ಕಾಂಗ್ರೆಸ್‌ನ ಅರಾಜಕತೆ ವಿರುದ್ಧ ನ. 1 ರಿಂದ ರಾಜ್ಯಾದ್ಯಂತ 'ಯುವ ಸಂವಾದ' ಅಭಿಯಾನ

Shreya Hegde
0



ಬೆಂಗಳೂರು: ಚುನಾವಣಾ ಆಯೋಗ ನಡೆಸುವ ಮತದಾರರ ಪಟ್ಟಿ ಪರಿಷ್ಕರಣೆ (SIR) ವಿಚಾರದಲ್ಲಿ ಕಾಂಗ್ರೆಸ್ ಪಕ್ಷವು ಯುವಜನತೆಯನ್ನು ದಾರಿ ತಪ್ಪಿಸಿ, ದೇಶದಲ್ಲಿ ಅರಾಜಕತೆ ಸೃಷ್ಟಿಸಲು ಯತ್ನಿಸುತ್ತಿದೆ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಹಾಗೂ ಶಾಸಕ ವಿ. ಸುನಿಲ್ ಕುಮಾರ್ ಅವರು ತೀವ್ರವಾಗಿ ವಾಗ್ದಾಳಿ ನಡೆಸಿದರು.


ಶುಕ್ರವಾರ ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್‌ನ ಈ ಅರಾಜಕತೆಯ ಮನಸ್ಥಿತಿಯನ್ನು ಬಯಲು ಮಾಡಲು ಮತ್ತು ಯುವ ಸಮುದಾಯಕ್ಕೆ ನೈಜ ಮಾಹಿತಿಯನ್ನು ತಲುಪಿಸಲು ನವೆಂಬರ್ 1 ರಿಂದ ನವೆಂಬರ್ 30 ರವರೆಗೆ ರಾಜ್ಯಾದ್ಯಂತ "ಪ್ರಜಾಪ್ರಭುತ್ವ ಉಳಿಸಿ, ಅರಾಜಕತೆಯನ್ನು ಅಳಿಸಿ" ಹೆಸರಿನಲ್ಲಿ ಬೃಹತ್ ಯುವ ಸಂವಾದ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ ಎಂದು ಘೋಷಿಸಿದರು.


ಮೋದಿ ಸರ್ಕಾರದ ಸಾಧನೆಗಳ ವಿವರಣೆ:

ಕಳೆದ 12 ವರ್ಷಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಕೇಂದ್ರ ಸರ್ಕಾರವು 431 ಹೊಸ ಮೆಡಿಕಲ್ ಕಾಲೇಜುಗಳು, 7 ಐಐಟಿ, 16 ತ್ರಿಪಲ್ ಐಐಟಿ ಹಾಗೂ 8 ಕೇಂದ್ರೀಯ ವಿಶ್ವವಿದ್ಯಾಲಯಗಳನ್ನು ಸ್ಥಾಪಿಸಿದೆ. ಅಲ್ಲದೆ, ಸ್ಕಿಲ್ ಡೆವಲಪ್‌ಮೆಂಟ್ ಸಚಿವಾಲಯ ಹಾಗೂ ಅಟಲ್ ಟಿಂಕರಿಂಗ್ ಲ್ಯಾಬ್ ಮೂಲಕ ಯುವಕರ ಕೌಶಲ್ಯಾಭಿವೃದ್ಧಿಗೆ ದೊಡ್ಡ ಮಟ್ಟದ ಪ್ರೋತ್ಸಾಹ ನೀಡಿದೆ. ದೇಶದಲ್ಲಿ 21,000ಕ್ಕೂ ಹೆಚ್ಚು ಸ್ಟಾರ್ಟ್‌ಅಪ್‌ಗಳು ಕಾರ್ಯನಿರ್ವಹಿಸುತ್ತಿದ್ದು, ಕರ್ನಾಟಕ ಒಂದರಲ್ಲೇ 21,600ಕ್ಕೂ ಹೆಚ್ಚು ಸ್ಟಾರ್ಟ್‌ಅಪ್‌ಗಳಿವೆ ಎಂದು ಅವರು ಆಂಕಿಅಂಶ ಸಹಿತ ವಿವರಿಸಿದರು.


