ಎಂ.ಆರ್. ಪೂವಮ್ಮರಿಗೆ ರೋಟರಿ ವಂದನಾ ಪ್ರಶಸ್ತಿ ಪ್ರದಾನ

Shreya Hegde
0

 ಎಂ.ಆರ್. ಪೂವಮ್ಮ ಅವರ ಕ್ರೀಡಾ ಸಾಧನೆ ಯುವ ಕ್ರೀಡಾಪಟುಗಳಿಗೆ ಸ್ಫೂರ್ತಿ‌:  ವಂದನಾ ಪೈ




ಮಂಗಳೂರು: ಎಂ.ಆರ್. ಪೂವಮ್ಮ ಅವರು ನಿರಂತರ ಪರಿಶ್ರಮದಿಂದ ಅಂತಾರಾಷ್ಟ್ರೀಯ ಕ್ರೀಡಾಕೂಟದಲ್ಲಿ ಯಶಸ್ಸು ಸಾಧಿಸಿದ್ದು, ಇವರ ಸಾಧನೆ ಯುವ ಕ್ರೀಡಾಪಟುಗಳಿಗೆ ಸ್ಫೂರ್ತಿಯಾಗಲಿದೆ ಎಂದು ಮಾಜಿ ಒಲಂಪಿಯನ್ ಹಾಗೂ ಅರ್ಜುನ ಪ್ರಶಸ್ತಿ ವಿಜೇತ ಕ್ರೀಡಾಪಟು ವಂದನಾ ಪೈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.


ಅವರು, ರೋಟರಿ ಕ್ಲಬ್ ಮಂಗಳೂರು ಸೆಂಟ್ರಲ್ ಹಾಗೂ ರೋಟರಾಕ್ಟ್ ಕ್ಲಬ್ ಮಂಗಳೂರು ಸಿಟಿ ಸಂಸ್ಥೆಯ ಜಂಟಿ ಆಶ್ರಯದಲ್ಲಿ ದಿನಾಂಕ 30.10.2026ರಂದು ನಗರದ ಹೊಟೇಲ್ ಸೀ ವ್ಯೂ ಸಭಾಂಗಣದಲ್ಲಿ ಜರುಗಿದ ವಂದನಾ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು, ಪೂವಮ್ಮ ಅವರಿಗೆ ಪ್ರಶಸ್ತಿ ಪ್ರದಾನ ನೆರವೇರಿಸಿ ಅಭಿನಂದಿಸಿದರು. ಮತ್ತು ಭವಿಷ್ಯದಲ್ಲಿ ಇನ್ನಷ್ಟು ಯಶಸ್ಸು ಸಾಧಿಸುವಂತೆ ಆಶಯ ವ್ಯಕ್ತಪಡಿಸಿದರು. ಪ್ರಶಸ್ತಿ ಸ್ವೀಕರಿಸಿ ಪ್ರತಿಕ್ರಿಯಿಸಿದ ಎಂ.ಆರ್. ಪೂವಮ್ಮ ಅವರು, ತಮ್ಮ ಕ್ರೀಡಾ ಸಾಧನೆ ಮತ್ತು ಯಶಸ್ಸಿಗೆ ಪೋಷಕರ ಆಶೀರ್ವಾದ, ಬಂಧು ಮಿತ್ರರ ಬೆಂಬಲ ಹಾಗೂ ಕ್ರೀಡಾಭಿಮಾನಿಗಳ ಪ್ರೋತ್ಸಾಹ ಕಾರಣ. ಈ ಪ್ರಶಸ್ತಿ ಸ್ವೀಕರಿಸಿದ ಬಳಿಕ ಇನ್ನಷ್ಟು ಸಾಧಿಸಲು ಪ್ರೇರಣೆಯಾಗಿದೆ ಎಂದು ನುಡಿದು ರೋಟರಿ ಸಂಸ್ಥೆಗೆ ಕೃತಜ್ಞತೆ ಸಲ್ಲಿಸಿದರು.


