಗಳ ಪೂರ್ಣ ಬಳಕೆ ಸಾಧ್ಯವಾಗುವುದಿಲ್ಲ. ಇದರಿಂದ ಬಂಡವಾಳ ಹೂಡಿಕೆಯ ನಿರೀಕ್ಷಿತ ಪ್ರಯೋಜನ ಕಡಿಮೆಯಾಗಿ, ಸಂಪನ್ಮೂಲಗಳ ಅಪವ್ಯಯಕ್ಕೆ ಕಾರಣವಾಗಬಹುದು. ವಿದ್ಯಾರ್ಥಿಗಳನ್ನು ಆಕರ್ಷಿಸಲು ಕೆಲವು ಖಾಸಗಿ ಕಾಲೇಜುಗಳು ಉಚಿತ ಪ್ರವೇಶ, ರಿಯಾಯಿತಿ ಮತ್ತು ವಿವಿಧ ಆಕರ್ಷಕ ಕೊಡುಗೆಗಳ ಮೂಲಕ ಸ್ಪರ್ಧಿಸುವುದರಿಂದ, ಕೆಲವೊಮ್ಮೆ ಶಿಕ್ಷಣದ ಗುಣಮಟ್ಟಕ್ಕಿಂತ ದಾಖಲಾತಿ ಸಂಖ್ಯೆಗೆ ಹೆಚ್ಚಿನ ಆದ್ಯತೆ ದೊರೆಯುವ ಸಾಧ್ಯತೆಯಿದೆ.
ಇಂತಹ ಪರಿಸ್ಥಿತಿಯನ್ನು ಅರ್ಥಶಾಸ್ತ್ರದ ದೃಷ್ಟಿಯಿಂದ ಮಾರುಕಟ್ಟೆ ವೈಫಲ್ಯ ಮತ್ತು ಮಾಹಿತಿ ಅಸಮಾನತೆಯ ಸಮಸ್ಯೆಗಳೊಂದಿಗೆ ವಿಶ್ಲೇಷಿಸಬಹುದು. ಪೋಷಕರು ಮತ್ತು ವಿದ್ಯಾರ್ಥಿಗಳಿಗೆ ಕಾಲೇಜಿನ ನೈಜ ಬೋಧನಾ ಗುಣಮಟ್ಟ, ಶಿಕ್ಷಕರ ಸಾಮರ್ಥ್ಯ ಮತ್ತು ಕಲಿಕಾ ಫಲಿತಾಂಶಗಳ ಬಗ್ಗೆ ಸಂಪೂರ್ಣ ಮಾಹಿತಿ ಲಭ್ಯವಿರುವುದಿಲ್ಲ. ಇದರಿಂದ ಆಕರ್ಷಕ ಜಾಹೀರಾತು ಮತ್ತು ಪ್ರಚಾರಕ್ಕೆ ಹೆಚ್ಚಿನ ಮಹತ್ವ ದೊರೆಯುವ ಅಪಾಯವಿದೆ. ಶಿಕ್ಷಣವು ವೈಯಕ್ತಿಕ ಪ್ರಯೋಜನದ ಜೊತೆಗೆ ಸಮಾಜದ ಆರ್ಥಿಕ ಮತ್ತು ಸಾಮಾಜಿಕ ಅಭಿವೃದ್ಧಿಗೂ ಕೊಡುಗೆ ನೀಡುವುದರಿಂದ, ಈ ಕ್ಷೇತ್ರದಲ್ಲಿ ಸರ್ಕಾರದ ನಿಯಂತ್ರಣ ಮತ್ತು ಮೇಲ್ವಿಚಾರಣೆ ಅಗತ್ಯ. ಈ ಹಿನ್ನೆಲೆಯಲ್ಲಿ ಹೊಸ ಕಾಲೇಜುಗಳ ಸ್ಥಾಪನೆಗೆ ತಾತ್ಕಾಲಿಕ ವಿರಾಮ ನೀಡುವುದು ಅಸ್ತಿತ್ವದಲ್ಲಿರುವ ಸಂಸ್ಥೆಗಳ ಗುಣಮಟ್ಟ ಸುಧಾರಣೆ ಮತ್ತು ಸಂಪನ್ಮೂಲಗಳ ಸದ್ಬಳಕೆಗೆ ಅವಕಾಶ ಕಲ್ಪಿಸಬಹುದು. ಆದರೆ ಪೂರೈಕೆ ಹೆಚ್ಚಾಗಿದೆ ಎಂಬ ಕಾರಣಕ್ಕೆ ಹೊಸ ಸಂಸ್ಥೆಗಳ ಪ್ರವೇಶವನ್ನು ಸಂಪೂರ್ಣವಾಗಿ ನಿರ್ಬಂಧಿಸುವುದು ಆರೋಗ್ಯಕರ ಸ್ಪರ್ಧೆ, ನವೀನ ಬೋಧನಾ ವಿಧಾನ ಮತ್ತು ಹೊಸ ಹೂಡಿಕೆಗೆ ಹಿನ್ನಡೆಯಾಗಬಹುದು.
