ಯಾರೂ ಮೆಚ್ಚಲೇಬೇಕು ಓವೈಸಿಯವರ ಈ ಮಾತನ್ನು...

Shreya Hegde
0



ಭಾರತದ ರಾಜಕೀಯ ಮತ್ತು ವಾಣಿಜ್ಯ ವ್ಯವಸ್ಥೆಯನ್ನೇ ಪ್ರಶ್ನಿಸಿ ವಿವಾದ ಸೃಷ್ಟಿಸಿರುವ ವಿಶ್ವದ ನಂಬರ್ ವನ್ ಶ್ರೀಮಂತ ಎಲಾನ್ ಮಸ್ಕ್‌ ವಿರುದ್ಧ ಎಐಎಂಐಎಂ ಮುಖ್ಯಸ್ಥ, ಹೈದರಾಬಾದ್ ಸಂಸದ ಅಸಾದುದ್ದೀನ್ ಓವೈಸಿ ತೀವ್ರ ವಾಗ್ದಾಳಿ ನಡೆಸಿದ್ದು ಈಗ ದೊಡ್ದ ಸುದ್ದಿಯಾಗಿದೆ.


ಅಹುದು, ಪ್ರಧಾನಿ ನರೇಂದ್ರ ಮೋದಿ ಅವರನ್ನು ತೀವ್ರವಾಗಿ ಟೀಕಿಸುವ ಓವೈಸಿ, ದೇಶದ ಆಂತರಿಕ ರಾಜಕೀಯ ಭಿನ್ನಾಭಿಪ್ರಾಯಗಳ ನಡುವೆಯೂ ವಿದೇಶಿ ಉದ್ಯಮಿಯೊಬ್ಬ ಭಾರತಕ್ಕೆ ನಿರ್ದೇಶನ ನೀಡುವುದನ್ನು ಕಟುವಾಗಿ ವಿರೋಧಿಸಿದ್ದಾರೆ. ಇದೇ ಹೊತ್ತಿಗೆ, ಎಲಾನ್ ಮಸ್ಕ್‌ಗೆ ಸ್ಪಷ್ಟವಾದ ಉತ್ತರವನ್ನು ನೀಡದ ಕೇಂದ್ರ ಸರ್ಕಾರದ ಧೋರಣೆಯನ್ನೂ ಪ್ರಶ್ನಿಸಿ ಬಿಜೆಪಿಯ ರಾಷ್ಟ್ರೀಯ ಬದ್ಧತೆಯನ್ನೂ ಅಣಕಿಸಿದ್ದಾರೆ.


ಹೈದರಾಬಾದ್‌ನಲ್ಲಿ ಮಾತನಾಡಿದ ಓವೈಸಿ, “ನಾವು ಯಾವಾಗಲೂ ನರೇಂದ್ರ ಮೋದಿ ಅವರ ರಾಜಕೀಯವನ್ನು ವಿರೋಧಿಸುತ್ತೇವೆ, ಮುಂದೆಯೂ ವಿರೋಧಿಸುತ್ತೇವೆ. ಆದರೆ ಒಬ್ಬ ವಿದೇಶಿ (ಬಿಳಿಯ ವ್ಯಕ್ತಿ) ನಮ್ಮ ಭಾರತದ ಪ್ರಧಾನಿಯ ಬಗ್ಗೆ ಈ ರೀತಿಯ ಮಾತುಗಳನ್ನಾಡುವುದನ್ನು ಹೇಗೆ ಒಪ್ಪಲು ಸಾಧ್ಯವಿದೆ? ನಮ್ಮ ದೇಶದ ಸಂಪನ್ಮೂಲಗಳನ್ನು ಹೇಗೆ ಬಳಸಬೇಕು ಎಂಬುದನ್ನು ಭಾರತವೇ ನಿರ್ಧರಿಸುತ್ತದೆ. ಎಲ್ಲಿಯೋ ಕುಳಿತು ನಮಗೆ ಆದೇಶ ನೀಡಲು ಈ ವಿದೇಶಿ ಬಿಳಿಯ ವ್ಯಕ್ತಿ ಯಾರು” ಎಂದು ಖಾರವಾಗಿ ಪ್ರಶ್ನಿಸಿದ್ದಾರೆ.


“ವಿದೇಶಿ ಶ್ರೀಮಂತ ಉದ್ಯಮಿಯೊಬ್ಬನ ಹೊಟ್ಟೆ ತುಂಬಿಸಲು ನಮ್ಮ ದೇಶದ ನಾಗರಿಕರ, ಕಾರ್ಮಿಕರ ಹೊಟ್ಟೆಯ ಮೇಲೆ ಹೊಡೆಯಲು ಸಾಧ್ಯವಿಲ್ಲ. ಭಾರತದ ನೀತಿ ನಿಯಮಗಳು ದೇಶದ ಹಿತಾಸಕ್ತಿಯ ಆಧಾರದ ಮೇಲೆ ನಿರ್ಧಾರವಾಗಬೇಕೇ  ಹೊರತು ವಿದೇಶಿಗರ ಒತ್ತಡಕ್ಕಲ್ಲ” ಎಂದು ಸ್ಪಷ್ಟಪಡಿಸಿದ್ದಾರೆ.


