ಜಿ.ಜಿ.ಜೆ.ಸಿ. ಪ್ರಧಾನ ಪ್ರೌಢಶಾಲೆಯಲ್ಲಿ ‘ಪ್ಯಾನ್ ಇಂಡಿಯಾ ಅರಿವು-ನೆರವು’ ಕಾರ್ಯಕ್ರಮ ಉದ್ಘಾಟನೆ

Shreya Hegde
0



ಹಾಸನ: ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಶಾಲೆಯು ಉತ್ತಮ ಸಂವಹನ ಮಾಧ್ಯಮವಾಗಿದ್ದು, ಶಾಲೆಗೆ ಮಕ್ಕಳು ಪ್ರತಿನಿತ್ಯವೂ ಕಡ್ಡಾಯವಾಗಿ ಹಾಜರಾಗಬೇಕು. ಮಕ್ಕಳ ಕೈಯಲ್ಲಿ ಪುಸ್ತಕಗಳಿರಬೇಕೇ ಹೊರತು ದುಡಿಮೆಯ ಹೊರೆ ಇರಬಾರದು; ಅವರ ಕಣ್ಣುಗಳಲ್ಲಿ ಕನಸುಗಳಿರಬೇಕೇ ಹೊರತು ಭಯವಿರಬಾರದು ಎಂದು ನಗರದ ಆರ್‌.ಸಿ. ರಸ್ತೆಯಲ್ಲಿರುವ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನ (ಪ್ರಧಾನ) ಪ್ರೌಢಶಾಲಾ ವಿಭಾಗದ ಉಪಪ್ರಾಂಶುಪಾಲರಾದ ಮಂಜುನಾಥ್ ಹೇಳಿದರು.


ನಗರದ ಬಾಲಕಿಯರ ಸರ್ಕಾರಿ ಪ್ರೌಢಶಾಲಾ ವಿಭಾಗದಲ್ಲಿ ರಾಷ್ಟ್ರೀಯ ಮತ್ತು ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ನಿರ್ದೇಶನದನ್ವಯ ಆಯೋಜಿಸಲಾಗಿದ್ದ ‘ಪ್ಯಾನ್ ಇಂಡಿಯಾ ಅರಿವು ನೆರವು’ ಮೊದಲ ಹಂತದ ‘ಮಕ್ಕಳಿಗಾಗಿ ಕಾನೂನು ಅರಿವು’ ಕಾರ್ಯಕ್ರಮದಲ್ಲಿ ವಿದ್ಯಾರ್ಥಿನಿಯರನ್ನು ಉದ್ದೇಶಿಸಿ ಅವರು ಮಾತನಾಡಿದರು. ಅಕ್ಟೋಬರ್ 26 ರಿಂದ 31 ರವರೆಗೆ 'ಸುರಕ್ಷಿತ ಬಾಲ್ಯ ಅಭಿಯಾನ' ಹಾಗೂ ಲೈಂಗಿಕ ಅಪರಾಧಗಳಿಂದ ಮಕ್ಕಳ ಸಂರಕ್ಷಣಾ ಅಧಿನಿಯಮ (ಪೋಕ್ಸೋ - 2012) ಕುರಿತು ಶಾಲೆಯಲ್ಲಿ ಪ್ರತಿದಿನ ಜಾಗೃತಿ ಮೂಡಿಸಲಾಗುವುದು. ಸಮಾಜ ವಿಜ್ಞಾನ ಶಿಕ್ಷಕ ಕೆ.ಎನ್. ಚಿದಾನಂದ ಅವರ ಸಂಚಾಲಕತ್ವದಲ್ಲಿ ಈ ಕಾರ್ಯಕ್ರಮ ನಡೆಯುತ್ತಿದ್ದು, ಶಿಕ್ಷಕರು ಮತ್ತು ವಿದ್ಯಾರ್ಥಿನಿಯರು ಸಕ್ರಿಯವಾಗಿ ಭಾಗವಹಿಸಬೇಕು ಎಂದು ಕೋರಿದರು.


ಕಾರ್ಯಕ್ರಮದ ನೋಡಲ್ ಶಿಕ್ಷಕ ಕೆ.ಎನ್. ಚಿದಾನಂದ ಮಾತನಾಡಿ, "ಮಕ್ಕಳ ನಗುವಿನಲ್ಲಿ ನಾಡಿನ ಭವಿಷ್ಯವಿದೆ. ‘ನನ್ನ ಬಾಲ್ಯ ನನ್ನ ಹಕ್ಕು – ಕಾನೂನಿನ ಮೂಲಕ ಬಾಲ್ಯ ರಕ್ಷಿಸಿ’ ಎಂಬುದು ಇಂದಿನ ಧ್ಯೇಯ ವಾಕ್ಯವಾಗಿದೆ. ಭಾರತದ ಸಂವಿಧಾನದ 21ಎ ವಿಧಿಯು 6 ರಿಂದ 14 ವರ್ಷದ ಮಕ್ಕಳಿಗೆ ಉಚಿತ ಹಾಗೂ ಕಡ್ಡಾಯ ಶಿಕ್ಷಣದ ಹಕ್ಕನ್ನು ನೀಡಿದ್ದರೆ, 24ನೇ ವಿಧಿಯು ಅಪಾಯಕಾರಿ ಉದ್ಯೋಗಗಳಲ್ಲಿ ಮಕ್ಕಳ ನೇಮಕಾತಿಯನ್ನು ನಿಷೇಧಿಸುತ್ತದೆ" ಎಂದು ಮಾಹಿತಿ ನೀಡಿದರು.


ಇದೇ ವೇಳೆ, ಬಾಲಕಾರ್ಮಿಕ ಪದ್ಧತಿ, ಬಾಲ್ಯವಿವಾಹ ಹಾಗೂ ಮಕ್ಕಳ ಮೇಲಿನ ಶೋಷಣೆ ತಡೆಯಲು ಪ್ರತಿಯೊಬ್ಬರೂ ಪಣತೊಡಬೇಕೆಂದು ಅವರು ಕರೆ ನೀಡಿದರು. ಕಾರ್ಯಕ್ರಮದಲ್ಲಿ ಹಿರಿಯ ಶಿಕ್ಷಕರಾದ ಹೆಚ್.ಪಿ. ಮಂಜುಳ, ಎ.ವಿ. ಗೀತಾರಾಣಿ, ರುದ್ರೇಶ್, ಎಂ.ಆರ್. ರಂಗಾಮಣಿ, ಎಸ್.ಕೆ. ಪೂರ್ಣಿಮಾ, ಮಧು ಪಿ., ತೈಬಾಕೌಸರ್, ಸತ್ಯನಾರಾಯಣ ಮುರಳಿ, ಸಿಬ್ಬಂದಿ ವರ್ಗ ಹಾಗೂ ಶಾಲೆಯ ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.

Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top