ಕಾರಂತರು ಕೇವಲ ವ್ಯಕ್ತಿಯಲ್ಲ, ಒಂದು ಶಕ್ತಿ: ರವೀಂದ್ರ ಶೆಟ್ಟಿ

Shreya Hegde
0



ಮಂಗಳೂರು: ಶಿವರಾಮ ಕಾರಂತರು ಕೇವಲ ಒಬ್ಬ ವ್ಯಕ್ತಿಯಲ್ಲ; ಬದಲಾಗಿ ಒಂದು ಮಹಾನ್ ಶಕ್ತಿ ಎಂದು ಸುಂಕದಕಟ್ಟೆ ನಿರಂಜನ ಸ್ವಾಮಿ ಪ್ರೌಢಶಾಲೆ ಪ್ರಾಂಶುಪಾಲ ರವೀಂದ್ರ ಶೆಟ್ಟಿ ಅಭಿಪ್ರಾಯಪಟ್ಟರು.  ನಗರದ ವಿಶ್ವವಿದ್ಯಾನಿಲಯ ಕಾಲೇಜಿನಲ್ಲಿ ಭಾಷಾ ಸಂಘ ಹಾಗೂ ಕನ್ನಡ ವಿಭಾಗದ ಸಂಯುಕ್ತ ಆಶ್ರಯದಲ್ಲಿ ಏರ್ಪಡಿಸಲಾಗಿದ್ದ ಡಾ. ಕೆ. ಶಿವರಾಮ ಕಾರಂತ ಜಯಂತಿ ಪ್ರಯುಕ್ತ ಕಾರಂತರ ಜೀವನ ಮತ್ತು ಸಾಹಿತ್ಯ: ಒಂದು ದೃಷ್ಟಿಕೋನ ವಿಷಯದ ಕುರಿತು ವಿಶೇಷ ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. 


ಕಾರಂತರು ಸಾಹಿತ್ಯ, ಹೋರಾಟ ಮತ್ತು ತಮ್ಮ ಭಾಷಣಗಳ ಮೂಲಕ ಒಂಟಿ ಸಲಗದಂತೆ ಜನರ ಮೇಲೆ ಪ್ರಭಾವ ಬೀರಿದ್ದರು. ಅವರನ್ನು ಕನ್ನಡ ಸಾಹಿತ್ಯ ಲೋಕದ ಕಡಲು ಎಂದು ಹೇಳಿದರೆ ತಪ್ಪಾಗದು. ಅವರೊಂದು ನಡೆದಾಡುವ ವಿಶ್ವಕೋಶವೇ ಆಗಿದ್ದರು. ಕಾರಂತರ ಬರವಣಿಗೆಗಳಿಗೆ ಪ್ರಶಸ್ತಿಗಳೇ ಅವರನ್ನು ಹರಸಿ ಬರುತ್ತಿದ್ದವು. ಈ ಜಗತ್ತು ನೂರಾರು ಹಿಟ್ಲರ್ಗಳನ್ನು ಸೃಷ್ಟಿಸಬಹುದು. ಆದರೆ ಕಾರಂತರಂತಹ ಒಬ್ಬ ಸಾಹಿತಿಯನ್ನು ಸೃಷ್ಟಿಸಲು ಸಾಧ್ಯವಿಲ್ಲ ಎಂದರು.


ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಕಾಲೇಜಿನ ಪ್ರಾಂಶುಪಾಲ ಪ್ರೊ. ಜಯವಂತ ನಾಯಕ್, ಕಾರಂತರನ್ನು ಕಡಲತೀರದ ಭಾರ್ಗವ, ನಡೆದಾಡುವ ವಿಶ್ವಕೋಶ ಎಂದೇ ಕರೆಯಲಾಗುತ್ತದೆ. ಇವರು ತಮ್ಮ ಬದುಕಿನಲ್ಲಿ ಕೇವಲ ಒಂದು ಬಿಂದುವಾಗಿ ಉಳಿಯದೇ ಸಿಂಧು ರೂಪದಲ್ಲಿ ಪ್ರಜ್ವಲಿಸಿದ್ದಾರೆ. ಇಂತಹವರ ಸಾಹಿತ್ಯ ಹಾಗೂ ಅವರ ಬದುಕನ್ನು ತಿಳಿಯಲು ಹಮ್ಮಿಕೊಳ್ಳುವ ಉಪನ್ಯಾಸ ಕಾರ್ಯಕ್ರಮಗಳು ಮಕ್ಕಳಲ್ಲಿ ಕ್ರಿಯಾತ್ಮಕತೆ ಮತ್ತು ಸೃಜನಾತ್ಮಕತೆ ಬೆಳೆಯಲು ಸಹಾಯವಾಗುತ್ತದೆ. ವಿದ್ಯಾರ್ಥಿಗಳು ಹೆಚ್ಚು ಪುಸ್ತಕಗಳನ್ನು ಓದಿ ಸೃಜನಾತ್ಮಕತೆ ಬೆಳೆಸಿಕೊಳ್ಳುವಂತೆ ಎಂದು ಸಲಹೆ ನೀಡಿದರು. ಕಾರ್ಯಕ್ರಮದಲ್ಲಿ ವಾಣಿಜ್ಯ ವಿಭಾಗದ ಪ್ರೊ. ಸುಭಾಷಿಣಿ ಶ್ರೀವತ್ಸ, ಭಾಷಾ ಸಂಘದ ಸಹ ನಿರ್ದೇಶಕಿ ಪ್ರೊ. ನಾಗರತ್ನ ರಾವ್ ಸೇರಿದಂತೆ ನಾನಾ ವಿಭಾಗಗಳ ಉಪನ್ಯಾಸಕರು ಉಪಸ್ಥಿತರಿದ್ದರು.

Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top