ಲಹರಿ: ಬೆಳದಿಂಗಳು

Shreya Hegde
0

                                           


ಬೆಳದಿಂಗಳನ್ನು ನೋಡುವುದೇ ಒಂದು ಸುಂದರ ಅನುಭವ. ರಾತ್ರಿಯ ತಣ್ಣನೆಯ ಗಾಳಿ, ಆಕಾಶದಲ್ಲಿ ಹೊಳೆಯುವ ಚಂದ್ರ ಮತ್ತು ಸುತ್ತಲಿನ ನಿಶ್ಶಬ್ದ ವಾತಾವರಣವನ್ನು ನೋಡುವಾಗ ಮನಸ್ಸಿನಲ್ಲಿ ಏನೋ ಒಂದು ರೀತಿಯ ಸಂತೋಷ ಮೂಡುತ್ತದೆ. ಪ್ರಕೃತಿಯಲ್ಲಿರುವ ಅನೇಕ ಸೌಂದರ್ಯಗಳಲ್ಲಿ ಬೆಳದಿಂಗಳೂ ಒಂದು ವಿಶಿಷ್ಟವಾದ ಸೌಂದರ್ಯ.


ನಾನು ಸಣ್ಣವನಿದ್ದಾಗ ಅಜ್ಜಿಯೊಂದಿಗೆ ಕಳೆದ ಬೆಳದಿಂಗಳ ರಾತ್ರಿಗಳ ನೆನಪುಗಳು ಇಂದಿಗೂ ನನ್ನ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿದಿವೆ. ಅಜ್ಜಿ ಬೆಳದಿಂಗಳ ಅಂಗಳದಲ್ಲಿ ಕುಳಿತುಕೊಂಡು ನಮಗೆ ಕಥೆಗಳನ್ನು ಹೇಳುತ್ತಿದ್ದಳು. ಆ ಕಥೆಗಳನ್ನು ಕೇಳುತ್ತಾ ಚಂದ್ರನನ್ನು ನೋಡುತ್ತಾ ಕುಳಿತುಕೊಳ್ಳುತ್ತಿದ್ದ ಕ್ಷಣಗಳು ಇಂದಿಗೂ ನೆನಪಾಗುತ್ತವೆ. ಹಳ್ಳಿಗಳಲ್ಲಿ ಬೆಳದಿಂಗಳ ರಾತ್ರಿಗಳಿಗೆ ಒಂದು ವಿಶೇಷವಾದ ಸೊಬಗು ಇರುತ್ತದೆ. ಹಿಂದೆ ಜನರು ಮನೆಯ ಹೊರಗಿನ ಅಂಗಳದಲ್ಲಿ ಮಲಗಿ, ಆಕಾಶದಲ್ಲಿನ ಚಂದ್ರನನ್ನು ನೋಡುತ್ತಾ ನಿದ್ರಿಸುತ್ತಿದ್ದರು. ನಾನೂ ಕೂಡ ಚಿಕ್ಕವನಿದ್ದಾಗ ಬೆಳದಿಂಗಳ ರಾತ್ರಿಯಲ್ಲಿ ಮನೆಯ ಹೊರಗೆ ಕುಳಿತುಕೊಂಡು ಅಥವಾ ಮಲಗಿ ಚಂದ್ರನನ್ನು ನೋಡುತ್ತಿದ್ದೆ. ಬೆಳದಿಂಗಳನ್ನು ನೋಡುವುದು ನನಗೆ ತುಂಬಾ ಇಷ್ಟವಾಗಿತ್ತು.


ನನ್ನ ಬಾಲ್ಯದ ಮತ್ತೊಂದು ಸುಂದರ ನೆನಪು ಎಂದರೆ ಅಜ್ಜಿ ಊಟ ಮಾಡಿಸುತ್ತಿದ್ದ ಸಮಯ. ರಾತ್ರಿ ಮನೆಯ ಹೊರಗೆ ಅಜ್ಜಿಯ ಪಕ್ಕದಲ್ಲಿ ಕುಳಿತುಕೊಂಡು, ಆಕಾಶದಲ್ಲಿ ಹೊಳೆಯುತ್ತಿದ್ದ ಬೆಳದಿಂಗಳನ್ನು ನೋಡುತ್ತಾ ಊಟ ಮಾಡುತ್ತಿದ್ದೆ. ಆ ಕ್ಷಣಗಳಲ್ಲಿ ಅಜ್ಜಿಯ ಪ್ರೀತಿ, ಮನೆಯ ವಾತಾವರಣ ಮತ್ತು ಬೆಳದಿಂಗಳ ತಂಪಾದ ಬೆಳಕು—ಇವೆಲ್ಲವೂ ಸೇರಿ ಒಂದು ಅದ್ಭುತ ಅನುಭವವನ್ನು ನೀಡುತ್ತಿದ್ದವು. ಆದರೆ ದಿನದಿಂದ ದಿನಕ್ಕೆ ಕಾಲ ಬದಲಾಗುತ್ತಿದೆ. ವೇಗವಾಗಿ ಬೆಳೆಯುತ್ತಿರುವ ತಂತ್ರಜ್ಞಾನದಿಂದಾಗಿ ಇಂದಿನ ಮಕ್ಕಳ ಜೀವನಶೈಲಿಯೂ ಬದಲಾಗಿದೆ. ಈಗ ಮೊಬೈಲ್‌ ಫೋನ್‌ಗಳು ಅವರ ಕೈಯಲ್ಲಿವೆ. ಆಟ, ಕಥೆ, ಮನರಂಜನೆ ಎಲ್ಲವೂ ಮೊಬೈಲ್‌ನಲ್ಲೇ ಸಿಗುವುದರಿಂದ ಪ್ರಕೃತಿಯ ಸೌಂದರ್ಯವನ್ನು ಆಸ್ವಾದಿಸುವ ಸಮಯ ಕಡಿಮೆಯಾಗುತ್ತಿದೆ.


