ಶ್ರೀ ದುರ್ಗಾಪರಮೇಶ್ವರಿ ಪ್ರೌಢಶಾಲೆ: 50ನೇ ಸುವರ್ಣ ಮಹೋತ್ಸವದ ಸಂಘಟನಾ ಸಮಿತಿ ರಚನೆ

Shreya Hegde
0


ಧರ್ಮತ್ತಡ್ಕ: ಶ್ರೀ ದುರ್ಗಾಪರಮೇಶ್ವರಿ ಪ್ರೌಢಶಾಲೆ, ಧರ್ಮತ್ತಡ್ಕ 1976 ರಿಂದ ಸ್ಥಾಪನೆಗೊಂಡು ಇದೀಗ 2026ರಲ್ಲಿ ತನ್ನ 50ನೇ ಸುವರ್ಣ ಮಹೋತ್ಸವದ ಆಚರಣೆಯ ಹಂತದಲ್ಲಿದೆ. ಇದರ ಅಂಗವಾಗಿ ಸಂಘಟನಾ ಸಮಿತಿ ರಚನಾ ಸಭೆಯು ಅಕ್ಟೋಬರ್ 11ರಂದು ನಡೆಯಿತು. ಶಾಲೆಯ ಸುವರ್ಣ ಮಹೋತ್ಸವವನ್ನು ಅರ್ಥಪೂರ್ಣವಾಗಿ ಆಚರಿಸುವುದರ ಜೊತೆಗೆ, ಶಾಲೆಯ ಅಭಿವೃದ್ಧಿಗೆ ಪೂರಕವಾಗಿ ತೆರೆದ ಸಭಾಮಂದಿರವನ್ನು ನಿರ್ಮಿಸುವ ಹಾಗೂ ಸಂಘದ ಔಚಿತ್ಯ ಪೂರ್ಣ ಮುಂಬರುವ ಯೋಜನೆಯ ಕುರಿತ ಉದ್ದೇಶದಿಂದ ಹಳೆ ವಿದ್ಯಾರ್ಥಿಗಳ ಸಂಘದ ನೇತೃತ್ವದಲ್ಲಿ ಈ ಸಭೆಯನ್ನು ಆಯೋಜಿಸಲಾಗಿತ್ತು. ಸಭೆಯಲ್ಲಿ ಶಾಲೆಯ ಹಿತೈಷಿಗಳು, ವಿದ್ಯಾಭಿಮಾನಿಗಳು, ಹಳೆ ವಿದ್ಯಾರ್ಥಿಗಳು, ರಕ್ಷಕ-ಶಿಕ್ಷಕ ಸಂಘದ ಸದಸ್ಯರು, ನಿವೃತ್ತ ಗುರುವೃಂದದವರು, ಅಧ್ಯಾಪಕರು ಹಾಗೂ ಅಧ್ಯಾಪಕೇತರ ಸಿಬ್ಬಂದಿ ಭಾಗವಹಿಸಿದ್ದರು.


ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಶ್ರೀ ಚಂದ್ರಹಾಸ ಪೊನ್ನೆತ್ತೊಡು ಅವರು ಸಭೆಯ ಅಧ್ಯಕ್ಷತೆ ವಹಿಸಿದ್ದರು. 'ಹಿರಿಯರ ಪರಿಶ್ರಮದ ಫಲವಾಗಿ ಈ ವಿದ್ಯಾಸಂಸ್ಥೆಯು ಸಮಾಜದಲ್ಲಿ ಅನೇಕ ವಿದ್ಯಾರ್ಥಿಗಳ ಭವಿಷ್ಯವನ್ನು ರೂಪಿಸಿದೆ. ನಮ್ಮೆಲ್ಲರ ಬದುಕಿಗೆ ಭದ್ರ ಬುನಾದಿಯಾದ ಈ ಶಾಲೆಯ ಸುವರ್ಣ ಮಹೋತ್ಸವದ ಸಂದರ್ಭದಲ್ಲಿ ಶಾಲೆಯ ಅಭಿವೃದ್ಧಿಗೆ ಪೂರಕವಾಗುವಂತೆ ವ್ಯವಸ್ಥಿತ ಸಭಾಮಂದಿರ ನಿರ್ಮಿಸುವ ಯೋಜನೆಯನ್ನು ಕೈಗೆತ್ತಿಕೊಳ್ಳಲು ನಿರ್ಧರಿಸಲಾಗಿದೆ. ಎಲ್ಲಾ ಹಳೆವಿದ್ಯಾರ್ಥಿಗಳ ಸಹಾಯ - ಸಹಕಾರವನ್ನು ಮುಂಬರುವ ದಿನಗಳಲ್ಲಿ ನಿರೀಕ್ಷಿಸುತ್ತೇವೆ ಎಂದು ಅವರು ತಿಳಿಸಿದರು.


ಶಾಲೆಯ ಆಡಳಿತ ಮಂಡಳಿ ಸದಸ್ಯರೂ ಹಳೆ ವಿದ್ಯಾರ್ಥಿ ಹಾಗೂ ನಿವೃತ್ತ ಪ್ರಾಂಶುಪಾಲರಾದ ಎನ್. ರಾಮಚಂದ್ರ ಭಟ್ ಅವರು ದೀಪ ಪ್ರಜ್ವಲಿಸುವ ಮೂಲಕ ಸಭೆಗೆ ಚಾಲನೆ ನೀಡಿದರು. ಗ್ರಾಮೀಣ ಪ್ರದೇಶವಾದ ಧರ್ಮತ್ತಡ್ಕದಲ್ಲಿ ನಿಡುವಜೆ ದಿ. ರಾಮಚಂದ್ರ ಭಟ್ ಹಾಗೂ ನೆರೋಳು ಸುಬ್ಬಣ್ಣ ಭಟ್ ಅವರ ಸಾರ್ಥಕ್ಯದ, ನಿಸ್ವಾರ್ಥ ಸಾಮಾಜಿಕ ಏಳಿಗೆಯ ಫಲವಾಗಿ ವಿದ್ಯಾರ್ಥಿಗಳ ಕಲಿಕೆಗೆ ಪೂರಕವಾಗಿ ಬೆಳೆದು ಬಂದಿರುವ ಈ ವಿದ್ಯಾಸಂಸ್ಥೆಯು 50 ವರ್ಷಗಳನ್ನು ಪೂರೈಸುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ. 1976ರಿಂದ ಈವರೆಗೆ ಸಾವಿರಾರು ವಿದ್ಯಾರ್ಥಿಗಳು ಇಲ್ಲಿ ವಿದ್ಯಾಭ್ಯಾಸ ಮಾಡಿ ತಮ್ಮ ಜೀವನದಲ್ಲಿ ಉತ್ತಮ ನೆಲೆಯನ್ನು ಕಂಡುಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಹಳೆ ವಿದ್ಯಾರ್ಥಿಗಳು ಶಾಲೆಯ ಅಭಿವೃದ್ಧಿಗೆ ಕೈಜೋಡಿಸಬೇಕು ಎಂದು ಅವರು ಕರೆ ನೀಡಿದರು.