ರಾಜ್ಯ ಸರ್ಕಾರಕ್ಕೆ ಹಿಡಿಶಾಪ- 'ಇದು ಗ್ಯಾರಂಟಿ ಸರ್ಕಾರವಲ್ಲ, ರಾಬರಿ ಸರ್ಕಾರ': 

ರಾಜ್ಯ ಸರ್ಕಾರವು ವಿಧಾನಸಭೆಯಲ್ಲಿ ರೈತರಿಗೆ ಬರ ಪರಿಹಾರವಾಗಿ ₹2,500 ನೀಡುತ್ತೇವೆ ಎಂದು ಭರವಸೆ ನೀಡಿ, ಈಗ 17 ಕಠಿಣ ಶರತ್ತುಗಳನ್ನು ವಿಧಿಸಿ ಆದೇಶ ಹೊರಡಿಸಿದೆ. ಇದು ಸರ್ಕಾರದ ಆರ್ಥಿಕ ಇಲಾಖೆ 'ಜೀರೋ ಬ್ಯಾಲೆನ್ಸ್' ತಲುಪಿ ದಿವಾಳಿಯಾಗಿರುವುದಕ್ಕೆ ಸಾಕ್ಷಿ ಎಂದು ಕಿಡಿಕಾರಿದರು. ತಕ್ಷಣವೇ ಈ 17 ಶರತ್ತುಗಳ ಸುತ್ತೋಲೆಯನ್ನು ವಾಪಸ್ ಪಡೆಯಬೇಕೆಂದು ಆಗ್ರಹಿಸಿದರು.


ಹಾಲಿನ ದರ ಹಾಗೂ ಬೆಲೆ ಏರಿಕೆ:

ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಂತರ ಹಾಲಿನ ದರವನ್ನು ಲೀಟರ್‌ಗೆ ₹17 ಹೆಚ್ಚಳ ಮಾಡಲಾಗಿದೆ. ರೈತರಿಗೆ ನೀಡಬೇಕಾದ ₹1,200 ಕೋಟಿಗೂ ಅಧಿಕ ಹಾಲಿನ ಪ್ರೋತ್ಸಾಹಧನ ಸಬ್ಸಿಡಿ ಬಾಕ ಉಳಿಸಿಕೊಂಡಿದೆ. ಅಲ್ಲದೆ ಬಸ್ ದರ, ಸ್ಟಾಂಪ್ ಡ್ಯೂಟಿ, ಕಾಲೇಜು ಪ್ರವೇಶ ಶುಲ್ಕವನ್ನು ಹೆಚ್ಚಿಸಿ ಜನಸಾಮಾನ್ಯರ ಜೇಬಿಗೆ ಕನ್ನ ಹಾಕುತ್ತಿದ್ದು, ಇದು ಜನಹಿತದ ಸರ್ಕಾರವಲ್ಲ, 'ರಾಬರಿ (ದೋಚುವ) ಸರ್ಕಾರ' ಎಂದು ಆಕ್ರೋಶ ವ್ಯಕ್ತಪಡಿಸಿದರು.


ಅನಗತ್ಯ ಸಮೀಕ್ಷೆಗಳಿಗೆ ಹಣ ಪೋಲು:

ರೈತರಿಗೆ ಮತ್ತು ಅತಿಥಿ ಶಿಕ್ಷಕರಿಗೆ ನೀಡಲು ಹಣವಿಲ್ಲದ ಸರ್ಕಾರ, ಗ್ಯಾರಂಟಿ ಸಮೀಕ್ಷೆಗೆ ₹17 ಕೋಟಿ, ಹಿಂದುಳಿದ ವರ್ಗಗಳ ಸಮೀಕ್ಷೆಗೆ ₹140 ಕೋಟಿ ಖರ್ಚು ಮಾಡುತ್ತಿದೆ. ಆನೆ, ನಾಯಿ ಮತ್ತು ಹಕ್ಕಿಗಳ ಸಮೀಕ್ಷೆ ಮಾಡುತ್ತೇವೆ ಎನ್ನುತ್ತ ಸರ್ಕಾರ ಹಣ ಪೋಲು ಮಾಡುತ್ತಿದೆ ಎಂದು ಖಂಡಿಸಿದರು.



ಅರಾಜಕತೆಯ ವಿರುದ್ಧ ಬಿಜೆಪಿ 'ಯುವ ಸಂವಾದ' ಅಭಿಯಾನ: ಮೂರು ಹಂತಗಳಲ್ಲಿ ರಾಜ್ಯಾದ್ಯಂತ ಕಾರ್ಯಕ್ರಮ


ದೇಶದಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ (SIR) ವಿಚಾರವನ್ನು ಇಟ್ಟುಕೊಂಡು ಯುವಜನತೆಯನ್ನು ದಾರಿ ತಪ್ಪಿಸುವ ಕಾಂಗ್ರೆಸ್ ಸರ್ಕಾರದ ಯತ್ನಗಳನ್ನು ಹತ್ತಿಕ್ಕಲು ಭಾರತೀಯ ಜನತಾ ಪಾರ್ಟಿ (ಬಿಜೆಪಿ) ರಾಜ್ಯಾದ್ಯಂತ ಬೃಹತ್ 'ಯುವ ಸಂವಾದ' ಅಭಿಯಾನವನ್ನು ಆಯೋಜಿಸಿದೆ. ನವೆಂಬರ್ 1 ರಿಂದ ನವೆಂಬರ್ 30 ರವರೆಗೆ ನಡೆಯಲಿರುವ ಈ ಅಭಿಯಾನವನ್ನು ಒಟ್ಟು ಮೂರು ಪ್ರಮುಖ ಹಂತಗಳಲ್ಲಿ ರೂಪಿಸಲಾಗಿದ್ದು, ಯುವಕರಲ್ಲಿ ಪ್ರಜಾಪ್ರಭುತ್ವ ಹಾಗೂ ರಾಜಕೀಯ ಜಾಗೃತಿಯನ್ನು ಮೂಡಿಸುವ ಗುರಿಯನ್ನು ಹೊಂದಿದೆ.


