ಸಿದ್ದಕಟ್ಟೆ: ದಕ್ಷಿಣ ಕನ್ನಡ ಜಿಲ್ಲೆಯ ಗ್ರಾಮಾಂತರ ಪ್ರದೇಶಗಳಲ್ಲಿ ತುರ್ತು ಆಂಬುಲೆನ್ಸ್ ಸೇವೆ ಸಂಪೂರ್ಣವಾಗಿ ಸ್ಥಗಿತಗೊಂಡಿದ್ದು, ಚಾಲಕರು ಮತ್ತು ದಾದಿಯರ (ಸ್ಟಾಫ್ ನರ್ಸ್) ಖಾಲಿ ಹುದ್ದೆಗಳನ್ನು ತಕ್ಷಣವೇ ಭರ್ತಿ ಮಾಡುವಂತೆ ಬಂಟ್ವಾಳ ತಾಲೂಕು ಪಂಚಾಯತ್ ಮಾಜಿ ಸದಸ್ಯ ಪ್ರಭಾಕರ ಪ್ರಭು ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಿಗೆ ಮನವಿ ಸಲ್ಲಿಸಿ ಒತ್ತಾಯಿಸಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯ 28 ಗ್ರಾಮಾಂತರ ಪ್ರದೇಶಗಳಲ್ಲಿ ಕಾರ್ಯನಿರ್ವಹಿಸುವ ತುರ್ತು ವೈದ್ಯಕೀಯ ಆಂಬುಲೆನ್ಸ್ ಸೌಲಭ್ಯವು ಸಿಬ್ಬಂದಿಗಳ ಕೊರತೆಯಿಂದಾಗಿ ಕಳೆದ ಮೂರು ವರ್ಷಗಳಿಂದ 24x7 ಸೇವೆ ನೀಡಲು ವಿಫಲವಾಗಿದೆ. ಬಂಟ್ವಾಳ ತಾಲೂಕಿನ ಸಿದ್ದಕಟ್ಟೆ, ಫರಂಗಿಪೇಟೆ, ವಾಮಂಜೂರು, ಮುಡಿಪು, ವಿಟ್ಲ ಹಾಗೂ ಉಪ್ಪಿನಂಗಡಿ ಸೇರಿದಂತೆ ಹಲವು ಭಾಗಗಳಲ್ಲಿ ಆಂಬುಲೆನ್ಸ್ ಸೇವೆಗಳು ಸಿಬ್ಬಂದಿ ಇಲ್ಲದೆ ಸಂಪೂರ್ಣವಾಗಿ ಸ್ಥಗಿತಗೊಂಡಿವೆ ಎಂದು ಅವರು ಕಳವಳ ವ್ಯಕ್ತಪಡಿಸಿದ್ದಾರೆ.
ಪ್ರಸ್ತುತ ಜಿಲ್ಲೆಯ ಆಂಬುಲೆನ್ಸ್ ಸೇವೆಗಳಲ್ಲಿ ಸುಮಾರು 60 ದಾದಿಯರ ಹುದ್ದೆಗಳು ಹಾಗೂ 46 ಚಾಲಕರ ಹುದ್ದೆಗಳು ಖಾಲಿ ಇದ್ದು, ಒಟ್ಟು ಹುದ್ದೆಗಳ ಪೈಕಿ ಶೇಕಡಾ 75ರಷ್ಟು ಸಿಬ್ಬಂದಿಯ ಕೊರತೆ ಎದುರಾಗಿದೆ. ಇದರಿಂದಾಗಿ ಪ್ರತಿದಿನ ಆಕಸ್ಮಿಕ ಅಪಘಾತಗಳು ಮತ್ತು ತುರ್ತು ಆರೋಗ್ಯ ಸಮಸ್ಯೆಗಳಿಗೆ ಒಳಗಾಗುವ ನೂರಾರು ರೋಗಿಗಳು ಖಾಸಗಿ ಆಂಬುಲೆನ್ಸ್‌ಗಳನ್ನೇ ನೆಚ್ಚಿಕೊಳ್ಳಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಸಮಯಕ್ಕೆ ಸರಿಯಾಗಿ ವಾಹನ ಸಿಗದೆ ಹಲವು ರೋಗಿಗಳ ಸ್ಥಿತಿ ಗಂಭೀರ ಸ್ವರೂಪ ಪಡೆದುಕೊಂಡ ಉದಾಹರಣೆಗಳೂ ಇವೆ.
ಆದ್ದರಿಂದ ಸಾರ್ವಜನಿಕ ಆರೋಗ್ಯದ ಹಿತದೃಷ್ಟಿಯಿಂದ ಸರಕಾರ ಹಾಗೂ ಆರೋಗ್ಯ ಇಲಾಖೆಯು ತಕ್ಷಣವೇ ಕಾರ್ಯಪ್ರವೃತ್ತರಾಗಿ ಖಾಲಿ ಇರುವ ಚಾಲಕ ಮತ್ತು ದಾದಿಯರ ಹುದ್ದೆಗಳನ್ನು ಭರ್ತಿ ಮಾಡಿ, ಸ್ಥಗಿತಗೊಂಡಿರುವ ಆಂಬುಲೆನ್ಸ್ ಸೇವೆಯನ್ನು ಪುನರಾರಂಭಿಸಬೇಕು ಎಂದು ಪ್ರಭಾಕರ ಪ್ರಭು ಅವರು ಪ್ರಕಟಣೆಯಲ್ಲಿ ಆಗ್ರಹಿಸಿದ್ದಾರೆ. ಈ ಮನವಿಯ ಪ್ರತಿಯನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳಿಗೂ ರವಾನಿಸಲಾಗಿದೆ.

