ಬೆಂಗಳೂರು: ‘ನಮ್ಮ ಗುರಿಗಳನ್ನು ಸಾಧಿಸಲು ಸರಿಯಾದ ಅವಕಾಶವನ್ನು ಕಂಡುಕೊಳ್ಳುವುದು ಎಷ್ಟು ಮುಖ್ಯವೋ, ನಮ್ಮನ್ನು ಮಾತ್ರವಲ್ಲದೆ ನಮ್ಮ ಕುಟುಂಬ ಮತ್ತು ಆಪ್ತರನ್ನು ರಕ್ಷಿಸಿಕೊಳ್ಳಲು ರಸ್ತೆ ಸುರಕ್ಷತೆಯನ್ನು ತಾಳ್ಮೆ ಹಾಗೂ ಎಚ್ಚರಿಕೆಯಿಂದ ಪಾಲಿಸುವುದು ಅತ್ಯಂತ ಅಗತ್ಯವಾಗಿದೆ. ಪ್ರತಿಯೊಬ್ಬರೂ ರಸ್ತೆಯಲ್ಲಿ ವಾಹನವನ್ನು ಚಲಾಯಿಸುವಾಗ ತಾಳ್ಮೆ, ಎಚ್ಚರಿಕೆ ಮತ್ತು ಜಾಗರೂಕತೆಯನ್ನು ಕಾಪಾಡಿಕೊಳ್ಳಬೇಕು’ ಎಂದು ಆವಾಸ್ ಫೈನಾನ್ಷಿಯರ್ಸ್ ಲಿಮಿಟೆಡ್‌ನ ತರಬೇತುದಾರರಾದ ಅರವಿಂದ್ ಕುಲಕರ್ಣಿ ಅಭಿಪ್ರಾಯಪಟ್ಟರು.
ನಿಟ್ಟೆ ಮೀನಾಕ್ಷಿ ತಾಂತ್ರಿಕ ಮಹಾವಿದ್ಯಾಲಯ (ನಿಟ್ಟೆ ಡೀಮ್ಡ್ ವಿಶ್ವವಿದ್ಯಾಲಯದ ಅಂಗಸಂಸ್ಥೆ), ಆವಾಸ್ ಫೈನಾನ್ಷಿಯರ್ಸ್ ಲಿಮಿಟೆಡ್ ಮತ್ತು ಸಮಾಜದಲ್ಲಿ ಶಾಶ್ವತ ಬದಲಾವಣೆಯನ್ನು ತರಲು ಶ್ರಮಿಸುತ್ತಿರುವ ಲಾಭರಹಿತ ಸಂಸ್ಥೆಯಾದ ‘ತ್ರಿಗುಣ-ದಿ ಸೈನ್ಸ್ ಆಫ್ ಲಿವಿಂಗ್’ ಸಹಯೋಗದಲ್ಲಿ ಹಮ್ಮಿಕೊಂಡಿದ್ದ CSR (ಸಾಮಾಜಿಕ ಹೊಣೆಗಾರಿಕೆ) ಉಪಕ್ರಮದ ‘ವಿವೇಕದ ಸವಾರಿ, ಸುರಕ್ಷಿತ ಬದುಕು’ ಎಂಬ ಒಂದು ದಿನದ ರಸ್ತೆ ಸುರಕ್ಷತಾ ಬೂಟ್‌ಕ್ಯಾಂಪ್ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡುತ್ತ ಅವರು ಈ ಮಾತುಗಳನ್ನಾಡಿದರು.