ಈ ಜಾಗೃತಿ ಅಭಿಯಾನದ ಮೊದಲ ಹಂತಕ್ಕೆ ನವೆಂಬರ್ 3 ರಂದು ಚಾಲನೆ ಸಿಗಲಿದ್ದು, ಹುಬ್ಬಳ್ಳಿಯಲ್ಲಿ ಬೃಹತ್ ಕಾರ್ಯಕ್ರಮ ನಡೆಯಲಿದೆ. ತದನಂತರ ನವೆಂಬರ್ 5 ರಂದು ಬೆಂಗಳೂರಿನ ಪ್ರಸಿದ್ಧ ಟೌನ್ ಹಾಲ್‌ನಲ್ಲಿ 1,000ಕ್ಕೂ ಹೆಚ್ಚು ಕಾಲೇಜು ವಿದ್ಯಾರ್ಥಿಗಳನ್ನು ಒಂದೆಡೆ ಸೇರಿಸಿ ಸಂವಾದ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಈ ಸಂವಾದಗಳ ಮೂಲಕ ಯುವಜನತೆಗೆ ಪ್ರಜಾಪ್ರಭುತ್ವದ ಮೌಲ್ಯಗಳು ಹಾಗೂ ಕಾಂಗ್ರೆಸ್‌ನ ಅರಾಜಕತೆಯ ಮನಸ್ಥಿತಿಯ ಕುರಿತು ಸ್ಪಷ್ಟ ಮಾಹಿತಿ ನೀಡಲಾಗುತ್ತದೆ. ಅಭಿಯಾನದ ಎರಡನೇ ಹಂತದಲ್ಲಿ ರಾಜ್ಯದ ಸುಮಾರು 100ಕ್ಕೂ ಹೆಚ್ಚು ಪ್ರಮುಖ ಕಾಲೇಜುಗಳನ್ನು ತಲುಪುವ ಯೋಜನೆಯಿದೆ. ಈ ಹಂತದಲ್ಲಿ ನೇರವಾಗಿ ವಿದ್ಯಾರ್ಥಿಗಳ ಮಧ್ಯೆ ತೆರಳಿ, ಪ್ರಚಲಿತ ರಾಜಕೀಯ ವಿದ್ಯಮಾನಗಳು ಮತ್ತು ಸರ್ಕಾರದ ನೀತಿಗಳ ಬಗ್ಗೆ ಮುಕ್ತ ಚರ್ಚೆ ಹಾಗೂ ಸಂವಾದಗಳನ್ನು ನಡೆಸಲಾಗುತ್ತದೆ.


ಅಂತಿಮವಾಗಿ ಮೂರನೇ ಹಂತದ ಅಭಿಯಾನವನ್ನು ತಾಲೂಕು ಮತ್ತು ವಿಧಾನಸಭಾ ಕ್ಷೇತ್ರ ಮಟ್ಟಕ್ಕೆ ವಿಸ್ತರಿಸಲಾಗುತ್ತಿದ್ದು, ರಾಜ್ಯಾದ್ಯಂತ ಸುಮಾರು 500ಕ್ಕೂ ಹೆಚ್ಚು ಕೇಂದ್ರಗಳಲ್ಲಿ ವಿಶೇಷ ಸಭೆ-ಸಂವಾದಗಳನ್ನು ಏರ್ಪಡಿಸಲಾಗುತ್ತಿದೆ. ಈ ಹಂತದಲ್ಲಿ ಕೇವಲ ವಿದ್ಯಾರ್ಥಿಗಳು ಮಾತ್ರವಲ್ಲದೆ, ಸಮಾಜದ ವಿವಿಧ ಕ್ಷೇತ್ರಗಳ ಯುವ ವಕೀಲರು, ವೈದ್ಯರು, ಚಾರ್ಟರ್ಡ್ ಅಕೌಂಟೆಂಟ್ (ಸಿಎ), ಬರಹಗಾರರು ಮತ್ತು ಕ್ರೀಡಾಪಟುಗಳನ್ನು ಒಳಗೊಂಡಂತೆ ವ್ಯಾಪಕ ಮಟ್ಟದ ಯುವ ಸಮುದಾಯವನ್ನು ಒಗ್ಗೂಡಿಸಿ ಅರಾಜಕತೆಯ ವಿರುದ್ಧ ಜಾಗೃತಿ ಮೂಡಿಸಲು ಬಿಜೆಪಿ ಯೋಜನೆ ರೂಪಿಸಿದೆ.

Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top