ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು

Shreya Hegde
0



ನವೆಂಬರ್ ತಿಂಗಳು ಅಂದರೆ ಕರ್ನಾಟಕಕ್ಕೆ ಹಬ್ಬವೋ ಹಬ್ಬ. ಎಲ್ಲ ಕಡೆ ರಾಜ್ಯೋತ್ಸವ ಆಚರಣೆ ಜೋರಾಗಿಯೇ ನಡೆಯುತ್ತೆ. ಕನ್ನಡ ರಾಜ್ಯೋತ್ಸವವು ನಮ್ಮ ಕನ್ನಡಿಗರ ಹೆಮ್ಮೆಯ ಹಬ್ಬವಾಗಿದೆ. ಪ್ರತಿವರ್ಷ ನವೆಂಬರ್ 1ರಂದು ನಾವು ಕನ್ನಡ ರಾಜ್ಯೋತ್ಸವ ಆಚರಿಸುವುದು ರೂಢಿ. ಈ ದಿನವು ಪ್ರತಿಯೊಬ್ಬ ಕನ್ನಡಿಗನಿಗೂ ಬಹಳ ವಿಶೇಷವಾದ ದಿನ. ಏಕೆಂದರೆ 1956ರ ನವೆಂಬರ್ 1ರಂದು ಕನ್ನಡ ಮಾತನಾಡುವ ಪ್ರದೇಶಗಳನ್ನು ಒಗ್ಗೂಡಿಸಿ ಮೈಸೂರು ರಾಜ್ಯವನ್ನು ರಚಿಸಲಾಯಿತು. ನಂತರ 1973ರ ನವೆಂಬರ್ 1ರಂದು ಮೈಸೂರು ರಾಜ್ಯಕ್ಕೆ "ಕರ್ನಾಟಕ" ಎಂದು ಮರುನಾಮಕರಣ ಮಾಡಲಾಯಿತು. ಅಂದಿನಿಂದ ಈ ದಿನವನ್ನು ಕನ್ನಡ ರಾಜ್ಯೋತ್ಸವವಾಗಿ ಆಚರಿಸಲಾಗುತ್ತಿದೆ.


ನನಗೆ ಕನ್ನಡ ರಾಜ್ಯೋತ್ಸವ ಎಂದರೆ ಕೇವಲ ಒಂದು ಹಬ್ಬವಲ್ಲ. ಅದು ನಮ್ಮ ನಾಡು, ನುಡಿ, ಸಂಸ್ಕೃತಿ ಮತ್ತು ಪರಂಪರೆಯನ್ನು ನೆನಪಿಸುವ ವಿಶೇಷ ದಿನವಾಗಿದೆ. ಕನ್ನಡ ನಮ್ಮ ತಾಯಿನುಡಿ. ನಮ್ಮ ಭಾವನೆಗಳನ್ನು ವ್ಯಕ್ತಪಡಿಸಲು ಮತ್ತು ನಮ್ಮ ಆಲೋಚನೆಗಳನ್ನು ಹಂಚಿಕೊಳ್ಳಲು ಕನ್ನಡ ಸಹಾಯ ಮಾಡುತ್ತದೆ. ಕನ್ನಡ ಭಾಷೆಗೆ ಸಾವಿರಾರು ವರ್ಷಗಳ ಇತಿಹಾಸವಿದೆ. 


ಕನ್ನಡ ಭಾಷೆಯು ತನ್ನ ಸಾಹಿತ್ಯ, ಸಂಸ್ಕೃತಿ ಮತ್ತು ಸೌಂದರ್ಯದಿಂದ ಜಗತ್ತಿನಾದ್ಯಂತ ಪ್ರಸಿದ್ಧವಾಗಿದೆ. ಭಾಷೆಯ ಬೆಳವಣಿಗೆಗೆ ಅನೇಕ ಕವಿಗಳು ಮತ್ತು ಸಾಹಿತಿಗಳು ತಮ್ಮ ಅಮೂಲ್ಯವಾದ ಕೊಡುಗೆಯನ್ನು ನೀಡಿದ್ದಾರೆ. ಕುವೆಂಪು, ದ. ರಾ. ಬೇಂದ್ರೆ, ಶಿವರಾಮ ಕಾರಂತ, ಮಾಸ್ತಿ ವೆಂಕಟೇಶ ಅಯ್ಯಂಗಾರ್ ಮುಂತಾದ ಮಹಾನ್ ಸಾಹಿತಿಗಳು ಕನ್ನಡ ಸಾಹಿತ್ಯವನ್ನು ಶ್ರೀಮಂತಗೊಳಿಸಿದ್ದಾರೆ. ಅವರ ಸಾಹಿತ್ಯ ಕೃತಿಗಳು ನಮಗೆ ಜ್ಞಾನ, ಜೀವನದ ಮೌಲ್ಯಗಳು ಮತ್ತು ಉತ್ತಮ ವಿಚಾರಗಳನ್ನು ಕಲಿಸುತ್ತವೆ. ಕನ್ನಡ ಭಾಷೆಗೆ ಶಾಸ್ತ್ರೀಯ ಭಾಷೆಯ ಸ್ಥಾನಮಾನ ದೊರೆತಿರುವುದು ನಮಗೆಲ್ಲ ಹೆಮ್ಮೆಯ ವಿಷಯವಾಗಿದೆ.