ಆದ್ದರಿಂದ ಪಿಯು ಶಿಕ್ಷಣ ಕ್ಷೇತ್ರದಲ್ಲಿ ಸಂಪೂರ್ಣ ಮುಕ್ತ ಮಾರುಕಟ್ಟೆ ಅಥವಾ ಸಂಪೂರ್ಣ ನಿರ್ಬಂಧ ಎರಡೂ ಸೂಕ್ತ ಪರಿಹಾರಗಳಲ್ಲ. ಬದಲಾಗಿ, ವಿದ್ಯಾರ್ಥಿಗಳ ಅಗತ್ಯ, ಪ್ರಾದೇಶಿಕ ಬೇಡಿಕೆ ಮತ್ತು ಸಂಸ್ಥೆಗಳ ಗುಣಮಟ್ಟವನ್ನು ಆಧರಿಸಿ ಹೊಸ ಕಾಲೇಜುಗಳಿಗೆ ಅನುಮತಿ ನೀಡುವ ಸಮತೋಲಿತ ನೀತಿ ಅಗತ್ಯ. ಗುಣಮಟ್ಟದ ನಿಯಂತ್ರಣ, ಆರೋಗ್ಯಕರ ಸ್ಪರ್ಧೆ ಮತ್ತು ಸರ್ಕಾರಿ ಕಾಲೇಜುಗಳ ಬಲವರ್ಧನೆಗೆ ಆದ್ಯತೆ ನೀಡುವ ಮೂಲಕ ಆರ್ಥಿಕ ದಕ್ಷತೆ ಹಾಗೂ ಸಾಮಾಜಿಕ ನ್ಯಾಯವನ್ನು ಸಮನ್ವಯಗೊಳಿಸಬಹುದು.
ಸಾಧಕ-ಬಾಧಕಗಳು
ಹೊಸ ಕಾಲೇಜುಗಳ ಸ್ಥಾಪನೆಗೆ ಮೂರು ವರ್ಷಗಳ ವಿರಾಮ ನೀಡುವುದರಿಂದ ಅಸ್ತಿತ್ವದಲ್ಲಿರುವ ಸಂಸ್ಥೆಗಳ ಗುಣಮಟ್ಟ ಸುಧಾರಣೆ, ಮೂಲಸೌಕರ್ಯ ಅಭಿವೃದ್ಧಿ ಮತ್ತು ಬೋಧಕ ಸಿಬ್ಬಂದಿಯ ಸಾಮರ್ಥ್ಯ ವೃದ್ಧಿಗೆ ಹೆಚ್ಚಿನ ಗಮನ ನೀಡಲು ಅವಕಾಶ ದೊರೆಯಬಹುದು. ಅಲ್ಲದೆ, ಈಗಿರುವ ಶೈಕ್ಷಣಿಕ ಸಂಪನ್ಮೂಲಗಳ ಸಮರ್ಪಕ ಬಳಕೆಗೆ ಹಾಗೂ ಅನಾರೋಗ್ಯಕರ ದಾಖಲಾತಿ ಪೈಪೋಟಿಯನ್ನು ನಿಯಂತ್ರಿಸಲು ನೆರವಾಗಬಹುದು. ಆದರೆ ರಾಜ್ಯದಲ್ಲಿ ಒಟ್ಟಾರೆ ಸೀಟುಗಳು ಹೆಚ್ಚಿವೆ ಎಂಬ ಕಾರಣಕ್ಕೆ ಎಲ್ಲ ಪ್ರದೇಶಗಳಲ್ಲಿಯೂ ಕಾಲೇಜುಗಳ ಲಭ್ಯತೆ ಸಮರ್ಪಕವಾಗಿದೆ ಎಂದು ಹೇಳಲಾಗದು. ಗ್ರಾಮೀಣ ಮತ್ತು ಹಿಂದುಳಿದ ಪ್ರದೇಶಗಳಲ್ಲಿ ಹೊಸ ಕಾಲೇಜುಗಳ ಅಗತ್ಯವಿರಬಹುದು. ಸಂಪೂರ್ಣ ನಿರ್ಬಂಧದಿಂದ ವಿದ್ಯಾರ್ಥಿಗಳ ಆಯ್ಕೆಯ ಅವಕಾಶಗಳು ಕಡಿಮೆಯಾಗುವುದರ ಜೊತೆಗೆ, ಹೊಸ ಹೂಡಿಕೆ ಮತ್ತು ನವೀನ ಶಿಕ್ಷಣ ಮಾದರಿಗಳ ಪ್ರವೇಶಕ್ಕೂ ಅಡ್ಡಿಯಾಗಬಹುದು. ಆರೋಗ್ಯಕರ ಸ್ಪರ್ಧೆಯು ಕಾಲೇಜುಗಳ ಗುಣಮಟ್ಟ ಸುಧಾರಣೆಗೆ ಪ್ರೇರಣೆಯಾಗಿರುವುದರಿಂದ, ಅದನ್ನು ಉಳಿಸಿಕೊಳ್ಳುವ ಅಗತ್ಯವೂ ಇದೆ.
ಸಾಮಾಜಿಕ ಸಮಾನತೆ ಮತ್ತು ನ್ಯಾಯದ ಪ್ರಶ್ನೆ
ಶಿಕ್ಷಣವು ಕೇವಲ ಮಾರುಕಟ್ಟೆಯಲ್ಲಿ ಮಾರಾಟವಾಗುವ ಸೇವೆಯಲ್ಲ; ಅದು ಪ್ರತಿಯೊಬ್ಬ ನಾಗರಿಕನಿಗೂ ದೊರೆಯಬೇಕಾದ ಮೂಲಭೂತ ಸಾಮಾಜಿಕ ಅವಕಾಶ. ಸಂವಿಧಾನದ ಸಮಾನತೆಯ ಆಶಯ ಮತ್ತು ಸಾಮಾಜಿಕ ನ್ಯಾಯದ ಪರಿಕಲ್ಪನೆಗೆ ಅನುಗುಣವಾಗಿ ಪ್ರತಿಯೊಬ್ಬ ವಿದ್ಯಾರ್ಥಿಗೂ ಗುಣಮಟ್ಟದ ಶಿಕ್ಷಣ ಪಡೆಯುವ ಅವಕಾಶ ಕಲ್ಪಿಸುವುದು ಸರ್ಕಾರದ ಜವಾಬ್ದಾರಿಯಾಗಿದೆ.
