ಪಟಾಕಿ ದುರಂತಗಳು: ಹಬ್ಬದ ಕಾಲದ 'ಸಾಮಾನ್ಯ ಘಟನೆ'ಯಲ್ಲ, ಗಂಭೀರ ದುರಂತ!

Upayuktha
0


ಯಾರದೋ ನಿರ್ಲಕ್ಷ್ಯದಿಂದ ಮುಚ್ಚದೆ ಬಿಟ್ಟ ಕೊಳವೆಬಾವಿಗೆ ಮುಗ್ಧ ಮಕ್ಕಳು ಬಿದ್ದು ಮೃತಪಟ್ಟಾಗ ಇಡೀ ದೇಶವೇ ಬೆಚ್ಚಿಬೀಳುತ್ತದೆ. ಮಾಧ್ಯಮಗಳು ದೊಡ್ಡ ಸುದ್ದಿಯಾಗಿ ಬಿತ್ತರಿಸುತ್ತವೆ, ಜನತೆ ಮರುಕಪಟ್ಟು ಕಣ್ಣೀರಿಡುತ್ತವೆ ಮತ್ತು ಸರ್ಕಾರಗಳು ಕೂಡಲೇ ಕಠಿಣ ಕ್ರಮದ ಭರವಸೆ ನೀಡುತ್ತವೆ. ಆದರೆ, ದೀಪಾವಳಿ ಸೇರಿದಂತೆ ಹಬ್ಬಗಳ ಸಂದರ್ಭದಲ್ಲಿ ಪಟಾಕಿ ಅವಘಡಗಳಿಂದ ನೂರಾರು ಅಮಾಯಕ ಜೀವಗಳು ಬಲಿದಾನವಾದಾಗ ಮಾತ್ರ, ಅದು ಪತ್ರಿಕೆಯ ಯಾವುದೋ ಮೂಲೆಗೆ ಸಣ್ಣ ಸುದ್ದಿಯಾಗಿ ಸೀಮಿತಗೊಂಡು ಯಾರದೂ ಗಮನಕ್ಕೆ ಬಾರದೆ ಮಾಸಿಹೋಗುತ್ತದೆ! ಈ ತಾರತಮ್ಯ ನಮ್ಮ ಸಮಾಜದ ದೊಡ್ಡ ವಿಪರ್ಯಾಸ.


ಪಟಾಕಿ ಎನ್ನುವುದು ನಮ್ಮ ಬದುಕಿಗೆ ಬೇಕಾದ ಯಾವುದೇ ರೀತಿಯ ಜೀವನಾವಶ್ಯಕ ವಸ್ತುವಲ್ಲ; ಬದಲಿಗೆ ಕೇವಲ ಕೆಲವೇ ಕ್ಷಣಗಳ ಮನರಂಜನೆಗಾಗಿ, ಸದ್ದು ಮತ್ತು ಬೆಳಕಿನ ಆಡಂಬರಕ್ಕಾಗಿ ಬಳಸುವ ವಸ್ತುವಷ್ಟೇ. ಆದರೆ, ಈ ಕ್ಷಣಿಕ ಸಂಭ್ರಮದ ಬೆಲೆ ಏನು?


ವರದಿಗಳ ಪ್ರಕಾರ, ದೇಶದ ವಿವಿಧೆಡೆ ಸಂಭವಿಸಿದ ಪಟಾಕಿ ಅಪಘಾತಗಳು ಮತ್ತು ಅಗ್ನಿ ದುರಂತಗಳಲ್ಲಿ ಒಟ್ಟು 23ಕ್ಕೂ ಹೆಚ್ಚು ಮಂದಿ ಮೃತಪಟ್ಟಿರುವುದು ಹಾಗೂ ಅದೆಷ್ಟೋ ಜನರು ಗಾಯಗೊಂಡಿರುವುದು ವರದಿಯಾಗಿದೆ. ದೆಹಲಿಯಲ್ಲಿ ರಾಕೆಟ್ ಮಾದರಿಯ ಪಟಾಕಿ ಸಿಡಿಸುವಾಗ ಸ್ಫೋಟಗೊಂಡು 10 ವರ್ಷದ ಕಂದಮ್ಮನ ಎದೆಗೆ ತಾಗಿ ಪ್ರಾಣಪಕ್ಷಿ ಹಾರಿಹೋಗಿದೆ. ತೆರೆದ ಕೊಳವೆಬಾವಿಗೆ ಮಗು ಬಿದ್ದು ಮೃತಪಟ್ಟಾಗ, ಅದರ ಪಾರ್ಥೀವ ಶರೀರವನ್ನು ಹೊರತೆಗೆಯುವ ದೃಶ್ಯವನ್ನು ಮಾಧ್ಯಮಗಳಲ್ಲಿ ಲೈವ್ ನೋಡುವಾಗ ನಮಗೆ ಉಂಟಾಗುವ ಸಂವೇದನೆ, ಪಟಾಕಿ ದುರಂತದಲ್ಲಿ ಹತ್ತು ವರ್ಷದ ಕಂದಮ್ಮ ಪ್ರಾಣ ಕಳೆದುಕೊಂಡ ಸುದ್ದಿ ಓದುವಾಗ ಇಲ್ಲವಾಗುವುದು ಏಕೆ? ಮತ್ತೆ ಇಂತಹ ಘಟನೆ ನಡೆಯಬಾರದು ಎಂದಾದರೆ, ಅನಗತ್ಯ ಹಾಗೂ ಜೀವನಾವಶ್ಯಕವಲ್ಲದ, ಯಾವ ಧರ್ಮಶಾಸ್ತ್ರದಲ್ಲೂ ಉಲ್ಲೇಖವಿಲ್ಲದ ಈ ಕ್ಷಣಿಕ ಮನರಂಜನೆಯ ಪಟಾಕಿಯನ್ನು ನಿರಾಕರಿಸುವ ಮನೋಭಾವ ನಮಗೇಕೆ ಬರುವುದಿಲ್ಲ?


