ಬೆಂಗಳೂರು: ಸರ್ದಾರ್ ವಲ್ಲಭಭಾಯಿ ಪಟೇಲ್ ಅವರು 500ಕ್ಕೂ ಹೆಚ್ಚು ಸಂಸ್ಥಾನಗಳನ್ನು ಸಾಮ, ದಾನ, ಭೇದ, ದಂಡ ಈ ನಾಲ್ಕು ಚತುರೋಪಾಯಗಳ ಮೂಲಕ ಭಾರತದ ಜೊತೆಗೆ ಒಗ್ಗೂಡಿಸುವ ಕೆಲಸ ಮಾಡಿದ್ದರು. ಅವರೊಬ್ಬ ಸ್ವಾರ್ಥವಿಲ್ಲದ ಸಂತ, ನಿಸ್ವಾರ್ಥಿ ರಾಷ್ಟ್ರಪುರುಷ ಎಂದು ಮಾಜಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಮತ್ತು ವಿಧಾನಪರಿಷತ್ ಸದಸ್ಯ ಸಿ.ಟಿ. ರವಿ ಅವರು ವಿಶ್ಲೇಷಿಸಿದ್ದಾರೆ.
ರಾಜ್ಯ ಬಿಜೆಪಿ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಏರ್ಪಡಿಸಿದ್ದ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಜಯಂತಿ ಕಾರ್ಯಕ್ರಮದಲ್ಲಿ ಪುಷ್ಪಾರ್ಚನೆ ನೆರವೇರಿಸಿ ಮಾತನಾಡಿದ ಅವರು, ಸ್ವತಂತ್ರ ಭಾರತದ ಇತಿಹಾಸದಲ್ಲಿ ಮರೆಯಲಾರದ, ಅವಿಸ್ಮರಣೀಯವಾಗಿರುವ ಹೆಸರು ಪಟೇಲ್ರದು. 1947 ಆಗಸ್ಟ್ 15 ರಂದು ಬ್ರಿಟಿಷರು ಇಡೀ ಭಾರತಕ್ಕೆ ಅವರು ಸ್ವಾತಂತ್ರ್ಯವನ್ನು ಕೊಡಲಿಲ್ಲ, ಬ್ರಿಟಿಷರು ಭಾರತ ವಿಭಜನೆ ಮಾಡಿ 500ಕ್ಕೂ ಹೆಚ್ಚು ಸಂಸ್ಥಾನಗಳಿಗೆ ನೀವು ಪಾಕಿಸ್ತಾನಕ್ಕಾದರೂ ಸೇರಬಹುದು, ಭಾರತದ ಜೊತೆಗಾದರೂ ಇರಬಹುದು ಅಥವಾ ಸ್ವತಂತ್ರವಾಗಿ ಇರಬಹುದು ಎಂದಿದ್ದರು. ಸರ್ದಾರ್ ವಲ್ಲಭಭಾಯಿ ಪಟೇಲರ ಅವರ ದೂರದೃಷ್ಟಿಯ ಪ್ರಯತ್ನದಿಂದ ಈ ಸಂಸ್ಥಾನಗಳು ಭಾರತಕ್ಕೆ ಸೇರಿದವು ಎಂದು ವಿವರಿಸಿದರು.
ಬಲಾಡ್ಯ ರಾಷ್ಟ್ರ ಇಲ್ಲದೆ ಇದ್ದರೆ ಗಳಿಸಿಕೊಂಡಿರುವ ಸ್ವಾತಂತ್ರ್ಯವನ್ನು ಕಳೆದುಕೊಳ್ಳಬಹುದು ಎಂಬ ಅಪಾಯವನ್ನು ಅವರು ಮನಗಂಡಿದ್ದರು. ಭಾರತ ಸೇರಲು ಜುನಾಗಢ್ನ ನವಾಬ, ಹೈದರಾಬಾದ್ನ ನವಾಬ ಒಪ್ಪದೆ ಇದ್ದಾಗ ಸೈನ್ಯದ ಶಕ್ತಿಯ ಮೂಲಕ ಒಪ್ಪಿಸುವ ಕೆಲಸವನ್ನು ದಂಡ ಶಕ್ತಿಯ ಮೂಲಕ ಮಾಡಿದರು ಎಂದು ತಿಳಿಸಿದರು.