ಇಲ್ಲಿ ಒಂದು ಪ್ರಮುಖ ಪ್ರಶ್ನೆ ಎದುರಾಗುತ್ತದೆ. ರಾಜ್ಯದಲ್ಲಿ ಒಂದು ಲಕ್ಷ ಸೀಟುಗಳು ಖಾಲಿ ಇವೆ ಎಂದಿಟ್ಟುಕೊಳ್ಳೋಣ. ಆದರೆ ಅವುಗಳಲ್ಲಿ ಬಹುಪಾಲು ನಗರ ಪ್ರದೇಶಗಳಲ್ಲಿದ್ದು, ಗ್ರಾಮೀಣ ವಿದ್ಯಾರ್ಥಿಗಳು ದೂರದ ಪ್ರಯಾಣ, ವಸತಿ ವೆಚ್ಚ ಮತ್ತು ಆರ್ಥಿಕ ಸಂಕಷ್ಟಗಳಿಂದಾಗಿ ಆ ಸೀಟುಗಳನ್ನು ಬಳಸಿಕೊಳ್ಳಲು ಸಾಧ್ಯವಾಗದಿದ್ದರೆ, ಆ ಸೀಟುಗಳ ಲಭ್ಯತೆಯನ್ನು ನೈಜ ಶೈಕ್ಷಣಿಕ ಅವಕಾಶವೆಂದು ಪರಿಗಣಿಸಲು ಸಾಧ್ಯವೇ? ಇದೇ ರೀತಿ, ಆರ್ಥಿಕವಾಗಿ ದುರ್ಬಲ ವರ್ಗಗಳು, ಹೆಣ್ಣುಮಕ್ಕಳು, ಪರಿಶಿಷ್ಟ ಜಾತಿ ಮತ್ತು ಪಂಗಡಗಳು ಹಾಗೂ ಹಿಂದುಳಿದ ಸಮುದಾಯಗಳ ವಿದ್ಯಾರ್ಥಿಗಳಿಗೆ ಸಮೀಪದಲ್ಲಿ ಗುಣಮಟ್ಟದ ಕಾಲೇಜುಗಳ ಲಭ್ಯತೆ ಅತ್ಯಂತ ಮುಖ್ಯ. ಹೀಗಾಗಿ ಸಾಮಾಜಿಕ ನ್ಯಾಯದ ದೃಷ್ಟಿಯಿಂದ ಕಾಲೇಜುಗಳ ಸಂಖ್ಯೆಯಷ್ಟೇ ಅವುಗಳ ಭೌಗೋಳಿಕ ವಿತರಣೆ, ಶುಲ್ಕದ ಕೈಗೆಟುಕುವಿಕೆ, ವಿದ್ಯಾರ್ಥಿವೇತನ, ಸಾರಿಗೆ ವ್ಯವಸ್ಥೆ ಮತ್ತು ಶಿಕ್ಷಣದ ಗುಣಮಟ್ಟವೂ ಮುಖ್ಯವಾಗುತ್ತದೆ.
ಪರ್ಯಾಯ ಮಾರ್ಗ: ನಿರ್ಬಂಧಕ್ಕಿಂತ ಅಗತ್ಯಾಧಾರಿತ ಅನುಮತಿ
ಹೊಸ ಕಾಲೇಜುಗಳ ಸ್ಥಾಪನೆಗೆ ಮೂರು ವರ್ಷಗಳ ಸಂಪೂರ್ಣ ನಿರ್ಬಂಧ ಹೇರುವ ಬದಲು, ರಾಜ್ಯದ ಶೈಕ್ಷಣಿಕ ಅಗತ್ಯಗಳಿಗೆ ಅನುಗುಣವಾಗಿ ಸಮತೋಲಿತ ನೀತಿ ರೂಪಿಸುವುದು ಸೂಕ್ತ. ಪ್ರತಿ ಜಿಲ್ಲೆ ಮತ್ತು ತಾಲ್ಲೂಕಿನಲ್ಲಿ ವಿದ್ಯಾರ್ಥಿಗಳ ಸಂಖ್ಯೆ, ಕಾಲೇಜುಗಳ ಲಭ್ಯತೆ, ಖಾಲಿ ಸೀಟುಗಳು ಹಾಗೂ ಪ್ರಯಾಣದ ದೂರವನ್ನು ಆಧರಿಸಿ ಸಮೀಕ್ಷೆ ನಡೆಸಬೇಕು. ಕಾಲೇಜುಗಳ ಕೊರತೆಯಿರುವ ಗ್ರಾಮೀಣ ಮತ್ತು ಹಿಂದುಳಿದ ಪ್ರದೇಶಗಳಲ್ಲಿ ಹೊಸ ಕಾಲೇಜುಗಳಿಗೆ ಷರತ್ತುಬದ್ಧ ಅನುಮತಿ ನೀಡಬೇಕು. ಅನುಮತಿ ನೀಡುವಾಗ ಮೂಲಸೌಕರ್ಯ, ಪ್ರಯೋಗಾಲಯ, ಗ್ರಂಥಾಲಯ ಮತ್ತು ಅರ್ಹ ಬೋಧಕ ಸಿಬ್ಬಂದಿಯ ಲಭ್ಯತೆಯನ್ನು ಪರಿಶೀಲಿಸಬೇಕು. ಜೊತೆಗೆ, ಸರ್ಕಾರಿ ಕಾಲೇಜುಗಳ ಗುಣಮಟ್ಟ ಸುಧಾರಣೆ ಹಾಗೂ ಸಂಸ್ಥೆಗಳ ಕಾರ್ಯಕ್ಷಮತೆಯನ್ನು ದಾಖಲಾತಿಯಷ್ಟೇ ಅಲ್ಲದೆ ಕಲಿಕಾ ಫಲಿತಾಂಶ ಮತ್ತು ವಿದ್ಯಾರ್ಥಿಗಳ ಸಮಗ್ರ ಬೆಳವಣಿಗೆಯ ಆಧಾರದಲ್ಲಿ ಮೌಲ್ಯಮಾಪನ ಮಾಡಬೇಕು.