ಕನ್ನಡ ರಾಜ್ಯೋತ್ಸವದ ದಿನದಂದು ಕರ್ನಾಟಕದಾದ್ಯಂತ ಹಬ್ಬದ ವಾತಾವರಣ ಕಂಡುಬರುತ್ತದೆ. ಎಲ್ಲೆಲ್ಲೂ ಕೆಂಪು ಹಳದಿ ಬಣ್ಣದ ರಂಗು. ವಿದ್ಯಾರ್ಥಿಗಳು ಕನ್ನಡ ನಾಡಿನ ಇತಿಹಾಸ, ಮಹನೀಯರ ಸಾಧನೆಗಳು ಮತ್ತು ಕನ್ನಡ ಭಾಷೆಯ ಮಹತ್ವದ ಬಗ್ಗೆ ತಿಳಿದುಕೊಳ್ಳುತ್ತಾರೆ. ಜನರು ತಮ್ಮ ಮನೆ ಮತ್ತು ಅಂಗಡಿಗಳನ್ನು ಕನ್ನಡ ಬಾವುಟಗಳಿಂದ ಅಲಂಕರಿಸಿರುವುದನ್ನು ಕಾಣುತ್ತೇವೆ. ನಮ್ಮ ಕರ್ನಾಟಕ ರಾಜ್ಯವು ಪ್ರಕೃತಿ ಸೌಂದರ್ಯ ಮತ್ತು ಐತಿಹಾಸಿಕ ಸ್ಥಳಗಳಿಂದ ಪ್ರಸಿದ್ಧವಾಗಿದೆ. ಹಂಪಿ, ಮೈಸೂರು ಅರಮನೆ, ಬೇಲೂರು, ಹಳೇಬೀಡು ಮತ್ತು ಜೋಗ ಜಲಪಾತದಂತಹ ಸ್ಥಳಗಳು ನಮ್ಮ ನಾಡಿನ ಹೆಮ್ಮೆಯಾಗಿವೆ. ಕರ್ನಾಟಕವು ಕಲೆ, ಸಾಹಿತ್ಯ, ಸಂಗೀತ, ನೃತ್ಯ ಮತ್ತು ವಿಜ್ಞಾನ ಕ್ಷೇತ್ರಗಳಲ್ಲಿಯೂ ಉತ್ತಮ ಸಾಧನೆ ಮಾಡಿದೆ. ನಮ್ಮ ರಾಜ್ಯದ ವಿವಿಧ ಭಾಗಗಳಲ್ಲಿ ಬೇರೆ ಬೇರೆ ಸಂಸ್ಕೃತಿಗಳು ಮತ್ತು ಸಂಪ್ರದಾಯಗಳಿದ್ದರೂ ಕನ್ನಡ ಭಾಷೆ ನಮ್ಮೆಲ್ಲರನ್ನು ಒಗ್ಗೂಡಿಸುತ್ತದೆ.


ಕನ್ನಡ ರಾಜ್ಯೋತ್ಸವವನ್ನು ಆಚರಿಸುವುದರ ಜೊತೆಗೆ ಕನ್ನಡ ಭಾಷೆಯನ್ನು ಉಳಿಸಿ ಬೆಳೆಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ನಾವು ಪ್ರತಿದಿನ ಕನ್ನಡದಲ್ಲಿ ಮಾತನಾಡಬೇಕು, ಕನ್ನಡ ಪುಸ್ತಕಗಳನ್ನು ಓದಬೇಕು ಮತ್ತು ಕನ್ನಡದ ಬಗ್ಗೆ ಗೌರವ ಬೆಳೆಸಿಕೊಳ್ಳಬೇಕು. ಮಕ್ಕಳಿಗೆ ಚಿಕ್ಕ ವಯಸ್ಸಿನಿಂದಲೇ ಕನ್ನಡ ಭಾಷೆಯ ಮಹತ್ವವನ್ನು ತಿಳಿಸಬೇಕು. ಬೇರೆ ಭಾಷೆಗಳನ್ನು ಕಲಿಯುವುದರ ಜೊತೆಗೆ ನಮ್ಮ ತಾಯಿನುಡಿಗೂ ಹೆಚ್ಚಿನ ಪ್ರಾಮುಖ್ಯತೆ ನೀಡಬೇಕು. ಕನ್ನಡ ರಾಜ್ಯೋತ್ಸವವು ನಮ್ಮಲ್ಲಿ ನಾಡು-ನುಡಿಯ ಮೇಲಿನ ಪ್ರೀತಿ, ಅಭಿಮಾನ ಮತ್ತು ಏಕತೆಯನ್ನು ಬೆಳೆಸುತ್ತದೆ. ನಾನು ಕನ್ನಡಿಗನಾಗಿರುವುದಕ್ಕೆ ತುಂಬಾ ಹೆಮ್ಮೆಪಡುತ್ತೇನೆ. ನಮ್ಮ ಕನ್ನಡ ನಾಡು ಸದಾ ಸಮೃದ್ಧಿಯಿಂದ ಬೆಳೆಯಲಿ ಮತ್ತು ಕನ್ನಡ ಭಾಷೆಯ ಕೀರ್ತಿ ಜಗತ್ತಿನಾದ್ಯಂತ ಹರಡಲಿ ಎಂದು ಆಶಿಸೋಣ. ಕನ್ನಡ ನಾಡಲ್ಲಿ ಹುಟ್ಟಿದ ನಾವು ಕನ್ನಡಿಗರಾಗಿಯೇ ಜೀವಿಸೋಣ...

ಜೈ ಕರ್ನಾಟಕ... ಜೈ ಕನ್ನಡಾಂಬೆ..




- ಗಂಗಾ ಅಮಾತೆಪ್ಪನವರ 

ಬಾಗಲಕೋಟೆ

Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top