ಮಂಗಳೂರು: ಕನಸು ಬೀಳುವುದು ಒಳ್ಳೆಯ ಆರೋಗ್ಯದ ಲಕ್ಷಣ. ಕನ್ನಡ ನಾಡಿನ ವೈವಿಧ್ಯ, ಇತಿಹಾಸ, ಸಮೃದ್ದಿ, ವಿವೇಕ, ಜನರು ಕಾಣುವ ಕನಸನ್ನು ಕವನಗಳು ರೂಪಿಸುತ್ತವೆ. ನಾಡಿನ ಇತಿಹಾಸವನ್ನು ಭಾಷೆಯಲ್ಲಿ ಕಟ್ಟಲಾಗಿದೆ. ಕನ್ನಡದ ಕುರಿತಾದ ಧನಾತ್ಮಕ ಅಂಶಗಳನ್ನು ತಿಳಿದುಕೊಳ್ಳಬೇಕು. ಭಾಷೆಯೇ ಬೆಳಕಾಗಿದೆ. ಕನ್ನಡದಲ್ಲಿ ಶಿಕ್ಷಣ ಪಡೆದವರ ಸೃಜನಶೀಲತೆ ಹೆಚ್ಚಾಗುತ್ತದೆ. ಭಾಷೆಯು ನಮ್ಮನ್ನು ಬೆಳಗಿಸುತ್ತದೆ ಹಾಗೂ ಬೆಳೆಸುತ್ತದೆ ಎಂದು ತುಳು, ಕನ್ನಡ ವಿದ್ವಾಂಸ ಪ್ರೊ. ಕೆ. ಚಿನ್ನಪ್ಪ ಗೌಡ ಹೇಳಿದರು.
ದ.ಕ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮಂಗಳೂರು ವತಿಯಿಂದ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾನೂನು ಮಹಾವಿದ್ಯಾಲಯ, ಉದ್ಯಮಾಡಳಿತ ಕಾಲೇಜು, ಉದ್ಯಮಾಡಳಿತ ಕಾಲೇಜು ಸಂಶೋಧನಾ ಮತ್ತು ಸ್ನಾತಕೋತ್ತರ ಕೇಂದ್ರ ಮಂಗಳೂರು, ಸ್ವಚ್ಛ ಪರಿಸರ ಪ್ರತಿಷ್ಠಾನದ ಆಶ್ರಯದಲ್ಲಿ ಸೋಮವಾರ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾನೂನು ಮಹಾವಿದ್ಯಾಲಯದ ಸಭಾಂಗಣದಲ್ಲಿ ನಡೆದ ಕನ್ನಡ ರಾಜ್ಯೋತ್ಸವ ಆಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ, ರಾಜ್ಯೋತ್ಸವ ಸಂದೇಶ ನೀಡುತ್ತಾ ಮಾತನಾಡಿದರು. ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸಂತೋಷ್ ಕುಮಾರ್ ಶೆಟ್ಟಿ ಮಾತನಾಡಿ, ರಾಜ್ಯದೆಲ್ಲೆಡೆ ಕನ್ನಡ ಮತ್ತಷ್ಟು ಪಸರಿಸಬೇಕು. ವಿದ್ಯಾರ್ಥಿಗಳು ಹಾಗೂ ಯುವ ಜನಾಂಗವು ಕನ್ನಡ ಭಾಷೆಯನ್ನು ಹೆಚ್ಚಾಗಿ ಬಳಸಿ, ಉಳಿಸುವ ಜವಾಬ್ದಾರಿಯನ್ನು ಹೊತ್ತುಕ್ಕೊಳ್ಳಬೇಕು ಎಂದರು.
ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಉದ್ಯಮಾಡಳಿತ ಕಾಲೇಜಿನ ಪ್ರಾಂಶುಪಾಲ ಡಾ. ಭಾನುಪ್ರಕಾಶ್ ಬಿ.ಈ. ಮಾತನಾಡಿ, ಪರಂಪರೆಯನ್ನು ಕಾಪಾಡುವ ಜವಾಬ್ದಾರಿ ಎಲ್ಲರ ಮೇಲಿದೆ. ಕನ್ನಡವನ್ನು ಎಲ್ಲಿ ಬಳಸಬಹುದು ಹಾಗೂ ಉಳಿಸಬಹುದು ಎನ್ನುವುದನ್ನು ಕಂಡುಹಿಡಿದು ಮುನ್ನಡೆಯಬೇಕು ಎಂದರು. ಮಾಜಿ ಮೇಯರ್ ದಿವಾಕರ ಕದ್ರಿ ಮಾತನಾಡಿ, ಮೊದಲು ಆತ್ಮಾವಲೋಕನ ಮಾಡಿಕೊಳ್ಳಬೇಕು. ನಮ್ಮ ಕಾಲದಲ್ಲಿ ತಿಳುವಳಿಕೆಯನ್ನು ಕಥೆಗಳ ಮೂಖಾಂತರ ತಿಳಿಸಿಕೊಡುತ್ತಿದ್ದರು. ವಿಚಾರಧಾರೆಗಳನ್ನು ಸುಧಾರಿಸುವಂತಹ ಕಲಿಕಾ ವಿಧಾನಗಳನ್ನು ಬಳಸಬೇಕು. ರಾಜ್ಯ ಸರಕಾರವು ಸರಕಾರಿ ಶಾಲೆಗಳಲ್ಲಿ ಕನ್ನಡ ಮಾಧ್ಯಮದಲ್ಲಿ ಕಲಿತವರಿಗೆ ಶೇ. 80 ರಷ್ಟು ಉದ್ಯೋಗಗಳನ್ನು ಘೋಷಿಸಬೇಕು ಎಂದರು.
ದ.ಕ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಡಾ. ಎಂ.ಪಿ. ಶ್ರೀನಾಥ ಅಧ್ಯಕ್ಷತೆ ವಹಿಸಿ ಮಾತನಾಡಿ, ಹೋಬಳಿ, ಗ್ರಾಮ, ತಾಲೂಕು, ಜಿಲ್ಲಾ ಮಟ್ಟದಲ್ಲಿ ಹಲವಾರು ಸಮ್ಮೇಳನಗಳನ್ನು ಮಾಡಿದ್ದೇವೆ. ಫಲಶೃತಿಗಳು ಸಿಗಲೆಂದೇ ನಾವು ಕಾರ್ಯಕ್ರಮಗಳನ್ನು ಮಾಡುತ್ತೇವೆ. ಕನ್ನಡದ ಸೇವೆಯನ್ನು ಮಾಡುತ್ತಾ ಮುನ್ನಡೆಯುತ್ತಿದ್ದೇವೆ. ಸಾಹಿತ್ಯ ಕ್ಷೇತ್ರದಲ್ಲ್ಲಿ ಕಾರ್ಯಕ್ರಮಗಳನ್ನು ಮಾಡಿದರೆ, ಎಲ್ಲರಿಗೂ ಪುಸ್ತಕ ಬರೆಯುವ ಪ್ರೇರಣೆ ಸಿಗುತ್ತದೆ ಎಂದರು. ಮಕ್ಕಳು ಬರೆದ ೩ ಪುಸ್ತಕಗಳನ್ನು ಬಿಡುಗಡೆಗೊಳಿಸಲಾಯಿತು. ಎಸ್.ಡಿ.ಎಂ ಶಾಲೆ ವಿದ್ಯಾರ್ಥಿಗಳಾದ ಪ್ರತಿಷ್ಠಾ ಶೆಟ್ಟಿಯ ‘ಕಥಾ ಚಿಗುರು’, ನಿಧಿಶಾ ಎಸ್. ಶೆಟ್ಟಿಯ ‘ಕನಸಿನ ಕಡಲು’ ಹಾಗೂ ದೇವಿತಾ ಎಚ್. ರವರ ‘ಭಾವ ಲಹರಿ’ ಪುಸ್ತಕಗಳನ್ನು ಬಿಡುಗಡೆಗೊಳಿಸಲಾಯಿತು. ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಗೌರವ ಕಾರ್ಯದರ್ಶಿ ಎಚ್. ವಿನಯ ಆಚಾರ್ಯ ಹಾಗೂ ಮತ್ತಿತರರು ಉಪಸ್ಥಿತರಿದ್ದರು.
ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾನೂನು ಮಹಾವಿದ್ಯಾಲಯದ ಪ್ರಾಂಶುಪಾಲ ಡಾ. ತಾರಾನಾಥ ಸ್ವಾಗತಿಸಿದರು. ಕಾರ್ಯಕ್ರಮ ಸಂಯೋಜಕ ಹಾಗೂ ದ.ಕ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಸಂಘಟನಾ ಕಾರ್ಯದರ್ಶಿ ಪುಷ್ಪರಾಜ ಕೆ. ವಂದಿಸಿದರು. 4ನೇ ವರ್ಷದ ಎಲ್.ಎಲ್.ಬಿ ವಿದ್ಯಾರ್ಥಿನಿ ನಿಧಿ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಬಳಿಕ ಆಹ್ವಾನಿತ ಕಲಾವಿದರಿಂದ 'ಸಂಗೀತ ರಸಸಂಜೆ' ಕಾರ್ಯಕ್ರಮ ನಡೆಯಿತು.

