ಮುಖ್ಯಾಂಶಗಳು
• ಕಾಂಗ್ರೆಸ್ ಸರ್ಕಾರದ ಬಗ್ಗೆ ವಿಶ್ವಾಸ ಇಲ್ಲ
• ಸಕಾರಾತ್ಮಕವಾಗಿ ಹೋರಾಟಕ್ಕೆ ಮಾರ್ಗದರ್ಶನ
• ಸವಾಲು ಎದುರಿಸಲು ಬೆಳಕು ಚೆಲ್ಲಿದ್ದಾರೆ
• ಕೇಂದ್ರ ಸರಕಾರ ಕಿತ್ತೆಸೆಯುವ ಷಡ್ಯಂತ್ರದ ವಿರುದ್ಧ ಅಭಿಯಾನ
ಬೆಂಗಳೂರು: ಹಿರಿಯೂರು ಉಪಚುನಾವಣೆಯಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಒಟ್ಟಾಗಿ ಒಂದಾಗಿ ಕೆಲಸ ಮಾಡಲಿವೆ. ಎನ್ಡಿಎ ಗೆಲುವಿಗಾಗಿ ರಣತಂತ್ರ ರೂಪಿಸುತ್ತೇವೆ ಎಂದು ಬಿಜೆಪಿ ರಾಜ್ಯ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ತಿಳಿಸಿದ್ದಾರೆ.
ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಅವರು ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದರು. ಪ್ರಶ್ನೆಗೆ ಉತ್ತರಿಸಿದ ಅವರು, ಕಾಂಗ್ರೆಸ್ ಪಕ್ಷವನ್ನು ಹೇಗೆ ಸೋಲಿಸಬೇಕು ಎಂಬುದರ ಬದಲಾಗಿ ನಾವು ಯಾವ ರೀತಿ ಗೆಲ್ಲಬೇಕು ಅನ್ನೋದರ ಬಗ್ಗೆ ರಣತಂತ್ರವನ್ನು ನಾವು ರೂಪಿಸುತ್ತೇವೆ ಎಂದು ತಿಳಿಸಿದರು.
ಹಿರಿಯೂರು ಉಪ ಚುನಾವಣೆ ಯಾವ ಕ್ಷಣದಲ್ಲಿ ಬೇಕಾದರೂ ಘೋಷಣೆ ಆಗಬಹುದು. ಇಂದಿನ ನಮ್ಮ ಕೋರ್ ಕಮಿಟಿ ಸಭೆಯಲ್ಲಿ ಸವಿಸ್ತಾರವಾಗಿ ಎಲ್ಲವನ್ನು ಕೂಡ ಚರ್ಚೆ ಮಾಡಿದ್ದೇವೆ. ಬಿಜೆಪಿ ಕೆಲವು ಪ್ರಮುಖ ನಾಯಕರೊಂದಿಗೆ, ಕುಮಾರಸ್ವಾಮಿಯವರ ಜೊತೆಗೂ ಕೂತು ಚರ್ಚೆ ಮಾಡಬೇಕು. ಯಾವ ರೀತಿ ಒಮ್ಮತದ ಅಭ್ಯರ್ಥಿಯನ್ನು ಕಣಕ್ಕೆ ಇಳಿಸಬೇಕು, ಅದರ ಬಗ್ಗೆ ಕೂತು ಚರ್ಚೆ ಮಾಡಿ ತೀರ್ಮಾನವನ್ನು ಮಾಡುತ್ತೇವೆ ಎಂದು ಹೇಳಿದರು.
ಡಿ.ಕೆ.ಶಿವಕುಮಾರ್ ಅವರು ಮುಖ್ಯಮಂತ್ರಿಗಳಾದ ಮೇಲೆ ಕಳೆದ ಎರಡು-ಮೂರು ತಿಂಗಳಲ್ಲಿ ಆಗಲೇ ಹಿರಿಯೂರಿಗೆ ಹೋಗಿ ಬಂದಿದ್ದಾರೆ. ಇತ್ತೀಚೆಗೆ ವಿಧಾನ ಪರಿಷತ್ ಚುನಾವಣೆಯ ಫಲಿತಾಂಶವನ್ನು ಕೂಡ ತಾವು ನೋಡಿದ್ದೀರಿ. ಆಡಳಿತ ಪಕ್ಷ, ಕಾಂಗ್ರೆಸ್ ಸರ್ಕಾರ ಏನೇ ಆರ್ಭಟ ನಡೆಸಿದರೂ, ಮುಖ್ಯಮಂತ್ರಿಗಳು ಏನೇ ಆರ್ಭಟ ನಡೆಸಿದರೂ ರಾಜ್ಯದ ಜನ ಈ ಸರ್ಕಾರದ ಬಗ್ಗೆ, ಕಾಂಗ್ರೆಸ್ ಸರ್ಕಾರದ ಬಗ್ಗೆ ವಿಶ್ವಾಸವನ್ನು ಕಳೆದುಕೊಂಡಿದ್ದಾರೆ ಎಂದು ತಿಳಿಸಿದರು.
