'ನಡೆಯುವ ದೋಣಿ': ಪ್ರಯಾಣದ ಸೌಂದರ್ಯಕ್ಕೆ ಒಲವಿನ ಕಾವ್ಯ ರೂಪ

Upayuktha
0


ಯೋಗರಾಜ್ ಭಟ್ಟರ “ಶೃಂಗಾರದ ಹೊಂಗೆಮರ”, ನಾಗೇಂದ್ರ ಪ್ರಸಾದ್ ಅವರ “ಬೆಳಕಿನ ಕವಿತೆ”, ಕವಿರಾಜ್ ಅವರ “ಸಂಜು ಮತ್ತು ಗೀತಾ”... ಹೀಗೆ ಕನ್ನಡದ ನೂರಾರು ಮೆಲೋಡಿ ಗೀತೆಗಳನ್ನು ಎದೆಯಾಳದಿಂದ ಮೆಚ್ಚಿಕೊಂಡಿರುವ ನಮಗೆ, ‘ನಡೆಯುವ ದೋಣಿ’ ಚಿತ್ರದ ಈ ಶೀರ್ಷಿಕೆ ಗೀತೆ ಕೇಳಿಸದಿಿದ್ದರೆ ಅದು ಕನ್ನಡಿಗರಷ್ಟೇ ಅಲ್ಲ, ನಮ್ಮ ಸಂಗೀತದ ಅಭಿರುಚಿಗೂ ದೊಡ್ಡ ನಷ್ಟ.


'ಪರವಶನಾದೆನು', 'ಅನಿಸುತಿದೆ ಯಾಕೋ ಇಂದು', 'ಮಿಂಚಾಗಿ ನೀನು ಬರಲು', 'ಹೂವಿನ ಬಾಣದಂತೆ'... ಇಂತಹ ಅದ್ಭುತ ಕಾವ್ಯಗಳಿಂದ ಕನ್ನಡಿಗರ ಹೃದಯ ಗೆದ್ದ ಜಯಂತ ಕಾಯ್ಕಿಣಿ ಅವರು ಈ ಹಾಡನ್ನು ಕೇಳಿ, ಸ್ವತಃ ಚಿತ್ರತಂಡವನ್ನು ಕರೆಸಿ ಮೆಚ್ಚುಗೆ ಸೂಚಿಸಿ ತಮ್ಮ ಕೈಯಾರೇ ಬಿಡುಗಡೆ ಮಾಡಿಕೊಟ್ಟಿದ್ದಾರೆ. ಈ ಒಂದೇ ವಿಚಾರ ಈ ಹಾಡನ್ನು ಒಮ್ಮೆ ಕೇಳಲೇಬೇಕೆಂಬ ಕುತೂಹಲವನ್ನು ನನ್ನಲ್ಲಿ ಹುಟ್ಟುಹಾಕಿತು.


ನಾಯಕಿಯನ್ನು ಸಾಂಪ್ರದಾಯಿಕವಾಗಿ ಹೂವು, ನವಿಲು, ಬಣ್ಣ ಅಥವಾ ಪ್ರಕೃತಿಗೆ ಹೋಲಿಸುವ ಅಲಿಖಿತ ನಿಯಮವನ್ನು ಬದಿಗೊತ್ತಿ, ಆಕೆಯನ್ನೊಂದು 'ದೋಣಿ'ಗೆ ಹೋಲಿಸಿದ ಕವಿ ಉಮೇಶ್ ಅವರ ಹುಚ್ಚು ಧೈರ್ಯವೇ ಇಲ್ಲಿ ಮೊದಲು ಗಮನ ಸೆಳೆಯುತ್ತದೆ. ‘ಅರವಳಿಕೆ’, ‘ಪುಂಡಾಣೆ’, ‘ಹಕೀಕತ್ತು’, ‘ಖಬರು’, ‘ಲುಕ್ಸಾನು’ ಎಂಬ ಅಚ್ಚ ದೇಸಿ/ಪ್ರಾದೇಶಿಕ ಪದಗಳನ್ನು ಬಳಸಿ ಕೇಳುಗರ ಭಾವನೆಗೆ ನೇರ ಸಂಪರ್ಕ ಕಲ್ಪಿಸಿದ ಕವಿಯ ಜಾಣತನ ಮೆಚ್ಚುವಂಥದ್ದು.


"ಅಂಚೆ ಪತ್ರ ಡಬ್ಬೆಯಿಂದ ಬಂದ ಓಲೆ ನೀ..."


"ದೂರ ದೇಶದಿಂದ ವಲಸೆ ಬಂದ ಹೂವು ಸಿಕ್ಕಿದೆ..."


