‘ಆತ್ಮಪರಿಚಯದತ್ತ ಕರೆದೊಯ್ಯುವ ಗಾಂಧೀ ಚಿಂತನೆ’

Shreya Hegde
0




ಉಡುಪಿ: ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಡಾ. ಶಿವರಾಮ ಕಾರಂತ ಟ್ರಸ್ಟ್ ಹಾಗೂ ಡಾ. ಜಿ. ಶಂಕರ್ ಸರಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರ, ಅಜ್ಜರಕಾಡು ಇವರ ಸಹಯೋಗದಲ್ಲಿ ಗಾಂಧಿ ಜಯಂತಿ ಪ್ರಯುಕ್ತ ‘ಕಾರಂತರ ಚಿಂತನೆಯಲ್ಲಿ ಗಾಂಧೀಜಿ’ ಎಂಬ ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನು ಕಾಲೇಜಿನ ಪಿ.ಜಿ.ಎ.ವಿ. ಸಭಾಂಗಣದಲ್ಲಿ ಆಯೋಜಿಸಲಾಗಿತ್ತು. ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದ ಬಾರ್ಕೂರಿನ ಎಸ್.ಆರ್.ಎಸ್.ಎಂ.ಎನ್. ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಧ್ಯಾಪಕ ಡಾ. ಪ್ರಸಾದ್ ರಾವ್ ಮಾತನಾಡಿ, ಗಾಂಧೀಜಿಯವರ ತತ್ತ್ವಚಿಂತನೆಯ ಮೂಲ ಆಶಯವೆಂದರೆ, ನಮ್ಮನ್ನು ಮತ್ತೊಬ್ಬರು ಆಳಬಾರದು ಮಾತ್ರವಲ್ಲದೆ, ನಾವು ಯಾರು ಎಂಬುದನ್ನು ನಾವೇ ಅರಿತುಕೊಳ್ಳಬೇಕು ಎಂಬುದಾಗಿದೆ ಎಂದರು.


ಉಪ್ಪಿನಂತಹ ಮೂಲಭೂತ ವಸ್ತುವನ್ನೂ ತಯಾರಿಸುವ ಸ್ವಾತಂತ್ರ್ಯ ಇಲ್ಲದಿರುವುದು ಸ್ವಾತಂತ್ರ್ಯಹೀನತೆಯ ಸಂಕೇತ ಎಂಬ ಸಂದೇಶವನ್ನು ಗಾಂಧೀಜಿ ಸಾರಿದರು. ರೈತರು ಹಾಗೂ ಬಡವರ್ಗದ ಅಸಹಾಯಕ ಪರಿಸ್ಥಿತಿಯನ್ನು ಅವರು ತಮ್ಮ ಚಳವಳಿಯ ಮೂಲಕ ಜನಾಂದೋಲನದ ರೂಪಕ್ಕೆ ತಂದರು. 1909ರಲ್ಲಿ ಗಾಂಧೀಜಿ ಬರೆದ ‘ಹಿಂದ್ ಸ್ವರಾಜ್’ ಕೃತಿ ಅವರ ವೈಯಕ್ತಿಕ ಸಂವಿಧಾನದಂತಿದ್ದು, ಗಾಂಧೀಜಿಯವರ ಚಿಂತನೆಗಳನ್ನು ಅರಿಯಲು ಅತ್ಯಂತ ಮಹತ್ವದ ಕೃತಿಯಾಗಿದೆ ಎಂದು ಅವರು ಹೇಳಿದರು. ಶಿವರಾಮ ಕಾರಂತರು ಗಾಂಧೀಜಿಯವರೊಂದಿಗೆ ಕೈಗಾರಿಕೀಕರಣದ ಕುರಿತ ಕೆಲವು ವಿಚಾರಗಳಲ್ಲಿ ಸಾಮ್ಯತೆಯನ್ನು ಹೊಂದಿದ್ದರೂ, ಬ್ರಹ್ಮಚರ್ಯ, ತ್ಯಾಗ ಹಾಗೂ ಸರಳ ಜೀವನದಂತಹ ಗಾಂಧೀಜಿಯವರ ಪರಿಕಲ್ಪನೆಗಳನ್ನು ವಿರೋಧಿಸುತ್ತಿದ್ದರು ಎಂದು ಅವರು ಹೇಳಿದರು. 


ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಡಾ. ಶಿವರಾಮ ಕಾರಂತ ಟ್ರಸ್ಟ್‌ನ ಅಧ್ಯಕ್ಷ ಡಾ. ಗಣನಾಥ ಶೆಟ್ಟಿ ಎಕ್ಕಾರು ಮಾತನಾಡಿ, ಇಂದು ಪ್ರಚಲಿತದಲ್ಲಿರುವ ಸ್ವದೇಶಿ ಚಳವಳಿ, ಸ್ವಚ್ಛತಾ ಅಭಿಯಾನ ಸೇರಿದಂತೆ ಹಲವು ಚಳವಳಿಗಳ ಮೂಲ ಪ್ರೇರಣೆ ಗಾಂಧೀಜಿಯವರ ತತ್ತ್ವಚಿಂತನೆಯಲ್ಲಿದೆ ಎಂದು ಹೇಳಿದರು. ಗಾಂಧೀಜಿಯವರನ್ನು ಸ್ಮರಿಸುವ ಸಂದರ್ಭದಲ್ಲಿ ಲಾಲ್ ಬಹದ್ದೂರ್ ಶಾಸ್ತ್ರಿಯವರನ್ನು ಕಡೆಗಣಿಸಲಾಗಿಲ್ಲ. ಲಾಲ್ ಬಹದ್ದೂರ್ ಶಾಸ್ತ್ರಿಯವರು ಸ್ವತಃ ಗಾಂಧಿ ಶಿಷ್ಯ ಮತ್ತು ತಮ್ಮ ಬದುಕಿನಲ್ಲಿ ಗಾಂಧೀವಾದಿ ಮೌಲ್ಯಗಳನ್ನು ಅಳವಡಿಸಿಕೊಂಡಿದ್ದರು ಎಂದು ಅವರು ಹೇಳಿದರು.


ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ನಿಕೇತನ ಅವರು, ಗಾಂಧೀಜಿಯವರ ಪ್ರಬಲ ಅಸ್ತ್ರಗಳಾದ ಸತ್ಯ ಮತ್ತು ಅಹಿಂಸೆ ಇಂದಿಗೂ ಪ್ರಸ್ತುತವಾಗಿವೆ ಎಂದು ಹೇಳಿದರು. ಗಾಂಧೀಜಿಯವರ ಸರಳ ಜೀವನ ಹಾಗೂ ಮೌಲ್ಯಗಳನ್ನು ವಿದ್ಯಾರ್ಥಿಗಳು ತಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.  ಕಾರ್ಯಕ್ರಮದಲ್ಲಿ ಶಿವರಾಮ ಕಾರಂತ ಟ್ರಸ್ಟ್‌ನ ಸದಸ್ಯ ಸಂಚಾಲಕ ಸತೀಶ್ ಕೊಡವೂರು, ವರ್ಷ, ಪ್ರಾಧ್ಯಾಪಕರಾದ ಪ್ರೊ. ಪಿ.ಬಿ. ಪ್ರಸನ್ನ, ರೇಖಾ ಎಸ್.ಎನ್., ಜಯಲಿಂಗ ಮೂರ್ತಿ, ಸಚಿನ್ ಕೇಣಿಕರ್, ಡಾ. ರವೀಶ ಬಿ, ಪುರುಷೋತ್ತಮ, ಪುನೀತ್ ತೆಂಡೂಲ್ಕರ್, ಸಂತೋಷ್ ಪ್ರಭು ಎಂ., ಅಶ್ವಿಜಾ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.


ಕಾರ್ಯಕ್ರಮದ ಅಂಗವಾಗಿ ಗಾಂಧೀಜಿಯವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಲಾಯಿತು. ವಿದ್ಯಾರ್ಥಿನಿಯರು ‘ರಘುಪತಿ ರಾಘವ ರಾಜಾರಾಮ್’ ಹಾಗೂ ‘ವೈಷ್ಣವ ಜನ ತೋ’ ಗಾಯನದ ಮೂಲಕ ಪ್ರಸ್ತುತಪಡಿಸಿದರು. ಕಾಲೇಜಿನ ಎನ್‌ಎಸ್‌ಎಸ್ ಹಾಗೂ ಯುವ ರೆಡ್ ಕ್ರಾಸ್ ಘಟಕಗಳ ವತಿಯಿಂದ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಯುವ ರೆಡ್ ಕ್ರಾಸ್ ಘಟಕದ ಸಂಚಾಲಕಿ ಕವಿತಾ ಸ್ವಾಗತಿಸಿದರು. ಡಾ. ಸಫಿಯಾ ವಂದಿಸಿದರು. ಎನ್‌ಎಸ್‌ಎಸ್ ಕಾರ್ಯಕ್ರಮ ಅಧಿಕಾರಿ ರಾಕೇಶ್ ಕಾರ್ಯಕ್ರಮ ನಿರೂಪಿಸಿದರು.

Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top