ಹೈಯರ್ ಸೆಕೆಂಡರಿ ವಿಭಾಗದ ಪ್ರಾಂಶುಪಾಲರಾದ ಸತೀಶ್ ಶೆಟ್ಟಿ ಒಡ್ಡಂಬೆಟ್ಟು ಅವರು ಸಭಿಕರನ್ನು ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡುತ್ತಾ; ಶಾಲೆಯ ಆರಂಭ, ಶೈಕ್ಷಣಿಕ ಸಾಧನೆಗಳು, ಶಾಲೆ ಮತ್ತು ಸಮಾಜದ ನಡುವಿನ ಸಂಬಂಧ, ಉಪಜಿಲ್ಲಾ ಮಟ್ಟದ ಸಾಧನೆಗಳು ಹಾಗೂ ಶಾಲೆಯ ಬೆಳವಣಿಗೆಯಲ್ಲಿ ಪೂರ್ವ ವಿದ್ಯಾರ್ಥಿಗಳ ಸಹಭಾಗಿತ್ವವನ್ನು ವಿವರಿಸಿದರು. ಶಾಲೆಯ ವ್ಯವಸ್ಥಾಪಕರಾದ ಎನ್ ಶಂಕರನಾರಾಯಣ ಭಟ್ ಮಾತನಾಡುತ್ತಾ 'ನವರಾತ್ರಿ ಆರಂಭದ ಈ ಸಂದರ್ಭದಲ್ಲಿ ಸುವರ್ಣ ಮಹೋತ್ಸವದ ಸಂಘಟನಾ ಸಮಿತಿ ರಚನೆಗೆ ಸಭೆ ಚಾಲನೆಗೊಳ್ಳುವುದು ಔಚಿತ್ಯಪೂರ್ಣವಾಗಿದೆ. ಶಾಲೆಯನ್ನು ಕಟ್ಟಿ ಬೆಳೆಸುವಲ್ಲಿ ಹಿರಿಯರ ಪರಿಶ್ರಮ, ವರ್ತಮಾನದ ಶೈಕ್ಷಣಿಕ ಸಾಧನೆ ಹಾಗೂ ಭವಿಷ್ಯದ ಕುರಿತಾದ ಸ್ಪಷ್ಟ ದೃಷ್ಟಿಕೋನ ಮಹತ್ವದ್ದಾಗಿದೆ. ಈ ನಿಟ್ಟಿನಲ್ಲಿ ಹಳೆ ವಿದ್ಯಾರ್ಥಿಗಳ ಒಗ್ಗೂಡುವಿಕೆಯ ಸನ್ಮನಸು  ಶಾಲೆಗೆ ಐವತ್ತು ಸಂವತ್ಸರ ತುಂಬುವ ಈ ಗಳಿಗೆಯಲ್ಲಿ ಅವರ ಕೊಡುಗೆ ಸಮಯೋಚಿತ ನಿರ್ಧಾರವಾಗಿದೆ ಎಂದು ಅಭಿಪ್ರಾಯಪಟ್ಟರು.


ಧರ್ಮತ್ತಡ್ಕ ಪ್ರಾಥಮಿಕ ಶಾಲೆಯ ಅಧ್ಯಾಪಕರೂ, ಪೆರ್ಮುದೆ ವಾರ್ಡ್ ಸದಸ್ಯರೂ ಹಾಗೂ ಪೈವಳಿಕೆ ಸ್ಥಾಯಿ ಸಮಿತಿ ಸದಸ್ಯರೂ ಆದ ಶ್ರೀನಿವಾಸ ಕೆ.ಎಚ್. ಅವರು ಮಾತನಾಡಿ, ಸುವರ್ಣ ಮಹೋತ್ಸವವು ಅತ್ಯಂತ ಅಮೂಲ್ಯವಾದ ಸಂದರ್ಭವಾಗಿದೆ. ಈ ಸಂದರ್ಭದಲ್ಲಿ ಹಳೆ ವಿದ್ಯಾರ್ಥಿಗಳು ಶಾಲೆಯ ಏಳಿಗೆಯಲ್ಲಿ ಸಕ್ರಿಯವಾಗಿ ಪಾಲ್ಗೊಂಡು ತಮ್ಮ ಕೊಡುಗೆಯನ್ನು ನೀಡಬೇಕು ಎಂದು ಹೇಳಿದರು. ಪ್ರೌಢಶಾಲೆಯ ಮುಖ್ಯೋಪಾಧ್ಯಾಯರಾದ ಶಶಿಕುಮಾರ್ ಪಿ. ಅವರು ಮಾತನಾಡಿ, ಶಾಲೆಯ ಅಭಿವೃದ್ಧಿಯಲ್ಲಿ ಹಳೆ ವಿದ್ಯಾರ್ಥಿಗಳು ಮತ್ತಷ್ಟು ಸಕ್ರಿಯವಾಗಿ ತೊಡಗಿಸಿಕೊಂಡು ಶಾಲೆಯ ಬೆಳವಣಿಗೆಗೆ ಸಹಕರಿಸಬೇಕು ಎಂದು ಹಾರೈಸಿದರು. ಚೇವಾರು ವಾರ್ಡ್ ಸದಸ್ಯರಾದ ಅಝೀಝ್ ಚೇವಾರು ಅವರು ತಮ್ಮ ಶಾಲಾ ದಿನಗಳನ್ನು ಸ್ಮರಿಸುತ್ತಾ, ತಾವು ಜನಪ್ರತಿನಿಧಿಯಾಗಲು ಈ ಶಾಲೆಯಲ್ಲಿ ಪಡೆದ ಶಿಕ್ಷಣವೇ ಭದ್ರ ಬುನಾದಿಯಾಗಿದೆ ಎಂದು ಹೇಳಿದರು.