ಇದೇ ಸಂದರ್ಭದಲ್ಲಿ ಬಿಜೆಪಿ ಮತ್ತು ಕೇಂದ್ರ ಸರ್ಕಾರದ ವಿರುದ್ಧವೂ ವಾಗ್ದಾಳಿ ನಡೆಸಿದ ಓವೈಸಿ, “ಪ್ರತಿನಿತ್ಯ ರಾಷ್ಟ್ರೀಯತೆಯ ಜಪ ಮಾಡುವ ಬಿಜೆಪಿ, ಪ್ರಭಾವಿ ವಿದೇಶಿ ಉದ್ಯಮಿಯೊಬ್ಬ ದೇಶದ ಅಧಿಕಾರವನ್ನೇ ಪ್ರಶ್ನಿಸಿದಾಗ ಯಾಕೆ ಮೌನವಾಗಿದೆ? ದೇಶೀಯ ರಾಜಕೀಯ ವಿರೋಧಿಗಳ ವಿರುದ್ಧ ತೋರುವ ಬಲ ಪ್ರದರ್ಶನವನ್ನು ಎಲಾನ್ ಮಸ್ಕ್ ವಿರುದ್ಧ ತೋರಿಸಲು ಪ್ರಧಾನಿ ಮೋದಿಯವರಿಗೆ ಸಾಧ್ಯವಿಲ್ಲವೇ? ಭಾರತದ ನಿರ್ಧಾರಗಳನ್ನು ಭಾರತವೇ ತೆಗೆದುಕೊಳ್ಳುತ್ತದೆ ಎಂದು ಮುಖಕ್ಕೆ ಹೊಡೆದಂತೆ ಹೇಳಿ” ಎಂದು ಸವಾಲು ಹಾಕಿದ್ದಾರೆ.


ಎಲಾನ್ ಮಸ್ಕ್ ಒಡೆತನದ ಉಪಗ್ರಹ ಇಂಟರ್ನೆಟ್ ಕಂಪನಿ ‘ಸ್ಟಾರ್‌ಲಿಂಕ್’ಗೆ (Starlink) ಭಾರತದಲ್ಲಿ ಕಾರ್ಯಾಚರಣೆ ನಡೆಸಲು ನಿಯಮಾವಳಿಗಳ ಅನುಮತಿ ವಿಳಂಬವಾಗಿದೆ. ಇದರಿಂದ ಅಸಮಾಧಾನಗೊಂಡ ಎಲಾನ್ ಮಸ್ಕ್, ಭಾರತದ ಉದ್ಯಮಿಗಳು ತಮ್ಮ ಪ್ರಾಬಲ್ಯ ಉಳಿಸಿಕೊಳ್ಳಲು ಸ್ಟಾರ್‌ಲಿಂಕ್ ಪ್ರವೇಶಕ್ಕೆ ಅಡ್ಡಿಪಡಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಅಷ್ಟೇ ಅಲ್ಲದೆ, ಭಾರತದ ನಿಜವಾದ ಬಾಸ್ ಮುಕೇಶ್ ಅಂಬಾನಿನಾ? ಅಥವಾ ಅವರೇ ಪ್ರಧಾನಿಯೇ ಎಂದು ಸಾರ್ವಜನಿಕವಾಗಿ ಪ್ರಶ್ನಿಸಿ ವಿವಾದದ ಕಿಡಿ ಹೊತ್ತಿಸಿದ್ದರು.


ಓವೈಸಿಯವರ ರಾಜಕೀಯ ನಿಲುವುಗಳನ್ನು ಒಪ್ಪಬಹುದು ಒಪ್ಪದಿರಬಹುದು. ಆ ಮಾತು ಬೇರೆ. ಆದರೆ, ಭಾರತದ ಸಾರ್ವಭೌಮತ್ವವನ್ನು ಒಬ್ಬ ವಿದೇಶಿ ಉದ್ಯಮಿ ಕುಹಕವೆಂಬಂತೆ ಮಾತನಾಡುವುದನ್ನು ಯಾರೂ ಒಪ್ಪಲು ಸಾಧ್ಯವಿಲ್ಲ. ಯಾರೂ ಒಪ್ಪಬಾರದು ಎಂಬ ಓವೈಸಿಯವರ ಮಾತುಗಳನ್ನು ಕೇಳುವಾಗ, ಸಂದರ್ಭವೊಂದರಲ್ಲಿ ದುರ್ಯೋಧನನನ್ನು ಗಂಧರ್ವರು ಹೊತ್ತೈದಾಗ ಅವನನ್ನು ರಕ್ಷಿಸುವಂತೆ ಧರ್ಮರಾಜನಲ್ಲಿ ಮೊರೆಯಿಡುವ ಕೌರವರ ವಿರುದ್ಧ ಪ್ರತಿಕ್ರಿಯಿಸಿದ ಭೀಮಾರ್ಜುನರಿಗೆ, ಹೊರಗಿನವರು ನಮ್ಮ ಮೇಲೆ ಆಕ್ರಮಣ ಮಾಡಿದಾಗ ನಾವು ನೂರೈವರು ಎಂದು ಹೇಳಿದ ಧರ್ಮರಾಜನ ಮಾತು ನೆನಪಾಗುತ್ತದೆ. ಯಾರೂ ಮೆಚ್ಚಬೇಕು ಓವೈಸಿಯವರ ಈ ಮಾತನ್ನು. ವೆಲ್ ಕಮ್ ಟು ಇಂಡಿಯಾ ಎಂದು ಮಸ್ಕ್ ಗೆ ಮೆಸೇಜು ಮಾಡಿದ ಮೂರ್ಖರು ಈ ವಿಚಾರದಲ್ಲಿ ಓವೈಸಿಯಿಂದ ಕಲಿಯಬೇಕಿದೆ. 


- ಟಿ. ದೇವಿದಾಸ್

Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top