ತೈಲದ ಮೇಲಿನ ಭಾರತದ ಅವಲಂಬನೆ ಕಡಿಮೆ ಮಾಡಲು ಹಸಿರು ಹೈಡ್ರೋಜನ್ ಸಹಕಾರಿ

Upayuktha
0


ಉಡುಪಿ: ಪರ್ಯಾಯ ಇಂಧನವಾಗಿ ಹಸಿರು ಹೈಡ್ರೋಜನ್ ಭಾರತಕ್ಕೆ ಅಪಾರ ಸಾಧ್ಯತೆಗಳನ್ನು ಹೊಂದಿದ್ದು, ತೈಲದ ಮೇಲಿನ ದೇಶದ ಅವಲಂಬನೆಯನ್ನು ಕಡಿಮೆ ಮಾಡುವುದರ ಜೊತೆಗೆ ಇಂಗಾಲದ ಹೊರಸೂಸುವಿಕೆಯನ್ನು ತಗ್ಗಿಸಲು ಸಹಕಾರಿಯಾಗಲಿದೆ ಎಂದು ಕೈಗಾರಿಕಾ ರಸಾಯನಶಾಸ್ತ್ರದ ನಿವೃತ್ತ ಪ್ರಾಧ್ಯಾಪಕ ಹಾಗೂ ಕುವೆಂಪು ವಿಶ್ವವಿದ್ಯಾಲಯದ ಮಾಜಿ ಕುಲಪತಿ ಪ್ರೊ ಬಿ.ಎಸ್. ಶೇರಿಗಾರ ಹೇಳಿದರು.


ಅವರು ಶನಿವಾರ ಅಜ್ಜರಕಾಡಿನ ಡಾ. ಜಿ. ಶಂಕರ್ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರದ ಪಿಜಿ ಎವಿ ಸಭಾಂಗಣದಲ್ಲಿ ಕಾಲೇಜಿನ ರಸಾಯನಶಾಸ್ತ್ರ ವಿಭಾಗ ಹಾಗೂ ಆಂತರಿಕ ಗುಣಮಟ್ಟ ಭರವಸೆ ಕೋಶ (IQAC) ಜಂಟಿಯಾಗಿ ಆಯೋಜಿಸಿದ್ದ ‘Inflammable Air to Green Hydrogen: The Journey to an Alternate Fuel’ ವಿಷಯದ ವಿಶೇಷ ಉಪನ್ಯಾಸದಲ್ಲಿ ಮಾತನಾಡಿದರು.


ಭಾರತವು ಹೈಡ್ರೋಜನ್ ಚಾಲಿತ ಸಾರ್ವಜನಿಕ ಸಾರಿಗೆ ಕ್ಷೇತ್ರದಲ್ಲಿ ಈಗಾಗಲೇ ಪ್ರಯೋಗಗಳನ್ನು ನಡೆಸುತ್ತಿದೆ ಎಂದು ಪ್ರೊ. ಶೇರಿಗಾರ ಹೇಳಿದರು. ತೈಲ ಇಂಧನಗಳಿಗೆ ಪರ್ಯಾಯವಾಗಿ ಸ್ವಚ್ಛ ಇಂಧನ ಮೂಲಗಳನ್ನು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ದೇಶದಲ್ಲಿ ನಡೆಯುತ್ತಿರುವ ಪ್ರಯತ್ನಗಳ ಕುರಿತು ಅವರು ವಿವರಿಸಿದರು.


ಹಸಿರು ಹೈಡ್ರೋಜನ್ ಬಳಕೆಯಿಂದ ಪರಿಸರದ ಮೇಲಿನ ಇಂಗಾಲದ ಹೊರೆಯನ್ನು ಕಡಿಮೆ ಮಾಡುವ ಸಾಧ್ಯತೆ ಇದೆ ಎಂದರು.


ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲೆ ಪ್ರೊ. ನಿಕೇತನ ಮಾತನಾಡಿ, ಪರ್ಯಾಯ ಇಂಧನವಾಗಿ ಹಸಿರು ಹೈಡ್ರೋಜನ್ ಕುರಿತು ನಡೆಯುತ್ತಿರುವ ಸಂಶೋಧನೆಗಳು ಅಭಿವೃದ್ಧಿಯ ಸಂಕೇತವಾಗಿವೆ ಎಂದರು. ಈ ಕ್ಷೇತ್ರದಲ್ಲಿ ಹೆಚ್ಚಿನ ಸಂಶೋಧನೆ ಹಾಗೂ ಆವಿಷ್ಕಾರಗಳು ಮುಂದಿನ ದಿನಗಳಲ್ಲಿ ಯುವ ಸಂಶೋಧಕರಿಗೆ ಹಲವು ಅವಕಾಶಗಳನ್ನು ಸೃಷ್ಟಿಸಲಿವೆ ಎಂದು ಹೇಳಿದರು.


“ನಮ್ಮ ವಿದ್ಯಾರ್ಥಿನಿಯರು ಈ ಉದಯೋನ್ಮುಖ ಕ್ಷೇತ್ರದಲ್ಲಿ ಆಸಕ್ತಿ ಬೆಳೆಸಿಕೊಂಡು ಹಸಿರು ಹೈಡ್ರೋಜನ್ ಮತ್ತು ಸಂಬಂಧಿತ ಕ್ಷೇತ್ರಗಳಲ್ಲಿ ಮಹಿಳಾ ವಿಜ್ಞಾನಿಗಳು ಹಾಗೂ ಸಂಶೋಧಕರಾಗುವತ್ತ ಮುನ್ನಡೆಯಬೇಕು. ಮುಂದಿನ ದಿನಗಳಲ್ಲಿ ಯುವ ಸಂಶೋಧಕರಿಗೆ ಈ ಕ್ಷೇತ್ರದಲ್ಲಿ ಅಪಾರ ಅವಕಾಶಗಳಿವೆ,” ಎಂದು ಅವರು ಹೇಳಿದರು.


ರಸಾಯನಶಾಸ್ತ್ರ ವಿಭಾಗದ ಮುಖ್ಯಸ್ಥ ಪುನೀತ್ ತೆಂಡೂಲ್ಕರ್ ಸ್ವಾಗತಿಸಿದರು. ಉಪನ್ಯಾಸಕಿ ಅಮೃತಾ ವಂದಿಸಿದರು. ವಿದ್ಯಾರ್ಥಿನಿ ಶ್ರಾವಣಿ ಕಾರ್ಯಕ್ರಮ ನಿರೂಪಿಸಿದರು. IQAC ಸಂಯೋಜಕಿ ಪ್ರೊ. ಶ್ರೀಮತಿ ಅಡಿಗ, ಬಾಲಕೃಷ್ಣ ಬಾಯರಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.


Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top