ಮಂಗಳೂರಿನಲ್ಲಿ ಪುಣೆ ಗ್ಯಾಸ್‌ ಎಕ್ಸ್‌ಪೀರಿಯನ್ಸ್‌ ಸೆಂಟರ್‌ ಆರಂಭ

Shreya Hegde
0

ವಾಣಿಜ್ಯ, ಕೈಗಾರಿಕಾ ಅಡುಗೆ ಅನಿಲ ಬಳಕೆಯಲ್ಲಿ ಕ್ಷಮತೆ ಮತ್ತು ಸುರಕ್ಷತೆಗೆ ಒತ್ತು




ಮಂಗಳೂರು: ವಾಣಿಜ್ಯ ಮತ್ತು ಕೈಗಾರಿಕಾ ಉದ್ದೇಶಗಳ ಅನಿಲ ವ್ಯವಸ್ಥೆ ಎಂಜಿನಿಯರಿಂಗ್‌ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರುವ ಪುಣೆ ಗ್ಯಾಸ್‌ ಸಂಸ್ಥೆಯು ಮಂಗಳೂರಿನಲ್ಲಿ ಪುಣೆ ಗ್ಯಾಸ್‌ ಎಕ್ಸ್‌ಪೀರಿಯನ್ಸ್‌ ಸೆಂಟರ್‌ ಆರಂಭಿಸಿದೆ.


ಪುಣೆ ಗ್ಯಾಸ್‌ ಸಂಸ್ಥೆಯ ಹತ್ತನೇ ಅನುಭವ ಕೇಂದ್ರ ಇದಾಗಿದ್ದು ಕರ್ನಾಟಕದಲ್ಲಿ ಎರಡನೆಯದ್ದಾಗಿದೆ. ಸಂಸ್ಥೆಯು ಪ್ರಸ್ತುತ ಬೆಂಗಳೂರಿನಲ್ಲಿ ಈಗಾಗಲೇ ಎಕ್ಸ್‌ಪೀರಿಯನ್ಸ್‌ ಸೆಂಟರ್‌ ಹೊಂದಿದೆ. ನೂತನ ಎಕ್ಸ್‌ಪೀರಿಯನ್ಸ್‌ ಸೆಂಟರ್‌ ಮಂಗಳೂರು ಉರ್ವ ಮಾರಿಗುಡಿ ಸಮೀಪದ ಲೋಟಸ್‌ ಅಥರ್ವ ವಾಣಿಜ್ಯ ಸಂಕೀರ್ಣದಲ್ಲಿರುವ ವಿಂದ್ಯಾ ಅಪ್ಲಯನ್ಸ್‌ನಲ್ಲಿ ಕಾರ್ಯನಿರ್ವಹಿಸುತ್ತಿದೆ.


ಅಡುಗೆ ಅನಿಲದ ವಾಣಿಜ್ಯಾತ್ಮಕ ಬಳಕೆಯಲ್ಲಿ ಕ್ಷಮತೆ, ಸುರಕ್ಷತೆ ಮತ್ತು ನಿಖರ ಎಂಜಿನಿಯರಿಂಗ್‌ ತಂತ್ರಜ್ಞಾನ ಸೇವೆಗಳನ್ನು ಸಂಸ್ಥೆಯು ಈ ಅನುಭವ ಕೇಂದ್ರದೊಂದಿಗೆ ಮಂಗಳೂರಿಗೆ ವಿಸ್ತರಿಸಿದೆ. ಅನುಭವ ಕೇಂದ್ರವನ್ನು ಪುಣೆ ಗ್ಯಾಸ್‌ನ ಎಕ್ಸಿಕ್ಯೂಟಿವ್‌ ಡೈರೆಕ್ಟರ್‌ ಮತ್ತು ಸಿಇಒ ಜೇಸಲ್‌ ಸಂಪತ್‌ ಇದನ್ನು ಉದ್ಘಾಟಿಸಿದರು. ಎಕ್ಸ್‌ಪೀರಿಯನ್ಸ್‌ ಸೆಂಟರ್‌ ಮತ್ತು ಫ್ರಾಂಚೈಸಿಯಾಗಿರುವ ವಿಂದ್ಯಾ ಅಪ್ಲಯನ್ಸಸ್‌ನ ನಿತ್ಯಾನಂದ ಪೈ ಮತ್ತು ಮಂಗಳೂರಿನ ಹೋಟೆಲ್‌ ಉದ್ಯಮದ ಪ್ರಮುಖ ಗಣ್ಯರು ಉಪಸ್ಥಿತದ್ದರು.


ಮಂಗಳೂರು ಮತ್ತು ಒಟ್ಟಾರೆಯಾಗಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವೈವಿಧ್ಯಮಯ ವಹಿವಾಟು ಕ್ಷೇತ್ರಗಳಿದ್ದು, ಹೆಸರಾಂತ ರೆಸ್ಟೋರೆಂಟ್‌, ಆತಿಥ್ಯ ಕ್ಷೇತ್ರದ ಉದ್ಯಮಗಳು, ಮತ್ಸ್ಯೋದ್ಯಮ ಮತ್ತು ಆಹಾರ ಸಂಸ್ಕರಣೆ ಮುಂಚೂಣಿಯಲ್ಲಿವೆ. ಅನಿಲ ಆಧಾರಿತ ಉದ್ಯಮಗಳೂ ಬಹಳಷ್ಟು ಸಂಖ್ಯೆಯಲ್ಲಿ ಇರುವುದರಿಂದ ಪುಣೆ ಗ್ಯಾಸ್‌ ತನ್ನ ವಹಿವಾಟು ವಿಸ್ತರಣೆಗೆ ಈ ನಗರವನ್ನು ಆಯ್ಕೆ ಮಾಡಿಕೊಂಡಿದೆ.


