ದೆಹಲಿಯ ಅಂತಾರಾಷ್ಟ್ರೀಯ ಬಹುಭಾಷಾ ಕವಿಗೋಷ್ಟಿಯಲ್ಲಿ ತುಳು ಭಾಷೆಗೆ ಗೌರವ

Shreya Hegde
0

ಸಂವಿಧಾನದ 8ನೇ ಪರಿಚ್ಛೇದ ಸೇರ್ಪಡೆಗೆ ಮತ್ತಷ್ಟು ಬಲ




ನವದೆಹಲಿ: ರಾಷ್ಟ್ರ ರಾಜಧಾನಿಯ ಪ್ರತಿಷ್ಠಿತ ಇಂಡಿಯಾ ಇಂಟರ್‌ನ್ಯಾಷನಲ್ ಸೆಂಟರ್ (IIC) ಕಮಲಾದೇವಿ ಕಾಂಪ್ಲೆಕ್ಸ್‌ನ ಸೆಮಿನಾರ್ ಹಾಲ್‌ನಲ್ಲಿ ಆಯೋಜಿಸಲಾಗಿದ್ದ "ದ ವರ್ಲ್ಡ್ ವಿದಿನ್ ದ ವರ್ಡ್" ಶೀರ್ಷಿಕೆಯ ಅಂತಾರಾಷ್ಟ್ರೀಯ ಬಹುಭಾಷಾ ಕಾವ್ಯ ವಾಚನ ಗೋಷ್ಠಿಯಲ್ಲಿ ತುಳು ಭಾಷೆಗೆ ಸ್ಥಾನ ದೊರೆಯುವ ಮೂಲಕ ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಅಪರೂಪದ ಗರಿಮೆ ಲಭಿಸಿದೆ. ಪ್ರಕೃತಿ ವಿಷಯದ ಮೇಲೆ ನಡೆದ ಈ ಗೋಷ್ಠಿಯಲ್ಲಿ ಕರ್ನಾಟಕದಲ್ಲಿ ದ್ವಿತೀಯ ಅಧಿಕೃತ ಭಾಷೆಯ ಮಾನ್ಯತೆ ಹೊಂದಿರುವ ತುಳುವನ್ನು ಪ್ರಕಾಶ್ ಶೆಟ್ಟಿ ಉಳೆಪಾಡಿ ಅವರು ಯಶಸ್ವಿಯಾಗಿ ಪ್ರತಿನಿಧಿಸಿದರು.


ಇಂಗ್ಲಿಷ್, ಸಂಸ್ಕೃತ, ಉರ್ದು, ಹಿಂದಿ, ಬಂಗಾಳಿ, ಮಣಿಪುರಿ, ತೆಲುಗು ಹಾಗೂ ತುಳು ಸೇರಿದಂತೆ ಒಟ್ಟು ಎಂಟು ಭಾಷೆಗಳು ಈ ವೇದಿಕೆಯಲ್ಲಿ ಆಯ್ಕೆಯಾಗಿದ್ದವು. ದೇಶದ ವೈವಿಧ್ಯಮಯ ಸಂಸ್ಕೃತಿ ಮತ್ತು ಪ್ರಕೃತಿ ಪ್ರೇಮವನ್ನು ಒಂದೇ ಸೂರಿನಡಿ ಬೆಸೆಯುವ ಉದ್ದೇಶದಿಂದ ನಡೆದ ಈ ಕಾರ್ಯಕ್ರಮದಲ್ಲಿ ವಿವಿಧ ಭಾಗಗಳ ಪ್ರಮುಖ ಕವಿಗಳು ರಚಿಸಿದ ಕವನಗಳನ್ನು ಮೂಲ ಭಾಷೆಗಳಲ್ಲೇ ವಾಚಿಸಲಾಯಿತು.


