ಹಾಸನ: ಇಂದಿನ ಡಿಜಿಟಲ್ ಯುಗದಲ್ಲಿ ಮೊಬೈಲ್, ಕಂಪ್ಯೂಟರ್ ಮತ್ತು ಅಂತರ್ಜಾಲಗಳು ನಮ್ಮ ಜೀವನದ ಅವಿಭಾಜ್ಯ ಅಂಗಗಳಾಗಿವೆ. ಆನ್ಲೈನ್ ಶಿಕ್ಷಣ, ಜ್ಞಾನಾರ್ಜನೆ ಮತ್ತು ಸಂವಹನಕ್ಕೆ ಇವು ಸಹಕಾರಿಯಾಗಿವೆ. ಆದರೆ ಡಿಜಿಟಲ್ ಜಗತ್ತಿನಲ್ಲಿ ಕೆಲವು ಅಪಾಯಗಳೂ ಅಡಗಿವೆ. ಅಪರಿಚಿತರಿಂದ ಬರುವ ಸಂದೇಶಗಳು, ನಕಲಿ ಖಾತೆಗಳು, ಮೋಸದ ಲಿಂಕ್ಗಳು, ಸೈಬರ್ ಕಿರುಕುಳ ಮತ್ತು ವೈಯಕ್ತಿಕ ಮಾಹಿತಿಯ ದುರುಪಯೋಗ ಮಕ್ಕಳ ಸುರಕ್ಷತೆಗೆ ಸವಾಲಾಗಿವೆ ಎಂದು ಜಿ.ಜಿ.ಜೆ.ಸಿ. ಪ್ರಧಾನ ಪ್ರೌಢಶಾಲಾ ಹಿರಿಯ ಶಿಕ್ಷಕರಾದ ಹೆಚ್.ಪಿ. ಮಂಜುಳ ಹೇಳಿದರು.
ನಗರದ ಆರ್.ಸಿ.ರಸ್ತೆಯ ಜಿ.ಜಿ.ಜಿ.ಸಿ(ಪ್ರಧಾನ), ಪ್ರೌಢಶಾಲಾ ವಿಭಾಗದಲ್ಲಿ ಏರ್ಪಾಟಾಗಿದ್ದ ಪ್ಯಾನ್ ಇಂಡಿಯಾ ಅರಿವು ನೆರವು ಮೊದಲ ಹಂತದಲ್ಲಿ ಆಯೋಜಿಸಿದ್ದ ಮಕ್ಕಳಿಗಾಗಿ ಕಾನೂನು ಅರಿವು ಕಾರ್ಯಕ್ರಮದ ಎರಡನೇ ದಿನವಾದ ಇಂದು ವಿದ್ಯಾರ್ಥಿನಿಯರನ್ನು ಉದ್ದೇಶಿಸಿ ಮಾತನಾಡಿದ ಅವರು ಯಾವುದೇ ಆನ್ಲೈನ್ ಅಪರಿಚಿತರು ಮಕ್ಕಳ ಬಳಿ ವೈಯಕ್ತಿಕ ಮಾಹಿತಿ ಕೇಳಿದರೆ ಅಥವಾ ಬೆದರಿಕೆ ಹಾಕಿದರೆ, ತಕ್ಷಣವೇ ನಿಮ್ಮ ಪೋಷಕರಿಗೆ ಅಥವಾ ಶಿಕ್ಷಕರಿಗೆ ತಿಳಿಸಿ. ಯಾವುದಕ್ಕೂ ಹೆದರಬೇಡಿ ಎಂಬ ಕಿವಿಮಾತು ಹೇಳಿದರು.
ಶಾಲಾ ಕಾರ್ಯಕ್ರಮದ ನೋಡಲ್ ಮತ್ತು ಸಮಾಜ ವಿಜ್ಞಾನ ವಿಷಯ ಶಿಕ್ಷಕರಾದ ಕೆ.ಎನ್. ಚಿದಾನಂದರವರು ಎಲ್ಲರನ್ನು ಉದ್ದೇಶಿಸಿ ಮಾತನಾಡುತ್ತಾ, ಮಕ್ಕಳು ದೇಶದ ಭವಿಷ್ಯ ಮಾತ್ರವಲ್ಲ, ಇಂದಿನ ಸಮಾಜದ ಅಮೂಲ್ಯ ಸಂಪತ್ತು. ಮಕ್ಕಳ ಕಣ್ಣಿನಲ್ಲಿ ಸಾವಿರ ಕನಸುಗಳಿರುತ್ತವೆ, ಮನಸ್ಸಿನಲ್ಲಿ ಹೊಸ ಆಲೋಚನೆಗಳಿರುತ್ತವೆ, ಬದುಕಿನಲ್ಲಿ ಸಾಧನೆಯ ಹಂಬಲವಿರುತ್ತದೆ. ಆ ಕನಸುಗಳು ನನಸಾಗಬೇಕಾದರೆ ಪ್ರತಿಯೊಂದು ಮಗುವಿಗೂ ಪ್ರೀತಿ, ಶಿಕ್ಷಣ, ಪೋಷಣೆ, ಗೌರವ ಮತ್ತು ಸುರಕ್ಷತೆ ದೊರೆಯಬೇಕು. ಮಕ್ಕಳ ಹಕ್ಕುಗಳನ್ನು ರಕ್ಷಿಸುವುದು ಕೇವಲ ಸರ್ಕಾರದ ಕರ್ತವ್ಯವಲ್ಲ; ಅದು ಪ್ರತಿಯೊಬ್ಬ ನಾಗರಿಕನ ಜವಾಬ್ದಾರಿಯೂ ಆಗಿದೆ ಎಂದರು.
