ತೆಂಕನಿಡಿಯೂರು: ಸರಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರ ತೆಂಕನಿಡಿಯೂರು, ಐಕ್ಯೂಎಸಿ (IQAC) ಹಾಗೂ ಕೌನ್ಸೆಲಿಂಗ್ ಸೆಲ್ ಸಂಯುಕ್ತ ಆಶ್ರಯದಲ್ಲಿ ಪ್ರಥಮ ವರ್ಷದ ಸ್ನಾತಕೋತ್ತರ ವಿದ್ಯಾರ್ಥಿಗಳಿಗಾಗಿ ಅಭಿವಿನ್ಯಾಸ ಕಾರ್ಯಕ್ರಮವು ಕಾಲೇಜಿನ ಎವಿ ಸಭಾಂಗಣದಲ್ಲಿ ಜರುಗಿತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ನಿತ್ಯಾನಂದ ವಿ. ಗಾಂವ್ಕರ್ ಅವರು, "ವಿದ್ಯಾರ್ಥಿಗಳು ಲಭ್ಯವಿರುವ ಸಂಪನ್ಮೂಲಗಳ ಸದ್ಬಳಕೆ ಮಾಡಿಕೊಳ್ಳಬೇಕು. ಸ್ಪಷ್ಟ ಗುರಿಗಳನ್ನು ರೂಢಿಸಿಕೊಳ್ಳುವುದರ ಮೂಲಕ ತಮ್ಮ ವಿದ್ಯಾರ್ಥಿ ಜೀವನವನ್ನು ಉತ್ತುಂಗದ ಸಾಧನೆಯಡೆಗೆ ಕೇಂದ್ರೀಕರಿಸಿ, ತನ್ಮೂಲಕ ಕುಟುಂಬಕ್ಕೆ ಹಾಗೂ ಕಲಿತ ಸಂಸ್ಥೆಗೆ ಕೀರ್ತಿ ತರಬೇಕು" ಎಂದು ಕಿವಿಮಾತು ಹೇಳಿದರು. ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ್ದ ಆಳ್ವಾಸ್ ಸೆಂಟರ್ ಫಾರ್ ವೆಲ್ನೆಸ್ ಆಂಡ್ ಟ್ರೈನಿಂಗ್ ಇದರ ನಿರ್ದೇಶಕಿ ಡಾ. ದೀಪಾ ಕೊಟಾರಿ ಅವರು 'ಪಿಲ್ಲರ್ಸ್ ಆಫ್ ವೆಲ್ನೆಸ್' ಕುರಿತು ವಿಸ್ತ್ರತ ಮಾಹಿತಿ ನೀಡಿದರು. ವಿದ್ಯಾರ್ಥಿಗಳು ಜೀವನದಲ್ಲಿ ಆಯ್ಕೆ, ಸಕಾರಾತ್ಮಕ ಮನೋಭಾವ ಹಾಗೂ ಒಡನಾಟವನ್ನು ಸರಿಯಾದ ರೀತಿಯಲ್ಲಿ ಸ್ಥಾಪಿಸಿ, ವೈಯಕ್ತಿಕ ಬೆಳವಣಿಗೆಗೆ ಇವುಗಳನ್ನು ಯಾವ ರೀತಿ ಇಂಧನವನ್ನಾಗಿಸಿಕೊಳ್ಳಬಹುದು ಎಂಬುದನ್ನು ವಿವಿಧ ಚಟುವಟಿಕೆಗಳ ಮೂಲಕ ಸವಿವರವಾಗಿ ಮಾರ್ಗದರ್ಶನ ಮಾಡಿದರು.
ಸ್ನಾತಕೋತ್ತರ ಸಮಾಜಕಾರ್ಯ ಹಾಗೂ ಕೌಂಸೆಲಿಂಗ್ ಸೆಲ್ ಸಂಯೋಜಕಿ ಡಾ. ಶ್ರೀದೇವಿ ಕೆ. ಪ್ರಾಸ್ತಾವಿಕವಾಗಿ ಮಾತನಾಡಿದರು. ವೇದಿಕೆಯಲ್ಲಿ ಸ್ನಾತಕೋತ್ತರ ವಿಭಾಗದ ಶೈಕ್ಷಣಿಕ ಸಲಹೆಗಾರರಾದ ಡಾ. ಶ್ರೀಧರ್ ಭಟ್, ಸ್ನಾತಕೋತ್ತರ ಅರ್ಥಶಾಸ್ತ್ರ ವಿಭಾಗದ ಸಂಯೋಜಕಿ ಡಾ. ಜಯಮಂಗಳ, ಸ್ನಾತಕೋತ್ತರ ಕನ್ನಡ ವಿಭಾಗದ ಸಂಯೋಜಕಿ ರತ್ನಮಾಲ ಹಾಗೂ ಎಂ.ಎ. ಇತಿಹಾಸ ಸಂಯೋಜಕ ಡಾ. ಮಹೇಶ್ ಕುಮಾರ್ ಕೆ.ಇ. ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಕಾಲೇಜಿನ ಬೋಧಕ, ಬೋಧಕೇತರ ಸಿಬ್ಬಂದಿ ಹಾಗೂ ಪ್ರಥಮ ವರ್ಷದ ಸ್ನಾತಕೋತ್ತರ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಎಂ.ಕಾಂ. ಸಂಯೋಜಕ ಡಾ. ದತ್ತ ಕುಮಾರ್ ಸ್ವಾಗತಿಸಿದರು, ಪ್ರಥಮ ಎಂ.ಎ. ಅರ್ಥಶಾಸ್ತ್ರ ವಿದ್ಯಾರ್ಥಿನಿ ಅಶ್ವಿತಾ ವಂದಿಸಿದರು ಮತ್ತು ಪ್ರಥಮ ಎಂ.ಎಸ್.ಡಬ್ಲ್ಯೂ. ವಿದ್ಯಾರ್ಥಿನಿ ಸಂಜನಾ ಕಾರ್ಯಕ್ರಮ ನಿರೂಪಿಸಿದರು.
