ಮಂಗಳೂರು: ವ್ಯಕ್ತಿ ಪರಿಪೂರ್ಣನಾಗಲು ತನ್ನೊಳಗಿನ ಸಾಮರ್ಥ್ಯವನ್ನು ಗುರುತಿಸಿ, ಅದನ್ನು ಜಾಗೃತಿಗೊಳಿಸಿಕೊಳ್ಳುವ ಮೂಲಕ ವಿಕಾಸಗೊಳ್ಳಬೇಕು. ಆ ಮೂಲಕ ನಮ್ಮ ಪರಂಪರೆ, ಸಂಸ್ಕೃತಿ ಬಗ್ಗೆ ಅರಿವು ಮೂಡಿಸಿಕೊಳ್ಳಲು ಸಾಧ್ಯವಾಗುತ್ತದೆ ಎಂದು ಕಾಲೇಜಿನ ಪ್ರಾಂಶುಪಾಲ ಪ್ರೊ. ಜಯವಂತ್ ನಾಯಕ್ ಅಭಿಪ್ರಾಯಪಟ್ಟರು.
ನಗರದ ವಿಶ್ವವಿದ್ಯಾನಿಲಯ ಕಾಲೇಜಿನ ಗ್ರಂಥಾಲಯದಲ್ಲಿ ಮಹರ್ಷಿ ವಾಲ್ಮೀಕಿ ಜಯಂತಿ ಪ್ರಯುಕ್ತ, ರಾಷ್ಟ್ರೀಯ ಸೇವಾ ಯೋಜನೆ ಮತ್ತು ಆಂತರಿಕ ಗುಣಮಟ್ಟದ ಖಾತರಿಕೋಶ ಸಹಯೋಗದಲ್ಲಿ ನಡೆದ ಗ್ರಂಥಾವಲೋಕನ-2026 ಸರಣಿ ಮೂರರ ಪುಸ್ತಕ ಪ್ರದರ್ಶನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಮಹರ್ಷಿ ವಾಲ್ಮೀಕಿಯಂತಹ ಆದರ್ಶ ವ್ಯಕ್ತಿಗಳನ್ನು ಸ್ಮರಿಸಬೇಕು. ರಾಮನ ಆದರ್ಶ, ಸೀತೆ ಸಹನೆಯನ್ನು ಬದುಕಿನಲ್ಲಿ ಅಳವಡಿಸಿಕೊಳ್ಳುವ ಮೂಲಕ ಸಮಾಜದಲ್ಲಿ ಮಹಾನ್ ವ್ಯಕ್ತಿಗಳಾಗುವಂತೆ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು. ಕಾಲೇಜಿನ ದ್ವಿತೀಯ ಬಿ. ಎ. ವಿದ್ಯಾರ್ಥಿನಿ ಅಮೂಲ್ಯ ಜೈನ್, ದ್ವಿತೀಯ ಬಿ.ಕಾಂ.ನ ಚಿನ್ಮಯ್ ಡಿ. ಎಸ್. ಹಾಗೂ ಪ್ರಥಮ ಬಿ.ಎ.ಯ ಚಿತ್ರಕಲಾ ಎಸ್. ಮಹರ್ಷಿ ವಾಲ್ಮೀಕಿ ರಚಿಸಿದ ಮಹಾಕಾವ್ಯ ರಾಮಾಯಣ ಗ್ರಂಥದ ಕುರಿತು ಮಾತನಾಡಿದರು.
ಕಾರ್ಯಕ್ರಮದಲ್ಲಿ ಗ್ರಂಥಪಾಲಕಿ ಡಾ. ವನಜಾ, ರಾಷ್ಟ್ರೀಯ ಸೇವಾ ಯೋಜನೆಯ ಲಿಖಿತ ಜಿ. ಎನ್. ಸೇರಿದಂತೆ ನಾನಾ ವಿಭಾಗಗಳ ಉಪನ್ಯಾಸಕರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