ಪ್ರತಿಯೊಂದು ಮಗುವಿಗೂ ಬದುಕುವ ಹಕ್ಕು, ಶಿಕ್ಷಣ ಪಡೆಯುವ ಹಕ್ಕು, ಆರೋಗ್ಯ ಮತ್ತು ಪೌಷ್ಟಿಕ ಆಹಾರ ಪಡೆಯುವ ಹಕ್ಕು, ಶೋಷಣೆಯಿಂದ ರಕ್ಷಣೆ ಪಡೆಯುವ ಹಕ್ಕು ಹಾಗೂ ತನ್ನ ಅಭಿಪ್ರಾಯವನ್ನು ವ್ಯಕ್ತಪಡಿಸುವ ಹಕ್ಕುಗಳಿವೆ. ಜಾತಿ, ಧರ್ಮ, ಭಾಷೆ, ಲಿಂಗ ಅಥವಾ ಆರ್ಥಿಕ ಸ್ಥಿತಿಯ ಆಧಾರದ ಮೇಲೆ ಮಕ್ಕಳ ನಡುವೆ ತಾರತಮ್ಯ ಮಾಡಬಾರದು. ಬಾಲಕಾರ್ಮಿಕ ಪದ್ಧತಿ, ಬಾಲ್ಯವಿವಾಹ, ಮಕ್ಕಳ ಮೇಲಿನ ದೌರ್ಜನ್ಯ ಮತ್ತು ಶೋಷಣೆಯನ್ನು ತಡೆಗಟ್ಟುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ಪೋಷಕರು ಮಕ್ಕಳೊಂದಿಗೆ ಸ್ನೇಹಿತರಂತೆ ಇರಬೇಕು. ಮಕ್ಕಳು ಮೊಬೈಲ್ ಬಳಸುವಾಗ ನಿಗಾ ಇಡಬೇಕು ಮತ್ತು ಆನ್ಲೈನ್ ಅಪಾಯಗಳ ಕುರಿತು ಅವರಿಗೆ ಮುಕ್ತವಾಗಿ ಮಾತನಾಡಬೇಕು. ಶಾಲೆಗಳಲ್ಲಿ ಮಕ್ಕಳ ಹಕ್ಕುಗಳ ಬಗ್ಗೆ ಹಾಗೂ ಸೈಬರ್ ಸುರಕ್ಷತೆಯ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಎನ್. ಡಿ. ಆರ್. ಕೆ. ಶಿಕ್ಷಣ ಮಹಾವಿದ್ಯಾಲಯದ ಉಪನ್ಯಾಸಕರಾದ ಪೂಜಾ ರವರು ಮಾತನಾಡಿ, ಅಪರಿಚಿತರು ಕಳುಹಿಸುವ ಲಿಂಕ್ಗಳನ್ನು ಯೋಚಿಸದೆ ಕ್ಲಿಕ್ ಮಾಡಬಾರದು. ನಮ್ಮ ಹೆಸರು, ವಿಳಾಸ, ದೂರವಾಣಿ ಸಂಖ್ಯೆ, ಶಾಲೆಯ ವಿವರಗಳು, ಪಾಸ್ವರ್ಡ್ ಮತ್ತು ಒಟಿಪಿಯಂತಹ ವೈಯಕ್ತಿಕ ಮಾಹಿತಿಯನ್ನು ಅಪರಿಚಿತರೊಂದಿಗೆ ಹಂಚಿಕೊಳ್ಳಬಾರದು. ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಫೋಟೋ ಅಥವಾ ಮಾಹಿತಿಯನ್ನು ಹಂಚಿಕೊಳ್ಳುವ ಮೊದಲು ಅದರ ಪರಿಣಾಮಗಳ ಬಗ್ಗೆ ಯೋಚಿಸಬೇಕು ಎಂದು ತಿಳಿಸಿದರು. ಉರ್ದು ವಿಭಾಗದ ಸಹ ಶಿಕ್ಷಕರಾದ ತೈಬಾ ಕೌಸರ್ ರವರು ತುರ್ತು ಸಂದರ್ಭಗಳಲ್ಲಿ ಮಕ್ಕಳ ಸಹಾಯವಾಣಿ ಸಂಖ್ಯೆ 1098 ಅನ್ನು ಬಳಸಿಕೊಳ್ಳಿ ಎಂದು ತಿಳಿಸುತ್ತಾ ಎಲ್ಲರನ್ನು ವಂದಿಸಿದರು. ಹಿಂದಿ ಭಾಷಾ ಶಿಕ್ಷಕರಾದ ಎ.ವಿ. ಗೀತಾರಾಣಿ ಮತ್ತು ವಿದ್ಯಾರ್ಥಿನಿಯರು ಹಾಜರಿದ್ದರು.