ಮಧ್ಯಪ್ರದೇಶದಲ್ಲಿ ಸಂಭವಿಸಿದ ಪ್ರತ್ಯೇಕ ಪಟಾಕಿ ಅಗ್ನಿ ದುರಂತಗಳಲ್ಲಿ ಹಸುಗೂಸುಗಳು, ಕಂದಮ್ಮಗಳು ಹಾಗೂ ವೃದ್ಧರು ಸೇರಿದಂತೆ 13 ಮಂದಿ ಜೀವಂತವಾಗಿ ದಹನವಾಗಿ ಹೋಗಿದ್ದಾರೆ. ಮಹಾರಾಷ್ಟ್ರದ ದಾರಾಶಿವ್ ಜಿಲ್ಲೆಯಲ್ಲಿ ಹಬ್ಬದ ಸಂಭ್ರಮದಲ್ಲಿದ್ದ ಮನೆಯೊಂದರಲ್ಲಿ ಪಟಾಕಿ ಆಕಸ್ಮಿಕದಿಂದ ಬೆಂಕಿ ಹೊತ್ತಿಕೊಂಡು ಆರು ಮಂದಿ ಸುಟ್ಟುಕರಕಲಾಗಿದ್ದಾರೆ. ರಾಜಸ್ಥಾನದ ಪಲಿಯಲ್ಲಿ ಪಟಾಕಿ ಅಂಗಡಿಯೇ ಸ್ಫೋಟಗೊಂಡು ಮೂವರು ಸಾವಿನೆರಳಗೆ ಬಿದ್ದಿದ್ದಾರೆ. ಇವೆಲ್ಲವೂ ಕೇವಲ ಅಂಕಿಅಂಶಗಳಲ್ಲ, ಬದಲಿಗೆ ನಮ್ಮ ಸಮಾಜದ ಮಿತಿಮೀರಿದ ನಿರ್ಲಕ್ಷ್ಯಕ್ಕೆ ಬಲಿಯಾದ ಜೀವಗಳ ಆಕ್ರಂದನ!


ಇತರ ಅನಾಹುತಗಳು ಮತ್ತು ದುರಂತಗಳ ವಿರುದ್ಧ ದನಿ ಎತ್ತುವ ನಾವು, ಪಟಾಕಿ ದುರಂತಗಳನ್ನು ಮಾತ್ರ 'ಹಬ್ಬದ ಕಾಲದ ಸಾಮಾನ್ಯ ಘಟನೆ' ಎಂದು ಕಡೆಗಣಿಸುತ್ತೇವೆ. ಪ್ರಾಣ ತೆಗೆಯುವ ಈ ಪಟಾಕಿ ಸಂಸ್ಕೃತಿಯ ವಿರುದ್ಧ ಸಮಾಜ, ಮಾಧ್ಯಮಗಳು ಮತ್ತು ಆಡಳಿತ ವ್ಯವಸ್ಥೆ ಗಂಭೀರವಾಗಿ ಯೋಚಿಸುವುದಿಲ್ಲ ಏಕೆ? ಕೇವಲ ಮಾರುಕಟ್ಟೆ ಬಲ ಹಾಗೂ ವ್ಯಾಪಾರಿ ಹಿತಾಸಕ್ತಿಗಳಿಗಾಗಿ ಮುಗ್ಧರ ಜೀವಗಳನ್ನು ಬಲಿಗೊಡುವುದು ಯಾವ ನ್ಯಾಯ? ಜೀವದ ಬೆಲೆ ತಿಳಿಯದ ಕ್ಷಣಿಕ ಸಂಭ್ರಮ ಎಂದಿಗೂ ಸಾರ್ಥಕವಾಗಲಾರದು.