ಸಂಖ್ಯೆಗಳಿಗಿಂತ ಶಿಕ್ಷಣದ ಗುಣಮಟ್ಟ ಮುಖ್ಯ
ಕರ್ನಾಟಕದ ಶಿಕ್ಷಣ ವ್ಯವಸ್ಥೆ ವಿಜ್ಞಾನ, ತಂತ್ರಜ್ಞಾನ, ಕೃತಕ ಬುದ್ಧಿಮತ್ತೆ, ಕೌಶಲ್ಯಾಧಾರಿತ ಶಿಕ್ಷಣ ಮತ್ತು ಬದಲಾಗುತ್ತಿರುವ ಉದ್ಯೋಗ ಮಾರುಕಟ್ಟೆಯ ಸವಾಲುಗಳಿಗೆ ಅನುಗುಣವಾಗಿ ರೂಪಾಂತರಗೊಳ್ಳಬೇಕಾಗಿದೆ. ಈ ಹಿನ್ನೆಲೆಯಲ್ಲಿ ಪಿಯು ಶಿಕ್ಷಣದ ಗುಣಮಟ್ಟ, ಬೋಧನಾ ವಿಧಾನಗಳು ಮತ್ತು ವಿದ್ಯಾರ್ಥಿಗಳ ಸಾಮರ್ಥ್ಯ ವೃದ್ಧಿಗೆ ಹೆಚ್ಚಿನ ಆದ್ಯತೆ ನೀಡುವುದು ಅಗತ್ಯ. ಕೇವಲ ಸೀಟುಗಳ ಸಂಖ್ಯೆಯನ್ನು ಹೆಚ್ಚಿಸುವುದರಿಂದಲೂ ಅಥವಾ ಹೊಸ ಕಾಲೇಜುಗಳ ಸ್ಥಾಪನೆಗೆ ನಿರ್ಬಂಧ ಹೇರುವುದರಿಂದಲೂ ಶಿಕ್ಷಣದ ಗುಣಮಟ್ಟ ಸುಧಾರಿಸಲು ಸಾಧ್ಯವಿಲ್ಲ.
ಮೂರು ವರ್ಷಗಳ ವಿರಾಮವನ್ನು ಈಗಿರುವ ಕಾಲೇಜುಗಳ ಮೂಲಸೌಕರ್ಯ ಸುಧಾರಣೆ, ಬೋಧಕ ಸಿಬ್ಬಂದಿಯ ಸಾಮರ್ಥ್ಯ ವೃದ್ಧಿ ಮತ್ತು ಶೈಕ್ಷಣಿಕ ಗುಣಮಟ್ಟದ ಮೌಲ್ಯಮಾಪನಕ್ಕೆ ಬಳಸಿಕೊಳ್ಳಬಹುದು. ಅದೇ ಸಂದರ್ಭದಲ್ಲಿ, ಹೊಸ ಕಾಲೇಜುಗಳ ಅಗತ್ಯವಿರುವ ಪ್ರದೇಶಗಳನ್ನು ಗುರುತಿಸಿ, ಗುಣಮಟ್ಟದ ಮಾನದಂಡಗಳನ್ನು ಪೂರೈಸುವ ಸಂಸ್ಥೆಗಳಿಗೆ ಅನುಮತಿ ನೀಡುವ ಅವಕಾಶವನ್ನೂ ಮುಕ್ತವಾಗಿಡಬೇಕು. ಇದರಿಂದ ಆರ್ಥಿಕ ದಕ್ಷತೆ, ಆರೋಗ್ಯಕರ ಸ್ಪರ್ಧೆ, ಪ್ರಾದೇಶಿಕ ಸಮತೋಲನ ಮತ್ತು ಸಾಮಾಜಿಕ ನ್ಯಾಯವನ್ನು ಒಟ್ಟಾಗಿ ಸಾಧಿಸಲು ಸಾಧ್ಯವಾಗುತ್ತದೆ.
