ಧನ್ವಂತರಿ ಜಯಂತಿ ಅಂಗವಾಗಿ ವಿವಿಧ ಕಾರ್ಯಕ್ರಮಗಳ ಆಯೋಜನೆಗೆ ತೀರ್ಮಾನ
ಮಂಗಳೂರು: ಆರೋಗ್ಯ ಭಾರತಿ ಮಂಗಳೂರು ಜಿಲ್ಲಾ ಸಮಿತಿಯ ಪ್ರಮುಖ ಸಭೆಯು ಸೋಮವಾರ (ನವೆಂಬರ್ 02) ಕದ್ರಿ ಕಂಬಳ ರಸ್ತೆಯಲ್ಲಿರುವ ವೇದಮಾರೋಗ್ಯ ಆಯುರ್ವೇದ ಆಸ್ಪತ್ರೆಯಲ್ಲಿ ಯಶಸ್ವಿಯಾಗಿ ಜರುಗಿತು.
ಸಭೆಯ ದಿವ್ಯ ಸಾನ್ನಿಧ್ಯ ಹಾಗೂ ಮಾರ್ಗದರ್ಶನವನ್ನು ರಾಷ್ಟ್ರೀಯ ಸ್ವಯಂಸೇವಕ ಸಂಘದ ಮಂಗಳೂರು ಮಹಾನಗರ ಸಂಘಚಾಲಕರಾದ ಡಾ. ಸತೀಶ್ ರಾವ್, ಆರೋಗ್ಯ ಭಾರತಿಯ ಪ್ರಾಂತ ಉಪಾಧ್ಯಕ್ಷರು ಹಾಗೂ ಜಿಲ್ಲಾ ಗೌರವಾಧ್ಯಕ್ಷರಾದ ಡಾ. ಮುರಳೀ ಮೋಹನ ಚೂಂತಾರು ಮತ್ತು ವಿಭಾಗ ಸಂಚಾಲಕರಾದ ಶ್ರೀ ಪುರುಷೋತ್ತಮ ದೇವಸ್ಯ ವಹಿಸಿದ್ದರು. ಈ ಸಂದರ್ಭದಲ್ಲಿ ಜಿಲ್ಲಾ ಸಮಿತಿ ವತಿಯಿಂದ ಇದುವರೆಗೆ ನಡೆಸಲಾದ ವಿವಿಧ ಆರೋಗ್ಯ ಮಾಹಿತಿ ಕಾರ್ಯಕ್ರಮಗಳ ಅವಲೋಕನ ನಡೆಸಲಾಯಿತು ಹಾಗೂ ಸಂಘಟನಾತ್ಮಕ ಚಟುವಟಿಕೆಗಳನ್ನು ಮತ್ತಷ್ಟು ಬಲಪಡಿಸುವ ಕುರಿತು ಸವಿಸ್ತಾರವಾಗಿ ಚರ್ಚಿಸಲಾಯಿತು. ಅಲ್ಲದೆ, ಮುಂಬರುವ ನವೆಂಬರ್ 6 ಮತ್ತು 7 ರಂದು ಧನ್ವಂತರಿ ಜಯಂತಿಯ ಪ್ರಯುಕ್ತ ಜಿಲ್ಲೆಯಾದ್ಯಂತ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕ ಆರೋಗ್ಯ ಕಾರ್ಯಕ್ರಮಗಳನ್ನು ಆಯೋಜಿಸಲು ಸಭೆಯಲ್ಲಿ ಒಮ್ಮತದಿಂದ ತೀರ್ಮಾನಿಸಲಾಯಿತು.
ಸಭೆಯಲ್ಲಿ ಆರೋಗ್ಯ ಭಾರತಿಯ ಜಿಲ್ಲಾ ಅಧ್ಯಕ್ಷರಾದ ಡಾ. ಈಶ್ವರ ಭಟ್ ಪಳ್ಳಾದೆ, ಜಿಲ್ಲಾ ಉಪಾಧ್ಯಕ್ಷರಾದ ಡಾ. ಸಚಿನ್ ನಡ್ಕ, ಜಿಲ್ಲಾ ಕಾರ್ಯದರ್ಶಿ ಶ್ರೀ ಉಮೇಶ್ ಪ್ರಭು ಬನ್ನೂರು, ಜೊತೆ ಕಾರ್ಯದರ್ಶಿ ಶ್ರೀ ದಿನೇಶ್ ಚಂದ್ರಗಿರಿ ಹಾಗೂ ಜಿಲ್ಲಾ ಸಮಿತಿ ಸದಸ್ಯರಾದ ಶ್ರೀ ಕದ್ರಿ ವಿಕ್ರಮ್ ಉಪಸ್ಥಿತರಿದ್ದರು. ಸಭೆಯು ಆರೋಗ್ಯ ಭಾರತಿಯ ಧ್ವೇಯ ಪ್ರಾರ್ಥನೆಯೊಂದಿಗೆ ಪ್ರಾರಂಭವಾಗಿ, ವಿಶ್ವ ಶಾಂತಿಯ ಶಾಂತಿ ಮಂತ್ರದೊಂದಿಗೆ ಮುಕ್ತಾಯಗೊಂಡಿತು.