ವೇದಿಕೆಯಲ್ಲಿ ಮಿಂಚಿದ ತುಳು ಕವಿತೆಗಳು:

ತುಳು ಭಾಷಾ ಚಿಂತಕ, ವಾಗ್ಮಿ ಹಾಗೂ ತುಳು ಮಹಾಸಭೆ ದೆಹಲಿಯ ಸಂಚಾಲಕರಾದ ಪ್ರಕಾಶ್ ಶೆಟ್ಟಿ ಉಳೆಪಾಡಿ ಅವರು ತುಳುನಾಡಿನ ಪ್ರಸಿದ್ಧ ಏಳು ಕವಿಗಳ ಕವನಗಳನ್ನು ಪ್ರಸ್ತುತಪಡಿಸಿದರು. ಮುದ್ದು ಮೂಡುಬೆಳ್ಳೆ ಅವರ “ಬದ್‌ಕ್‌ ಒರಿಪುಗ“, ಅಶೋಕ್ ಎನ್. ಕಡೇಶಿವಾಲಯ ಅವರ “ಎಲ್ಲೆದ ಬಲ್ಲೆಗ್ ಪೊಗ್ಗುನಗ”, ಎಚ್. ಕೆ. ನಯನಾಡು ಅವರ “ಪಸಂದ್ರನೊರಿಪುಗ”, ಪಾಂಗಾಳ ಬಾಬು ಕೊರಗ ಅವರ “ಪ್ರಕೃತಿದ ಅಸ್ತಿತ್”, ಉಮೇಶ್ ಶಿರಿಯ ಅವರ “ಉದಿಪುದ ಪೊರ್‍ಲೈಸಿರ”, ಗೀತಾ ಲಕ್ಷ್ಮೀಶ್ ಅವರ “ಪಸಂದ್ರದ ಗೇನ” ಮತ್ತು ವಿಶ್ವನಾಥ ಕುಲಾಲ್ ಮಿತ್ತೂರು ಅವರ “ಪಸಂದ್ರ ಒರಿಯೊಡು” ಕವನಗಳು ಗೋಷ್ಠಿಯಲ್ಲಿ ಆಯ್ಕೆಯಾಗಿದ್ದವು.


ಪ್ರಕಾಶ್ ಶೆಟ್ಟಿ ಅವರು ಈ ಎಲ್ಲಾ ಕವಿತೆಗಳನ್ನು ಇಂಗ್ಲಿಷ್‌ಗೆ ತರ್ಜುಮೆ ಮಾಡಿ ಪ್ರಸ್ತುತಪಡಿಸಿದರು. ವೇದಿಕೆಯಲ್ಲಿ ಮೂಲ ತುಳು ಭಾಷೆಯಲ್ಲಿ ಕಾವ್ಯ ವಾಚನ ನಡೆಯುವಾಗ, ಶ್ರೋತೃಗಳಿಗೆ ಅನುಕೂಲವಾಗುವಂತೆ ಪ್ರಾಜೆಕ್ಟರ್ ಪರದೆಯಲ್ಲಿ ಲೈವ್ ಟ್ರಾನ್ಸ್‌ಲೇಟ್ ಮಾದರಿಯಲ್ಲಿ ಇಂಗ್ಲಿಷ್ ಅನುವಾದ ಮೂಡಿಬರುವ ವ್ಯವಸ್ಥೆಯನ್ನು ಆಯೋಜಕರು ಮಾಡಿದ್ದರು. ತುಳುನಾಡಿನ ಪ್ರಕೃತಿ, ಸಂಸ್ಕೃತಿ ಮತ್ತು ಪರಿಸರ ಕಾಳಜಿಯನ್ನು ಪ್ರತಿಬಿಂಬಿಸಿದ ಈ ಕವನಗಳು ಸಭಿಕರ ಅಪಾರ ಮೆಚ್ಚುಗೆಗೆ ಪಾತ್ರವಾದವು.