ಧರ್ಮತ್ತಡ್ಕ ಪ್ರದೇಶದ ವಾರ್ಡ್ ಸದಸ್ಯರಾದ ಅಬ್ದುಲ್ಲಾ ಎ. ಅವರು ಮಾತನಾಡಿ, “ನಮ್ಮ ಊರಿನ ವಿದ್ಯಾರ್ಥಿಗಳ ಕಲಿಕೆಗೆ ಆಸರೆಯಾಗಿ ಹೆಮ್ಮರವಾಗಿ ಬೆಳೆದಿರುವ ಈ ಶಾಲೆಯ ಸುವರ್ಣ ಮಹೋತ್ಸವವನ್ನು ಹಳೆ ವಿದ್ಯಾರ್ಥಿಗಳ ಉತ್ತಮ ಸಹಭಾಗಿತ್ವದೊಂದಿಗೆ ವೈಭವದಿಂದ ಆಚರಿಸುವಂತಾಗಲಿ” ಎಂದು ಆಶಿಸಿದರು. ಶಾಲೆಯ ಹಳೆ ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ಜಾನ್ ಡಿಸೋಜಾ ಅವರು ಮಾತನಾಡಿ, “2026ರ ಜೂನ್ 11ರಂದು ನಮ್ಮ ಪ್ರೌಢಶಾಲೆಗೆ 50 ವರ್ಷಗಳು ಪೂರ್ಣಗೊಂಡಿವೆ. ಈ ಸಂದರ್ಭದಲ್ಲಿ ಶಾಲೆಯ ಸುವರ್ಣ ಮಹೋತ್ಸವವನ್ನು ಹಳೆ ವಿದ್ಯಾರ್ಥಿಗಳ ಸಹಭಾಗಿತ್ವದಲ್ಲಿ ಆಚರಿಸಬೇಕೆಂದು ಆಡಳಿತ ಮಂಡಳಿಯವರಲ್ಲಿ ಮನವಿ ಮಾಡಿದಾಗ, ಅವರು ತುಂಬು ಮನಸ್ಸಿನಿಂದ ಒಪ್ಪಿಗೆ ಸೂಚಿಸಿದ್ದು ನಮಗೆ ಸಂತಸ ತಂದಿದೆ” ಎಂದರು.


