ಅಕ್ಟೋಬರ್‌ 16ರಂದು ಯುವಕಲಾವಿದೆ ಮೋನಿಷಾ ಐಸಿರಿ ರಂಗ ಪ್ರವೇಶ

Shreya Hegde
0

ಮಲ್ಲೇಶ್ವರದ ಚೌಡಯ್ಯ ಸ್ಮಾರಕ ಭವನದಲ್ಲಿ ಕಾರ್ಯಕ್ರಮ

ಗುರು ಡಾ. ಸುಪರ್ಣಾ ವೆಂಕಟೇಶರ ಶಿಷ್ಯೆ



ಬೆಂಗಳೂರು: ನಗರದ ಸಾಯಿ ಆರ್ಟ್ಸ್ ಇಂಟರ್ ನ್ಯಾಷನಲ್ ಸಂಸ್ಥೆಯ ಹೆಮ್ಮೆಯ ಯುವಕಲಾವಿದೆ ಮೋನಿಷಾ ಐಸಿರಿ ಗೌಡ ಅವರು ಅ. 16ರಂದು ಭರತನಾಟ್ಯ ರಂಗ ಪ್ರವೇಶಕ್ಕೆ ಅಣಿಯಾಗಿದ್ದಾರೆ. ರಾಜಧಾನಿಯ ಮಲ್ಲೇಶ್ವರದ ಚೌಡಯ್ಯ ಸ್ಮಾರಕ ಭವನದಲ್ಲಿ ಸಂಜೆ 5.30ಕ್ಕೆ ಕಾರ್ಯಕ್ರಮ ಆಯೋಜನೆಗೊಂಡಿದೆ.


ಪ್ರಖ್ಯಾತ ವಿದುಷಿ ಡಾ ಸುಪರ್ಣ ವೆಂಕಟೇಶ ಅವರ ವಿದ್ಯಾರ್ಥಿಯಾಗಿ, ಶ್ರದ್ಧೆಯಿಂದ ನಾಟ್ಯವನ್ನು ಕಲಿತ ಈ ಕಲಾವಿದೆ ರಂಗಾರೋಹಣ ಸಮಾರಂಭಕ್ಕೆ ಐಸಿಸಿಆರ್ ದಕ್ಷಿಣ ವಲಯ ನಿರ್ದೇಶಕ ನಿಷಿ ಬಾಲಾ,  ಖ್ಯಾತ ನೃತ್ಯ ಕಲಾವಿದ ವಿದ್ವಾನ್ ಪಾರ್ಶ್ವನಾಥ ಉಪಾಧ್ಯೆ ಮತ್ತು ಡಾನ್ಸ್ ಇಂಡಿಯಾ ಮ್ಯಾಗಜಿನ್ ಸಂಪಾದಕ ವಿಕ್ರಂ ಕುಮಾರ್ ಅವರು ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ ತಾಂತ್ರಿಕ ನಿರ್ದೇಶಕ ಸಾಯಿ ವೆಂಕಟೇಶ್ ಹಾಗೂ ಪಾಲಕರಾದ ವೈ. ಎಂ. ಜಗದೀಶ್ ಮತ್ತು ಶ್ರೀದೇವಿ ಜಗದೀಶ್ ಉಪಸ್ಥಿತರಿರುತ್ತಾರೆ.

  

ಹಿಮ್ಮೇಳ ಕಲಾವಿದರು:

ಮೋನಿಷಾ ರಂಗಪ್ರವೇಶಕ್ಕೆ ನಟವಾಂಗದಲ್ಲಿ ಗುರು ಸುಪರ್ಣಾ ವೆಂಕಟೇಶ, ಗಾಯನದಲ್ಲಿ ಶ್ರೀಕಾಂತ ಗೋಪಾಲಕೃಷ್ಣನ್, ಮೃದಂಗದಲ್ಲಿ ವಿದ್ವಾನ್ ವಿದ್ಯಾಶಂಕರ್ ಪಿಟೀಲಿನಲ್ಲಿ  ಕಿಕ್ಕೇರಿ ಜಯರಾಮ್, ಕೊಳಲು ವಾದನದಲ್ಲಿ ಮತ್ತೂರು ಶ್ರೀನಿಧಿ ಸಹಕಾರ ನೀಡಲಿದ್ದಾರೆ.


ಹೊಮ್ಮುತ್ತಿದೆ ಉಭಯ ನರ್ತನಾಸಕ್ತಿ:

ಕಥಕ್ ಮತ್ತು ಭರತನಾಟ್ಯ ಕ್ಷೇತ್ರದಲ್ಲಿ ಅತ್ಯುನ್ನತವಾದ ಸಾಧನೆಗಳನ್ನು ಮಾಡಬೇಕೆಂದು ಸಂಕಲ್ಪ ತೊಟ್ಟಿರುವ ಮೋನಿಷಾ ಅವರು ತಮ್ಮ ಮೂರನೇ ವರ್ಷದಿಂದಲೇ ನೃತ್ಯ ಕಲಿಕೆಗೆ ಅಡಿ ಇಟ್ಟರು. ಕಥಕ್‌ನಲ್ಲಿ ಮಾಯಾರಾವ್, ಶ್ವೇತಾ ವೆಂಕಟೇಶ್ ಮತ್ತು ದುರ್ಗಾ ಆರ್ಯ ಅವರಲ್ಲಿ ಕಲಿಕೆಯನ್ನು ನಡೆಸಿದರು. ಪುಣೆಯ ತಿಲೋಕ ಮಹಾರಾಷ್ಟ್ರ ವಿದ್ಯಾಪೀಠದಿಂದ ಸ್ನಾತಕೋತ್ತರ ಪದವಿ ಪಡೆದರು.