ರಾಜ್ಯ ಪದಾಧಿಕಾರಿಗಳ ಸಭೆ
ಬಿಜೆಪಿ ರಾಜ್ಯ ಪದಾಧಿಕಾರಿಗಳ ಸಭೆಯು ಇಂದು ನಡೆದಿದೆ. ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಮತ್ತು ರಾಜ್ಯ ಪ್ರಭಾರಿ ಹರೀಶ್ ದ್ವಿವೇದಿ ಅವರು ಭಾಗವಹಿಸಿದ್ದರು. ಈ ಪದಾಧಿಕಾರಿಗಳ ಸಭೆಯಲ್ಲಿ ರಾಜ್ಯದಲ್ಲಿ ಸಂಘಟನೆಯನ್ನು ಹೇಗೆ ಬಲಪಡಿಸಬೇಕು ಎಂಬ ಬಗ್ಗೆ ಮಾರ್ಗದರ್ಶನ ನೀಡಿದ್ದಾರೆ ಎಂದರು.
ಇತ್ತೀಚೆಗೆ ನಡೆದ ವಿಧಾನ ಪರಿಷತ್ ಚುನಾವಣೆಯ ಫಲಿತಾಂಶದಿಂದ ರಾಜ್ಯದ ಕಾಂಗ್ರೆಸ್ ಸರ್ಕಾರದ ವಿರುದ್ಧ ನಾಡಿನ ಜನರಲ್ಲಿ ಯಾವ ರೀತಿ ಆಕ್ರೋಶ ಇದೆ ಎಂಬುದು ಮೇಲ್ನೋಟಕ್ಕೆ ಗೊತ್ತಾಗುತ್ತದೆ ಎಂದು ತಿಳಿಸಿದರು. ರಾಜ್ಯ ಸರ್ಕಾರದ ವಿರುದ್ಧ ಹಾಗೂ ಆಡಳಿತ ಪಕ್ಷದ ವಿರುದ್ಧ ಜನಾಕ್ರೋಶವಿದೆ. ನಾವು ಸಕಾರಾತ್ಮಕವಾಗಿ ಹೋರಾಟಗಳನ್ನು ಮಾಡುವುದರ ಮುಖೇನ ಸಂಘಟನೆ ಬಲಪಡಿಸಬೇಕು. ಮುಂದೆ ಬರುವಂತಹ ಜಿಬಿಎ ಚುನಾವಣೆ, ಜಿಲ್ಲಾ ಪಂಚಾಯಿತಿ, ಗ್ರಾಮ ಪಂಚಾಯಿತಿ ಚುನಾವಣೆಯಲ್ಲೂ ಕೂಡ ಹೇಗೆ ನಾವು ಮುಂದೆ ಹೋಗುವ ಕುರಿತು ತಿಳಿಸಿದ್ದಾರೆ ಎಂದು ಹೇಳಿದರು.
ಮುಂದೆ ಬರುವಂತಹ ವಿಧಾನಸಭಾ ಚುನಾವಣೆಯನ್ನು ಕಣ್ಮುಂದೆ ಇಟ್ಟುಕೊಂಡು ಕೆಲಸ ಮಾಡಬೇಕಿದೆ. ವಿಧಾನಸಭಾ ಚುನಾವಣೆ ಬಹಳ ದಿನಗಳೇನು ಉಳಿದಿಲ್ಲ. ಆದರೆ ಬಹಳಷ್ಟು ಸವಾಲುಗಳು ನಮ್ಮ ಮುಂದೆ ಇದೆ. ಆ ಸವಾಲುಗಳನ್ನ ಯಾವ ರೀತಿ ನಾವು ಹೇಗೆ ಮೆಟ್ಟಿ ನಿಲ್ಲಬೇಕು, ಯಾವ ರೀತಿ ಯಶಸ್ವಿಯಾಗಿ ಮುಂದೆ ಹೋಗಬೇಕು ಅನ್ನೋದರ ಬಗ್ಗೆನೂ ಕೂಡ ನಮಗೆ ಕೆಲವು ಬೆಳಕು ಚೆಲ್ಲಿದ್ದಾರೆ ಎಂದು ತಿಳಿಸಿದರು.