ನಾನು ಚಿಕ್ಕವನಿದ್ದಾಗ ನನಗೊಂದು ಆಸೆ ಇತ್ತು. ಬೆಳದಿಂಗಳಲ್ಲಿ ಹೊಳೆಯುವ ಚಂದ್ರನ ಜೊತೆ ಆಟವಾಡಬೇಕು ಎಂದು ಅನಿಸುತ್ತಿತ್ತು. ಚಂದ್ರನನ್ನು ನೋಡಿದಾಗ ಅವನು ನಮ್ಮ ಜೊತೆಯಲ್ಲೇ ಇರುವಂತೆ ಭಾಸವಾಗುತ್ತಿತ್ತು. “ಚಂದಮಾಮ ಬಾರೋ, ಪೋಲಿ ಮಾಮಾ ಬಾರೋ” ಎಂಬ ಬಾಲ್ಯದ ಹಾಡೂ ಇಂದಿಗೂ ನನ್ನ ನೆನಪಿನಲ್ಲಿ ಉಳಿದಿದೆ. ಆ ಹಾಡು ಕೇಳಿದಾಗ ನನ್ನ ಬಾಲ್ಯದ ದಿನಗಳು ಮತ್ತೆ ಕಣ್ಣ ಮುಂದೆ ಬರುತ್ತವೆ. ಇಂದಿನ ದಿನಗಳಲ್ಲಿ ಅಜ್ಜಿ-ಅಜ್ಜಿಯರಿಗೆ ಮಕ್ಕಳಿಗೆ ಕಥೆ ಹೇಳುವ ಆಸಕ್ತಿ ಇದ್ದರೂ, ಮಕ್ಕಳಿಗೆ ಅದನ್ನು ಕೇಳಲು ಅಷ್ಟೊಂದು ಸಮಯ ಅಥವಾ ಆಸಕ್ತಿ ಇರುವುದಿಲ್ಲ. ಮೊಬೈಲ್ ಮತ್ತು ಇತರ ತಂತ್ರಜ್ಞಾನಗಳು ಮಕ್ಕಳ ಗಮನವನ್ನು ಹೆಚ್ಚು ಸೆಳೆಯುತ್ತಿವೆ. ಇದರಿಂದ ನಮ್ಮ ಬಾಲ್ಯದ ಸರಳವಾದ ಸಂತೋಷಗಳು ನಿಧಾನವಾಗಿ ಮರೆಯಾಗುತ್ತಿರುವಂತೆ ಅನಿಸುತ್ತದೆ.


ಬೆಳದಿಂಗಳ ರಾತ್ರಿಯಲ್ಲಿ ಪ್ರಕೃತಿಯ ಶಬ್ದಗಳನ್ನು ಕೇಳುವುದೂ ಒಂದು ವಿಭಿನ್ನ ಅನುಭವ. ಬೆಳದಿಂಗಳು ನನಗೆ ಕೇವಲ ಚಂದ್ರನ ಬೆಳಕಲ್ಲ; ಅದು ನನ್ನ ಬಾಲ್ಯದ ನೆನಪು, ಅಜ್ಜಿಯ ಪ್ರೀತಿ, ಪ್ರಕೃತಿಯ ಸೌಂದರ್ಯ ಮತ್ತು ಜೀವನದಲ್ಲಿ ಸದಾ ಬೆಳಕಿನ ಕಡೆಗೆ ಸಾಗಬೇಕೆಂಬ ಭರವಸೆಯ ಸಂಕೇತ.


- ಪ್ರಕಾಶ್ ಸಂಗಪ್ಪ ಕಾಟೇನಹಳ್ಳಿ . 

ಎಸ್ ಡಿ ಎಂ ಸ್ನಾತಕೋತ್ತರ ಅಧ್ಯಯನ ಕೇಂದ್ರದ 

ಪ್ರಥಮ ವರ್ಷದ ಪತ್ರಿಕೋದ್ಯಮ ವಿದ್ಯಾರ್ಥಿ.




Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top