ಮೀನುಗಾರ ಸೋಮನಾಥ್ ಆತ್ಮಹತ್ಯೆ - ಸರ್ಕಾರಕ್ಕೆ 48 ಗಂಟೆಗಳ ಗಡುವು, ಉಗ್ರ ಹೋರಾಟದ ಎಚ್ಚರಿಕೆ

Shreya Hegde
0



ಮಂಗಳೂರು: ಸುರತ್ಕಲ್ ಪೊಲೀಸ್ ಠಾಣೆಯ ಪೊಲೀಸರ ದೌರ್ಜನ್ಯ ಹಾಗೂ ಮಾನಸಿಕ ಹಿಂಸೆಯಿಂದ ಮನನೊಂದು ಮೊಗವೀರ ಸಮಾಜದ ಮುಗ್ಧ ಮೀನುಗಾರರಾದ ಶ್ರೀ ಸೋಮನಾಥ್ ಪುತ್ರನ್ ಅವರು 2026ರ ಅಕ್ಟೋಬರ್ 27ರಂದು ಆತ್ಮಹತ್ಯೆ ಮಾಡಿಕೊಂಡಿರುವ ದುರ್ಘಟನೆಯು ಇಡೀ ಕರಾವಳಿಯ ಮೀನುಗಾರ ಸಮೂದಾಯದಲ್ಲಿ ತೀವ್ರ ಆಘಾತ ಮತ್ತು ಆಕ್ರೋಶವನ್ನುಂಟು ಮಾಡಿದೆ. ಮೃತ ಸೋಮನಾಥ್ ಪುತ್ರನ್ ಅವರು ಯಾವುದೇ ಅಪರಾಧ ಹಿನ್ನೆಲೆ ಇಲ್ಲದ, ಮುಗ್ಧ ಹಾಗೂ ತಮ್ಮ ಕುಟುಂಬದ ಏಕೈಕ ದುಡಿಮೆಗಾರರಾಗಿದ್ದರು. ಅವರ ಈ ಅಕಾಲಿಕ ಹಾಗೂ ದೌರ್ಜನ್ಯದ ಹಿನ್ನೆಲೆಯ ಸಾವು ಕರಾವಳಿಯ ಮೀನುಗಾರರಲ್ಲಿ ತೀವ್ರ ಭಯದ ವಾತಾವರಣವನ್ನು ಸೃಷ್ಟಿಸಿದೆ. ಈ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಮೊಗವೀರ ಸಂಯುಕ್ತ ಸಭಾ (ರಿ), ಮಂಗಳೂರು ವತಿಯಿಂದ ಸರ್ಕಾರದ ಮುಂದೆ ಕಠಿಣ ಬೇಡಿಕೆಗಳನ್ನು ಇಡಲಾಗಿದೆ.


ಪ್ರಕರಣಕ್ಕೆ ಸಂಬಂಧಿಸಿದಂತೆ ನಿಷ್ಪಕ್ಷಪಾತ ತನಿಖೆ ಮತ್ತು ಕಠಿಣ ಕ್ರಮ ಕೈಗೊಳ್ಳಬೇಕೆಂದು ಸಭಾ ಆಗ್ರಹಿಸಿದೆ. ಮೃತರ ಆತ್ಮಹತ್ಯೆಗೆ ಮಾನಸಿಕ ಹಿಂಸೆ ನೀಡಿ ಕಾರಣರಾಗಿರುವ ಸಂಬಂಧಪಟ್ಟ ಪೊಲೀಸ್ ಅಧಿಕಾರಿಗಳ ವಿರುದ್ಧ BNS ಕಾಯ್ದೆಯಡಿಯಲ್ಲಿ ತಕ್ಷಣವೇ ಕೇಸು ದಾಖಲಿಸಿ ಅವರನ್ನು ಅಮಾನತುಗೊಳಿಸಬೇಕು. ಹಾಗೆಯೇ, ಮೃತರ ಪತ್ನಿ ದೂರು ನೀಡಿದ್ದರೂ ಘಟನೆಗೆ ಮೂಲಕಾರಣರಾದ ದೆಹಲಿ ಮೂಲದ ಕಾಜೋಲ್ ಮತ್ತು ಕೇರಳ ಮೂಲದ ರಿಯಾಜ್ ಅವರ ಹೆಸರನ್ನು ಎಫ್‌ಐಆರ್‌ನಲ್ಲಿ ನಮೂದಿಸದೇ ಇರುವುದು ಅನುಮಾನಕ್ಕೆ ಎಡೆಮಾಡಿಕೊಟ್ಟಿದ್ದು, ಇಬ್ಬರನ್ನೂ 48 ಗಂಟೆಯೊಳಗೆ ಬಂಧಿಸಬೇಕು. ಒಂದೇ ಇಲಾಖೆಯಿಂದ ನಿಷ್ಪಕ್ಷಪಾತ ತನಿಖೆ ಸಾಧ್ಯವಿಲ್ಲದ ಕಾರಣ, ಹಾಲಿ ಅಥವಾ ನಿವೃತ್ತ ಜಿಲ್ಲಾ ನ್ಯಾಯಾಧೀಶರಿಂದ ನ್ಯಾಯಾಂಗ ತನಿಖೆ ಅಥವಾ ಸಿಐಡಿ ತನಿಖೆ ನಡೆಸಿ 30 ದಿನಗಳಲ್ಲಿ ವರದಿಯನ್ನು ಸಾರ್ವಜನಿಕಗೊಳಿಸಬೇಕು. ಜೊತೆಗೆ ಠಾಣೆಯ ಸಿಸಿಟಿವಿ ದೃಶ್ಯಾವಳಿ ಹಾಗೂ ದಾಖಲೆಗಳನ್ನು ತಕ್ಷಣವೇ ವಶಪಡಿಸಿಕೊಳ್ಳಬೇಕು.