ರಾಜ್ಯ ಕೋರ್ ಕಮಿಟಿಯ ಸದಸ್ಯರೊಂದಿಗೆ ಅನೌಪಚಾರಿಕವಾಗಿ ಕೆಲವು ವಿಚಾರಗಳನ್ನು ಕೂಡ ಚರ್ಚೆ ಮಾಡಿದ್ದಾರೆ. ರಾಜ್ಯದ ಉಸ್ತುವಾರಿ ಹರೀಶ್ ದ್ವಿವೇದಿಯವರು, ರಾಜ್ಯಕ್ಕೆ ಎಷ್ಟು ಹೆಚ್ಚು ಸಮಯವನ್ನು ಕೊಡುವುದಾಗಿ ತಿಳಿಸಿದ್ದಾರೆ ಎಂದು ನುಡಿದರು. ಅಪಾರವಾದ ಅನುಭವ ಇರುವ ಹರೀಶ್ ದ್ವಿವೇದಿಯವರು ನಮ್ಮ ರಾಜ್ಯಕ್ಕೆ ಹೆಚ್ಚು ಸಮಯವನ್ನು ಕೊಡುವುದರ ಜೊತೆಗೆ ಸಂಘಟನೆ, ನಮಗೂ ಕೂಡ ಒಂದು ದೊಡ್ಡ ಶಕ್ತಿಯನ್ನು ಬಂದಂತಾಗಿದೆ ಎಂದು ಅಭಿಪ್ರಾಯಪಟ್ಟರು.
ಸರ್ಕಾರ ಕಿತ್ತೆಸೆಯುವ ಷಡ್ಯಂತ್ರ
ಇನ್ನೊಂದು ಪ್ರಶ್ನೆಗೆ ಉತ್ತರ ನೀಡಿದ ಅವರು, ದೆಹಲಿಯÀಲ್ಲಿ ಮತ್ತು ದೇಶದ ಬೇರೆ ಬೇರೆ ಭಾಗಗಳಲ್ಲಿ ಕಾಂಗ್ರೆಸ್ ಪಕ್ಷವು ಚುನಾವಣಾ ಆಯೋಗ, ದೇಶದ ಸಾಂವಿಧಾನಿಕ ಸಂಸ್ಥೆಗಳ ವಿರುದ್ಧ ಅಪಪ್ರಚಾರ ಮಾಡುತ್ತಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿಜಿಯವರ ವಿರುದ್ಧವೂ ಷಡ್ಯಂತ್ರ ರೂಪಿಸುತ್ತಿದೆ. ಪ್ರಜಾಸತ್ತಾತ್ಮಕವಾಗಿ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದಿರುವ ನಮ್ಮ ಸರ್ಕಾರವನ್ನು ಕಿತ್ತೊಗೆಯಲು ಷಡ್ಯಂತ್ರವನ್ನು ಕಾಂಗ್ರೆಸ್ ಮತ್ತು ಇತರ ಪಕ್ಷಗಳು ಸೇರಿ ಮಾಡುತ್ತಿರುವುದು ಜಗಜ್ಜಾಹೀರಾಗಿದೆ ಎಂದು ತಿಳಿಸಿದರು.
‘ಪ್ರಜಾಪ್ರಭುತ್ವ ಉಳಿಸಿ, ಅರಾಜಕತೆ ಅಳಿಸಿ' ಅಭಿಯಾನ
ಕಾಂಗ್ರೆಸ್ ಸರ್ಕಾರದ ಅಪಪ್ರಚಾರದ, ಷಡ್ಯಂತ್ರಗಳ ವಿರುದ್ಧ ಇಡೀ ದೇಶದಲ್ಲಿ ಮತ್ತು ಕರ್ನಾಟಕ ರಾಜ್ಯದಲ್ಲೂ ‘ಪ್ರಜಾಪ್ರಭುತ್ವ ಉಳಿಸಿ, ಅರಾಜಕತೆ ಅಳಿಸಿ' ಅಭಿಯಾನವನ್ನು ನಾವು ಹಮ್ಮಿಕೊಂಡಿದ್ದೇವೆ. ರಾಜ್ಯದ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಈ ಅಭಿಯಾನ ನಡೆಯಲಿದೆ. ನಾಳೆ ಹಮ್ಮಿಕೊಂಡಿದ್ದೇವೆ. ನಾಳಿನ ಕೋಲಾರದಲ್ಲಿ ಬೆಳಗ್ಗೆ 11- 11:30 ರ ಹೊತ್ತಿಗೆ ನಮ್ಮ ಈ ಪಾದಯಾತ್ರೆ ಪ್ರಾರಂಭವಾಗಲಿದೆ. 10 ಸಾವಿರಕ್ಕೂ ಹೆಚ್ಚು ಸಂಖ್ಯೆಯ ಯುವಕರು ಆ ಪಾದಯಾತ್ರೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ನಾನು, ನಮ್ಮ ಹರೀಶ್ ದ್ವಿವೇದಿಯವರು, ನಮ್ಮ ರಾಜ್ಯ ನಾಯಕರು ಆ ಪಾದಯಾತ್ರೆಯಲ್ಲಿ ಭಾಗವಹಿಸುತ್ತಾರೆ. ನಾಡಿದ್ದು ಚಿತ್ರದುರ್ಗದಲ್ಲೂ ಕೂಡ ಈ ಪಾದಯಾತ್ರೆ ಹಮ್ಮಿಕೊಂಡಿದ್ದೇವೆ ಎಂದು ವಿವರ ನೀಡಿದರು.