ಕಾಶ್ಮೀರದ್ದು ಒಂದು ಪ್ರತ್ಯೇಕ ಕಥೆ. ಇಡೀ ದೇಶವನ್ನು ಒಗ್ಗೂಡಿಸುವ ಕೆಲಸವನ್ನು ಸರ್ದಾರ್ ವಲ್ಲಭಭಾಯಿ ಪಟೇಲ್ ಅವರು ಮಾಡಿದರು. ಕಾಶ್ಮೀರದ ವಿಷಯದಲ್ಲಿ ನಾನೇ ನೇರ ಮಧ್ಯಸ್ಥಿಕೆ ವಹಿಸುತ್ತೇನೆ ಎಂದು ಅವತ್ತಿನ ಪ್ರಧಾನಮಂತ್ರಿ ಜವಹರಲಾಲ್ ನೆಹರೂರವರು ತಿಳಿಸಿ ಮಧ್ಯಸ್ಥಿಕೆ ವಹಿಸಿದ್ದರು ಎಂದು ವಿವರಿಸಿದರು. ಈಗಿನ ಸ್ವರೂಪದ ಭಾರತದ ನಿರ್ಮಾಣದ ಕರ್ತೃ ಯಾರು ಅಂತ ಕೇಳಿದರೆ ಅದು ಸರ್ದಾರ್ ವಲ್ಲಭಭಾಯಿ ಪಟೇಲರು ಎಂಬ ಉತ್ತರ ಸಿಗುತ್ತದೆ. ಅದಕ್ಕೆ ಅವರನ್ನು ಉಕ್ಕಿನ ಮನುಷ್ಯ ಅಂತ ಕರೆಯುತ್ತಾರೆ ಎಂದರು.
ಮಹಾತ್ಮ ಗಾಂಧಿಯವರು ಮನ ಒಲಿಸಿದ ಕಾರಣಕ್ಕೆ ನಮ್ಮ ಮೊದಲ ಪ್ರಧಾನಮಂತ್ರಿಯಾಗುವಂತ ಯೋಗ-ಯೋಗ್ಯತೆ ಎಲ್ಲರೂ ಇದ್ದರೂ ಪಟೇಲರು ಅದನ್ನು ಬಿಟ್ಟುಕೊಟ್ಟರು. ಅಲ್ಲಿ ರಾಷ್ಟ್ರ ಹಿತದ ಹಿನ್ನೆಲೆ ಇತ್ತು. ಗಾಂಧೀಜಿಯವರ ಬಗ್ಗೆ ಇದ್ದಂತಹ ಅಭಿಮಾನದ ಹಿನ್ನೆಲೆಯಲ್ಲಿ ಸರ್ದಾರ್ ವಲ್ಲಭಭಾಯಿ ಪಟೇಲರು ಅವರು ತನಗೆ ಬಂದ ಅವಕಾಶವನ್ನು ಬಿಟ್ಟುಕೊಟ್ಟಿದ್ದರು ಎಂದು ತಿಳಿಸಿದರು.
ಪಟೇಲರು ಪ್ರಧಾನಿಯಾಗಿದ್ದರೆ ರಾಜಕಾರಣದಲ್ಲಿ ಸ್ವಜನಪಕ್ಷಪಾತ, ವಂಶಪಾರಂಪರ್ಯ ಎಂಬ ಪದಗಳಿಗೆ ಅವಕಾಶ ಕೊಡುತ್ತಿರಲಿಲ್ಲ ಎಂದರು. ಇವತ್ತು ವಂಶಪಾರಂಪರ್ಯ ಹಾಗೂ ಸ್ವಜನಪಕ್ಷಪಾತ ರಾಜಕಾರಣದ ಭಾಗ ಆಗಿದೆ ಎಂದು ನುಡಿದರು. ಸರ್ದಾರ್ ಪಟೇಲರ ಸ್ಮರಣೆ ಅಂದ್ರೆ ಅವರ ಬದುಕಿನ ಸ್ಮರಣೆ. ಇವರ ಒಂದು ಬದುಕನ್ನು ಶಾಶ್ವತವಾಗಿ ಕಟ್ಟ್ಟಿಕೊಡಬೇಕು, ಮುಂದಿನ ಪೀಳಿಗೆಗೆ ಅದರ ನೆನಪು ಅವಿಸ್ಮರಣೀಯವಾಗಿ ಉಳಿಯಬೇಕು ಎಂಬ ಕಾರಣಕ್ಕಾಗಿ ನಮ್ಮ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಗುಜರಾತ್ ನಲ್ಲಿ ಏಕತಾ ಪ್ರತಿಮೆ ಸ್ಥಾಪಿಸಿದ್ದಾರೆ ಎಂದು ತಿಳಿಸಿದರು.
ರಾಜ್ಯ ಖಜಾಂಚಿ ಸುಬ್ಬನರಸಿಂಹ, ರಾಜ್ಯ ಕಾರ್ಯಾಲಯ ಸಹ-ಕಾರ್ಯದರ್ಶಿ ವಿಶ್ವನಾಥ್ ಅಣಜಿ, ರಾಜ್ಯ ಮಾಧ್ಯಮ ಸಹ ಸಂಚಾಲಕ ಪ್ರಶಾಂತ್ ಕೆಡೆಂಜಿ, ಪಕ್ಷದ ಮುಖಂಡರು ಮತ್ತು ಕಾರ್ಯಾಲಯದ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