ಕಾರ್ಯಕ್ರಮದ ಗೌರವಾನ್ವಿತ ಅತಿಥಿಗಳು ಮತ್ತು ವಕ್ತಾರರಾದ ‘ತ್ರಿಗುಣ-ದಿ ಸೈನ್ಸ್ ಆಫ್ ಲಿವಿಂಗ್’ ಸಂಸ್ಥೆಯ ಸಹಾಯಕ ವ್ಯವಸ್ಥಾಪಕಿ ಅಶ್ನಾ ನವಾಸ್ ಹಾಗೂ ಯೋಜನಾ ಸಂಯೋಜಕ ಹಿಮಾಂಶು ಪಾಂಡೆ ವಿದ್ಯಾರ್ಥಿಗಳಿಗೆ ರಸ್ತೆ ಸುರಕ್ಷತೆಯ ಮಹತ್ವದ ಕುರಿತು ಮಾಹಿತಿ ನೀಡಿದರು. ಅವರು ಮಾತನಾಡಿ, ‘ರಸ್ತೆ ಅಪಘಾತಗಳಲ್ಲಿ ಜಗತ್ತಿನಲ್ಲಿಯೇ ಭಾರತವು ಮೊದಲ ಸ್ಥಾನದಲ್ಲಿದೆ, ಇಲ್ಲಿ ಪ್ರತಿ ಗಂಟೆಗೆ ಸುಮಾರು 56 ಅಪಘಾತಗಳು ಮತ್ತು 20 ಸಾವುಗಳು ಸಂಭವಿಸುತ್ತವೆ. ಜೀವಹಾನಿಯನ್ನು ತಡೆಯಲು ಮಾತ್ರವಲ್ಲದೆ, ತೀವ್ರ ಆರ್ಥಿಕ ಹೊರೆ ಮತ್ತು ಸಂಚಾರ ದಟ್ಟಣೆಯನ್ನು ತಪ್ಪಿಸಲು ರಸ್ತೆ ಸುರಕ್ಷತೆಯು ಅತ್ಯಗತ್ಯ. ಈ ಬಹುತೇಕ ಅಪಘಾತಗಳಲ್ಲಿ ಶೇಕಡಾ 90 ರಷ್ಟು ಅಪಘಾತಗಳಿಗೆ ಅತಿವೇಗ, ಗಮನ ಬೇರೆಡೆ ಸೆಳೆಯುವುದು ಮತ್ತು ಮದ್ಯಪಾನ ಮಾಡಿ ವಾಹನ ಚಾಲನೆ ಮಾಡುವುದೇ ಕಾರಣವಾಗಿದೆ. ಅಂತಿಮವಾಗಿ, ರಸ್ತೆ ಸುರಕ್ಷತೆಯು ಎಲ್ಲರ ಜವಾಬ್ದಾರಿಯಾಗಿದ್ದು, ದುರಂತದ ಸಾವುಗಳನ್ನು ತಡೆಯಲು ನಡವಳಿಕೆಯಲ್ಲಿ ಬದಲಾವಣೆ ಮತ್ತು ಪರಿಸರ ಅಪಾಯಗಳ ಬಗ್ಗೆ ಜಾಗರೂಕತೆ ಅಗತ್ಯವಾಗಿದೆ’ ಎಂದರು.
ನಿಟ್ಟೆ ಮೀನಾಕ್ಷಿ ತಾಂತ್ರಿಕ ಮಹಾವಿದ್ಯಾಲಯ, ಆವಾಸ್ ಫೈನಾನ್ಷಿಯರ್ಸ್ ಲಿಮಿಟೆಡ್ ಮತ್ತು ತ್ರಿಗುಣ-ದಿ ಸೈನ್ಸ್ ಆಫ್ ಲಿವಿಂಗ್ ಸಂಸ್ಥೆಯ ಸಹಯೋಗದಲ್ಲಿ ಆಯೋಜಿಸಲಾದ ಈ CSR ಉಪಕ್ರಮವು, ಪ್ರಾಯೋಗಿಕ ಕಲಿಕೆ ಮತ್ತು ವರ್ಚುವಲ್ ರಿಯಾಲಿಟಿ (VR) ಸಿಮ್ಯುಲೇಶನ್‌ಗಳ ಮೂಲಕ ಸುರಕ್ಷಿತ ಸವಾರಿ ಮತ್ತು ಚಾಲನಾ ಅಭ್ಯಾಸಗಳನ್ನು ಉತ್ತೇಜಿಸಿತು. ಸುರಕ್ಷಿತ ಪ್ರಯಾಣಯನ್ನು ಪ್ರೋತ್ಸಾಹಿಸಲು ವಿದ್ಯಾರ್ಥಿಗಳಿಗೆ ಸುಮಾರು 300 ಹೆಲ್ಮೆಟ್‌ಗಳನ್ನು ಸಹ ವಿತರಿಸಲಾಯಿತು.
ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಷನ್ ಇಂಜಿನಿಯರಿಂಗ್ ವಿಭಾಗದ ಮುಖ್ಯಸ್ಥರಾದ ಡಾ. ಪರಮೇಶಾಚಾರಿ ಬಿ.ಡಿ. ಅವರು ಕಾರ್ಯಕ್ರಮದ ಉದ್ದೇಶಗಳನ್ನು ವಿವರಿಸಿದರು. ಕಾರ್ಯಕ್ರಮದ ಸಂಯೋಜಕರಾದ ಡಾ. ಅನುಪಮಾ ಸಿಂಧಗಿ, ಸ್ಮಿತಾ ಶರತ್ ಶಂಕರ್, ಅಧ್ಯಾಪಕರು ಮತ್ತು ವಿದ್ಯಾರ್ಥಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