ಹತಾಶ ಕಾಂಗ್ರೆಸ್ ಪಕ್ಷ
ಕಾಂಗ್ರೆಸ್ ಪಕ್ಷ ಮತ್ತು ರಾಹುಲ್ ಗಾಂಧಿಯವರು ಬಹಳ ಹತಾಶರಾಗಿದ್ದಾರೆ. ನರೇಂದ್ರ ಮೋದಿಜಿಯವರು ಪ್ರಧಾನಮಂತ್ರಿಗಳಾಗಿ ದೇಶವನ್ನು ಮುನ್ನಡೆಸುವ ಸಂದರ್ಭದಲ್ಲಿ ರಾಹುಲ್ ಗಾಂಧಿಯವರು ಹೇಗಾದರೂ ಮಾಡಿ ಪ್ರಧಾನಮಂತ್ರಿ ಆಗಬೇಕೆಂಬ ಹಗಲುಗನಸನ್ನು ಕಾಣುತ್ತಿದ್ದಾರೆ. ಅಲ್ಲದೇ ಹತಾಶರಾಗಿ ಈ ರೀತಿ ಕುತಂತ್ರಗ¼ನ್ನು ಮಾಡುತ್ತಿದ್ದಾರೆ; ಇದರ ವಿರುದ್ಧ ನಾವು ಅಭಿಯಾನವನ್ನು ಹಮ್ಮಿಕೊಂಡಿದ್ದೇವೆ ಎಂದರು.
ಶಿವಕುಮಾರ್ ವಿರುದ್ಧ ದೂರು
ವಿಧಾನಪರಿಷತ್ ಚುನಾವಣೆ ಫಲಿತಾಂಶ ಬಂದ ನಂತರದಲ್ಲಿ ಕಾಂಗ್ರೆಸ್ ಪಕ್ಷ, ಆಡಳಿತ ಪಕ್ಷದಲ್ಲಿ ಗುಂಪುಗಾರಿಕೆ ಹೆಚ್ಚಾಗುತ್ತದೆ. ರಾಜ್ಯದಲ್ಲಿ ಮೂರನೇ ಮುಖ್ಯಮಂತ್ರಿ ತರೋದಕ್ಕೆ ಎಲ್ಲಾ ಪ್ರಯತ್ನಗಳೂ ಪ್ರಾರಂಭವಾಗಿದೆ ಎಂದು ನಾನು ಹೇಳಿದ್ದೆ. ಅದೇ ರೀತಿಯಲ್ಲಿ ಅನೇಕ ಗೌಪ್ಯ ಸಭೆಗಳೂ ನಡೆಯುತ್ತಿವೆ. ಸಿದ್ದರಾಮಯ್ಯನವರು ದೆಹಲಿಗೆ ಹೋಗಿ ಡಿ.ಕೆ. ಶಿವಕುಮಾರ್ ವಿರುದ್ಧ ದೂರು ಹೇಳಿ ಬಂದಿದ್ದಾರೆ ಅನ್ನುವ ಮಾಹಿತಿ ಕೂಡ ಇದೆ ಎಂದು ಅವರು ಮತ್ತೊಂದು ಪ್ರಶ್ನೆಗೆ ಉತ್ತರಿಸಿದರು.
ಒಟ್ಟಾರೆಯಾಗಿ ಕಾಂಗ್ರೆಸ್ ಪಕ್ಷದಲ್ಲಿ, ಆಡಳಿತ ಪಕ್ಷ ಕಾಂಗ್ರೆಸ್ ನಲ್ಲಿ ಎಲ್ಲವೂ ಕೂಡ ಸರಿಯಿಲ್ಲ. ಯಾವಾಗ ಯಾವ ಸಂದರ್ಭದಲ್ಲಿ ಬೇಕಾದ್ರೂ ಇದು ಸ್ಫೋಟ ಆಗ್ತದೆ ಅನ್ನುವ ಮುನ್ಸೂಚನೆ ಈಗಾಗಲೇ ಕಾಣುತ್ತಿದೆ ಎಂದು ಹೇಳಿದರು.