ಶಿಕ್ಷಣದ ನಿಜವಾದ ಗುರಿ
ಶಿಕ್ಷಣದ ಯಶಸ್ಸನ್ನು ಕಾಲೇಜುಗಳ ಸಂಖ್ಯೆ ಅಥವಾ ಖಾಲಿ ಸೀಟುಗಳ ಪ್ರಮಾಣದಿಂದ ಮಾತ್ರ ಅಳೆಯಬಾರದು. ಪ್ರತಿಯೊಬ್ಬ ವಿದ್ಯಾರ್ಥಿಗೂ ಆರ್ಥಿಕ ಮತ್ತು ಭೌಗೋಳಿಕ ಅಡೆತಡೆಗಳಿಲ್ಲದೆ ಗುಣಮಟ್ಟದ ಶಿಕ್ಷಣ ಪಡೆಯುವ ಅವಕಾಶ ದೊರೆಯುವುದೇ ಶಿಕ್ಷಣ ವ್ಯವಸ್ಥೆಯ ನಿಜವಾದ ಸಾಧನೆಯಾಗಿದೆ. ವಿಶೇಷವಾಗಿ ಗ್ರಾಮೀಣ ಮತ್ತು ಹಿಂದುಳಿದ ಪ್ರದೇಶಗಳ ವಿದ್ಯಾರ್ಥಿಗಳಿಗೂ ನಗರದ ವಿದ್ಯಾರ್ಥಿಗಳಿಗೆ ದೊರೆಯುವಂತಹ ಶೈಕ್ಷಣಿಕ ಸೌಲಭ್ಯಗಳು ಮತ್ತು ಅವಕಾಶಗಳನ್ನು ಕಲ್ಪಿಸುವುದು ಸಾಮಾಜಿಕ ನ್ಯಾಯದ ದೃಷ್ಟಿಯಿಂದ ಮಹತ್ವದ್ದಾಗಿದೆ.
ಶಿಕ್ಷಣದ ಉದ್ದೇಶ ಕಾಲೇಜುಗಳ ಸಂಖ್ಯೆಯನ್ನು ಹೆಚ್ಚಿಸುವುದಷ್ಟೇ ಅಲ್ಲ; ಜ್ಞಾನ, ಕೌಶಲ್ಯ, ಮೌಲ್ಯ ಮತ್ತು ಜವಾಬ್ದಾರಿಯುತ ಮನೋಭಾವ ಹೊಂದಿರುವ ಸಮರ್ಥ, ಸ್ವಾವಲಂಬಿ ಯುವಜನತೆಯನ್ನು ರೂಪಿಸುವುದಾಗಿದೆ. ಗುಣಮಟ್ಟದ ಶಿಕ್ಷಣ, ಸಮಾನ ಅವಕಾಶ ಮತ್ತು ಆರೋಗ್ಯಕರ ಸ್ಪರ್ಧೆಯ ಸಮನ್ವಯದ ಮೂಲಕ ಕರ್ನಾಟಕದ ಪಿಯು ಶಿಕ್ಷಣ ವ್ಯವಸ್ಥೆಯನ್ನು ಇನ್ನಷ್ಟು ಸದೃಢಗೊಳಿಸುವುದು ನಮ್ಮೆಲ್ಲರ ಆಶಯವಾಗಬೇಕು.
- ಡಾ. ಎ. ಜಯಕುಮಾರ ಶೆಟ್ಟಿ, ಉಜಿರೆ