ಈ ಸಂದರ್ಭದಲ್ಲಿ ಮಾತನಾಡಿದ ಜೇಸಲ್‌ ಸಂಪತ್‌ ಅವರು “ಅನಿಲ ಬಳಕೆಯ ಕ್ಷಮತೆಯನ್ನು ಹೆಚ್ಚಿಸುವುದರಿಂದ ಕಂಪೆನಿಯ ಕಾರ್ಯಾಚರಣೆ ವೆಚ್ಚವನ್ನು ಬಹಳಷ್ಟು ತಗ್ಗಿಸಬಹುದು. ಮಂಗಳೂರು ಮತ್ತು ಕರ್ನಾಟಕ ಅನಿಲ ಆಧಾರಿತ ಉದ್ಯಮಗಳಿಗೆ ಪ್ರೋತ್ಸಾಹ ನೀಡಿವೆ. ಪುಣೆ ಗ್ಯಾಸ್‌ನ ಎಂಜಿನಿಯರಿಂಗ್‌ ಪರಿಹಾರಗಳು ದೇಶಾದ್ಯಂತ ಉದ್ಯಮಗಳಿಗೆ ವಾರ್ಷಿಕವಾಗಿ 1,400 ಕೋಟಿ ರೂಪಾಯಗಳಿಗೂ ಹೆಚ್ಚಿನ ಉಳಿತಾಯ ತಂದುಕೊಟ್ಟಿವೆ. ಮಂಗಳೂರಿನಲ್ಲಿ ಪುಣೆ ಗ್ಯಾಸ್‌ ಈಗಾಗಲೇ ಹಲವು ಮುಂಚೂಣಿಯ ಉದ್ಯಮಗಳಿಗೆ ನೆರವಾಗುತ್ತಿದ್ದು ಅಧಿಕೃತವಾಗಿ ವಹಿವಾಟುಗಳನ್ನು ಇನ್ನಷ್ಟು ವಿಸ್ತರಿಸಲು ಈಗ ಎಕ್ಸ್‌ಪೀರಿಯನ್ಸ್‌ ಸೆಂಟರ್‌ ಆರಂಭಿಸುತ್ತಿದೆ” ಎಂದು ತಿಳಿಸಿದರು.


ಪುಣೆ ಗ್ಯಾಸ್‌ನ ಮಂಗಳೂರು ಫ್ರಾಂಚೈಸಿ ಪಾಲುದಾರರಾದ ವಿಂದ್ಯಾ ಅಪ್ಲಯನ್ಸಸ್‌ನ ನಿತ್ಯಾನಂದ ಪೈ ಅವರು ಮಾತನಾಡಿ “ಸರಾಸರಿಯಾಗಿ ಕರ್ನಾಟಕದಲ್ಲಿ ಪ್ರತಿನಿತ್ಯ ಸುಮಾಋಉ 850 ಮೆಟ್ರಿಕ್‌ ಟನ್‌ ಎಲ್‌ಪಿಜಿಗೆ ಬೇಡಿಕೆ ಇದೆ. ಅಂದರೆ ಇದು ಸುಮಾರು 44,000 ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ಗಳಿಗೆ ಸಮಾನವಾಗಿದೆ. ಅನಿಲ ವಿತರಣೆ ಮತ್ತು ಸುರಕ್ಷತೆ, ಕ್ಷಮತೆ ಕ್ಷೇತ್ರದಲ್ಲಿರುವ ವಹಿವಾಟಿಗೆ ಇದು ವಿಪುಲ ಅವಕಾಶ ಸೃಷ್ಟಿಸಿದೆ. ಪುಣೆ ಗ್ಯಾಸ್‌ನ ಸಿಸ್ಟಮ್‌ಗಳು ಎಲ್‌ಪಿಜಿ ಬಳಕೆಯ ಮಿತಿಯನ್ನು ಹೆಚ್ಚಿಸಲಿದ್ದು, ಅನಿಲ ವ್ಯರ್ಥವಾಗುವುದನ್ನು ತಡೆಯುತ್ತಿವೆ” ಎಂದು ತಿಳಿಸಿದರು.


ಎಕ್ಸ್‌ಪೀರಿಯನ್ಸ್‌ ಸೆಂಟರ್‌ನಲ್ಲಿ ಪುಣೆ ಗ್ಯಾಸ್‌ನ ಡ್ರೈ ಟೈಪ್‌ ಎಲ್‌ಪಿಜಿ ವೆಪೊರೈಸರ್‌, ಎಲ್‌ಪಿ ಜೀನಿಯಸ್‌ ಸ್ಮಾರ್ಟ್‌ ಎಲ್‌ಪಿಜಿ ಸಿಸ್ಟಮ್‌, ಫುಯೆಲ್‌ಫ್ಯೂಷನ್‌, ಲೀಕ್‌ ಚೆಕ್‌ ಮತ್ತು ಹ್ಯಾಂಡ್‌ಹೆಲ್ಡ್‌ ಸ್ನಿಫರ್‌, ಗ್ಯಾಸ್‌ಟ್ರೈನ್‌ ಪ್ರೆಷರ್‌ ರೆಗ್ಯುಲೇಷನ್‌ ಸಿಸ್ಟಮ್‌, ಇತ್ಯಾದಿಗಳಿದ್ದು ಬಳಕೆದಾರರು ಇದನ್ನು ಸ್ವತಃ ನೋಡಿ ಬಳಕೆಯ ರೀತಿಯನ್ನು ತಿಳಿದುಕೊಳ್ಳಬಹುದಾಗಿದೆ.

Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top