ಮೌನವಾದ ಅಕ್ಷರಗಳ ಮಾತು: ಪತ್ರಗಳ ಆತ್ಮೀಯ ಲೋಕ

Shreya Hegde
0



ಮಾನವನ ಭಾವನೆಗಳಿಗೆ ಭಾಷೆ ಅಭಿವ್ಯಕ್ತಿಯ ಮಾಧ್ಯಮವಾದರೆ, ಪತ್ರವು ಹೃದಯದಿಂದ ಹೃದಯಕ್ಕೆ ಭಾವನೆಗಳನ್ನು ತಲುಪಿಸುವ ಆತ್ಮೀಯ ಸೇತುವೆ. ಪತ್ರವೆಂದರೆ ಕೇವಲ ಕಾಗದದ ಮೇಲಿನ ಅಕ್ಷರಗಳ ಸಮೂಹವಲ್ಲ; ಅದು ಬರೆದವರ ವ್ಯಕ್ತಿತ್ವ, ವಿಚಾರಧಾರೆ, ಸಂವೇದನೆ, ಸಂಸ್ಕಾರ ಮತ್ತು ಸಂಬಂಧಗಳ ಜೀವಂತ ಅಭಿವ್ಯಕ್ತಿ. ಆದರೆ ತಂತ್ರಜ್ಞಾನದ ವೇಗದೊಂದಿಗೆ ಸಾಗುತ್ತಿರುವ ಇಂದಿನ ಸಮಾಜದಲ್ಲಿ ಪತ್ರ ಬರೆಯುವ ಸಂಸ್ಕೃತಿ ಕ್ರಮೇಣ ಮರೆಯಾಗುತ್ತಿರುವುದು ವಿಷಾದನೀಯ.


ಗದಗ ಜಿಲ್ಲೆ ಶಿರೋಳ ಗ್ರಾಮದವರೂ, ದಶಕದಿಂದ ಪರಿಚಿತರಾದ ನನ್ನ ಆತ್ಮೀಯ ಗೆಳೆಯರು, ಸಾಹಿತ್ಯ ಮತ್ತು ಶಿಕ್ಷಣ ಪ್ರೇಮಿಗಳಾದ ಚಿದಂಬರ ನಿಂಬರಗಿ ಅವರು ಸುಮಾರು 30ರಿಂದ 35 ವರ್ಷಗಳ ಹಿಂದೆ ನಾಡಿನ ಕವಿಗಳು, ಸಾಹಿತಿಗಳು, ಚಿಂತಕರು, ಸಾಧಕರು ಹಾಗೂ ಸಾಂಸ್ಕೃತಿಕ ಕ್ಷೇತ್ರದ ಗಣ್ಯರಿಂದ ಸ್ವೀಕರಿಸಿದ ಪತ್ರಗಳ ಸಂಗ್ರಹವನ್ನು ಗಮನಿಸಿದಾಗ, ಅಂದಿನ ಸಾಹಿತ್ಯಿಕ ಸಂಬಂಧಗಳ ಗಾಢತೆ, ವಿಚಾರ ವಿನಿಮಯದ ಪರಿಪಕ್ವತೆ ಮತ್ತು ಮಾನವೀಯ ಮೌಲ್ಯಗಳ ಶ್ರೀಮಂತಿಕೆ ಮನದಟ್ಟಾಗುತ್ತದೆ.


