ಮಂಗಳೂರು: ರಘು ಇಡ್ಕಿದು ಅವರ "ಎನ್ನ ನಲಿಕೆ" ತುಳು ಕವನ ಸಂಕಲನದ ಇಂಗ್ಲಿಷ್ ಭಾಷಾಂತರ "ಫ್ರಮ್ ವಾಯ್ಸ್ ಟು ವಿಷನ್" ಕೃತಿಯು ಬೆಂಗಳೂರಿನ ಅಲಯನ್ಸ್ ವಿಶ್ವವಿದ್ಯಾನಿಲಯದಲ್ಲಿ ಬಿಡುಗಡೆಯಾಯಿತು.
ಕಾರ್ಯಕ್ರಮದಲ್ಲಿ ಮಾತನಾಡಿದ ವಿಶ್ವವಿದ್ಯಾಲಯದ ಸೆಂಟರ್ ಆಫ್ ಎಕ್ಸೆಲೆನ್ಸ್ ಫಾರ್ ಇಂಡಿಯನ್ ನಾಲೆಜ್ ಸಿಸ್ಟಮ್ಸ್ ನಿರ್ದೇಶಕ ಡಾ. ಎ. ಎಂ. ಶ್ರೀಧರನ್, "ಆಧುನಿಕ ತುಳು ಕಾವ್ಯವು ಭಾರತೀಯ ಸಾಹಿತ್ಯ ಪರಂಪರೆಯಲ್ಲಿ ವಿಶಿಷ್ಟವಾದ ಹಾಗೂ ಚಲನಶೀಲವಾದ ಸ್ಥಾನವನ್ನು ಹೊಂದಿದೆ. ಆಳವಾಗಿ ಬೇರೂರಿರುವ ಮೌಖಿಕ ಸಂಸ್ಕೃತಿಯಿಂದ ಉದ್ಭವಿಸಿರುವ ತುಳು ಕಾವ್ಯವು, ಸಮಕಾಲೀನ ಬದುಕಿನ ಸಂಕೀರ್ಣತೆಗಳೊಂದಿಗೂ ಏಕಕಾಲದಲ್ಲಿ ಸಂವಾದ ನಡೆಸುತ್ತಿದೆ. ರಘು ಇಡ್ಕಿದು ಅವರ ತುಳು ಕವಿತೆಗಳು ಈ ಪರಿವರ್ತನೆಯ ಪ್ರಕ್ರಿಯೆಯನ್ನು ಅತ್ಯಂತ ಸ್ಪಷ್ಟತೆ ಮತ್ತು ತೀವ್ರತೆಯೊಂದಿಗೆ ಪ್ರತಿಬಿಂಬಿಸುತ್ತವೆ. ಇವು ಕೇವಲ ಸಾಹಿತ್ಯಿಕ ರಚನೆಗಳಲ್ಲ; ಬದಲಾಗಿ ಸಾಂಸ್ಕೃತಿಕ ಅಭಿವ್ಯಕ್ತಿಗಳಾಗಿವೆ. ಜೀವಂತ ಅನುಭವಗಳು, ಸಾಮೂಹಿಕ ನೆನಪುಗಳು ಹಾಗೂ ವಿಕಾಸಗೊಳ್ಳುತ್ತಿರುವ ತುಳುನಾಡಿನ ಅಸ್ಮಿತೆಯಿಂದ ರೂಪುಗೊಂಡ ಧ್ವನಿಗಳಾಗಿವೆ" ಎಂದು ಅಭಿಪ್ರಾಯಪಟ್ಟರು.
ಈ ಕೃತಿಯನ್ನು ಎಸ್.ವ್ಯಾಸ ವಿಶ್ವವಿದ್ಯಾಲಯದ ವಿಶ್ರಾಂತ ಉಪಕುಲಪತಿಗಳಾದ ಡಾ. ಎಂ.ಕೆ. ಶ್ರೀಧರ್ ಬಿಡುಗಡೆಗೊಳಿಸಿದರು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಅಲಯನ್ಸ್ ವಿಶ್ವವಿದ್ಯಾನಿಲಯದ ಲಿಬರಲ್ ಆರ್ಟ್ ವಿಭಾಗದ ಡೀನ್ ಡಾ. ಲಿಜು ಜಾಕೊಬ್ ಪುಸ್ತಕದ ಮೊದಲ ಪ್ರತಿಯನ್ನು ಸ್ವೀಕರಿಸಿದರು. ಖ್ಯಾತ ಕೂಚುಪುಡಿ ನೃತ್ಯ ಕಲಾವಿದೆ ಡಾ. ರಮಾದೇವಿ, ವಿಶ್ವವಿದ್ಯಾಲಯದ ಪ್ರದರ್ಶನ ಕಲೆಗಳ ವಿಭಾಗದ ಮುಖ್ಯಸ್ಥೆ ಡಾ. ಶ್ರುತಿ ಚಂದ್ರಶೇಖರ್ ಹಾಗೂ ಉಪನ್ಯಾಸಕ, ಸಾಹಿತಿ ರಘು ಇಡ್ಕಿದು ಉಪಸ್ಥಿತರಿದ್ದರು.