ಪ್ರಮುಖರ ಉಪಸ್ಥಿತಿ:

ಕಾರ್ಯಕ್ರಮದಲ್ಲಿ ವಿವಿಧ ಭಾಷೆಗಳ ಪ್ರಮುಖ ತಜ್ಞರು ತಮ್ಮ ಮೂಲ ಭಾಷೆಗಳಲ್ಲಿ ಕವನ ವಾಚಿಸಿದರು. ಸುನಿತ್ ಟಂಡನ್ (ಇಂಗ್ಲಿಷ್), ಸುಧಾ ಗೋಪಾಲಕೃಷ್ಣನ್ (ಸಂಸ್ಕೃತ), ಅಲ್ಕಾ ರಂಜನ್, ಪೂರ್ವಾ ಭಾರದ್ವಾಜ್, ರಜಾ ಹೈದರ್ (ಹಿಂದಿ), ಪೂರ್ಣೇಂದು ಭಟ್ಟಾಚಾರ್ಯ (ಬಂಗಾಳಿ), ಡಾ. ಅನೀಸೂರ್ ರೆಹಮಾನ್ (ಉರ್ದು), ತಂಗ್ಜಾಮ್ ಹಿಂದೂಸ್ಥಾನಿ ದೇವಿ (ಮಣಿಪುರಿ) ಹಾಗೂ ಪ್ರೊ. ನಾರಾಯಣಪ್ಪ (ತೆಲುಗು) ಕಾವ್ಯ ವಾಚನ ಮಾಡಿದರು.


ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಐಐಸಿ ಟ್ರಸ್ಟಿ ಅಶ್ವಜಿತ್ ಸಿಂಗ್ ಮಾತನಾಡಿ, "ಸಾಹಿತ್ಯ ಹಾಗೂ ಕಾವ್ಯಗಳ ಮೂಲಕ ಮಾನವ ಮತ್ತು ಪ್ರಕೃತಿಯ ಬಾಂಧವ್ಯವನ್ನು ಮರುಚಿಂತನೆಗೆ ಒಳಪಡಿಸುವುದು ಇಂದಿನ ಅತ್ಯಗತ್ಯ ಅಗತ್ಯ" ಎಂದರು. ಐಐಸಿ ಪ್ರಕಟಣೆಗಳ ಸಂಪಾದಕಿ ಕೆ. ಇ. ಪ್ರಿಯಂವದಾ ಪ್ರಸ್ತಾವಿಕವಾಗಿ ಮಾತನಾಡಿದರು. ಹಿರಿಯ ಸಾಹಿತಿ ಮಲಾಶ್ರೀ ಲಾಲ್ ಹಾಗೂ ದೆಹಲಿ ವಿಶ್ವವಿದ್ಯಾಲಯದ ಅಪೂರ್ವಾನಂದ್ ಅವರು ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ಸಂಯೋಜಿಸಿದ್ದರು.


ಸಂವಿಧಾನಾತ್ಮಕ ಮಾನ್ಯತೆಯತ್ತ ಮಹತ್ವದ ಮೈಲಿಗಲ್ಲು:

ದೇಶದ ಪ್ರಮುಖ ಸಾಂಸ್ಕೃತಿಕ ವೇದಿಕೆಯಲ್ಲಿ ತುಳು ಭಾಷೆಗೆ ದೊರೆತ ಈ ಆದ್ಯತೆಯು, ತುಳು ಭಾಷೆಯನ್ನು ಭಾರತೀಯ ಸಂವಿಧಾನದ 8ನೇ ಪರಿಚ್ಛೇದಕ್ಕೆ ಸೇರ್ಪಡೆಗೊಳಿಸಬೇಕೆಂಬ ದಶಕಗಳ ಬೇಡಿಕೆಗೆ ಮತ್ತಷ್ಟು ಶಕ್ತಿ ತುಂಬಿದೆ. ಭಾಷೆಯ ಸಾಹಿತ್ಯಿಕ ಶ್ರೀಮಂತಿಕೆ ಮತ್ತು ಅರ್ಹತೆಯನ್ನು ರಾಷ್ಟ್ರೀಯ ಮಟ್ಟದಲ್ಲಿ ಪ್ರದರ್ಶಿಸಿದ ಈ ಕಾರ್ಯಕ್ರಮವು ಅಧಿಕೃತ ಮಾನ್ಯತೆಯ ಹಾದಿಯಲ್ಲಿ ಪ್ರಮುಖ ಮೈಲಿಗಲ್ಲಾಗಿದೆ. ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸಾಹಿತಿಗಳು, ಚಿಂತಕರು ಹಾಗೂ ಕಲಾಪ್ರೇಮಿಗಳು ಉಪಸ್ಥಿತರಿದ್ದರು.

Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top