ಅವರ ಈ ಅಮೂಲ್ಯ ಸಂಗ್ರಹದಲ್ಲಿ ಎಸ್. ಎಲ್. ಭೈರಪ್ಪ, ಕಯ್ಯಾರ ಕಿಞ್ಞಣ್ಣ ರೈ, ಶಾಂತರಸ, ಡಾ. ರಾಮಚಂದ್ರ ಪಾಟೀಲ, ಪ್ರೊ. ಸೂಗಯ್ಯ ಹಿರೇಮಠ, ಡಾ. ಕೃಷ್ಣ ಜೋಶಿ, ಜಯದೇವಪ್ಪ ಜೈನಕೇರಿ, ಗಂಗಾಧರ ನಂದಿ, ಡಾ. ಸಿದ್ದಲಿಂಗ ಪಟ್ಟಣಶೆಟ್ಟಿ, ವೀಣಾ ನಟರಾಜ, ಡಾ. ಎಂ.ಡಿ. ಗೋಗೇರಿ, ಹಿಂದೂಸ್ತಾನಿ ಸಂಗೀತದ ದಿಗ್ಗಜೆ ಗಂಗೂಬಾಯಿ ಹಾನಗಲ್, ದಿ. ಸ. ಜ. ನಾಗಲೋಟಿಮಠ, ದಿ. ಚಂದ್ರಶೇಖರ್ ಪಾಟೀಲ್, ದಿ. ಚೆನ್ನವೀರ ಕಣವಿ, ದಿ. ಅನಿಲ್ ಕಮತಿ, ದಿ. ಡಾ. ತೊಂಟದ ಸಿದ್ದಲಿಂಗ ಮಹಾಸ್ವಾಮಿಗಳು, ದಿ. ಸಾ. ಶಿ. ಮರುಳಯ್ಯ ಹಾಗೂ ದಿ. ಡಾ. ಪಾಟೀಲ್ ಪುಟ್ಟಪ್ಪ ಅವರಂತಹ ಗಣ್ಯರ ಹೆಸರುಗಳು ಬರುತ್ತವೆ. ಇಂತಹ ಅದೆಷ್ಟೋ ಮಹೋದಯರ ಪತ್ರಗಳು ವ್ಯಕ್ತಿಗಳ ನಡುವಿನ ಸಂಪರ್ಕದ ದಾಖಲೆಗಳಷ್ಟೇ ಅಲ್ಲ; ಒಂದು ಕಾಲಘಟ್ಟದ ಸಾಹಿತ್ಯಿಕ, ಸಾಂಸ್ಕೃತಿಕ ಮತ್ತು ಬೌದ್ಧಿಕ ಬದುಕಿನ ಪ್ರತಿಬಿಂಬಗಳೂ ಹೌದು. ಕಾಲದ ಅಂತರವನ್ನು ದಾಟಿ ನಮ್ಮ ಕೈ ಸೇರುವ ಇಂತಹ ಪತ್ರಗಳು ವ್ಯಕ್ತಿತ್ವವನ್ನೂ ಯುಗಧರ್ಮವನ್ನೂ ಪರಿಚಯಿಸುವ ಅಪರೂಪದ ಆಕರಗಳಾಗಿವೆ.