ಪ್ರಶಸ್ತಿ ಆಯ್ಕೆ ಸಮಿತಿಯ ಅಧ್ಯಕ್ಷರಾದ ಡಾ. ದೇವದಾಸ್ ರೈ ಅವರು, ಈ 24ನೇ ವಾರ್ಷಿಕ ವಂದನಾ ಪ್ರಶಸ್ತಿಯು ತಮ್ಮ ಸಂಸ್ಥೆಯ ವೃತ್ತಿಪರ ಸೇವಾ ಯೋಜನೆಯ ಅಂಗವಾಗಿದ್ದು, ವಿವಿಧ ಕ್ಷೇತ್ರದಲ್ಲಿ ಸಾಧಿಸಿದ ಸಾಧಕರನ್ನು ಪರಿಗಣಿಸಿ ಆಯ್ಕೆ ಮಾಡಲಾಗುತ್ತಿದೆ ಎಂದು ಮಾಹಿತಿ ನೀಡಿ, ಪ್ರಸ್ತುತ ಸಾಲಿನ ಪ್ರಶಸ್ತಿ ವಿಜೇತರಾದ ಪೂವಮ್ಮ ಅವರ ಸುದೀರ್ಘ ಕ್ರೀಡಾ ಸಾಧನೆಯನ್ನು ಅಭಿನಂದಿಸಿದರು. ರೋಟರಾಕ್ಟ್ ಮಂಗಳೂರು ಸಿಟಿ ಸಂಸ್ಥೆಯ ಅಧ್ಯಕ್ಷ ರಕ್ಷಣ್ ಟಿ.ಆರ್. ಅವರು ಪ್ರಶಸ್ತಿ ವಿಜೇತರ ಪರಿಚಯ ಮತ್ತು ಸಾಧನೆಗಳ ಮಾಹಿತಿ ನೀಡಿದರು. ರೋಟರಿ ವಲಯ ಸಹಾಯಕ ಗವರ್ನರ್ ಪ್ರವೀಣ್ ಕುಮಾರ್ ಶರ್ಮಾ ಅವರು ಗೌರವ ಅತಿಥಿಯಾಗಿ ಪಾಲ್ಗೊಂಡು ಸಂಸ್ಥೆಯ ಗೃಹವಾರ್ತಾ ಪತ್ರಿಕೆ ಸೆಂಟೋರ್‌ನ್ನು ಬಿಡುಗಡೆಗೊಳಿಸಿ, ಪೂವಮ್ಮ ಅವರು ಜಿಲ್ಲೆಗೆ ಕೀರ್ತಿ ಸಂಪಾದಿಸಿದ್ದಾರೆ ಎಂದು ನುಡಿದರು.


ರೋಟರಿ ಸಂಸ್ಥೆಯ ಅಧ್ಯಕ್ಷ ರವೀಂದ್ರ ಸ್ವಾಗತಿಸಿದರು. ಕಾರ್ಯದರ್ಶಿ ಜಾಕ್ಸನ್ ಸಲ್ದಾನಾ ವರದಿ ಮಂಡಿಸಿದರು. ಈ ಸಂದರ್ಭದಲ್ಲಿ ಮಹೇಶ್ ಮತ್ತು ಶ್ರೀಕಾಂತ್ ಅವರನ್ನು ನೂತನ ಸದಸ್ಯರಾಗಿ ಸಂಸ್ಥೆಗೆ ಸೇರ್ಪಡೆಗೊಳಿಸಲಾಯಿತು. ವೇದಿಕೆಯಲ್ಲಿ ವಲಯ ಪ್ರತಿನಿಧಿ ರಾಜೇಶ್ ಶೆಟ್ಟಿ ಮತ್ತು ಸಂಸ್ಥೆಯ ಮಾಜಿ ಅಧ್ಯಕ್ಷ ಭಾಸ್ಕರ್ ರೈ ಉಪಸ್ಥಿತರಿದ್ದರು. ಡೆರಿಕ್ ಸ್ಟೀವನ್ ಡಿಸೋಜ ನಿರೂಪಿಸಿದ ಕಾರ್ಯಕ್ರಮದಲ್ಲಿ ರೋಟರಾಕ್ಟ್ ಸಂಸ್ಥೆಯ ಕಾರ್ಯದರ್ಶಿ ಮುಕೇಶ್ ವಂದಿಸಿದರು. ಶೇಕ್ ಮಹಮ್ಮದ್ ಶರೀಫ್, ಬ್ರಿಯಾನ್ ಪಿಂಟೊ, ಮುರಳಿ ನಾಯರ್ ಈ ಕಾರ್ಯಕ್ರಮವನ್ನು ಪ್ರಾಯೋಜಿಸಿದ್ದರು.

Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top