ಕುಟುಂಬದ ಪುನರ್ವಸತಿ ಮತ್ತು ಭದ್ರತೆಯ ವಿಷಯದಲ್ಲೂ ಸರ್ಕಾರ ತಕ್ಷಣ ಸ್ಪಂದಿಸಬೇಕಾಗಿದೆ. ಮೃತ ಕುಟುಂಬಕ್ಕೆ ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ 2 ಕೋಟಿ ರೂಪಾಯಿ ಪರಿಹಾರ ಘೋಷಿಸಬೇಕು, ಮೃತರ ಪತ್ನಿಗೆ ಅನುಕಂಪದ ಆಧಾರದ ಮೇಲೆ ಸರ್ಕಾರಿ ನೌಕರಿ ನೀಡಬೇಕು ಹಾಗೂ ಮಕ್ಕಳ ಸಂಪೂರ್ಣ ಶಿಕ್ಷಣದ ಜವಾಬ್ದಾರಿಯನ್ನು ಸರ್ಕಾರವೇ ವಹಿಸಿಕೊಳ್ಳಬೇಕು. ಇದಲ್ಲದೆ, ಸಾಕ್ಷಿದಾರರ ಹಾಗೂ ಕುಟುಂಬದವರ ಮೇಲೆ ಸುಳ್ಳು ಪ್ರಕರಣಗಳನ್ನು ದಾಖಲಿಸುವುದಿಲ್ಲವೆಂದು ಭರವಸೆ ನೀಡಬೇಕು, ತಪ್ಪು ಎಸಗಿದ ಸಿಬ್ಬಂದಿ ಮತ್ತು ಉನ್ನತಾಧಿಕಾರಿಗಳ ವಿರುದ್ಧ ಇಲಾಖಾ ಕ್ರಮ ಜರುಗಿಸಬೇಕು ಹಾಗೂ ಕರಾವಳಿಯ ಪೊಲೀಸ್ ಠಾಣೆಗಳಲ್ಲಿ ಮೀನುಗಾರರ ರಕ್ಷಣಾ ಕೋಶ ರಚಿಸಿ ಪೊಲೀಸರಿಗೆ ಸೂಕ್ತ ತರಬೇತಿ ನೀಡಬೇಕು.


ಈ ಪ್ರಮುಖ ಬೇಡಿಕೆಗಳಲ್ಲಿ ಅಧಿಕಾರಿಗಳ ಅಮಾನತು, ಆರೋಪಿಗಳ ಬಂಧನ, ಸಿಐಡಿ ಅಥವಾ ನ್ಯಾಯಾಂಗ ತನಿಖೆ ಮತ್ತು 2 ಕೋಟಿ ಪರಿಹಾರದ ಬೇಡಿಕೆಗಳನ್ನು ಮುಂದಿನ 48 ಗಂಟೆಗಳ ಒಳಗೆ ಈಡೇರಿಸಬೇಕು. ಇಲ್ಲದಿದ್ದರೆ ಇಡೀ ಕರಾವಳಿಯ ಮೀನುಗಾರ ಸಮುದಾಯವನ್ನು ಒಗ್ಗೂಡಿಸಿ ಬೃಹತ್ ಮಟ್ಟದ ಪ್ರತಿಭಟನೆ ನಡೆಸಲಾಗುವುದು ಎಂದು ದಕ್ಷಿಣ ಕನ್ನಡ ಮೊಗವೀರ ಸಂಯುಕ್ತ ಸಭಾ (ರಿ), ಮಂಗಳೂರು ಇದರ ಅಧ್ಯಕ್ಷರು ಹಾಗೂ ಪ್ರಧಾನ ಕಾರ್ಯದರ್ಶಿಗಳು ಎಚ್ಚರಿಸಿದ್ದಾರೆ.

Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top