ಒಂದು ಕಾಲದಲ್ಲಿ ಪತ್ರ ಬರೆಯುವುದು ದೈನಂದಿನ ಬದುಕಿನ ಸಹಜ ಭಾಗವಾಗಿತ್ತು. ಬಂಧುಗಳಿಗೆ ಕ್ಷೇಮಸಮಾಚಾರ ತಿಳಿಸುವುದರಿಂದ ಹಿಡಿದು, ಸಾಹಿತಿಗಳಿಗೆ ಅಭಿನಂದನೆ ಸಲ್ಲಿಸುವುದು, ಪುಸ್ತಕಗಳ ಕುರಿತು ಅಭಿಪ್ರಾಯ ಹಂಚಿಕೊಳ್ಳುವುದು ಹಾಗೂ ವೈಚಾರಿಕ ಭಿನ್ನಾಭಿಪ್ರಾಯಗಳನ್ನು ವ್ಯಕ್ತಪಡಿಸುವುದರವರೆಗೆ ಪತ್ರಗಳು ಬಹುಮುಖ ಪಾತ್ರ ನಿರ್ವಹಿಸುತ್ತಿದ್ದವು. ಹಸ್ತಾಕ್ಷರದ ವಿನ್ಯಾಸ, ಸಂಬೋಧನೆಯ ಸೌಜನ್ಯ ಮತ್ತು ಕೊನೆಯಲ್ಲಿ ವ್ಯಕ್ತವಾಗುತ್ತಿದ್ದ ಆತ್ಮೀಯತೆ ಪತ್ರಕ್ಕೆ ವಿಶಿಷ್ಟ ಸೌಂದರ್ಯ ನೀಡುತ್ತಿದ್ದವು. ಇಂದು ಮೊಬೈಲ್ ಸಂದೇಶಗಳು, ಇ-ಮೇಲ್‌ಗಳು ಮತ್ತು ಸಾಮಾಜಿಕ ಜಾಲತಾಣಗಳು ಸಂವಹನವನ್ನು ಸುಲಭಗೊಳಿಸಿವೆ. ಆದರೆ ಸಂವಹನದ ವೇಗ ಹೆಚ್ಚಾದಂತೆ ಅದರ ಭಾವನಾತ್ಮಕ ಆಳ ಕಡಿಮೆಯಾಗಿದೆ. ಇಂದಿನ ಅನೇಕ ಸಂದೇಶಗಳು ತಕ್ಷಣದ ಪ್ರತಿಕ್ರಿಯೆಗೆ ಸೀಮಿತವಾಗುತ್ತಿವೆ. ಎಲ್ಲರನ್ನೂ ಸಂಪರ್ಕಿಸುವ ತಂತ್ರಜ್ಞಾನ ನಮ್ಮ ಕೈಯಲ್ಲಿದ್ದರೂ, ಹೃದಯಗಳ ನಡುವಿನ ಅಂತರ ಕಡಿಮೆಯಾಗದಿರುವುದು ವಿಪರ್ಯಾಸ. ಆದ್ದರಿಂದ ಆಧುನಿಕ ತಂತ್ರಜ್ಞಾನವನ್ನು ವಿರೋಧಿಸುವುದಕ್ಕಿಂತ, ಅದರ ಅನುಕೂಲಗಳೊಂದಿಗೆ ಪತ್ರ ಸಂಸ್ಕೃತಿಯ ಮೌಲ್ಯಗಳನ್ನೂ ಉಳಿಸಿಕೊಳ್ಳುವುದು ಇಂದಿನ ಅಗತ್ಯವಾಗಿದೆ.


ಪತ್ರ ಬರವಣಿಗೆಯ ಮಹತ್ವವನ್ನು ಶಿಕ್ಷಣ ವ್ಯವಸ್ಥೆಯೂ ಗುರುತಿಸಿರುವುದು ಗಮನಾರ್ಹ. ಬೆಳಗಾವಿಯ ಕಿತ್ತೂರು ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯದ ಬಿಕಾಂ ಪ್ರಥಮ ಸೆಮಿಸ್ಟರ್‌ನ ಕನ್ನಡ ಪಠ್ಯಕ್ರಮದಲ್ಲಿ ಕೌಶಲ್ಯ ಕನ್ನಡ ಘಟಕದ ಮೂಲಕ ಪತ್ರಗಳ ವಿಧಗಳು ಮತ್ತು ಪತ್ರ ಬರವಣಿಗೆಯ ಕೌಶಲಗಳಿಗೆ ವಿಶೇಷ ಅವಕಾಶ ಕಲ್ಪಿಸಿರುವುದು ಉತ್ತಮ ಬೆಳವಣಿಗೆ. ವಿದ್ಯಾರ್ಥಿಗಳಿಗೆ ಪತ್ರ ಬರೆಯುವುದನ್ನು ಕಲಿಸುವುದು ಕೇವಲ ಪರೀಕ್ಷೆಯಲ್ಲಿ ಅಂಕ ಗಳಿಸುವ ಉದ್ದೇಶಕ್ಕೆ ಸೀಮಿತವಾಗಬಾರದು. ಅದು ಅವರ ಭಾಷಾ ಸಾಮರ್ಥ್ಯ, ಅಭಿವ್ಯಕ್ತಿ ಕೌಶಲ, ತಾರ್ಕಿಕ ಚಿಂತನೆ ಮತ್ತು ಸಂವಹನದ ಸೌಜನ್ಯವನ್ನು ಬೆಳೆಸುವ ಪ್ರಕ್ರಿಯೆಯಾಗಬೇಕು. ಪಠ್ಯಪುಸ್ತಕದಲ್ಲಿ ಪತ್ರದ ಪರಿಚಯವಿರುವುದರ ಜೊತೆಗೆ ವಿದ್ಯಾರ್ಥಿಗಳಿಂದ ನೈಜ ಪತ್ರಗಳನ್ನು ಬರೆಯಿಸುವ ಅಭ್ಯಾಸವೂ ಇರಬೇಕು.