ಭರತನಾಟ್ಯದಲ್ಲಿ ಗುರು ಸುಪರ್ಣಾ ಅವರ ಗರಡಿಯಲ್ಲಿ ಪಳಗಿದರು. ಬೆಂಗಳೂರು ವಿವಿ ಯಿಂದ ಭರತನಾಟ್ಯದಲ್ಲಿ ಎಂಎ ಪದವೀಧರರಾದರು. ನೃತ್ಯದಲ್ಲಿ ದೂರದರ್ಶನದ ಬಿ ಹೈ ಗ್ರೇಡ್ ಕಲಾವಿದೆ ಆಗಿರುವುದೂ ಬಹು ವಿಶೇಷ.


ಶೈಕ್ಷಣಿಕ ರಂಗದಲ್ಲಿಯೂ ಸಾಧನೆ:

ಶೈಕ್ಷಣಿಕ ರಂಗದಲ್ಲಿಯೂ ಮೋನಿಷಾ ಅತ್ಯುನ್ನತ ಸಾಧನೆ ಮಾಡಿದ್ದಾರೆ. ಇಂಗ್ಲೆಂಡಿನ ನೋಟಿಂಗ್ ಹ್ಯಾಮ್ ಟ್ರೆಂಟ್ ವಿವಿ ಯಿಂದ ಇಂಟರ್ನ್ಯಾಷನಲ್ ಬಿಜಿನೆಸ್ ಹಾನರ್ಸ್ ಪದವಿಗೆ ಭಾಜನರಾಗಿದ್ದಾರೆ. ಎಲ್ಲೇ ಇದ್ದರೂ, ಯಾವುದೇ ವಿವಿಯಲ್ಲಿ ಪದವಿಗಳನ್ನು ಪಡೆದರೂ ಕಲೆಗೆ ಮಾತ್ರ ಇವರ ಬದ್ಧತೆ ಅನನ್ಯವಾಗಿದೆ ಎಂಬುದು ಗಮನೀಯ.  


ವಿವಿಧೆಡೆ ಕಲಾ ಪ್ರದರ್ಶನ:

ಪದವಿ ಮತ್ತು ಪ್ರತಿಭೆಗಳಿಗೆ ಅನ್ವರ್ಥವಾಗಿರುವ ಮೋನಿಷಾ ಅವರು ದೇಶ- ವಿದೇಶದ ಪ್ರತಿಷ್ಠಿತ ವೇದಿಕೆಗಳಲ್ಲಿ ಕಲಾ ಪ್ರದರ್ಶನ ಮಾಡಿದ್ದಾರೆ. ಐಸಿಸಿಆರ್ ಸಹಯೋಗದೊಂದಿಗೆ ರಷ್ಯಾದಲ್ಲಿ ಕಲಾ ಪ್ರದರ್ಶನ ನೀಡಿರುವ ಇವರು, ಉಡುಪಿಯ ಕೃಷ್ಣ ಮಠ,  ಉಚ್ಚಿಲ್ ಬ್ರಹ್ಮ ಕಲಶ ಉತ್ಸವ, ಅಮರಾವತಿ ನಾಟ್ಯ ಉತ್ಸವ,  ಚೆನ್ನೈನ ಮಾರ್ಗಾಳಿ ಉತ್ಸವ ಮತ್ತು ನವರಾತ್ರಿ ಉತ್ಸವಗಳಲ್ಲಿ ತಮ್ಮ ಕಲಾ ಪ್ರೌಢಿಮೆಯನ್ನು ಬಿಂಬಿಸಿದ್ದಾರೆ. ‘ಸ್ಥಿತಿಗತಿ ಡಾನ್ಸ್ ಕಂಪನಿ’ ಎಂಬ ಹೊಸ ಪರಿಕ್ರಮ ಆರಂಭಿಸಿರುವ ಈಕೆ,  ಹತ್ತಾರು ಯುವ ಕಲಾವಿದರಿಗೆ ವೇದಿಕೆ ಪ್ರದರ್ಶನಕ್ಕಾಗಿ ವಿಶೇಷ ತರಬೇತಿಯನ್ನು ನೀಡುವ ನಿಟ್ಟಿನಲ್ಲಿ ಹೊಸ ಹೊಸ ಹೆಜ್ಜೆಗಳನ್ನು ಇಡುತ್ತಿದ್ದಾರೆ. ಕಥಕ್‌ನಲ್ಲಿ ಈಗಾಗಲೇ ರಂಗಪ್ರವೇಶ ಮಾಡಿರುವ ಇವರು ಭರತನಾಟ್ಯ ರಂಗದಲ್ಲಿ ಇನ್ನೊಂದು ಮೈಲಿಗಲ್ಲು ಸ್ಥಾಪಿಸಲು ಈಗ ಅಣಿ ಆಗಿರುವುದು ವಿಶೇಷ ಎನಿಸಿದೆ. ಭರತನಾಟ್ಯ ಮತ್ತು ಕಥಕ್ ನೃತ್ಯ ಎಂಬುದು ಕೇವಲ ನೃತ್ಯವಲ್ಲ.  ಇದು ನನಗೆ ಜೀವನ ಪೂರ್ಣ ಕಲಿಕೆ. ಭಾವಾಭಿವ್ಯಕ್ತಿಯ ವೇದಿಕೆ.  ಅಂತರಂಗದ ಶೋಧನಾ ಮಾರ್ಗವೂ ಆಗಿದೆ. ಕಲೆಯನ್ನು ನಾವು ಪ್ರೀತಿಸಬೇಕು. ಅದಕ್ಕೆ ಗುರುವೇ ಸಾಧನ. ಗುರುವಿಂದಲೇ ಸಕಲವೂ.


- ಮೋನಿಷಾ ಐಸಿರಿ

ಯುವ ಕಲಾವಿದೆ

Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top