ಇನ್ನು ಪಟಾಕಿ ಹೊಗೆಯಿಂದ ನಮ್ಮ ಆರೋಗ್ಯದ ಮೇಲೂ ದುಷ್ಪರಿಣಾಮ ಬೀರುವುದಂತೂ ಸತ್ಯ. ಕೊಪ್ಪ, ಶೃಂಗೇರಿಯಂತಹ ಸ್ಥಳಗಳಲ್ಲೂ ಮಹಾನಗರಗಳಷ್ಟು ಅಲ್ಲದಿದ್ದರೂ ವಾಯುಮಾಲಿನ್ಯ ಗಂಭೀರವಾಗುತ್ತಿರುವುದು ವಾಸ್ತವ. ಅಷ್ಟಕ್ಕೂ ಅದೊಂದು ಹಾನಿಕಾರಕ ರಾಸಾಯನಿಕವಷ್ಟೇ.


ಇನ್ನೊಂದು ಗಮನಿಸಬೇಕಾದ ಬಹುಮುಖ್ಯ ಅಂಶವೆಂದರೆ, ಪಟಾಕಿಯ ಮೂಲವಸ್ತು ಗಂಧಕ ಮತ್ತು ಇತರ ಕಚ್ಚಾವಸ್ತುಗಳು ಬರುತ್ತಿರುವುದು ವಿದೇಶಗಳಿಂದ! ರಾಜಧಾನಿ ದೆಹಲಿಯಲ್ಲಿ ದೀಪಾವಳಿಯ ಸಂದರ್ಭದಲ್ಲಿ ಜನ ಮಾಸ್ಕ್‌ಗಳನ್ನು ಧರಿಸಿ ಪಟಾಕಿ ಸಿಡಿಸುತ್ತಿದ್ದರಂತೆ- ಇದು ಮೂರ್ಖತನದ ಪರಮಾವಧಿ ಅಲ್ಲವೇ?


ಪಟಾಕಿ ರಹಿತ ದೀಪಾವಳಿ, ಜಾತ್ರೆ, ಊರ ಹಬ್ಬ, ಗಣೇಶೋತ್ಸವ ಮತ್ತು ರಾಜಕೀಯ ಸಂಭ್ರಮಾಚರಣೆಗಳು ಸಾಧ್ಯವಿಲ್ಲವೇ? ನಮ್ಮ ಮನೆಯ ಮಕ್ಕಳ, ವೃದ್ಧರ ಕಣ್ಣು ಅಥವಾ ಜೀವಗಳು ಹೋದ ಮೇಲೆಯೇ ನಮಗೆ ಪಟಾಕಿ ರಹಿತ ಸಂಭ್ರಮದ ಅರಿವಾಗಬೇಕೆ?


ಮುಂದಿನ ಬಾರಿ ಪಟಾಕಿ ಅಂಗಡಿಯ ಮೊದಲ ಮೆಟ್ಟಿಲ ಮೇಲೆ ನಿಂತಾಗ ಇವಿಷ್ಟು ನಮ್ಮ ಮನಸ್ಸಿನಲ್ಲಿರಲಿ: "ನಾನು ಕೊಂಡು ಹೋಗುವ ಪಟಾಕಿಯ ಒಂದು ಕಿಡಿ ನಮ್ಮ ಪ್ರೀತಿಯ ಮಗನ ಒಂದು ಕಣ್ಣನ್ನು ಶಾಶ್ವತ ಅಂದತ್ವಕ್ಕೆ ತಳ್ಳಬಹುದಾ? ಪಟಾಕಿಯ ಅವಘಡದ ಕೂಪಕ್ಕೆ ನನ್ನ ಜೀವದಂತಿರುವ ಮೊಮ್ಮಗ ಬಿದ್ದರೆ!?" ಎನ್ನುವ ಸಣ್ಣ ಜಾಗೃತಿಯ ಚಿಂತನೆ ನಮ್ಮ ಬುದ್ಧಿಗೆ ಪ್ರಶ್ನೆಯಾಗಿ ಬರಲಿ. ಪಟಾಕಿ ಅಂಗಡಿಯ ಮುಂದಿನ ಮೆಟ್ಟಿಲಿಗೆ ಕಾಲಿಡದಂತೆ ನಮ್ಮೊಳಗಿನ ವಿವೇಕ ಎಚ್ಚೆತ್ತುಕೊಳ್ಳಲಿ, ಪಟಾಕಿ ಸಂಸ್ಕೃತಿಯಿಂದ ನಮ್ಮನ್ನು ಸಂಪೂರ್ಣವಾಗಿ ವಿಮುಖರಾಗಿಸಲಿ.


- ಅರವಿಂದ ಸಿಗದಾಳ್, ಮೇಲುಕೊಪ್ಪ

9449631248


Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top