ಸಾಹಿತ್ಯ ಚರಿತ್ರೆಯನ್ನು ಅಧ್ಯಯನ ಮಾಡುವಾಗ ಕೃತಿಗಳಿಗೆ ನೀಡುವಷ್ಟೇ ಮಹತ್ವವನ್ನು ಸಾಹಿತಿಗಳ ಪತ್ರಗಳಿಗೂ ನೀಡಬೇಕಾಗಿದೆ. ಚಿದಂಬರ ನಿಂಬರಗಿ ಅವರಲ್ಲಿರುವ ಹಳೆಯ ಪತ್ರಗಳ ಸಂಗ್ರಹವನ್ನು ಕಾಲಾನುಕ್ರಮದಲ್ಲಿ ಜೋಡಿಸಿ, ಡಿಜಿಟಲ್ ರೂಪದಲ್ಲಿ ಸಂರಕ್ಷಿಸಿದರೆ ಮುಂದಿನ ಸಂಶೋಧಕರಿಗೆ ಅಮೂಲ್ಯ ಆಕರ ದೊರೆಯುತ್ತದೆ. ಈ ಪತ್ರ ಸಂಸ್ಕೃತಿಯನ್ನು ಉಳಿಸುವ ಜವಾಬ್ದಾರಿ ಕುಟುಂಬ, ಶಿಕ್ಷಣ ಸಂಸ್ಥೆಗಳು, ಸಾಹಿತ್ಯ ಸಂಘಟನೆಗಳು ಮತ್ತು ಸಮಾಜದ ಮೇಲಿದೆ. ಶಾಲಾ-ಕಾಲೇಜುಗಳಲ್ಲಿ ಪತ್ರ ಬರವಣಿಗೆಯ ಸ್ಪರ್ಧೆಗಳನ್ನು ಆಯೋಜಿಸುವುದು, ಗ್ರಂಥಾಲಯಗಳಲ್ಲಿ ಹಿರಿಯ ಸಾಹಿತಿಗಳ ಪತ್ರಗಳನ್ನು ಸಂರಕ್ಷಿಸುವುದು ಹಾಗೂ ಡಿಜಿಟಲ್ ಮಾಧ್ಯಮಗಳ ಮೂಲಕ ಇವುಗಳನ್ನು ದಾಖಲಿಸುವುದು ಇಂದಿನ ತುರ್ತು ಅವಶ್ಯಕತೆಯಾಗಿದೆ.


ಪತ್ರವೆಂದರೆ ಕೇವಲ ಕಾಗದದ ಮೇಲಿನ ಅಕ್ಷರಗಳಲ್ಲ; ಅದು ಕಾಲದೊಂದಿಗೆ ಸಂವಾದ ನಡೆಸುವ ಹೃದಯದ ಧ್ವನಿ. ಆ ಧ್ವನಿ ಮೌನವಾಗದಿರಲಿ. ಅಕ್ಷರಗಳ ಆತ್ಮೀಯತೆ ಮುಂದಿನ ಪೀಳಿಗೆಗೂ ತಲುಪಲಿ; ಮರೆಯಾಗುತ್ತಿರುವ ಪತ್ರ ಸಂಸ್ಕೃತಿ ಮತ್ತೆ ಬದುಕಿನ ಭಾಗವಾಗಲಿ.


ಲೇಖನ: ಡಾ. ಜಯವೀರ ಎ. ಕೆ.

(ಖೇಮಲಾಪುರ, ರಾಯಬಾಗ ತಾಲ್ಲೂಕು)

Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top