ತೆಂಗಿನ ಸಸಿ ನೆಟ್ಟು ಪರಿಸರ ಜಾಗೃತಿ ಮೂಡಿಸಿದ ಶಾಲೆ
ಕಲಾದಗಿ: ಸಮೀಪದ ಛಬ್ಬಿ ಪುನರ್ವಸತಿ ಕೇಂದ್ರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ‘ಸಮುದಾಯದತ್ತ ಕಾರ್ಯಕ್ರಮ’ದ ಅಂಗವಾಗಿ ಮಕ್ಕಳ ಪಾಲಕರು ಹಾಗೂ ಪೋಷಕರ ಸಭೆಯನ್ನು ಆಯೋಜಿಸಲಾಯಿತು.
ಕಾರ್ಯಕ್ರಮಕ್ಕೆ ವೀಕ್ಷಣಾಧಿಕಾರಿಯಾಗಿ ಆಗಮಿಸಿದ್ದ ಯಡಹಳ್ಳಿ ಶಾಲೆಯ ಶಿಕ್ಷಕ ಪಾಂಡುರಂಗ ಆದಾಪುರ ಅವರು ತೆಂಗಿನ ಸಸಿಯನ್ನು ನೆಡುವ ಮೂಲಕ ಕಾರ್ಯಕ್ರಮಕ್ಕೆ ಅರ್ಥಪೂರ್ಣ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಶಾಲೆಯ ಮುಖ್ಯ ಶಿಕ್ಷಕಿ ಶ್ರೀಮತಿ ಪದ್ಮಾವತಿ ಬಂದಿಕೇರಿ ಅವರು, “ಮಕ್ಕಳ ಭವಿಷ್ಯ ರೂಪಿಸುವಲ್ಲಿ ಶಾಲೆ ಮತ್ತು ಪೋಷಕರ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ಮಕ್ಕಳು ಶಾಲೆಯಲ್ಲಿ ಕಲಿತ ವಿಷಯಗಳನ್ನು ಮನೆಯಲ್ಲಿ ಅಭ್ಯಾಸ ಮಾಡುವಂತೆ ಪೋಷಕರು ಪ್ರೋತ್ಸಾಹಿಸಬೇಕು. ಶಿಕ್ಷಕರು ಮತ್ತು ಪೋಷಕರು ಪರಸ್ಪರ ಸಹಕಾರದಿಂದ ಕಾರ್ಯನಿರ್ವಹಿಸಿದಾಗ ಮಕ್ಕಳ ಕಲಿಕೆಯ ಗುಣಮಟ್ಟ ಹೆಚ್ಚುವುದರ ಜೊತೆಗೆ ಅವರ ಸರ್ವತೋಮುಖ ಅಭಿವೃದ್ಧಿಗೂ ಸಹಕಾರಿಯಾಗುತ್ತದೆ” ಎಂದು ತಿಳಿಸಿದರು.
ಮುಂದುವರಿದು ಶಿಕ್ಷಕ ಮುತ್ತು ಬಳ್ಳಾ ಮಾತನಾಡುತ್ತಾ ಪರಿಸರ ಜಾಗೃತಿಯ ಕುರಿತು ಮಾತನಾಡಿದ ಅವರು, “ಪರಿಸರ ಸಂರಕ್ಷಣೆ ಪ್ರತಿಯೊಬ್ಬರ ಕರ್ತವ್ಯವಾಗಿದೆ. ಇಂದು ನಾವು ನೆಡುವ ಒಂದು ಸಸಿ ನಾಳೆ ನೆರಳು, ಹಣ್ಣು ಹಾಗೂ ಶುದ್ಧ ಪರಿಸರವನ್ನು ನೀಡುವ ಮರವಾಗಿ ಬೆಳೆಯುತ್ತದೆ. ಆದ್ದರಿಂದ ಪ್ರತಿಯೊಬ್ಬರೂ ಗಿಡಮರಗಳನ್ನು ಬೆಳೆಸುವ ಸಂಕಲ್ಪ ಮಾಡಬೇಕು. ಮಕ್ಕಳಲ್ಲಿ ಬಾಲ್ಯದಿಂದಲೇ ಪ್ರಕೃತಿ ಪ್ರೀತಿ, ಪರಿಸರ ಕಾಳಜಿ ಮತ್ತು ಜವಾಬ್ದಾರಿಯ ಮನೋಭಾವ ಬೆಳೆಸುವುದು ನಮ್ಮೆಲ್ಲರ ಹೊಣೆಗಾರಿಕೆಯಾಗಿದೆ” ಎಂದು ಹೇಳಿದರು. ಶಾಲೆಯ ಶೈಕ್ಷಣಿಕ ಪ್ರಗತಿ, ಮಕ್ಕಳ ಕಲಿಕೆಯ ಗುಣಮಟ್ಟದ ಸುಧಾರಣೆ ಹಾಗೂ ಪರಿಸರ ಸಂರಕ್ಷಣೆಯ ಆಶಯಗಳೊಂದಿಗೆ ಕಾರ್ಯಕ್ರಮವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.
ಸಮುದಾಯದತ್ತ ಕಾರ್ಯಕ್ರಮವು ಶಾಲೆ ಮತ್ತು ಸಮುದಾಯದ ನಡುವಿನ ಬಾಂಧವ್ಯವನ್ನು ಗಟ್ಟಿಗೊಳಿಸುವುದರ ಜೊತೆಗೆ ಮಕ್ಕಳ ಕಲಿಕೆಯ ಪ್ರಗತಿಯಲ್ಲಿ ಪೋಷಕರ ಸಕ್ರಿಯ ಪಾಲ್ಗೊಳ್ಳುವಿಕೆಗೆ ಪ್ರೇರಣೆ ನೀಡಿತು. ತೆಂಗಿನ ಸಸಿ ನೆಡುವ ಮೂಲಕ ಶಿಕ್ಷಣದ ಮಹತ್ವದೊಂದಿಗೆ ಪರಿಸರ ಸಂರಕ್ಷಣೆಯ ಸಂದೇಶವನ್ನೂ ಸಾರಲಾಯಿತು. ಈ ಸಮಯದಲ್ಲಿ ಶಾಲೆಯ ಶಿಕ್ಷಕಿಯರಾದ ತನ್ವೀರ್ ಬಾನು ಎಸ್.ಎಂ. ಕಾವೇರಿ ಯಳಮೇಲಿ, ಶಿಲ್ಪಾ ಕಮಗೋಳ, ಪಾಲಕರಾದ ಜ್ಯೋತಿ ವಾಲಿಕಾರ್, ಮುದ್ದು ವಿದ್ಯಾರ್ಥಿಗಳು ಹಾಗೂ ಪೋಷಕರು ಈ ಸಮಯದಲ್ಲಿ ಉಪಸ್ಥಿತರಿದ್ದರು.