ಶಾಲೆಯ ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷರಾದ ದಿನೇಶ್ ಚೆರುಗೋಳಿ ಅವರು ಸುವರ್ಣ ಮಹೋತ್ಸವದ ಸಂಭ್ರಮವು ಉಜ್ವಲ ಯಶಸ್ಸನ್ನು ಕಾಣಲಿ ಎಂದು ಹಾರೈಸಿದರು. ಬಳಿಕ ಮಾತೃಮಂಡಳಿಯ ಅಧ್ಯಕ್ಷೆ ಶ್ರೀಮತಿ ಪಾವನ ಎಸ್. ಅವರು ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯರಾದ ಎನ್ ಮಹಾಲಿಂಗ ಭಟ್ ಅವರು ಸುವರ್ಣ ಮಹೋತ್ಸವ ಸಮಿತಿ ತೀರ್ಮಾನಗಳು ಶಾಲೆಗೆ ಅಭಿವೃದ್ಧಿ ತರುವಂತಾಗಲಿ, ಹಿರಿಯ ಪ್ರಾಥಮಿಕ ಶಾಲೆ ಇನ್ನು ಎಂಟು ವರ್ಷಗಳಲ್ಲಿ ತನ್ನ ಶತಮಾನೋತ್ಸವ ಆಚರಣೆಗೆ ಸಿದ್ಧವಾಗುತ್ತಿದೆ ಎಂದರು. ಬಳಿಕ ಹಿರಿಯ ಪ್ರಾಥಮಿಕ ಶಾಲೆಯ ವ್ಯವಸ್ಥಾಪಕಿ ಶ್ರೀಮತಿ ವಿಜಯಶ್ರೀ ಬಿ ಅವರು ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಶಿಕ್ಷಕರಾದ ರಾಮಮೋಹನ್ ಚೆಕ್ಕೆಮನೆ ಅವರು ತಮ್ಮ ಶಾಲಾ ಅನುಭವಗಳನ್ನು ಸ್ಮರಿಸಿಕೊಂಡು, ನೂತನ ಸಂಘಟನಾ ಸಮಿತಿಯ ರಚನೆಯ ಕರಡು ಪ್ರತಿಯನ್ನು ಮಂಡಿಸಿ, ಸುವರ್ಣ ಮಹೋತ್ಸವ ಸಮಿತಿಯ ಗೌರವಾಧ್ಯಕ್ಷರಾಗಿ ಉದ್ಯಮಿ ಇ ಎಸ್ ಮಹಾಬಲೇಶ್ವರ ಭಟ್ ಅವರನ್ನು ಎಲ್ಲರ ಒಮ್ಮತದಿಂದ ಆರಿಸಲಾಯಿತು.


ಬಳಿಕ ಸುವರ್ಣ ಮಹೋತ್ಸವ ಆಚರಣೆಯ ವಿವಿಧ ಸಮಿತಿ -ಉಪಸಮಿತಿಗಳ ಪದಾಧಿಕಾರಿಗಳನ್ನು ಸದಸ್ಯರನ್ನು ಘೋಷಿಸಿದರು. ಸಭೆಯಲ್ಲಿ ಸಂಘಟನಾ ಸಮಿತಿಯ ಅಧ್ಯಕ್ಷರಾಗಿ ಆಯ್ಕೆಯಾದ ಕ್ಯಾಂಪ್ಕೋ ಸದಸ್ಯರಾದ ಕೋಲಾರ ಸತೀಶ ಚಂದ್ರ ಭಂಡಾರಿ ಅವರು ಮಾತನಾಡಿ, ಜನ್ಮ ನೀಡಿದ ತಂದೆ-ತಾಯಿ, ಶಿಕ್ಷಣಕ್ಕೆ ಆಸರೆಯಾದ ವಿದ್ಯಾಸಂಸ್ಥೆ ಹಾಗೂ ಮಾರ್ಗದರ್ಶನ ನೀಡಿದ ಗುರುಗಳನ್ನು ಜೀವನದಲ್ಲಿ ಎಂದಿಗೂ ಮರೆಯಬಾರದು ಎಂದರು. ಜನವರಿ 3 ರಂದು ನಡೆಯಲಿರುವ ಸುವರ್ಣ ಮಹೋತ್ಸವ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಎಲ್ಲರೂ ಮನಃಪೂರ್ವಕವಾಗಿ ಶ್ರಮಿಸಬೇಕು ಎಂದು ಕರೆ ನೀಡಿದರು. ಸುವರ್ಣ ಮಹೋತ್ಸವದ ಯೋಜನೆಯಡಿ ನಿರ್ಮಾಣವಾಗಲಿರುವ ಸಭಾಮಂದಿರವು ವಿದ್ಯಾರ್ಥಿಗಳ ಕಲಿಕೆ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳಿಗೆ ನೆರವಾಗಲಿ ಎಂದು ಆಶಿಸಿದರು.


ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯರಾದ ಎನ್ ಎಚ್ ಲಕ್ಮೀನಾರಾಯಣ ಭಟ್ ಮತ್ತು ಹಳೆ ವಿದ್ಯಾರ್ಥಿ ಹಾಗೂ ಕನ್ನಡ ಸಾಹಿತ್ಯ ಪರಿಷತ್ ಸಂಘಟನಾ ಕಾರ್ಯದರ್ಶಿಯಾಗಿರುವ ರಾಮಚಂದ್ರ ಭಟ್ ಪಿ ತಮ್ಮ ಅವರು ತಮ್ಮ ಮನದಾಳದ ಮಾತುಗಳನ್ನು ವ್ಯಕ್ತಪಡಿಸಿದರು. ಸುವರ್ಣ ಮಹೋತ್ಸವ ಸಮಿತಿಯ ಕಾರ್ಯದರ್ಶಿಯಾಗಿ ಆಯ್ಕೆಯಾದ ನಿವೃತ್ತ ಮುಖ್ಯೋಪಾಧ್ಯಾಯರಾದ ಇ.ಎಚ್. ಗೋವಿಂದ ಭಟ್ ಅವರು ಸಭೆಯ ನಿರ್ಣಯಗಳನ್ನು ವಿವರಿಸಿ, ಆಗಮಿಸಿದ ಎಲ್ಲರಿಗೂ ಧನ್ಯವಾದಗಳನ್ನು ಸಮರ್ಪಿಸಿದರು.


ಪ್ರಸ್ತುತ ಸಭೆಯಲ್ಲಿ ಹಳೆವಿದ್ಯಾರ್ಥಿಗಳ, ಹಾಗೂ ವಿದ್ಯಾಭಿಮಾನಿಗಳ ಸಲಹೆ ಸೂಚನೆಗಳನ್ನು ಸ್ವೀಕರಿಸಲಾಯಿತು. ಶ್ರೀಮತಿ ಸುಮನಾ ಎಸ್ ಪ್ರಾರ್ಥಿಸಿ, ಹಳೆ ವಿದ್ಯಾರ್ಥಿ- ಮಾಜಿ ರಕ್ಷಕ ಶಿಕ್ಷಕ ಸಮಿತಿ ಅಧ್ಯಕ್ಷ ಶಿವಪ್ರಸಾದ ಶೆಟ್ಟಿ ಕುಡಾಲ್, ಶಿಕ್ಷಕರಾದ  ಶಿವನಾರಾಯಣ ಭಟ್, ಪ್ರಶಾಂತ ಹೊಳ್ಳ ಎನ್ ನಿರೂಪಿಸಿದರು. ಶಾಲೆಯ ಸುವರ್ಣ ಮಹೋತ್ಸವವನ್ನು ಯಶಸ್ವಿಗೊಳಿಸುವ ನಿಟ್ಟಿನಲ್ಲಿ ಸಂಘಟಿತ ಪ್ರಯತ್ನಗಳೊಂದಿಗೆ ಮುಂದುವರಿಯುವ ಸಂಕಲ್ಪದೊಂದಿಗೆ ಸಭೆ ಮುಕ್ತಾಯಗೊಂಡಿತು.

Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top