ಹೀಗೆ ರಮ್ಯವಾಗಿ ಬರೆಯುತ್ತಲೇ, ನಾಯಕಿ ಪಾದಯಾತ್ರೆ ಮಾಡುತ್ತಿದ್ದಾಳೆ ಎಂಬ ಕಥೆಯ ಮೂಲ ಎಳೆಯನ್ನೂ ದೃಶ್ಯ ರೂಪದಲ್ಲಿ ಕವಿ ನೀಡುತ್ತಾರೆ. "ಮಾನಾ ಹಾನಿ ದಾವೆ ಹೂಡು ನೀನು, ಬೆನ್ನು ಬಿಡೆನು ನಾ..." ಎಂಬ ಸಾಲಿನಿಂದಂತೂ ಬೇಗ ಹೊರಬರಲು ಸಾಧ್ಯವೇ ಇಲ್ಲ. ನೇರವಾಗಿ ಸೌಂದರ್ಯ ವರ್ಣನೆಗೆ ಇಳಿಯದೆ, ಸೌಂದರ್ಯಾತ್ಮಕ ಪದಗಳ ಮೂಲಕ ನಾಯಕಿಯ ರೂಪಕವನ್ನು ಒಂದು ಜರ್ನಿಯಂತೆ ಕಟ್ಟಿಕೊಟ್ಟಿದ್ದಾರೆ. ಈ ಪದಬಂಧಕ್ಕೆ ವಿಜಯ್ ಪ್ರಕಾಶ್ ಅವರ ಅನುರೂಪ ಧ್ವನಿ ಸಂಪೂರ್ಣ ಜೀವ ತುಂಬಿದೆ.


ಇನ್ನು ದೃಶ್ಯರೂಪದ ವಿಚಾರಕ್ಕೆ ಬಂದರೆ, ಹಾಡೆಂದರೆ ಕೇವಲ ಹೀರೋ-ಹೀರೋಯಿನ್ ಸ್ಲೋ-ಮೋಷನ್ ಶೂಟ್ ಎಂಬ ರೂಢಿಗತ ಶೈಲಿಯನ್ನು ನಿರ್ದೇಶಕರು ಮುರಿದಿದ್ದಾರೆ. ನಾಯಕ ಕಟ್ಟಿದ ಗುಡಿಸಲು ನೋಡಿ ನಾಯಕಿ "ನನ್ನ ಸಲುವಾಗಿ ಗುಡಿಸಲ ಕಟ್ಟಿದಿ?" ಅಂದಾಗ, "ಒಂದ್ ರಾತ್ರಿಯೊಳಗ ತಾಜಮಹಲ್ ಅಂತೂ ಕಟ್ಟಾಕ್ ಆಗಲ್ಲ!" ಎನ್ನುವ ನಾಯಕನ ಸರಳ-ಚುರುಕಾದ ಸಂಭಾಷಣೆ ಚಿತ್ರದ ಕಥೆಯ ಗುಣಮಟ್ಟಕ್ಕೆ ಸಾಕ್ಷಿಯಾಗುತ್ತದೆ.


ಹುಣಸೆಹಣ್ಣು ಕೊಟ್ಟು ಕ್ಷಮೆ ಕೇಳುವುದು, ನಾಯಕಿಯ ಪಾದಕ್ಕೆ ಎಳೆನೀರು ಎರೆಯುವುದು—ಇಂತಹ ನೈಜ ಹಾಗೂ ತುಂಟತನದ ದೃಶ್ಯಗಳು ಪ್ರೇಕ್ಷಕರ ಮನಸ್ಸನ್ನು ಥಟ್ಟನೆ ತಲುಪುತ್ತವೆ. ಪ್ರತಿ ಪ್ರೇಮಿಯ ಮನದ ಇಷ್ಟಾರ್ಥವನ್ನು ನಾಯಕನ ಮೂಲಕ ತೆರೆಯ ಮೇಲೆ ತಂದಿರುವುದೇ ಈ ಗೀತೆಯ ಯಶಸ್ಸಿನ ಗುಟ್ಟು.


ಖಂಡಿತವಾಗಿಯೂ, 'ನಡೆಯುವ ದೋಣಿ' ಚಿತ್ರದ ಈ ಗೀತೆ ಈ ವರ್ಷದ ಟಾಪ್ ಹಿಟ್ ಹಾಡುಗಳ ಪಟ್ಟಿಗೆ ಸೇರುವ ಎಲ್ಲಾ ಅರ್ಹತೆಗಳನ್ನು ಹೊಂದಿದೆ!


- ದರ್ಶನ್ (ನಟರಾಜ್) ಬೆಳಗಾವಿ

ಎಸ್ ಡಿ ಎಂ ಕಾಲೇಜು ಉಜಿರೆ


Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top